ಬೇಸಿಗೆ ಆರಂಭದಲ್ಲಿಯೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಣ ಬಿಸಿಲಿನ ವಾತಾವರಣ ಇದೆ. ಈ ಮಧ್ಯೆ, ಅನೇಕ ಕಡೆಗಳಲ್ಲಿ ಬುಧವಾರ ರಾತ್ರಿ ಏಕಾಏಕಿ ಮಳೆಯಾಗಿದೆ. ಪರಿಣಾಮವಾಗಿ ಇಳೆ ತುಸು ತಂಪಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಮಂಗಳೂರಿಗೆ ಬರುವ ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ.
ಮಂಗಳೂರಿನಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗದ ಕಾರಣ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ವಿಮಾನಗಳನ್ನು ಕಳುಹಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದ ಎರಡು ವಿಮಾನಗಳನ್ನು ವಾಪಾಸ್ ಬೆಂಗಳೂರಿಗೆ ಹಿಂದುರುಗಿಸಲಾಗಿದೆ. ಮಂಗಳೂರಿನ ಬಜ್ಪೆ, ಕಿನ್ನಿಪದವು ಬಳಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ.ಉಳಿದಂತೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ ಭಾಗದಲ್ಲಿ ಮಳೆಯಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸುತ್ತಿದ್ದ ಕರಾವಳಿಯ ಕೆಲವೆಡೆ ಮಳೆಯಾಗಿದೆ. ಭಾರಿ ತಾಪಮಾನದಿಂದ ಬಸವಳಿದಿದ್ದ ಜನರಿಗೆ ಮಳೆ ತಂಪೆರೆದಿದ್ದಾನೆ. ಕಡಬದಲ್ಲಿ ಗಾಳಿ ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಬಿಸಿಲ ತಾಪಕ್ಕೆ ಕಂಗೆಟ್ಟಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೂಡ ಬುಧವಾರ ಸಂಜೆ ವರ್ಷಧಾರೆ ಸುರಿದಿದ್ದು, ತಂಪೆರೆದಿದೆ. ಮೂಡಿಗೆರೆ, ಕಳಸ, ಎನ್ಆರ್ ಪುರ ತಾಲೂಕಿನ ವಿವಿಧೆಡೆ ಧಾರಾಕಾರವಾಗಿ ಮಳೆ ಸುರಿದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಹುಲ್ ಸುತ್ತಮುತ್ತ ‘ದಿಬ್ಬಣದ ಕುದುರೆಗಳು’ ಇವೆ ಎಂಬ ದೂರೂ ಇದೆಯಲ್ಲ?
ಹಾಸನ ಜಿಲ್ಲೆಯಲ್ಲಿ ವಿವಿಧೆಡೆ ಬಿರುಗಾಳಿ ಸಹಿತವಾಗಿ ಮಳೆ ಸುರಿದಿದೆ. ಮೊದಲ ಮಳೆಯ ಅಬ್ಬರ ಜೋರಾಗಿದ್ದು, ಭೂಮಿ ತಂಪಾಗಿದೆ. ಇತ್ತ ತುಮಕೂರಿನಲ್ಲೂ ಗುಡುಗು, ಗಾಳಿ ಸಹಿತ ಮಳೆಯಾಗಿದೆ. ಬಿಸಿಲಿನ ತಾಪಕ್ಕೆ ವರುಣರಾಯ ತಂಪೆರೆದಿದ್ದಾನೆ. ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಮಂಗಳವಾರ ಸಂಜೆಯೇ ಮಳೆಯಾಗಿತ್ತು.
ಬೆಂಗಳೂರಿಗೆ ಮತ್ತೆ ಮಳೆ ಮುನ್ಸೂಚನೆ
ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳಲ್ಲಿ ಹೆಚ್ಚಿನ ಆರ್ದ್ರತೆ ಕಂಡುಬರುವ ನಿರೀಕ್ಷೆಯಿದೆ. ಐಎಂಡಿ ಪ್ರಕಾರ, ಗುರುವಾರ ಸಂಜೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗುರುವಾರ, ಗರಿಷ್ಠ ತಾಪಮಾನವು ಸುಮಾರು 32 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕನಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನದಲ್ಲಿ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕದ ಕೆಲವು ಭಾಗಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದ್ದು, ರಾಜ್ಯದ ಉಳಿದ ಭಾಗಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ.
