ಹದಿಹರೆಯದವರ ಸಮಸ್ಯೆಗಳು ಮತ್ತು ಪರಿಹಾರಕ್ಕಾಗಿ ರಾಯಚೂರಿನ ಎಂ ಕೆ ಭಂಡಾರಿ ಆಸ್ಪತ್ರೆಯಲ್ಲಿ ಜಾಗೃತಿ ಹಾಗೂ ಸಲಹಾ ಕೇಂದ್ರವನ್ನು ಆರಂಭಿಸಲಾಗಿದ್ದು, ನಾಳೆಯಿಂದ (ಮಾ.13) ಕಾರ್ಯಾರಂಭ ಮಾಡಲಿದೆ ಎಂದು ರಿಮ್ಸ್ ಮಕ್ಕಳ ತಜ್ಞ ಡಾ.ಬಾಲಸುಬ್ರಮಣ್ಯಮ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಡಿಯಲ್ಲಿ ಮಾತನಾಡಿ, “ಇಂದಿನ ಹದಿಹರೆಯದ ಮಕ್ಕಳೇ ದೇಶದ ಭವಿಷ್ಯದ ಜನತೆಯಾಗಿದ್ದು, ಅವರ ಆರೋಗ್ಯ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ಹಿನ್ನಲೆ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ಸಮಾಜದಲ್ಲಿನ ಹದಿಹರೆಯದವರ ಸಮಸ್ಯೆ ಮತ್ತು ಪರಿಹಾರಗಳ ಕುರಿತು ಮಾಹಿತಿ ನೀಡಲಾಗುವುದೆಂದರು. 10 ರಿಂದ 19 ವಯಸ್ಸಿನ ಮಕ್ಕಳು ಕೋಪ, ಅಸಹನೆ ವ್ಯಕ್ತಪಡಿಸುವುದು ಸಹಜ. ಈ ಹಂತದಲ್ಲೇ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗಳಾಗತ್ತವೆ. ಆದ್ದರಿಂದ ಮಕ್ಕಳಿಗೆ ಸಮಸ್ಯೆ ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಜಾಗೃತಿ ಮೂಡಿಸಲಾಗುವುದು” ಎಂದು ತಿಳಿಸಿದರು.
“ಮಕ್ಕಳ ಬೆಳವಣಿಯಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಮುಖ್ಯವಾಗಿರುತ್ತದೆ. ಮಕ್ಕಳು ಓದುವ ವಿಚಾರದಲ್ಲಿ ಖಿನ್ನತೆಗೆ ಒಳಗಾಗದ ಮಾನಸಿಕ, ದೈಹಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಗೆ ಮುಂದಾಗುವವರಲ್ಲಿ ಹದಿಹರೆಯದ ವಯಸ್ಸಿನ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ. ಇದು ಅತ್ಯಂತ ಆತಂಕ ಹಾಗೂ ಅಪಾಯಕಾರಿ. ಹೀಗಾಗಿ ಶೈಕ್ಷಣಿಕ ಹಂತದಲ್ಲಿ ಜಾಗೃತಿ ಕಾರ್ಯಕ್ರಮಗಳು ಅತ್ಯಗತ್ಯ. ಈ ಕಾರ್ಯಕ್ರಮಗಳಲ್ಲಿ ಮಕ್ಕಳು ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ರಾಯಚೂರು | ದುರಸ್ತಿ ವೇಳೆ ಶಾಕ್; ಜೆಸ್ಕಾಂ ಸಿಬ್ಬಂದಿಗೆ ಗಾಯ
ಈ ವೇಳೆ ಭಂಡಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಿಯಾಜುದ್ದೀನ್, ಮಕ್ಕಳ ತಜ್ಞೆ ಡಾ. ಚೈತ್ರ ಉಪಸ್ಥಿತರಿದ್ದರು.
