ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ ಹೆಸರುಗಳನ್ನು ತಿಳಿದಿರುವಷ್ಟು ಪ್ರಮಾಣದ ಜನರು ಇಲ್ಲವಾದರೂ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧನಾ ಅವರ ಆಟಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಯಶಸ್ಸು ಗಳಿಸುತ್ತಿರುವ ಭಾರತ ವನಿತೆಯರ ಕ್ರಿಕೆಟ್ ತಂಡದ ಹಲವು ಆಟಗಾರ್ತಿಯರು ರಾಷ್ಟ್ರಮಟ್ಟದಲ್ಲಿ ಮನೆ ಮಾತಾಗಿದ್ದಾರೆ
ಮಾರ್ಚ್ 22 ರಿಂದ ಪುರುಷರ ಐಪಿಎಲ್(ಇಂಡಿಯನ್ ಪ್ರೀಮಿಯರ್ ಲೀಗ್) ಶುರುವಾಗುವ ಮುನ್ನವೆ ಫೆ.14ರಿಂದ ಆರಂಭಗೊಂಡಿರುವ ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಅಭಿಮಾನದ ಕಿಚ್ಚು ಹೆಚ್ಚಿಸಿದೆ. ಪುರುಷರ ಕ್ರಿಕೆಟ್‌ಗೆ ಭಾರತದಲ್ಲಿ ಇರುವ ಜನಪ್ರಿಯತೆಯಿಂದ ಬಿಸಿಸಿಐ ಅಂತಾರಾಷ್ಟ್ರೀಯ ಕ್ರೀಡಾರಂಗದಲ್ಲಿ ತನ್ನದೆ ಹೆಸರು ಗಳಿಸುವ ಜೊತೆ ಫುಟ್‌ಬಾಲ್, ಟೆನಿಸ್ ರೀತಿ ಶ್ರೀಮಂತ ಸಂಸ್ಥೆಯಾಗಿ ಬೆಳೆದಿದೆ. ಮನರಂಜನೆ ಜೊತೆ ಸಾಕಷ್ಟು ಹಣ ಹರಿಯುವುದರಿಂದ 2028ರಲ್ಲಿ ಅಮೆರಿಕದಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿಯೂ ಟಿ20 ಕ್ರಿಕೆಟ್‌ಅನ್ನು ಸೇರ್ಪಡೆಗೊಳಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪುರುಷರಂತೆ ಮಹಿಳಾ ಕ್ರಿಕೆಟ್ ಕೂಡ ಪ್ರಖ್ಯಾತಿಗೊಳ್ಳುತ್ತಿದೆ.
ಇದಕ್ಕೆ ಕೆಲವು ವರ್ಷಗಳಿಂದ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ ಹಾಗೂ ಡಬ್ಲ್ಯುಪಿಎಲ್ ಸಾಕ್ಷಿಯಾಗಿದೆ. ಕಳೆದ ತಿಂಗಳು ಫೆಬ್ರವರಿಯಲ್ಲಿ 19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಬೆಂಗಳೂರಿನ ನಿಕಿ ಪ್ರಸಾದ್ ಸಾರಥ್ಯದಲ್ಲಿ ಟಿಂ ಇಂಡಿಯಾ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಹರ್ಮನ್‌ಪ್ರೀತ್ ಕೌರ್ ಬಳಗವು ಏಳನೇ ಬಾರಿ ಏಷ್ಯಾಕಪ್ ಗೆದ್ದು ಬೀಗಿತು. ಅದಕ್ಕೂ ಮೊದಲು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ನಡೆದ ಕ್ರಿಕೆಟ್‌ನಲ್ಲಿ ನಮ್ಮ ವನಿತೆಯರ ತಂಡವು ಬೆಳ್ಳಿ ಪದಕ ಗೆದ್ದುಕೊಂಡಿತು. ಈಗ ವನಿತೆಯರ ಪ್ರೀಮಿಯರ್ ಕ್ರಿಕೆಟ್ ಕೂಡ ಕ್ರೀಡಾಪ್ರೇಮಿಗಳನ್ನು ಆಕರ್ಷಿಸುತ್ತಿದೆ.
ಭಾರತದಲ್ಲಿ ಪುರುಷರ ಕ್ರಿಕೆಟ್ 300ಕ್ಕೂ ಹೆಚ್ಚು ವರ್ಷಗಳ ಹಿಂದಿನಿಂದ ಆರಂಭವಾದರೂ ಮಹಿಳಾ ಕ್ರಿಕೆಟ್ ಸಂಸ್ಥೆ ಪ್ರಾರಂಭಗೊಂಡಿದ್ದು 1973ರಲ್ಲಿ, ವನಿತೆಯರು ಮೊದಲ ಟೆಸ್ಟ್ ಆಡಿದ್ದು 1976ರಲ್ಲಿ. ಆನಂತರಲ್ಲಿ ಮಹಿಳೆಯರು ಕ್ರಿಕೆಟ್‌ನಲ್ಲಿ ನಿಧಾನವಾಗಿ ಏಳಿಗೆ ಸಾಧಿಸುತ್ತಾ ಬಂದಿದ್ದಾರೆ. ಭಾರತದ ಮಹಿಳಾ ಕ್ರಿಕೆಟ್‌ಗೆ ಟೀಂ ಇಂಡಿಯಾದ ಮೊದಲ ನಾಯಕಿಯಾದ ಕರ್ನಾಟಕದ ಶಾಂತಾ ರಂಗಸ್ವಾಮಿ ಕೊಡುಗೆ ಗಮನಾರ್ಹ. ಮಹಿಳೆಯರ ಕ್ರಿಕೆಟ್ ಕೂಡ ಸಾಕಷ್ಟು ಉತ್ತುಂಗವೇರುತ್ತಿರುವುದರಿಂದ ಕಳೆದ ವರ್ಷ ಬಿಸಿಸಿಐ ಪುರುಷರಷ್ಟೇ ಸಮಾನ ವೇತನವನ್ನು ಮಹಿಳಾ ಕ್ರಿಕೆಟಿಗರಿಗೂ ಘೋಷಿಸಿ ಕ್ರೀಡಾ ಕ್ಷೇತ್ರದಲ್ಲಿ ಪುರುಷ-ಮಹಿಳೆ ಎಂಬ ತಾರತಮ್ಯಕ್ಕೆ ಕಡಿವಾಣ ಹಾಕಿರುವುದು ಕೂಡ ಖುಷಿ ನೀಡುವ ವಿಚಾರ. 18 ವರ್ಷಗಳಿಂದ ಮನರಂಜನೆಯ ಜೊತೆ ಹೆಮ್ಮರವಾಗಿ ಬೆಳೆದಿರುವ ಪುರುಷರ ಐಪಿಎಲ್‌ನಂತೆ ಮಹಿಳೆಯರಲ್ಲೂ ಆರಂಭಿಸುವ ಹೊಸದೊಂದು ಪ್ರಯತ್ನವನ್ನು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾಗ 2023ರ ಫೆಬ್ರವರಿಯಲ್ಲಿ ಆರಂಭಿಸಿದರು.

ಈ ಸುದ್ದಿ ಓದಿದ್ದೀರಾ? ‘ದೇವರು ನನ್ನನ್ನು ಈ ಪರಿಸ್ಥಿತಿಯಲ್ಲಿ ಇಟ್ಟಿದ್ದಾನೆ’; ಕೆ.ಎಲ್ ರಾಹುಲ್ ಹೀಗೆ ಹೇಳಿದ್ದೇಕೆ?
ಪುರುಷರ ಐಪಿಎಲ್‌ನಷ್ಟೆ ವನಿತೆಯರ ಕ್ರಿಕೆಟ್‌ಗೆ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ. ಕಪಿಲ್ ದೇವ್, ಅನಿಲ್ ಕುಂಬ್ಳೆ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ ಹೆಸರುಗಳನ್ನು ತಿಳಿದಿರುವಷ್ಟು ಪ್ರಮಾಣದ ಜನರು ಇಲ್ಲವಾದರೂ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧನಾ ಅವರ ಆಟಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಯಶಸ್ಸು ಗಳಿಸುತ್ತಿರುವ ಭಾರತ ವನಿತೆಯರ ಕ್ರಿಕೆಟ್ ತಂಡದ ಹಲವು ಆಟಗಾರ್ತಿಯರು ರಾಷ್ಟ್ರಮಟ್ಟದಲ್ಲಿ ಮನೆ ಮಾತಾಗಿದ್ದಾರೆ. ಟೀಂ ಇಂಡಿಯಾದ ನಾಯಕಿ ಹರ್ಮನ್‌ಪ್ರೀತ್ ಕೌರ್ ಜೊತೆ ಸ್ಮೃತಿ ಮಂಧಾನ, ಪೂನಂ ಯಾದವ್, ದೀಪ್ತಿ ಶರ್ಮಾ ಅವರಂತಹ ಆಟಗಾರ್ತಿಯರು ತಮ್ಮ ಭರ್ಜರಿಯಾಟದಿಂದ ದೇಶದ ಜನರಿಗೆ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ. ಏಕದಿನ, ಟೆಸ್ಟ್ ಪಂದ್ಯಗಳಿಗಿಂತ ಡಬ್ಲ್ಯುಪಿಎಲ್‌ನಲ್ಲಿ ಇವರ ಆಟವೇ ಸೊಗಸು.
ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್ ಹಾಗೂ ಯುಪಿ ವಾರಿಯರ್ಸ್ ಸೇರಿ 6 ತಂಡಗಳಿವೆ. 2023ರಲ್ಲಿ ಮುಂಬೈ ಇಂಡಿಯನ್ಸ್ ಜಯಗಳಿಸಿದರೆ, ಕಳೆದ ವರ್ಷ 2024ರಲ್ಲಿ ಆರ್‌ಸಿಬಿ ತಂಡ ಕಪ್ ಗೆದ್ದಿತ್ತು. ಮೂರನೇ ಆವೃತ್ತಿ ಆಡುತ್ತಿರುವ ಈ ಬಾರಿ ಡೆಲ್ಲಿ ಫೈನಲ್ ಪ್ರವೇಶಿಸಿದ್ದು, ಮುಂಬೈ ಹಾಗೂ ಗುಜರಾತ್ ಎಲಿಮಿನೇಟ್ ಹಂತ ಅರ್ಹತೆ ಪಡೆದಿವೆ. ಕರ್ನಾಟಕದ ಆಟಗಾರ್ತಿಯರು ಕೂಡ ವಿವಿಧ ತಂಡಗಳಲ್ಲಿ ಪ್ರಾತಿನಿಧ್ಯ ಪಡೆದಿದ್ದಾರೆ. ನಿಕಿ ಪ್ರಸಾದ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರೆ, ರಾಜೇಶ್ವರಿ ಗಾಯಕ್‌ವಾಡ್ ಯುಪಿ ವಾರಿಯರ್ಸ್ ತಂಡದಲ್ಲಿ ಮಿಂಚುತ್ತಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನ ತಂಡಗಳ ಈಗಿನ ಮೌಲ್ಯವು ಕೆಲ ಪುರುಷರ ವಿದೇಶಿ ಕ್ರಿಕೆಟ್ ಲೀಗ್ ತಂಡಗಳಿಗಿಂತ ಹೆಚ್ಚಿದೆ.
ಈ ಬಾರಿ ಬೆಂಗಳೂರಿನಲ್ಲಿ ನಡೆದ ಮಿನಿ ಹರಾಜು ಪ್ರಕ್ರಿಯೆಯಲ್ಲಿ 19 ಆಟಗಾರ್ತಿಯರನ್ನು ವಿವಿಧ ತಂಡಗಳು ತಮ್ಮ ತೆಕ್ಕೆಗೆ ಸೇರಿಸಿಕೊಂಡವು. ಮುಂಬೈನ ಆಲ್ ರೌಂಡರ್ ಸಿಮ್ರಾನ್ ಶೇಕ್ 1.90 ಕೋಟಿ ರೂ. ಪಡೆದು ಗುಜರಾತ್ ಜೈಂಟ್ಸ್ಸ್ ಪಾಲಾದರು. ವೆಸ್ಟ್ಇಂಡೀಸ್‌ನ ಡಿಯಾಂಡ್ರಾ ಡೊಟಿನ್ ಅವರು ಗುಜರಾತ್ ಜೈಂಟ್ಸ್ ತಂಡಕ್ಕೆ 1.70 ಕೋಟಿ ರೂ.ಗೆ ಹರಾಜಾದರು. ವಿಕೆಟ್ ಕೀಪರ್ ಜಿ.ಕಮಲಿನಿ 1.60 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ಸೇರಿದರು. ಪ್ರೇಮಾ ರಾವತ್ ಆರ್‌ಸಿಬಿಗೆ 1.20 ಕೋಟಿ ರೂ. ಹಾಗೂ ಎನ್. ಚರಣಿ ಅವರು ಡೆಲ್ಲಿ ಕ್ಯಾಪಿಟಲ್ಸ್‌ಗೆ 55 ಲಕ್ಷ ರೂ.ಗೆ ಹರಾಜಾಗಿದ್ದರು.
ಮಹಿಳಾ ಕ್ರಿಕೆಟ್‌ನಲ್ಲಿ ಎಲ್ಲ ಪಟ್ಟಣಗಳಲ್ಲಿರುವಂತೆ ಕ್ಲಬ್ ಅಥವಾ ಟೂರ್ನಮೆಂಟ್ ವ್ಯವಸ್ಥೆ ತೀರ ಕಡಿಮೆಯಿದೆ. ಬಿಸಿಸಿಐ ಹಾಗೂ ದೇಶಿ ಕ್ರಿಕೆಟ್ ಸಂಸ್ಥೆಗಳು ಕ್ಲಬ್‌ಗಳನ್ನು ನಿರ್ಮಿಸುವ ಹಾಗೂ ಸ್ಥಳೀಯ ಮಟ್ಟದಲ್ಲಿ ಟೂರ್ನಮೆಂಟ್‌ಗಳನ್ನು ಆಯೋಜಿಸುವುದಕ್ಕೆ ನೆರವು ನೀಡುವುದಕ್ಕೆ ಹೆಚ್ಚು ಆಸಕ್ತಿ ತೋರುತ್ತಿದೆ. ನುರಿತ ಅಟಗಾರ್ತಿಯರ ಸಂಖ್ಯೆ ಕಡಿಮೆ ಇದ್ದರೂ ಪುರುಷರ ತಂಡಗಳಂತೆ ಒಂದಕ್ಕಿಂತ ಹೆಚ್ಚು ಬಲಿಷ್ಠ ತಂಡಗಳನ್ನು ಕಟ್ಟಿ ಮತ್ತಷ್ಟು ಯಶಸ್ಸನ್ನು ಪಡೆಯಲು ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ.

ರಾಜಸ್ಥಾನದ ಹಳ್ಳಿಯೊಂದರ ಸುಶೀಲಾ ಮೀನಾ ಎಂಬ ಬಾಲಕಿ ಜಹೀರ್ ಖಾನ್ ಅವರನ್ನು ಹೋಲುವಂತೆ ಬೌಲಿಂಗ್ ಆ್ಯಕ್ಷನ್ ಮಾಡಿರುವ ವಿಡಿಯೋ ನೋಡಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೇ ಖುಷಿಪಟ್ಟಿದ್ದರು. ಆ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವುದು ಮಾತ್ರವಲ್ಲದೆ ಜಹೀರ್ ಖಾನ್ ಅವರಿಗೂ ಟ್ಯಾಗ್ ಮಾಡಿ, `ನೀವಿದನ್ನು ನೋಡಿದ್ದೀರಾ?’ ಎಂದು ಪ್ರಶ್ನಿಸಿದ್ದರು. ಈಕೆಯ ಬೌಲಿಂಗ್ ಶೈಲಿ ನೋಡಲು ಎಷ್ಟೊಂದು ನಾಜೂಕು, ನಿರಾಯಾಸ ಮತ್ತು ಆಕರ್ಷಣೀಯವಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಇದಕ್ಕೆ ಜಹೀರ್ ಖಾನ್ ಅವರು ನೀವಿದನ್ನು ನೋಡಿ ಒಪ್ಪಿಕೊಂಡಿದ್ದೀರಿ ಎಂದು ಹೇಳಿದ ಮೇಲೆ ನಾನೇನೂ ಹೇಳಲಿಲ್ಲ. ಈಕೆಯ ಆ್ಯಕ್ಷನ್ ಬಹಳ ನಾಜೂಕು ಮತ್ತು ಆಕರ್ಷಣೀಯವಾಗಿದೆ. ಈಗಾಗಲೇ ಈಕೆ ದೊಡ್ಡ ಭರವಸೆ ಹುಟ್ಟಿಸಿದ್ದಾಳೆ.’’ ಎಂದು ಆಶಾವಾದದ ಮಾತುಗಳನ್ನು ಆಡಿದ್ದರು.
ಮಹಿಳಾ ಕ್ರಿಕೆಟ್ ಕೂಡ ಹೆಚ್ಚು ಇಷ್ಟದ ಕ್ರೀಡೆಯಾಗಿ ಮಾರ್ಪಡುತ್ತಿರುವುದರಿಂದ ಗ್ರಾಮಾಂತರ ಪ್ರದೇಶದಲ್ಲಿ ಹೆಣ್ಣುಮಕ್ಕಳ ಕ್ರಿಕೆಟ್ ಕಲಿಕೆಗೆ ಅವಕಾಶಗಳು ಹೆಚ್ಚುತ್ತಿವೆ. ಶಾಲೆಗಳಲ್ಲಿ ಬಾಲಕಿಯರು ಕ್ರಿಕೆಟ್ ಆಡಲು ಆಸಕ್ತಿ ತೋರುತ್ತಿದ್ದಾರೆ. ಮಹಿಳೆಯರ ಕ್ರಿಕೆಟ್ ಜನಪ್ರಿಯವಾಗುತ್ತಿರುವ ಹಿನ್ನಲೆಯಲ್ಲಿ ಬಿಸಿಸಿಐ ಆಟವನ್ನು ಕೇವಲ ವಾಣಿಜ್ಯ ದೃಷ್ಟಿಯಿಂದ ನೋಡುವುದನ್ನು ಬಿಟ್ಟು ದೇಶದ ಉದ್ದಗಲಕ್ಕೂ ಇರುವ ಕ್ರಿಕೆಟ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಬಡವರು, ಶೋಷಿತ ಸಮುದಾಯಗಳು, ಅಲ್ಪಸಂಖ್ಯಾತ ಪ್ರತಿಭೆಗಳಿಗೆ ಅವಕಾಶ ನೀಡಿ ತಾನು ಮತ್ತಷ್ಟು ದೊಡ್ಡ ಸಂಸ್ಥೆ ಎನಿಸಿಕೊಳ್ಳಬೇಕಿದೆ.