ಮೆಣಸಿನಕಾಯಿ ದರ ತೀವ್ರ ಕುಸಿತ; ಉತ್ತಮ ಬೆಲೆ ನೀಡಿ ಎನುತ್ತಿದ್ದಾರೆ ರೈತರು

Date:

Advertisements

ರಾಜ್ಯದಲ್ಲಿ ಮೆಣಸಿನಕಾಯಿ ಬೆಲೆಯು ತೀವ್ರ ಮಟ್ಟದಲ್ಲಿ ಕುಸಿತ ಕಂಡಿದೆ. ಈ ನಡುವೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್) ಅಡಿಯಲ್ಲಿ ಬೆಲೆ ಕೊರತೆ ಪಾವತಿ (ಪಿಡಿಪಿ) ಯೋಜನೆಯನ್ನು ಕರ್ನಾಟಕದ ಕೆಂಪು ಮೆಣಸಿನಕಾಯಿ ಬೆಳೆಗಾರರಿಗೂ ವಿಸ್ತರಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದಾರೆ. ಈ ನಡುವೆ ರೈತರು “ಉತ್ತಮ ಬೆಲೆ, ಉತ್ತಮ ಬೀಜ ನೀಡಿ, ಉತ್ತಮ ಬೆಳೆ ಬೆಳೆದು ನಾವು ತೋರಿಸುತ್ತೇವೆ” ಎನ್ನುತ್ತಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೋಸ್ಟ್ ಮಾಡಿದ್ದಾರೆ. “ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್‌) ಅಡಿಯಲ್ಲಿ ಬೆಲೆ ಕೊರತೆ ಪಾವತಿ (ಪಿಡಿಪಿ) ಯೋಜನೆಯನ್ನು ಕರ್ನಾಟಕದ ಕೆಂಪು ಮೆಣಸಿನಕಾಯಿ ಬೆಳೆಗಾರರಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೃಷಿ ಸಚಿವ ಚೌಹಾಣ್ ಶಿವರಾಜ್ ಅವರಿಗೆ ಪತ್ರ ಬರೆದ ಮೂಲಕ ಒತ್ತಾಯಿಸಿದ್ದೇನೆ” ಎಂದು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ಕೆಂಪು ಮೆಣಸಿನಕಾಯಿ | ಬೆಂಬಲ ಬೆಲೆ ರಾಜ್ಯಕ್ಕೂ ವಿಸ್ತರಿಸುವಂತೆ ಸಚಿವ ಪ್ರಲ್ಹಾದ ಜೋಶಿ ಮನವಿ

Advertisements

“ಆಂಧ್ರಪ್ರದೇಶದಲ್ಲಿ ರೈತರು ಬೆಳೆದ ಕೆಂಪು ಮೆಣಸಿನಕಾಯಿಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್‌) ಅಡಿಯಲ್ಲಿ ಬೆಲೆ ಕೊರತೆ ಪಾವತಿ (ಪಿಡಿಪಿ) ಯೋಜನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಉತ್ಪಾದನೆಯ ಶೇಕಡ 25ವರೆಗಿನ ವ್ಯಾಪ್ತಿಯೊಂದಿಗೆ ಕ್ವಿಂಟಲ್‌ಗೆ ₹11,781 ಕನಿಷ್ಠ ಮಧ್ಯಸ್ಥಿಕೆ ಬೆಲೆ (ಎಂಐಪಿ)ಯನ್ನು ನಿಗದಿಪಡಿಸಿದೆ. ಅದನ್ನು ಕರ್ನಾಟಕದ ರೈತರಿಗೂ ವಿಸ್ತರಿಸಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.

ಕರ್ನಾಟಕ ಕೃಷಿ ಬೆಲೆ ಆಯೋಗವು ರಾಜ್ಯದಲ್ಲಿ ಗುಂಟೂರು ವಿಧದ ಕೆಂಪು ಮೆಣಸಿನಕಾಯಿಗಳ (ಮಳೆಯಾಶ್ರಿತ) ಉತ್ಪಾದನಾ ವೆಚ್ಚವನ್ನು ಕ್ವಿಂಟಲ್‌ಗೆ 12,675 ರೂಪಾಯಿ ಎಂದು ಅಂದಾಜಿಸಿದೆ. ಆದರೆ ಸಿಂಧನೂರಿನಂತಹ ಮಾರುಕಟ್ಟೆಗಳಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಕ್ವಿಂಟಲ್‌ಗೆ 8,300 ರೂಪಾಯಿಗಳಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಇದರಿಂದಾಗಿ ರೈತರಿಗೆ ಆರ್ಥಿಕವಾಗಿ ಅಧಿಕ ನಷ್ಟವಾಗುತ್ತಿದೆ. ಈ ಕೃಷಿಯ ಉಳಿವಿನ ಅಪಾಯವೂ ಇದೆ” ಎಂದು ಮುಖ್ಯಮಂತ್ರಿ ಪತ್ರದಲ್ಲಿ ಹೇಳಿದ್ದಾರೆ.

ಇನ್ನು ಕೆಂಪು ಮೆಣಸಿನಕಾಯಿ ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗಾಗಿ ಕರ್ನಾಟಕಕ್ಕೂ ಬೆಂಬಲ ಬೆಲೆ ಯೋಜನೆ ವಿಸ್ತರಣೆ ಮಾಡಬೇಕು ಎಂದು ಕೇಂದ್ರ ಆಹಾರ, ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನು ಓದಿದ್ದೀರಾ? ಗದಗ | ಬದಲಾದ ಸಂಗ್ರಹಿಸಿಟ್ಟ ಕೆಂಪು ಮೆಣಸಿನಕಾಯಿ ಬಣ್ಣ: ಬೆಲೆ ಕುಸಿತದ ಆತಂಕದಲ್ಲಿ ರೈತರು

ಈ ಸಂಬಂಧ ದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ಜೋಶಿ ಮನವಿ ಸಲ್ಲಿಸಿದ್ದಾರೆ. ಜೊತೆಗೆ ಕೆಂಪು ಮೆಣಸಿನಕಾಯಿ ಬೆಳೆ ಉಳಿವಿನ ಬಗ್ಗೆ ಸಮಾಲೋಚನೆ ಕೂಡಾ ನಡೆಸಿದ್ದಾರೆ.

ಕಳೆದ ತಿಂಗಳಿನಿಂದಲೇ ರೈತರು ತಮಗಾಗುವ ನಷ್ಟದ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಮೆಣಸಿನಕಾಯಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ನಷ್ಟವಾಗುವುದನ್ನು ತಪ್ಪಿಸಬೇಕು ಎಂದು ಬೆಳಗಾಗರು, ರೈತ ಸಂಘಟನೆಗಳು ಆಗ್ರಹಿಸುತ್ತಿದ್ದಾರೆ. ಇದೀಗ ಕೊನೆಗೂ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಬೆಂಬಲ ಕೋರಿದೆ. ಜೊತೆಗೆ ಈ ವಿಷಯದಲ್ಲಾದರೂ ರಾಜ್ಯದವರೇ ಆದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಮಳೆ ಹೆಚ್ಚಾಗಿ ಕೊಳೆರೋಗ ಉಂಟಾಗಿದ್ದು ಮಾತ್ರವಲ್ಲದೆ ಹಲವು ಕಾರಣಗಳಿಂದಾಗಿ ಈ ಬಾರಿ ಮೆಣಸಿನಕಾಯಿ ಇಳುವರಿ ಕುಸಿತವಾಗಿದೆ. ರೈತರಿಗೆ ಇದರಿಂದಾದ ನಷ್ಟ ಒಂದೆಡೆಯಾದರೆ, ಇನ್ನೊಂದೆಡೆ ಮಾರುಕಟ್ಟೆಯಲ್ಲಿಯೂ ಸರಿಯಾದ ಬೆಲೆ ಸಿಗದೆ ರೈತರ ಕೈ ಸುಟ್ಟಿದೆ. ಬೆಳೆ ಬೆಳೆಯಲು ತಗುಲಿದ ವೆಚ್ಚವೂ ಕೂಡಾ ರೈತರ ಕೈ ಸೇರಿಲ್ಲ.

ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೆಣಸಿನಕಾಯಿ ಬೆಲೆ ಶೇಕಡ 35ರಿಂದ 50ರಷ್ಟು ಇಳಿಕೆಯಾಗಿದೆ. ನಮ್ಮ ನೆರೆ ರಾಜ್ಯವಾದ ಆಂಧ್ರಪ್ರದೇಶದಲ್ಲಿಯೂ ಇದೇ ಸ್ಥಿತಿ ಉಂಟಾಗಿದೆ. ಆದರೆ ಎನ್‌ಡಿಎ ಕೂಟದ ಭಾಗವಾಗಿರುವ ಟಿಡಿಪಿ ನೇತೃತ್ವದ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಗುಂಟೂರು ಮೆಣಸಿನಕಾಯಿಯನ್ನು ವಿಸ್ತರಿಸಿದೆ. ಇದರಿಂದಾಗಿ ಆಂಧ್ರಪ್ರದೇಶದಲ್ಲಿ ರೈತರಿಗೆ ಆಗುವ ನಷ್ಟವು ಕೊಂಚ ಕಡಿಮೆಯಾಗಿದೆ.

ಇದೇ ರೀತಿ ಕರ್ನಾಟಕದ ಸಹಾಯಕ್ಕೂ ಕೇಂದ್ರ ಸರ್ಕಾರ ಬರಬೇಕಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರವೆರಡೂ ಮಧ್ರಪ್ರವೇಶಿಸಿ ರೈತರಿಗೆ ಆಗುವ ನಷ್ಟವನ್ನು ತಪ್ಪಿಸಬೇಕು, ಮೆಣಸಿನಕಾಯಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂಬುದು ರೈತ ಸಂಘಟನೆಗಳ ಆಗ್ರಹವಾಗಿದೆ.

ಇದನ್ನು ಓದಿದ್ದೀರಾ? ಗದಗ | ಕೆಂಪು ಮೆಣಸಿನಕಾಯಿ ಬೆಲೆ ಏರಿಕೆ; ಹೆಚ್ಚಾದ ಕಳ್ಳರ ಹಾವಳಿ

ಕರ್ನಾಟಕದಲ್ಲಿ ಬಳ್ಳಾರಿ, ಕಲಬುರಗಿ, ಧಾರವಾಡ, ಹಾವೇರಿ, ಗದಗ, ರಾಯಚೂರಿನಲ್ಲಿ ಹೆಚ್ಚಾಗಿ ಮೆಣಸಿನಿಕಾಯಿ ಬೆಳೆಯಲಾಗುತ್ತದೆ. ಮೆಣಸಿನಕಾಯಿಯ ಗುಣಮಟ್ಟದ ಆಧಾರದಲ್ಲಿ ಧಾರಣೆಯನ್ನು ನಿಗದಿಪಡಿಸಲಾಗುತ್ತದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಬೆಲೆಯು ವ್ಯತ್ಯಾಸವಾಗುತ್ತದೆ. ಆದರೆ ಒಟ್ಟಾರೆಯಾಗಿ ನೋಡಿದಾಗ ರಾಜ್ಯದಲ್ಲಿ ಮೆಣಸಿನಕಾಯಿ ಬೆಲೆ ಶೇಕಡ 50ರಷ್ಟು ಕಡಿಮೆಯಾಗಿದೆ.

ಈ ಬಗ್ಗೆ ಈದಿನ ಡಾಟ್ ಕಾಮ್ ಜೊತೆ ಮಾತನಾಡಿದ ರೈತ ಮುಖಂಡ ಗಿರೀಶ್ ಪಾಟೀಲ್, “ರೈತರಾದ ನಾವು ಹಲವು ಬೆಳೆಗಳನ್ನು ಬೆಳೆಯಬೇಕಾಗುತ್ತದೆ. ಆ ಪೈಕಿ ಮೆಣಸಿನಕಾಯಿ ಕೂಡಾ ಒಂದು ಬೆಳೆ. ಇತ್ತೀಚಿಗೆ ಮೆಣಸಿನಕಾಯಿಗೆ ಕೊಳೆರೋಗ ಕಾಣಿಸಿಕೊಂಡಿದೆ. ಅದಕ್ಕೆ ಸರಿಯಾದ ಔಷಧಿ ಈವರೆಗೂ ಕಂಡುಹಿಡಿದಿಲ್ಲ. ಅಪಘಾತವಾದಾಗ ಆಸ್ಪತ್ರೆಯಲ್ಲಿ ಮೊದಲು ಪ್ರಾಥಮಿಕ ಚಿಕಿತ್ಸೆ ನೀಡಿದಂತೆ ಈ ಔ‍ಷಧಿಯಾಗಿದೆ. ಕೊಳೆರೋಗಕ್ಕೆ ಯಾವುದೇ ಶಾಶ್ವತ ಔಷಧಿ ಕಂಡುಹಿಡಿದಿಲ್ಲ. ಅದರಿಂದ ರೈತರಿಗೆ ಸಮಸ್ಯೆಯಾಗಿದೆ” ಎಂದು ಹೇಳಿದ್ದಾರೆ.

ಇಳುವರಿ ಕಡಿಮೆಯಾಗಿರುವುದಕ್ಕೆ ಉತ್ತಮ ಗುಣಮಟ್ಟದ ಬೀಜ ಸಿಗದಿರುವುದೂ ಕೂಡಾ ಕಾರಣ ಎಂದಿದ್ದಾರೆ ರೈತ ಮುಖಂಡ. “ಸರಿಯಾಗಿ ಇಳುವರಿ ಬರುತ್ತಿಲ್ಲ, ಬಂದ ಇಳುವರಿಯಲ್ಲಿಯೇ ರೈತರು ತೃಪ್ತಿಪಡಬೇಕಾದ ಸ್ಥಿತಿ ಉಂಟಾಗಿದೆ. ಮಾರುಕಟ್ಟೆಗೆ ಹೋದರೆ ಅಲ್ಲಿಯೂ ರೈತರಿಗೆ ತೊಂದರೆ ತಪ್ಪಿದ್ದಲ್ಲ. ಮಾರುಕಟ್ಟೆ ದರದಲ್ಲಿ ಸದಾ ಏರುಪೇರಾಗುತ್ತಿದೆ, ಸರಿಯಾದ ಬೆಲೆ ಸಿಗುತ್ತಿಲ್ಲ. ದಿಢೀರ್ ಆಗಿ ಬೆಲೆ ಕುಸಿದು ತಮಗಾಗುವ ನಷ್ಟದಿಂದ ಆತಂಕಗೊಂಡು ಅದೆಷ್ಟೋ ರೈತರು ಆತ್ಮಹತ್ಯೆಯ ದಾರಿ ತುಳಿದಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ನಮ್ಮ ರೈತರಿಗೆ ಉತ್ತಮ ಗುಣಮಟ್ಟದ (ಒನ್‌ ಎ ಕ್ವಾಲಿಟಿ) ಬೀಜ ಸಿಗುವುದಿಲ್ಲ, ಅವೆಲ್ಲವೂ ಹೊರದೇಶಕ್ಕೆ ರಫ್ತಾಗುತ್ತದೆ. ನಮಗೆ ನಂಬರ್ 3 ಗುಣಮಟ್ಟದ ಬೀಜ ಲಭ್ಯವಾಗುತ್ತದೆ. ಅದರಲ್ಲೇ ನಮ್ಮ ರೈತರು ಕಷ್ಟಪಟ್ಟು ದುಡಿದು ಉತ್ತಮ ಗುಣಮಟ್ಟದ ಬೆಳೆ ಬೆಳೆಯುತ್ತಿದ್ದಾರೆ. ಆದರೆ ಇಳುವರಿ ಕಡಿಮೆಯಾಗುತ್ತಿದೆ. ಉತ್ತಮ ಬೀಜವನ್ನು ನಮಗೆ ನೀಡಿದರೆ, ನಾವು ಉತ್ತಮ ಗುಣಮಟ್ಟದ ಫಸಲು ಪಡೆಯುತ್ತೇವೆ” ಎಂದು ರೈತ ಗಿರೀಶ್ ಪಾಟೀಲ್ ಈದಿನ ಡಾಟ್ ಕಾಮ್‌ಗೆ ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ವಿಜಯಪುರ | ಕೆಂಪು ಮೆಣಸಿಕಾಯಿಗೆ ಬೆಂಬಲ ಬೆಲೆ ನೀಡಿ ಖರೀದಿಸುವಂತೆ ರೈತ ಸಂಘ ಆಗ್ರಹ

“ನಾವೇ ಸರ್ಕಾರಕ್ಕೆ ಅಬಕಾರಿ. ಆದರೆ ನಮಗೆ ಉತ್ತಮ ಮಾರುಕಟ್ಟೆ ಬೆಲೆ ಲಭಿಸುತ್ತಿಲ್ಲ. ರೈತರು ದೇಶದ ಬೆನ್ನೆಲುಬು ಎನ್ನುತ್ತೇವೆ. ಆದರೆ ರೈತರ ಬೆನ್ನೆಲುಬು ಈಗ ಮುರಿದಿದೆ. ಬೆನ್ನು ಮುರಿದರೆ ನಾವೇನು ದುಡಿಯುವುದು. ನಮಗೆ ದೊರೆಯುವ ಕಳಪೆ ಬೀಜದಿಂದಾಗಿ ನಮ್ಮ ಬೆನ್ನು ಮುರಿಯುತ್ತಿದೆ. ಭೂಮಿ ಎಷ್ಟು ಫಲವತ್ತಾಗಿದ್ದರೂ, ಕಳಪೆ ಬೀಜ ಹಾಕಿದರೆ ಉತ್ತಮ ಇಳುವರಿ ಬರಲು ಹೇಗೆ ಸಾಧ್ಯ” ಎಂದು ರೈತ ಮುಖಂಡರು ಪ್ರಶ್ನಿಸಿದ್ದಾರೆ.

ಏನೇ ಸಂದರ್ಭವಾದರೂ, ಯಾವುದೇ ಸಂಕಷ್ಟ ಬಂದರೂ ಇಡೀ ಜಗತ್ತಿಗೆ ಅನ್ನ, ಇತರೆ ಧಾನ್ಯ, ಅಗತ್ಯ ಆಹಾರ ಪದಾರ್ಥಗಳನ್ನು ಬೆಳೆದು ಕೊಡುವವನು ರೈತ. ಆದರೆ ರೈತರ ಕಷ್ಟವನ್ನು ಕೇಳುವವರು ಯಾರೂ ಇಲ್ಲ. ನಮಗೆ ಉತ್ತಮ ಗುಣಮಟ್ಟದ ಬೀಜ ನೀಡಬೇಕು, ಕಳಪೆ ಬೀಜ ನೀಡಬಾರದು, ಈ ಕೊಳೆ ರೋಗಕ್ಕೆ ಸರಿಯಾದ ಔಷಧಿ ಕಂಡುಹಿಡಿಯಬೇಕು ಮತ್ತು ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ನೀಡಬೇಕು, ಸರ್ಕಾರ ನಮ್ಮ ಬಗ್ಗೆ ಗಮನಹರಿಸಬೇಕು ಎಂಬುದು ಕೆಂಪು ಮೆಣಸಿನಕಾಯಿ ಬೆಳೆಯುವ ರೈತರ ಆಗ್ರಹವಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X