- ಅಕ್ಕಿ ಕೊಡುವುದಾಗಿ ಹೇಳಿರುವ ಪಂಜಾಬ್ ಸರ್ಕಾರದ ಜೊತೆ ಮಾತನಾಡುತ್ತೇವೆ
- ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ: ಸಿದ್ದರಾಮಯ್ಯ
ಅನ್ನಭಾಗ್ಯ ಯೋಜನೆಗೆ ಪೂರೈಸುವಷ್ಟು ಅಕ್ಕಿ ರಾಜ್ಯದಲ್ಲೇ ದೊರೆಯುವಂತಿದ್ದರೆ ಇಲ್ಲೇ ಅಕ್ಕಿ ಖರೀದಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಸದ್ಯ ಸ್ವಲ್ಪವೂ ಅಕ್ಕಿ ದಾಸ್ತಾನು ಇಲ್ಲ. ಹೀಗಾಗಿ ಅದರ ಬದಲಿಗೆ ರಾಗಿ, ಜೋಳ ಕೊಡಿ ಅಂತ ಕೆಲವರು ಸಲಹೆ ಕೊಡುತ್ತಿದ್ದಾರೆ. ಆದರೆ ಅವುಗಳ ದಾಸ್ತಾನು ಕೂಡ ಇಲ್ಲ” ಎಂದರು.
“ಜುಲೈ 1ರಿಂದ ಅಕ್ಕಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ರಾಜ್ಯದಲ್ಲಿ ಅಕ್ಕಿ ಇದ್ದರೆ ಟೆಂಡರ್ ಮೂಲಕ ಖರೀದಿ ಮಾಡ್ತೇವೆ. ಇದರಿಂದ ರೈತರಿಗೆ ಸಹಾಯ ಆಗುತ್ತದೆ” ಎಂದು ಸಿದ್ದರಾಮಯ್ಯ ಹೇಳಿದರು.
“ಅನ್ನಭಾಗ್ಯ ಯೋಜನೆಯಲ್ಲಿ ವಾರ್ಷಿಕ 1092 ಕೋಟಿ ರೂ. ಅಕ್ಕಿಗೆ ಬೇಕಾಗುತ್ತೆ” ಎಂದ ಸಿಎಂ, “ಅಕ್ಕಿ ಕೊಡುವುದಾಗಿ ಹೇಳಿರುವ ಪಂಜಾಬ್‌ನ ಆಪ್ ಸರ್ಕಾರದ ಜತೆ ನಮ್ಮ ಮುಖ್ಯ ಕಾರ್ಯದರ್ಶಿ ಮಾತಾಡಿದ್ದಾರೆ. ನಮ್ಮ ಬೆಲೆಗೆ ಪಂಜಾಬ್ ಸರ್ಕಾರ ಅಕ್ಕಿ ಕೊಡುವುದಾದರೆ ಅಲ್ಲಿಂದಲೂ ಖರೀದಿ ಮಾಡುತ್ತೇವೆ” ಎಂದು ಹೇಳಿದರು.
“ನಾವು ಉಚಿತವಾಗಿ ತಲಾ 10 ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ. ಇದು ನಮ್ಮ ವಾಗ್ದಾನ. ಆದರೆ ಆಂಧ್ರಪ್ರದೇಶ, ಪಂಜಾಬ್, ತೆಲಂಗಾಣದಲ್ಲಿ ಅಕ್ಕಿ ಸಿಗುತ್ತಿಲ್ಲ. ಎಲ್ಲಿ ಭತ್ತ ಬೆಳೆಯುತ್ತಿದ್ದಾರೋ ಅಲ್ಲೇ ಅಕ್ಕಿ ಸಿಗುತ್ತಿಲ್ಲ. ಹೀಗಾಗಿ ಅಕ್ಕಿ ಹೊಂದಾಣಿಕೆ ಮಾಡುತ್ತಿದ್ದೇವೆ” ಎಂದರು.
ಇದೇ ವೇಳೆ ಕೇಂದ್ರ ಸರ್ಕಾರದ ಅಕ್ಕಿ ರಾಜಕಾರಣದ ವಿಚಾರದಲ್ಲಿ ಕಿಡಿ ಕಾರಿದ ಸಿಎಂ, “ಜೂ.12ರಂದು ಎಫ್‌ಸಿಐ ಅಕ್ಕಿ ಕೊಡುವುದಾಗಿ ಹೇಳಿತ್ತು. ಆಮೇಲೆ ಅಕ್ಕಿ ಪೂರೈಸಲ್ಲ ಎಂದು ಪತ್ರ ಬರೆದಿದೆ” ಎಂದು ಸಿಎಂ ಮಾಹಿತಿ ನೀಡಿದರು.
“ಎಫ್‌ಸಿಐ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ ಇದನ್ನು ರಾಜಕೀಯ ಎಂದಲ್ಲದೆ ಮತ್ತೇನೆಂದು ಹೇಳಬೇಕು? ಕೇಂದ್ರ ಸರ್ಕಾರವೇನು ಪುಕ್ಕಟ್ಟೆಯಾಗಿ ಅಕ್ಕಿ ಕೊಡುವುದಿಲ್ಲ. ಕೇಂದ್ರದಿಂದ ಅಕ್ಕಿ ಪೂರೈಕೆ ಮಾಡದಿರುವುದು ದೊಡ್ಡ ಷಡ್ಯಂತ್ರ. ಬಡವರು ಕಾಂಗ್ರೆಸ್ ಪರ ಇರುತ್ತಾರೆ ಅಂತ ಈ ರೀತಿ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? :ಅಸಲಿ ಹಿಂದುತ್ವಕ್ಕೆ ‘ಶಕ್ತಿ ಯೋಜನೆ’ ಶಕ್ತಿ ತುಂಬಿದೆ: ಸಚಿವ ರಾಮಲಿಂಗಾ ರೆಡ್ಡಿ
“ಬಿಜೆಪಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದೆಯಾ? ಇವರು ಬಡವರ ವಿರೋಧಿ. ದುಡ್ಡು ಕೊಡುತ್ತೇವೆ ಅಂದರೂ ಕೊಡಲ್ಲ ಅಂತಿದ್ದಾರೆ. ಖಾಸಗಿಯವರಿಗೆ ಬೇಕಾದರೆ ಕೊಡುತ್ತಾರೆ, ನಮಗಿಲ್ಲ ಎನ್ನುತ್ತಾರೆ. ಇದು ದ್ವೇಷದ ರಾಜಕೀಯ. ಬಿಜೆಪಿ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಅಕ್ಕಿ ಏನು ಕೇಂದ್ರ ಸರ್ಕಾರ ಬೆಳೆಯುತ್ತಾ? ಜಾಗ ಇಟ್ಟುಕೊಂಡು ಭತ್ತ, ಅಕ್ಕಿ ಬೆಳೆಯುತ್ತಿದ್ದಾರಾ?” ಎಂದು ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ಇನ್ನು ಸಿಎಂ ಅವಧಿ ವಿಚಾರದ ಬಗ್ಗೆ ಸಚಿವರಾದ ಮಹದೇವಪ್ಪ ಮತ್ತು ಎಂ.ಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಸರ್ಕಾರ ರಚನೆಯಾಗಿದೆ, ಸರಾಗವಾಗಿ ಸರ್ಕಾರ ನಡೆಯುತ್ತಿದೆ. ಅಧಿಕಾರ ಹಂಚಿಕೆ ವಿಚಾರವಾಗಿ ಯಾರು ನಿಮಗೆ ಮಾಹಿತಿ ನೀಡಿದರೋ ಅವರನ್ನೇ ಹೋಗಿ ಕೇಳಿ” ಎಂದರು.