ಒಳಮೀಸಲಾತಿ ಹೋರಾಟದ ಕಿಚ್ಚಿಗೆ ಸರ್ಕಾರದ ವಿಳಂಬ ನೀತಿ ತುಪ್ಪ ಸುರಿದಂತಿದ್ದು, ಇದರ ಕಿಚ್ಚು ಮತ್ತೆ ಜೋರಾಗಿ ಹೊತ್ತಿಕೊಂಡಿದೆ. ಕಳೆದ ಮೂರ್ನಾಲ್ಕು ದಶಕಗಳಿಂದಲೂ ಒಳಮೀಸಲಾತಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಶೋಷಿತ ಸಮುದಾಯಗಳು ಸುಪ್ರೀಂ ಕೋರ್ಟಿನ ಆದೇಶದ ನಂತರವೂ ಒಳಮಿಸಲಾತಿ ಘೋಷಣೆಗೆ, ಅದರ ಸೌಲಭ್ಯ ಪಡೆಯಲು ಮತ್ತೊಮ್ಮೆ ಹೋರಾಟಕ್ಕಿಳಿದಿವೆ.
2024ರ ಆಗಸ್ಟ್ 01ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ನಂತರವೂ ರಾಜ್ಯಗಳು ಒಳಮೀಸಲಾತಿ ವರ್ಗೀಕರಣಕ್ಕೆ ಆಸಕ್ತಿ ತೋರಿಲ್ಲ. ಬಹುತೇಕ ರಾಜ್ಯಗಳಲ್ಲಿ ಇದು ಇನ್ನೂ ಚರ್ಚೆ ಸ್ವರೂಪದಲ್ಲಿದೆ. ಸಾಕಷ್ಟು ಪ್ರತಿಭಟನೆ, ಮುತ್ತಿಗೆ, ಬೀದಿ ಹೋರಾಟಗಳ ನಂತರ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ವರ್ಗೀಕರಣಕ್ಕಾಗಿ ಆಯೋಗ ರಚಿಸುವ ಮಾತನಾಡಿತ್ತು. ಕೆಲ ತಿಂಗಳ ನಂತರ ಅಕ್ಟೋಬರ್‌ನಲ್ಲಿ ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿ ಒಳಮೀಸಲಾತಿ ವರ್ಗೀಕರಣಕ್ಕೆ ಉದ್ಯೋಗಿಕ, ಶೈಕ್ಷಣಿಕ ಅಂಕಿ ಅಂಶಗಳನ್ನು ಸಂಗ್ರಹಿಸಿ ವರ್ಗಿಕರಣವನ್ನು ಯಾವ ರೀತಿ ಮಾಡಬಹುದು ಎಂಬುದರ ಅಧ್ಯಯನ, ವರದಿಗೆ ಆದೇಶ ನೀಡಿತ್ತು.
ವರದಿ ಸಲ್ಲಿಕೆಗೆ ಆಯೋಗಕ್ಕೆ ಮೂರು ತಿಂಗಳ ಅವಧಿಯನ್ನೂ ನೀಡಿತ್ತು. ಆದರೆ ಅವಧಿ ಮುಗಿದಿದ್ದರೂ ಆಯೋಗವು ಸಂಪೂರ್ಣ ಅಂಕಿ ಅಂಶಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಅಧಿಕಾರಗಳು ಅಂಕಿ ಅಂಶಗಳನ್ನು ನೀಡುವಲ್ಲಿ ಅಸಹಕಾರ ತೋರುತ್ತಿದ್ದಾರೆ ಎನ್ನುವ ಮಾತುಗಳೂ ಕೂಡ ಇತ್ತೀಚಿಗೆ ಪತ್ರಿಕೆಗಳಲ್ಲಿ ವರದಿಯಾಗಿವೆ.

ಸರ್ಕಾರ ಹೀಗೆಯೇ ವಿಳಂಬ ನೀತಿ ಅನುಸರಿಸಿದರೆ ಒಳಮೀಸಲಾತಿ ಸೌಲಭ್ಯಕ್ಕಾಗಿ ಕಾಯುತ್ತಿರುವ ಸಮುದಾಯಗಳ ಹಿತ ಕಾಯುವವರಾರು ಎನ್ನುವ ಪ್ರಶ್ನೆ ಮತ್ತೆ ಮೂಡಿದೆ. ಪಂಜಾಬ್, ಹರಿಯಾಣ , ಪಕ್ಕದ ತೆಲಂಗಾಣ ಹೊರತುಪಡಿಸಿ ಒಳಮೀಸಲಾತಿಯ ವರ್ಗೀಕರಣ ಆದೇಶ ಬೇರೆಲ್ಲೂ ಜಾರಿಯಲ್ಲಿಲ್ಲ. ಕರ್ನಾಟಕದಲ್ಲಿ ಕೂಡ ಒಳಮೀಸಲಾತಿ ಜಾರಿ ವಿಳಂಬ ನೀತಿ ತಳ ಸಮುದಾಯಗಳಲ್ಲಿ ಪ್ರಶ್ನೆ ಹುಟ್ಟುಹಾಕಿದೆ.
ಹೀಗಾಗಿ ಮತ್ತೊಮ್ಮೆ ಸಮುದಾಯಗಳು ಹೋರಾಟದ ಹಾದಿಯತ್ತ ಮುಖಮಾಡಿವೆ. ಈ ನಿಟ್ಟಿನಲ್ಲಿ ಹರಿಹರದ ದಲಿತ ಚೇತನ ಪ್ರೊ. ಬಿ ಕೃಷ್ಣಪ್ಪನವರ ಚೈತ್ಯಭೂಮಿಯಿಂದ ಒಳಮೀಸಲಾತಿಗಾಗಿ ಪಾದಯಾತ್ರೆಯ ಹೋರಾಟ ಪ್ರಾರಂಭವಾಗಿದ್ದು, ಮಾರ್ಚ್ 21ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮತ್ತೊಮ್ಮೆ ಶೋಷಿತ ಸಂಘಟನೆಗಳು ಸೇರಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಮತ್ತೆ ಪ್ರಾರಂಭಿಸಲು ಮುನ್ನುಡಿ ಬರೆಯುತ್ತಿವೆ.

ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಸರ್ಕಾರಕ್ಕೆ ಕಡೆಯ ಎಚ್ಚರಿಕೆ ನೀಡುವ ಸಲುವಾಗಿ ಪ್ರಾರಂಭಿಸಿರುವ “ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ” ಎನ್ನುವ ಘೋಷ ವಾಕ್ಯದೊಂದಿಗೆ ಪ್ರಾರಂಭಿಸಿರುವ “ಕ್ರಾಂತಿಕಾರಿ ಪಾದಯಾತ್ರೆ”ಯು ಮಾರ್ಚ್ 5ರಿಂದ ಸುಮಾರು 17 ದಿನಗಳ ಕಾಲಸಾಗಿ 21ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೇರಲಿದೆ.
ಪಾದಯಾತ್ರೆಯಲ್ಲಿ ಶೋಷಿತ ಸಮುದಾಯಗಳ ಹಲವು ಸಂಘಟನೆಗಳು ಭಾಗವಹಿಸಿದ್ದು, ದಲಿತ ಸಂಘರ್ಷ ಸಮಿತಿಯ ಬಣಗಳು, ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ, ಅಲೆಮಾರಿ ಸಮುದಾಯ ಸೇರಿದಂತೆ ಹಲವು ಸಂಘಟನೆಗಳು ಸರ್ಕಾರಕ್ಕೆ ಒಳಮಿಸಲಾತಿ ಜಾರಿಗೆ ಒತ್ತಾಯ ಮಾಡುವುದಕ್ಕಾಗಿ ಮಾರ್ಚ್ 21ರಿಂದ ಅನಿರ್ದಿಷ್ಷಾವಧಿಯ ಮುಷ್ಕರವನ್ನು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿವೆ. ಇದಕ್ಕೆ 49ಕ್ಕೂ ಹೆಚ್ಚು ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಬೆಂಬಲ ಸಿಕ್ಕಿರುವುದು ಹೋರಾಟದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಒಳಮೀಸಲಾತಿ “ಕ್ರಾಂತಿಕಾರಿ ಪಾದಯಾತ್ರೆ” ಹರಿಹರದಿಂದ ಚಿತ್ರದುರ್ಗ, ಐಮಂಗಲ, ಹಿರಿಯೂರು, ಶಿರಾ, ತುಮಕೂರು, ಡಾಬಸ್ ಪೇಟೆ ಮಾರ್ಗವಾಗಿ ಬೆಂಗಳೂರಿಗೆ ತಲುಪಲಿದ್ದು, ಪ್ರತಿದಿನ ಮಾರ್ಗಮಧ್ಯದ ಹಳ್ಳಿ, ನಗರಗಳಲ್ಲಿ ವಾಸ್ತವ್ಯ ಹೂಡಲಿದೆ. ಆಯಾ ಜಿಲ್ಲೆಯ, ತಾಲೂಕಿನ, ಹೋಬಳಿಯ ಸುತ್ತಮುತ್ತಲ ಹಳ್ಳಿಗಳ ಜನರು ಪಾದಯಾತ್ರೆಗೆ ಊಟ, ವಸತಿಯೊಂದಿಗೆ ಎಲ್ಲ ರೀತಿಯ ಬೆಂಬಲವನ್ನು ನೀಡುತ್ತಿದ್ದು, ಸಾಕಷ್ಟು ಜನರು ಪಾದಯಾತ್ರೆಯೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.
ಒಳಮೀಸಲಾತಿಯನ್ನು ಜಾರಿಗೊಳಿಸುವವರೆಗೂ ಯಾವುದೇ ಬ್ಯಾಕ್‌ಲಾಗ್ ಹುದ್ದೆಗಳು ಮತ್ತು ನೇಮಕಾತಿಗಳನ್ನು ಮಾಡಬಾರದೆಂದು ಸಚಿವ ಸಂಪುಟದಲ್ಲಿ ನಿರ್ಣಯಿಸಿ ಪತ್ರಿಕಾಗೋಷ್ಟಿಯಲ್ಲಿ ಪ್ರಕಟಿಸಿದ್ದಾರೆ. ಆದರೂ ಯಾವ ಮುಲಾಜು ಇಲ್ಲದೆ ಮಾತು ತಪ್ಪಿರುವ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟದ ನಿರ್ಧಾರಗಳನ್ನು ಗಾಳಿಗೆ ತೂರಿ 37,000 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಇದರ ಪರಿಣಾಮ ಮೀಸಲಾತಿಯ ಎಲ್ಲ ಉದ್ಯೋಗದ ಅವಕಾಶಗಳನ್ನು ಪರೋಕ್ಷವಾಗಿ ಖಾಲಿ ಮಾಡುವ ಮೂಲಕ ಶೋಷಿತ ಸಮುದಾಯಗಳ ವಿರುದ್ಧ ಕುತಂತ್ರ ಮಾಡುತ್ತಿದೆಯೆಂದು ಹೋರಾಟಗಾರರು ಕಿಡಿಕಾರಿದ್ದಾರೆ.

ತಮಿಳುನಾಡಿನಲ್ಲೂ ಕೂಡಾ ಜಸ್ಟೀಸ್ ಜನಾರ್ಧನ್ ಅವರ ಏಕಸದಸ್ಯ ಆಯೋಗದ ಶಿಫಾರಸಿನಂತೆ ಡಿಎಂಕೆ ಸರ್ಕಾರ ಜಾರಿಗೆ ತಂದ ಕಾನೂನು ಪರಿಶಿಷ್ಟ ಜಾತಿಗಳ ಶೇ.18ರಷ್ಟು ಕೋಟಾದೊಳಗೆ ಅರುಂಧತಿಯಾರ್‌ಗಳಿಗೆ(ಮಾದಿಗರಿಗೆ) ಶೇ.3ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಇದರ ನಂತರದಲ್ಲಿ ದಿ ಹಿಂದು ಪತ್ರಿಕೆಯ ಸಮೀಕ್ಷಾ ವರದಿ ಪ್ರಕಾರ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತ ವೃತ್ತಿಪರ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ 2018-19 ಮತ್ತು 2023-24ರ ನಡುವೆ ಸೀಟುಗಳ ಸಂಖ್ಯೆಯ ಹಂಚಿಕೆಯಲ್ಲಿ ಅರುಂಧತಿಯಾರ್ ಸಮಾಜಕ್ಕೆ ಸುಮಾರು ಶೇ. 82ರಷ್ಟು ಹೆಚ್ಚಳವಾಗಿದೆ. ಅಂಕಿ ಅಂಶಗಳ ಪ್ರಕಾರ ಎಂಬಿಬಿಎಸ್ ಒಂದರಲ್ಲೇ ಪ್ರವೇಶಾತಿಯ ಸಂಖೆಯಲ್ಲಿ 3600 ರಿಂದ 6553 ಕ್ಕೆ ಏರಿಕೆಯಾಗಿದೆ ಮತ್ತು ಇಂಜಿನಿಯರಿಂಗ್ ಸೀಟುಗಳ ಪ್ರವೇಶಾತಿಯ ಸಂಖ್ಯೆಯಲ್ಲಿ 1193 ರಿಂದ 3944ಕ್ಕೆ ಏರಿಕೆಯಾಗಿದೆ. ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ನಂತರ ಅರುಂಧತಿಯಾರ್ ಸಮುದಾಯಕ್ಕೆ ಶೇ.6ರಷ್ಟು ಜನಸಂಖ್ಯಾವಾರು ಮೀಸಲಾತಿ ಪಡೆಯಲು ಹೋರಾಟ ಮಾಡುತ್ತಿದ್ದಾರೆ. ದುರದೃಷ್ಟವೆಂದರೆ ಕರ್ನಾಟಕದಲ್ಲಿ ಈ ಮಟ್ಟಿನ ಕನಿಷ್ಠ ಮೀಸಲಾತಿ ನ್ಯಾಯವೂ ಶೋಷಿತ, ತಳಸಮುದಾಯಗಳಿಗೆ ಸಿಕ್ಕಿಲ್ಲ.
ಸರ್ಕಾರವೇ ರಚಿಸಿದ ನ್ಯಾ.ನಾಗಮೋಹನ್ ದಾಸ್ ಏಕಸದಸ್ಯ ಆಯೋಗ ಒಳಮೀಸಲಾತಿ ವರ್ಗೀಕರಣಕ್ಕೆ ಅಂಕಿ ಅಂಶಗಳನ್ನು ಕ್ರೋಢೀಕರಿಸಲು ಅಡೆತಡೆಗಳನ್ನು ಎದುರಿಸುತ್ತಿದೆ ಎನ್ನಲಾಗುತ್ತಿದೆ. ದತ್ತಾಂಶಗಳನ್ನು ನೀಡಲು ಸರ್ಕಾರದ ಅಧೀನ ಸಂಸ್ಥೆಗಳು, ಅಧಿಕಾರಿಗಳು ವಿಳಂಬ ನೀತಿ ಮತ್ತು ತಾತ್ಸಾರವನ್ನು ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರು ತಿಂಗಳ ಅವಧಿ ಮುಗಿದರೂ, ಒಳಮೀಸಲಾತಿ ವರ್ಗೀಕರಣಕ್ಕೆ ವರದಿ ನೀಡಲು ಆಯೋಗಕ್ಕೆ ಸಾಧ್ಯವಾಗಿಲ್ಲ. ಕಾಲಕಾಲಕ್ಕೆ ದತ್ತಾಂಶಗಳನ್ನು ತುರ್ತಾಗಿ ನೀಡಲು ಆದೇಶಿಸಬೇಕಿದ್ದ ಕಾಂಗ್ರೆಸ್ ಸರ್ಕಾರ ಕೂಡ ಒಳಮೀಸಲಾತಿಯ ಆಯೋಗದ ವರದಿ ಪಡೆಯಲು ವಿಳಂಬ ನೀತಿ ಅನುಸರಿಸಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪಾದಯಾತ್ರೆ ಕೈಗೊಂಡಿರುವ ಹೋರಾಟಗಾರರು ಸರ್ಕಾರಕ್ಕೆ ಪ್ರತಿಭಟನೆಯ ಚುರುಕು ಮುಟ್ಟಿಸುವ ಮೂಲಕ ಮತ್ತೊಂದು ಹಂತದ ಹೋರಾಟಕ್ಕೆ ಇಳಿದಿದ್ದಾರೆ.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸರ್ಕಾರದಲ್ಲಿ ಲಭ್ಯವಿರುವ ದತ್ತಾಂಶಗಳನ್ನು ಪರಿಗಣಿಸಿ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು. ನ್ಯಾ.ಸದಾಶಿವ ಆಯೋಗದ ವರದಿ ಮತ್ತು ಒಳಮೀಸಲಾತಿ ವರ್ಗಿಕರಣದ ಶಿಫಾರಸುಗಳನ್ನು ಅಧಿಕೃತಗೊಳಿಸಿ ಮೀಸಲಾತಿಯ ಶೇ.17ರ ಅನುಪಾತದಲ್ಲಿ ಹೆಚ್ಚುವರಿ ಶೇ.2ರಷ್ಟು ಮೀಸಲಾತಿಯನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಶೇ.7ರಷ್ಟು ಮೀಸಲಾತಿಯನ್ನು ನಿಗದಿಪಡಿಸಬೇಕು ಎನ್ನುವ ಹಕ್ಕೊತ್ತಾಯವನ್ನು ಹೋರಾಟಗಾರರು ಮಂಡಿಸಿದ್ದಾರೆ.
ಒಳಮೀಸಲಾತಿ ಜಾರಿಯಾಗುವವರೆಗೂ ನೇಮಕಾತಿಗಳನ್ನು ತಡೆಹಿಡಿಯಬೇಕು. ನಿಜವಾದ 49 ಅಲೆಮಾರಿಗಳನ್ನು ಪ್ರತ್ಯೇಕವಾಗಿ ಗುರುತಿಸಿ ಶೇ.1ಕ್ಕಿಂತ ಹೆಚ್ಚು ಒಳಮೀಸಲಾತಿಯನ್ನು ನೀಡಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ನ್ಯಾಯ ಒದಗಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಬಜೆಟ್‌ನಲ್ಲಿ ಮತ್ತು ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಜನಸಂಖ್ಯಾವಾರು ಹಂಚಿಕೆ ಮಾಡಬೇಕು. ಮಾದಿಗ, ಸಮಗಾರ, ಡೋಹರ, ಮಚಗಾರ ಜಾತಿಗಳ ಜನಸಂಖ್ಯೆಯ ಆಧಾರದ ಮೇಲೆ ಪ್ರತ್ಯೇಕವಾಗಿ ನಿಗಮ ಮಂಡಳಿಗಳಿಗೆ ತಲಾ ₹1000 ಕೋಟಿ ಅನುದಾನ ಮೀಸಲಿಟ್ಟು ಅದೇ ವರ್ಷ ವೆಚ್ಚ ಮಾಡಲು ಕ್ರಮ ಕೈಗೊಳ್ಳಬೇಕು ಎನ್ನುವುದು ಅವರ ಆಗ್ರಹವಾಗಿದೆ.
ಈ ಬಗ್ಗೆ ಹೋರಾಟದಲ್ಲಿ ಪಾಲ್ಗೊಂಡಿರುವ ಚಿಂತಕ ಪ್ರೊಫೆಸರ್ ಹರಿರಾಮ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ,” “ಮೂರ್ನಾಲ್ಕು ದಶಕಗಳಿಂದಲೂ ಒಳಮೀಸಲಾತಿಗಾಗಿ ಹೋರಾಟವಿದ್ದು, ಇದನ್ನು ಕೇವಲ ಮಾದಿಗ ಹಾಗೂ ಕೆಲವೇ ಸಮುದಾಯದ ಹೋರಾಟವೆಂದು ಬಿಂಬಿಸಲಾಗುತ್ತಿದೆ. 101 ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಬೇರೆ ಬೇರೆ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಿನ್ನೆಲೆಯಲ್ಲಿ ಅವರವರ ಪಾಲನ್ನು ನೀಡಬೇಕೆಂದು ಶುರುವಾಗಿದ್ದು ಒಳಮೀಸಲಾತಿ ಹೋರಾಟ. ಇಷ್ಟು ಜಾತಿಗಳಲ್ಲಿ ಕೆಲವು ಸಮುದಾಯಗಳಿಗೆ ಹೆಚ್ಚಿನ ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿಯ ಸೌಲಭ್ಯಗಳು ಸಿಕ್ಕಿವೆ. ಇನ್ನು ಕೆಲವಕ್ಕೆ ಕಡಿಮೆ ಸಿಕ್ಕಿದೆ. ಆದರೆ ಕೆಲವು ಸಮುದಾಯಗಳಿಗೆ, ಅಲೆಮಾರಿಗಳಿಗೆ ಮೀಸಲಾತಿಯಲ್ಲಿ ಅವುಗಳ ಐಡೆಂಟಿಟಿಯೇ ಇಲ್ಲ. ಈ ಹಿನ್ನೆಲೆಯಲ್ಲಿ ಅವುಗಳ ಜನಸಂಖ್ಯೆ ಅನುಗುಣವಾಗಿ ಎಲ್ಲ ಸಮುದಾಯಗಳಿಗೂ ಅವುಗಳ ಪಾಲನ್ನು ನೀಡಬೇಕೆನ್ನುವುದೇ ಒಳಮೀಸಲಾತಿ ಹೋರಾಟವಾಗಿದೆ” ಎಂದು ಹೇಳಿದರು.
“ಮೇಲ್ಜಾತಿಗಳು ಸೌಲಭ್ಯಗಳನ್ನು ಸಂಪೂರ್ಣವಾಗಿ ಉಪಯೋಗಿಸುತ್ತಿದ್ದ ಸಂದರ್ಭದಲ್ಲಿ ಕೆಳಜಾತಿಗಳನ್ನು ಮೇಲೆತ್ತಲು ತಂದಿದ್ದು ಮೀಸಲಾತಿ. ಈ ಮೀಸಲಾತಿಯಲ್ಲಿ ಕೆಲವು ಬಲಿಷ್ಠ ಜಾತಿಗಳು ತಳಸಮುದಾಯದ ಜಾತಿಗಳನ್ನು ತುಳಿಯುತ್ತಿದ್ದರೆ, ಮೀಸಲಾತಿಗೆ ಅರ್ಥವೇ ಇಲ್ಲದಂತಾಗುತ್ತದೆ. ಹಾಗಾಗಿ ಒಳಮೀಸಲಾತಿ ಸಂವಿಧಾನಿಕ ಮತ್ತು ಬಾಬಾ ಸಾಹೇಬ್ ಅಂಬೇಡ್ಕರರ ಚಿಂತನೆಗೆ ಪೂರಕವಾದದ್ದು. ಅಧಿಕಾರಕ್ಕೆ ಬರುವ ಮುನ್ನ ಸಿದ್ದರಾಮಯ್ಯನವರು ‘ಮೊದಲನೇ ಕ್ಯಾಬಿನೆಟ್‌ನಲ್ಲಿ ನಾವು ಒಳಮೀಸಲಾತಿ ಜಾರಿಗೆ ತರುತ್ತೇವೆ’ ಎಂದು ಹೇಳಿದ್ದರು. ಅಧಿಕಾರದ ನಂತರ ಸದಾಶಿವ ಆಯೋಗದ ವರದಿ ಅಥವಾ ಮಾಧುಸ್ವಾಮಿ ಆಯೋಗದ ವರದಿಯನ್ನಾಗಲಿ ಸರಿಯಾದುದನ್ನು ಪರಿಗಣನೆಗೆ ತಗೆದುಕೊಳ್ಳದೆ ಮತ್ತೆ ನ್ಯಾ.ನಾಗಮೋಹನ್ ದಾಸ್ ಅವರ ಆಯೋಗ ರಚಿಸಿದ್ದಾರೆ. ಅವರು ‘ಸರ್ಕಾರ ಪರಿಶಿಷ್ಟ ಜಾತಿಗೆ ಸಂಬಂಧಿಸಿದ ದತ್ತಾಂಶಗಳನ್ನು ನೀಡುತ್ತಿಲ್ಲ’ ಎಂದು ಆರೋಪಿಸಿದ್ದಾರೆ. ಇದು ಸರ್ಕಾರದ ವಿಳಂಬ ನೀತಿಯನ್ನು ತೋರಿಸುತ್ತದೆ. ನಾವು ದಲಿತರ ಪರ ಎನ್ನುವುದಷ್ಟೇ ಸಾಕಾಗುವುದಿಲ್ಲ. ದಲಿತರಿಗೆ ಏನು ಮಾಡಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ. ಹಾಗಾಗಿ ಕೂಡಲೇ ಒಳಮೀಸಲಾತಿಯನ್ನು ಜಾರಿಗೊಳಿಸಿ ಶೋಷಿತ ಸಮುದಾಯ ಮತ್ತು ಸಂಪೂರ್ಣ ಸೌಲಭ್ಯ ವಂಚಿತರಾಗಿರುವ ಅಲೆಮಾರಿ, ಪರಿಶಿಷ್ಟ ಜಾತಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸಿದ ರೀತಿ ಕಾಂಗ್ರೆಸ್ ಸರ್ಕಾರಕ್ಕೂ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎನ್ನುವ ಸಂದೇಶ ನೀಡುವ ನಿಟ್ಟಿನಲ್ಲಿ ಮತ್ತೊಮ್ಮೆ ಹೋರಾಟವನ್ನು ಕೈಗೊಂಡಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಿಯುಕೆ ಘಟಿಕೋತ್ಸವ; ಅಟ್ರಾಸಿಟಿ ಆರೋಪಿ ಉಪಕುಲಪತಿಯ ಅಭಿನಂದನೆ ತಿರಸ್ಕರಿಸಿದ ಸಂಶೋಧನಾರ್ಥಿ ನಂದಪ್ಪ ಪಿ
ಈ ದಿನ.ಕಾಮ್‌ನೊಂದಿಗೆ ಹೋರಾಟಗಾರ ಭಾಸ್ಕರ್ ಪ್ರಸಾದ್ ಮಾತನಾಡಿ, “ಸರ್ಕಾರ ಕುಂಟು ನೆಪವೊಡ್ಡಿ ಒಳಮೀಸಲಾತಿ ಮುಂದೂಡುತ್ತಿದೆ. ಆಯೋಗಗಳ ವರದಿ ಪಡೆಯುವ ನಾಟಕವಾಡುತ್ತಿದೆ. ಒಳಮೀಸಲಾತಿ ಜಾರಿ ಮಾಡದೇ, 2024ರ ಬ್ಯಾಕ್‌ಲಾಗ್ ಅಧಿಸೂಚನೆಗೆ ತಿದ್ದುಪಡಿ ಮಾಡಿ ಹೆಚ್ಚಿನ 8,000 ಹುದ್ದೆಗಳನ್ನು ಸೇರಿಸಿ 37,000 ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಲು ಹಿಂಬಾಗಿಲ ಮೂಲಕ ಶೋಷಿತ ಪರಿಶಿಷ್ಟ ಜಾತಿಗಳಿಗೆ ವಂಚನೆ, ಮಾತೃ ದ್ರೋಹದ ಕೆಲಸ ಮಾಡುತ್ತಿದ್ದಾರೆ. ಆಯೋಗಕ್ಕೆ ನೀಡಿದ ಮೂರು ತಿಂಗಳ ಅವಧಿ ಮುಗಿದಿದೆ. ಮಾರ್ಚ್ 21ಕ್ಕೆ ಬೆಂಗಳೂರಿನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಒಳಮೀಸಲಾತಿ ಜಾರಿಗೆ ಒತ್ತಾಯಿಸುವ ಎಲ್ಲರೂ ಸೇರಲಿದ್ದೇವೆ. ಅಷ್ಟರೊಳಗೆ ನಿಮ್ಮ ನಿರ್ಧಾರವೇನು ಎಂದು ತಿಳಿಸಬೇಕು. ಕಳ್ಳಮಾರ್ಗದಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬುವುದನ್ನು ತಡೆಯಬೇಕು. ಇಲ್ಲವಾದಲ್ಲಿ ಸಮುದಾಯ ಇವರ ರಾಜಕೀಯ ಸಮಾಧಿ ಮಾಡಲಿದೆ” ಎಂದು ಎಚ್ಚರಿಸಿದರು.
ಒಟ್ಟಿನಲ್ಲಿ ತಮಗೆ ಸಿಗಬೇಕಾದ ಸೌಲಭ್ಯ ಮತ್ತು ನ್ಯಾಯಯುತ ಪಾಲಿಗಾಗಿ ಪದೇ ಪದೆ ಬೀದಿಗಿಳಿಯಬೇಕಾದ ಅನಿವಾರ್ಯತೆ ಸೃಷ್ಟಿಸಿರುವ ಸರ್ಕಾರಗಳು ಅಂತಿಮವಾಗಿ ಈ ಬಾರಿಯಾದರೂ ಅನೇಕ ತಲೆಮಾರುಗಳಿಂದ ಕಾಯುತ್ತಿರುವ ಪರಿಶಿಷ್ಟ ಜಾತಿಯ ಸೌಲಭ್ಯ ವಂಚಿತ ಶೋಷಿತ ಮತ್ತು ಅಲೆಮಾರಿ ಸಮುದಾಯಗಳಿಗೆ ಅವರ ಜನಸಂಖ್ಯೆಗನುಗುಣವಾಗಿ ಒಳಮೀಸಲಾತಿ ಜಾರಿಗೊಳಿಸಿ ನ್ಯಾಯಯುತ ಪಾಲನ್ನು ನೀಡಲಿ ಎನ್ನುವುದೇ ಹೋರಾಟಗಾರರ ಹಕ್ಕೊತ್ತಾಯ, ಅದು ಸಾಂವಿಧಾನಿಕ ನ್ಯಾಯವು ಹೌದು.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು