ಬಸ್, ಮೆಟ್ರೋ ಬೆನ್ನಲ್ಲೇ ಆಟೋ ಪ್ರಯಾಣವೂ ದುಬಾರಿ: ಖಾಸಗಿ ವಾಹನ ಬಳಕೆ – ಟ್ರಾಫಿಕ್‌ ಹೆಚ್ಚಳ ನಿಶ್ಚಿತ

Date:

Advertisements

ಇತ್ತೀಚೆಗೆ ಬಸ್ ಮತ್ತು ಮೆಟ್ರೋ ಪ್ರಯಾಣ ದರ ಏರಿಕೆಯಾಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರವನ್ನೂ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಈ ಹಿಂದೆ 2021ರ ನವೆಂಬರ್‌ನಲ್ಲಿ ಆಟೋ ಪ್ರಯಾಣ ದರವನ್ನು ಹೆಚ್ಚಿಸಲಾಗಿತ್ತು. ಈಗ, ಮತ್ತೆ ದರ ಹೆಚ್ಚಳದ ಬೇಡಿಕೆ ಮುನ್ನೆಲೆಗೆ ಬಂದಿದೆ. ಬಳಿಕ ನಿರಂತರವಾಗಿ ಅಗತ್ಯ ವಸ್ತುಗಳು ಮತ್ತು ಇಂಧನ ಬೆಲೆ ಏರಿಕೆಯಾಗಿವೆ. ಅದಕ್ಕಾಗಿ, ಆಟೋ ಪ್ರಯಾಣ ದರವನ್ನೂ ಹೆಚ್ಚಿಸಬೇಕೆಂದು ಆಟೋ ಚಾಲಕರ ಸಂಘಗಳು ಆಗ್ರಹಿಸುತ್ತಿವೆ. ಅವರ ಆಗ್ರಹದಂತೆ ಶೀಘ್ರವೇ ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆಯಿದೆ.

ಜನವರಿಯಲ್ಲಿ ಸಾರಿಗೆ ಇಲಾಖೆ ನೂತನ ದರಪಟ್ಟಿ ಬಿಡುಗಡೆ ಮಾಡಿದ್ದು, ಬಸ್ ಟಿಕೆಟ್ ದರವು 15% ಏರಿಕೆಯಾಗಿದೆ. ಕೆಎಸ್‌ಆರ್‌ಟಿಸಿ ಪಾಸ್ 150ರಿಂದ 200 ರೂಪಾಯಿವರೆಗೆ ಅಧಿಕವಾಗಿದೆ. ಬಿಎಂಟಿಸಿ ಪಾಸ್ ದರವು 100ರಿಂದ 150 ರೂಪಾಯಿವರೆಗೆ ಹೆಚ್ಚಳವಾಗಿದೆ. ಟಿಕೆಟ್ ದರ ಏರಿಕೆ ವಿರುದ್ಧ ಹಲವು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟು, ಇನ್ನೊಂದೆಡೆ ಪುರುಷರಿಂದ ದುಪ್ಪಟ್ಟು ಹಣ ಪಡೆಯಲಾಗುತ್ತಿದೆ ಎಂದು ಪ್ರಯಾಣಿಕರು ದೂರಿದ್ದರು.

ಇದನ್ನು ಓದಿದ್ದೀರಾ? ಸರ್ಕಾರಿ ಬಸ್​ ಟಿಕೆಟ್​ ದರ ಏರಿಕೆ: ಆಟೋ ಪ್ರಯಾಣ ದರ ಹೆಚ್ಚಳಕ್ಕೂ ಒತ್ತಡ

Advertisements

ಅದಾದ ಬೆನ್ನಲ್ಲೇ ಮೆಟ್ರೋ ದರವನ್ನೂ ಹೆಚ್ಚಿಸಲಾಗಿದ್ದು, 50%ನಿಂದ 80%ವರೆಗೆ ಮೆಟ್ರೋ ದರ ಏರಿಕೆಯಾಗಿದೆ ಮಾಡಲಾಗಿತ್ತು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರದೆಡೆ ಬೊಟ್ಟು ಮಾಡಿದರೆ, ಕೇಂದ್ರ ಸರ್ಕಾರ ರಾಜ್ಯವೇ ಸಲಹೆ ನೀಡಿದ್ದು ಎಂದು ಹೇಳಿತ್ತು. ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಲ್ಲೆಲ್ಲ ದರ ದುಪ್ಪಟ್ಟಾಗಿದೆಯೋ ಅಲ್ಲಿ ಕೊಂಚ ದರ ಇಳಿಸಲಾಗಿತ್ತು. ಈ ದರ ಏರಿಕೆ-ಇಳಿಕೆ ಆಟದಲ್ಲಿ ಜನರು ಬೇಸತ್ತು ತಮ್ಮ ಖಾಸಗಿ ವಾಹನ ಮತ್ತು ಇತರ ವಾಹನಗಳನ್ನು ಬಳಕೆಯತ್ತ ವಾಲಿದರು. ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ದಿಢೀರ್ ಕುಸಿಯಿತು. ನಿತ್ಯ 8 ಲಕ್ಷದ ಗಡಿ ದಾಟುತ್ತಿದ್ದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಎರಡೇ ದಿನಗಳಲ್ಲಿ 7.5 ಲಕ್ಷದ ಆಸುಪಾಸಿಗೆ ಬಂದು ತಲುಪಿತ್ತು. ಬಳಿಕ, ಪ್ರಯಾಣಿಕರ ಸಂಖ್ಯೆ ಏರಿಳಿತ ಕಾಣುತ್ತಲ್ಲೇ ಬಂದಿದೆ.

ಇದನ್ನು ಓದಿದ್ದೀರಾ? ದರ ಏರಿಕೆಯಿಂದ ನಿತ್ಯ 1 ಲಕ್ಷ ಪ್ರಯಾಣಿಕರನ್ನು ಕಳೆದುಕೊಂಡ ನಮ್ಮ ಮೆಟ್ರೋ

ಸಾಮಾನ್ಯವಾಗಿಯೇ ಮಧ್ಯಮ ವರ್ಗದ ಜನರು ಪ್ರಯಾಣ, ಊಟ- ತಿಂಡಿ, ಮನರಂಜನೆ ಎಲ್ಲ ವಿಚಾರದಲ್ಲಿಯೂ ಎಲ್ಲಿ ಹಣ ಉಳಿತಾಯವಾಗುತ್ತದೆಯೋ ಅಥವಾ ಕಡಿಮೆ ಖರ್ಚಾಗುತ್ತದೆಯೋ ಅದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಬಸ್ ಮತ್ತು ಮೆಟ್ರೋ ದರ ಹೆಚ್ಚಾದಂತೆ ಮಧ್ಯಮ ವರ್ಗದ ಜನರು ಮಾಡಿದ್ದು ಅದನ್ನೇ. ಮೆಟ್ರೋದಲ್ಲಿ ಒಂದು ದಿನದ ಪ್ರಯಾಣಕ್ಕೆ 150 ರೂಪಾಯಿ ತಗಲುವುದಾದರೆ 100 ರೂಪಾಯಿ ಪೆಟ್ರೋಲ್ ಹಾಕಿ ತಮ್ಮ ಬೈಕ್‌ನಲ್ಲೇ ಪ್ರಯಾಣಿಸಬಹುದಲ್ಲ? ಎಂದು ಆಲೋಚಿಸಿದವರು ಬೆಂಗಳೂರಿಗರು.

ತಮ್ಮ ಖರ್ಚಿನ ಹೊರೆಯನ್ನು ಸಾಮಾನ್ಯವಾಗಿಯೇ ಕಡಿಮೆ ಮಾಡುವ ಉಪಾಯವನ್ನು ಜನರು ಕಂಡುಕೊಳ್ಳುತ್ತಾರೆ. ಅದರಂತೆಯೇ ಮೆಟ್ರೋ ಬಿಟ್ಟು ಬೈಕ್‌ನಲ್ಲೇ ಪ್ರಯಾಣ ಶುರು ಮಾಡಿದ್ದಾರೆ. ಇದರಿಂದ ಜನರ ಹಣ ಉಳಿತಾಯವಾದರೂ ಬೆಂಗಳೂರಿಗೆ ಆದ ಸಮಸ್ಯೆ ಒಂದೆರಡಲ್ಲ. ಈಗಾಗಲೇ ಬೆಂಗಳೂರಿಗೆ ಬಗೆಹರಿಸಲಾಗದ ಸಮಸ್ಯೆಯಾದ ಟ್ರಾಫಿಕ್, ಮೆಟ್ರೋ ದರ ಏರಿಕೆ ಬಳಿಕ ಇನ್ನಷ್ಟು ಹೆಚ್ಚಾಗಿದೆ. ಜನರು ಮೆಟ್ರೋ ತೊರೆದು ಖಾಸಗಿ ವಾಹನ ಬಳಸುತ್ತಿರುವುದೇ ಇದಕ್ಕೆ ಕಾರಣ.

ಬರೀ ಟ್ರಾಫಿಕ್ ಮಾತ್ರವಲ್ಲ ವಾಯು ಮಾಲಿನ್ಯವು ಹೆಚ್ಚಾಗುತ್ತಿದೆ. ಇನ್ನು ವಾಹನದ ಹೊಗೆ, ಕಾರ್ಖಾನೆ ಮಾಲಿನ್ಯ ಅಧಿಕವಾಗುತ್ತಿದ್ದಂತೆ ಇನ್ನು ಕೆಲವೇ ವರ್ಷಗಳಲ್ಲಿ ಬೆಂಗಳೂರು ದೆಹಲಿಯಂತೆ ಹೊಗೆಯಿಂದ ಆವರಿಸಬಹುದು ಎಂಬ ಆತಂಕ ತಜ್ಞರದ್ದು. ಇವೆಲ್ಲವುದರ ನಡುವೆ ಈಗ ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಾದರೆ ಆಟೋ ಬಳಸುತ್ತಿದ್ದವರೂ ಕೂಡಾ ತಮ್ಮ ಖಾಸಗಿ ವಾಹನದ ಮೊರೆ ಹೋಗಬಹುದು. ಇದರಿಂದಾಗಿ ಮತ್ತಷ್ಟು ಸಂಚಾರದಟ್ಟಣೆ ಬೆಂಗಳೂರನ್ನು ಕಾಡುವುದು ನಿಶ್ಚಿತ.

ಆಟೋ ರಿಕ್ಷಾ ಚಾಲಕರು- ಪ್ರಾಧಿಕಾರದ ಸಭೆ

ಆಟೋ ರಿಕ್ಷಾ ಚಾಲಕರ ಸಂಘಗಳ ಬೇಡಿಕೆಗಳಿಗೆ ಸ್ಪಂದಿಸಿದ ಬೆಂಗಳೂರು ನಗರ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಬುಧವಾರ (ಮಾರ್ಚ್ 12) ಸಭೆ ಕರೆದಿದೆ. ಈ ಸಭೆಯಲ್ಲಿ ಸಂಭಾವ್ಯ ದರ ಪರಿಷ್ಕರಣೆ ಕುರಿತು ಚರ್ಚೆ ನಡೆಸಿದೆ. ಸಭೆಯಲ್ಲಿ ಸುಮಾರು 16 ಸಂಘಟನೆಗಳು ಭಾಗಿಯಾಗಿದ್ದು, ಈ ಪೈಕಿ ಒಂದು ಸಂಘಟನೆ ಮಾತ್ರ ಭಿನ್ನಮತ ವ್ಯಕ್ತಪಡಿಸಿದೆ. 15 ಸಂಘಟನೆಗಳು ಪ್ರಯಾಣ ದರ ಏರಿಸುವ ಬೇಡಿಕೆ ಮುಂದಿಟ್ಟರೆ ಒಂದು ಸಂಘಟನೆ ಬೈಕ್ ಟ್ಯಾಕ್ಸಿಯನ್ನು ನಿಲ್ಲಿಸಬೇಕು, ಇದರಿಂದಾಗಿ ಆಟೋ ಚಾಲಕರಿಗೆ ನಷ್ಟವಾಗುತ್ತಿದೆ ಎಂದು ಹೇಳಿಕೊಂಡಿದೆ.

ಇದನ್ನು ಓದಿದ್ದೀರಾ? ‘ಭಕ್ತರಿಗೆ ಒಳ್ಳೇದಾದ್ರೆ ದೇವರು ಕ್ಷಮಿಸುತ್ತಾನೆ’; ಮೆಟ್ರೋಗಾಗಿ ದೇವಾಲಯ ಭೂಮಿ ಸ್ವಾಧೀನ ವಿಚಾರದಲ್ಲಿ ಹೈಕೋರ್ಟ್‌ ಹೇಳಿದ್ದು ಹೀಗೆ!

ಪ್ರಸ್ತುತ ಆಟೋ ರಿಕ್ಷಾ ಪ್ರಯಾಣದ ಕನಿಷ್ಠ ದರ 30 ರೂಪಾಯಿ ಆಗಿದ್ದು, ಎರಡು ಕಿಲೋ ಮೀಟರ್‌ಗಿಂತ ಅಧಿಕ ದೂರಕ್ಕೆ ಪ್ರತೀ ಕಿಲೋ ಮೀಟರ್‌ಗೆ 15 ರೂ. ಶುಲ್ಕ ವಿಧಿಸಲಾಗುತ್ತದೆ. ಆದರೆ ಆಟೋ ರಿಕ್ಷಾ ಪ್ರಯಾಣ ಕನಿಷ್ಠ ದರವನ್ನು 50 ರೂಪಾಯಿಗೆ ಹೆಚ್ಚಿಸಬೇಕು ಮತ್ತು ಎರಡು ಕಿಲೋ ಮೀಟರ್‌ ಬಳಿಕ ಪ್ರತಿ ಕಿ.ಮೀ.ಗೆ 25 ರೂ.ಗೆ ಏರಿಕೆ ಮಾಡುವ ಪ್ರಸ್ತಾಪವನ್ನು ಆಟೋ ಚಾಲಕರ ಸಂಘ ಮುಂದಿಟ್ಟಿದೆ. ಆದರೆ ಕನಿಷ್ಠ ಪ್ರಯಾಣ ದರವನ್ನು 40 ರೂ.ಗೆ ಮಿತಿಗೊಳಿಸಲು ಮಾತುಕತೆ ನಡೆಸಲಾಗುತ್ತಿದೆ. ಎರಡು ಕಿ.ಮೀ. ಬಳಿಕ ಪ್ರತಿ ಕಿಲೋ ಮೀಟರ್‌ಗೆ 15 ರೂಪಾಯಿಯಿಂದ 20 ರೂಪಾಯಿಗೆ ದರ ಏರಿಸಲು ಚಿಂತನೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಈದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯೆ ನೀಡಿರುವ ಆಟೋ ರಿಕ್ಷಾ ಚಾಲಕರ ಒಕ್ಕೂಟ (ARDU) ಮುಖಂಡ ಸಿ ಎನ್ ಶ್ರೀನಿವಾಸ್, “ಆಟೋ ಮೀಟರ್ ದರ ಹೆಚ್ಚಳ ಮಾಡಬೇಕು ಎಂಬುದು ನಮ್ಮ ಆಗ್ರಹ. ನಾವು ದಿನ ನಿತ್ಯ ಉಪಯೋಗಿಸುವ ಅಗತ್ಯ ವಸ್ತುಗಳ ಬೆಲೆಗಳು ವಿಪರೀತವಾಗಿ ಹೆಚ್ಚಾಗಿದೆ. ನೀರು, ವಿದ್ಯುತ್, ಹಾಲಿನ ದರ, ಹೀಗೆ ಎಲ್ಲ ಅಗತ್ಯ ವಸ್ತುಗಳ ದರ ಜಾಸ್ತಿಯಾಗಿದೆ. ಅದೇ ರೀತಿ ಆಟೋ ಚಾಲಕರು ಉಪಯೋಗಿಸುವ ಆಟೋದ ಬಿಡಿ ಭಾಗಗಳು, ಇಂಧನ, ಆಯಿಲ್ ಬೆಲೆಗಳು ಶೇಕಡ 100ರಷ್ಟು ಏರಿಕೆಯಾಗಿದೆ. ಹೋಟೆಲ್‌ಗೆ ಹೋದರೆ ಊಟದ ಬೆಲೆಯೂ ಹೆಚ್ಚಾಗಿದೆ. ಈ ಹಿಂದೆ 40-50 ರೂಪಾಯಿಗೆ ಸೇವಿಸುತ್ತಿದ್ದ ಊಟದ ಬೆಲೆ ಈಗ 80-100 ರೂಪಾಯಿ ಆಗಿದೆ. ಇವೆಲ್ಲವನ್ನು ನಾವು ನಮ್ಮ ಪ್ರಯಾಣಿಕರು ನೀಡುವ ಹಣದಿಂದಲೇ ನಿಭಾಯಿಸಬೇಕು” ಎಂದು ಹೇಳಿದ್ದಾರೆ.

“ಸದ್ಯ ಶಿಕ್ಷಣ ವೆಚ್ಚ, ಆರೋಗ್ಯ ವೆಚ್ಚ ಅಧಿಕವಾಗಿದೆ. ಈ ಎಲ್ಲ ಕಾರಣಗಳಿಂದಾಗಿ ನಾವು ಕಿಲೋ ಮೀಟರ್‌ಗೆ ಐದು ರೂಪಾಯಿ ಹೆಚ್ಚಿಸಬೇಕು ಎಂದು ಆಗ್ರಹಿಸುತ್ತಿದ್ದೇವೆ. ಪ್ರಸ್ತುತ ಮಾತುಕತೆ ನಡೆಯುತ್ತಿದೆ. ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಅಂತಿಮ ನಿರ್ಧಾರ ಕೈಗೊಂಡು ಸರ್ಕಾರದ ಅನುಮತಿ ಪಡೆದು ಘೋಷಣೆಯನ್ನು ಮಾಡುತ್ತಾರೆ” ಎನ್ನುತ್ತಾರೆ ಆಟೋ ಚಾಲಕರ ಸಂಘದ ಮುಖಂಡ.

ಇದನ್ನು ಓದಿದ್ದೀರಾ? ಮೆಟ್ರೋ ಟಿಕೆಟ್‌ ದರ ಏರಿಕೆಯನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ

“ಮೂರು ವರ್ಷಗಳ ಹಿಂದೆ ಆಟೋ ರಿಕ್ಷಾ ಬೆಲೆಯು ಒಂದು ಲಕ್ಷದ ಎಂಬತ್ತು ಸಾವಿರ (1,80,000 ರೂ.) ರೂಪಾಯಿ ಆಗಿತ್ತು. ಆದರೆ ಈಗ ಎರಡು ಲಕ್ಷದ ಎಂಬತ್ತು ಸಾವಿರ (2,80,000 ರೂ.) ರೂಪಾಯಿ ಆಗಿದೆ. ಸುಮಾರು ಒಂದು ಲಕ್ಷ ರೂಪಾಯಿಯಷ್ಟು ಬೆಲೆ ಏರಿಕೆಯಾಗಿದೆ. ಟೈಯರ್, ಟ್ಯೂಬ್, ಇತರೆ ಬಿಡಿ ಭಾಗಗಳ ಬೆಲೆ ಅಧಿಕವಾಗಿದೆ. ಆದ್ದರಿಂದ ನ್ಯಾಯವಾಗಿ ಆಟೋ ಮೀಟರ್ ದರವನ್ನು ಹೆಚ್ಚಿಸಿ ಎಂದು ನಾವು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ಸರ್ಕಾರಕ್ಕೆ ಒಂದು ತಿಂಗಳ ಗಡುವು ನಾವು ನೀಡಿದ್ದೇವೆ” ಎಂದು ತಿಳಿಸಿದರು.

ಇನ್ನು ಆಟೋ ದರ ಏರಿಕೆಯಿಂದಾಗಿ ಜನರು ಖಾಸಗಿ ವಾಹನ ಬಳಕೆಯ ನಿರ್ಧಾರ ಕೈಗೊಂಡರೆ ಸಂಚಾರದಟ್ಟಣೆ ಹೆಚ್ಚಾಗುವ ಬಗ್ಗೆಯೂ ಎಆರ್‌ಡಿಯು ಮುಖಂಡ ಶ್ರೀನಿವಾಸ್ ಅವರು ಈದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. “ಪ್ರತಿ ಬಾರಿಯೂ ಆಟೋ ದರ ಏರಿಸಿದರೆ ಜನರು ಖಾಸಗಿ ವಾಹನ ಬಳಸಬಹುದು, ಇದರಿಂದಾಗಿ ಸಂಚಾರದಟ್ಟಣೆ ಹೆಚ್ಚಾಗಬಹುದು ಎಂಬ ಪ್ರಶ್ನೆಯನ್ನೇ ಮುಂದಿಡಲಾಗುತ್ತದೆ. ಪ್ರತಿ ಬಾರಿ ಇದೇ ಪ್ರಶ್ನೆಯೇ ಬಂದರೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಈ ಸಂದರ್ಭದಲ್ಲಿ ಆಟೋ ಚಾಲಕರು ಬದುಕುವುದಾದರೂ ಹೇಗೆ? ಪ್ರತಿ ವರ್ಷ ಮನೆ ಬಾಡಿಗೆಯನ್ನು ಹೆಚ್ಚಿಸುತ್ತಾ ಹೋಗುತ್ತಾರೆ. ಅದನ್ನು ನಿಲ್ಲಿಸಲಾಗುತ್ತದೆಯೇ? ಸರ್ಕಾರವೇ ಬಾಡಿಗೆ ಹೆಚ್ಚಳವನ್ನು ನಿಲ್ಲಿಸಲಿ, ಆದರೆ ಅದು ಸಾಧ್ಯವಿಲ್ಲ. ಆಟೋ ಪ್ರಯಾಣ ದರ ಏರಿಕೆಯಿಂದ ಒಂದೆರಡು ತಿಂಗಳು ಪ್ರಯಾಣಿಕರು ಬರದೆ ನಮಗೆ ನಷ್ಟವಾಗಬಹುದು. ಆದರೆ ದಿನ ಕಳೆದಂತೆ ಸರಿಯಾಗುತ್ತದೆ. ಜನರು ಆಟೋದಲ್ಲಿ ಓಡಾಡಲೇ ಬೇಕಾಗುತ್ತದೆ. ಇದು ಒಂದು ಸಾರಿಗೆ ವ್ಯವಸ್ಥೆ. ಜನರು ಖಾಸಗಿ ವಾಹನ ಬಳಸದೆ ಸಾರ್ವಜನಿಕ, ಸಾಮೂಹಿಕ ಸಾರಿಗೆ ವ್ಯವಸ್ಥೆಯನ್ನೇ ಬಳಸಿಕೊಳ್ಳಬೇಕು ಎಂಬುದು ನಮ್ಮ ಮನವಿ. ಬೆಂಗಳೂರಿನಲ್ಲಿ ಜನಸಂಖ್ಯೆಗಿಂತ ಅಧಿಕ ವಾಹನಗಳ ಸಂಖ್ಯೆಯಿದೆ. ಗಂಟೆಗೆ ಸರಾಸರಿ 14-15 ಕಿ. ಮೀಟರ್ ಸಾಗಲು ಕೂಡಾ ಸಾಧ್ಯವಾಗದಂತಹ ಸ್ಥಿತಿ ಬೆಂಗಳೂರಿನಲ್ಲಿದೆ. ಹೀಗಿರುವಾಗ ಜನರು ಸಹಕರಿಸಬೇಕು” ಎಂದು ಹೇಳಿದ್ದಾರೆ.

ಆದರೆ, ಆಟೋವನ್ನು ಆಶ್ರಯಿಸಿರುವ ಪ್ರಯಾಣಿಕರೂ ಕೂಡಾ ಹಣದುಬ್ಬರದಲ್ಲಿ ಬಳಲುತ್ತಿರುವಾಗ ಈ ಪ್ರಯಾಣ ದರ ಏರಿಕೆ ಅವರಿಗೂ ಹೊರೆಯಾಗಬಹುದು. ಇದರಿಂದ ಖಾಸಗಿ ವಾಹನದೆಡೆ ಮುಖ ಮಾಡಿದರೆ ಬೆಂಗಳೂರಿನ ಸಂಚಾರ ದಟ್ಟಣೆಗೆ ಇನ್ನೊಂದಿಷ್ಟು ಕೊಡುಗೆ ನೀಡಿದಂತಾಗುತ್ತದೆ. ಜನರಿಗೂ ಹೊರೆಯಾಗದಂತೆ ಆಟೋ ಚಾಲಕರಿಗೂ ನಷ್ಟವಾಗದಂತೆ ನಿರ್ಧಾರವನ್ನು ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಬೆಲೆ ಏರಿಕೆಯಾದಂತೆ ಸರ್ಕಾರಿ ನೌಕರರ ವೇತನವನ್ನು ಆಯೋಗಗಳ ಸಭೆ ಕರೆದು ಏರಿಸಲಾಗುತ್ತದೆ. ಆದರೆ ನಮ್ಮ ಅಳಲು ಕೇಳುವವರು ಯಾರು? ಅನ್ನುತ್ತಾರೆ ಆಟೋ ಚಾಲಕರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X