ಅಂಗಾಂಗದಾನ ಮಾಡುವುದರಿಂದ ಮತ್ತೊಬ್ಬರಿಗೆ ಜೀವದಾನ ಮಾಡಿದಂತೆ, ಹೀಗಾಗಿ ಪ್ರತಿಯೊಬ್ಬರೂ ಅಂಗಾಂಗದಾನ ಮಾಡಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಎಸ್‌ಎಸ್ ಸ್ಪರ್ಶ್ ಆಸ್ಪತ್ರೆಯಲ್ಲಿ ಕರ್ನಾಟಕ ಅಂಗ ಮತ್ತು ಅಂಗಾಂಶಗಳ ಕಸಿ ಸಂಸ್ಥೆ (SOTTO Karnataka) ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಅಂಗಾಂಗ ದಾನವು ಮಾನವೀಯತೆಯ ಪರಮೋಚ್ಛ ಕಾರ್ಯಗಳಲ್ಲಿ ಒಂದು. ನಾವೆಲ್ಲರೂ ಈ ಶ್ರೇಷ್ಠ ಕಾರ್ಯವನ್ನು ಬೆಂಬಲಿಸಬೇಕು” ಎಂದ ಹೇಳಿದರು.
“ಅಂಗಾಂಗದಾನ ಮಾಡುವುದರಿಂದ ಮತ್ತೊಬ್ಬರಿಗೆ ಜೀವದಾನ ಮಾಡಿದಂತೆ. ವರದಿಗಳ ಪ್ರಕಾರ ಮಹಿಳೆಯರೇ ಹೆಚ್ಚು ಅಂಗಾಂಗದಾನ ಮಾಡಲು ಮುಂದಾಗುತ್ತಾರೆ. ಪುರುಷರೂ ಸಹ ಅಂಗಾಂಗದಾನ ಮಾಡಲು ಮುಂದಾಗಬೇಕು. ನಮ್ಮ ದೇಹದಲ್ಲಿ ಬದುಕಿರುವಾಗಲೇ ಅಂಗಾಂಗದಾನ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಜಾಗೃತಿಯ ಅವಶ್ಯಕತೆ ಇದೆ” ಎಂದು ಹೇಳಿದರು.
ಸ್ಪರ್ಶ್ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ. ಶರಣ್ ಶಿವರಾಜ್ ಪಾಟೀಲ್ ಮಾತನಾಡಿ, “ಕಿಡ್ನಿ ಸಮಸ್ಯೆಯು ಕೇವಲ ವೈದ್ಯಕೀಯವಾಗಿ ಮಾತ್ರವಲ್ಲ ಇದು ಕುಟುಂಬಗಳ ಮೇಲೆ ಅಪಾರವಾದ ಆರ್ಥಿಕ ಮತ್ತು ಭಾವನಾತ್ಮಕ ಹೊರೆ ಬೀಳುವಂತೆ ಮಾಡುತ್ತದೆ. ಆರಂಭಿಕ ಹಂತದಲ್ಲೇ ರೋಗ ನಿರ್ಣಯ, ಆರೋಗ್ಯಕರವಾದ ಜೀವನ ಶೈಲಿ ರೂಢಿಸಿಕೊಳ್ಳುವುದು ಹಾಗೂ ಮಧುಮೇಹದಂತಹ ಸಮಸ್ಯೆಗಳನ್ನು ಸೂಕ್ತವಾಗಿ ನಿಭಾಯಿಸುವುದು ದೀರ್ಘಾವಧಿ ಕಿಡ್ನಿ ಸಮಸ್ಯೆಯ ಅಪಾಯವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಬಲ್ಲದು. ಅತ್ಯಾಧುನಿಕ ಸೌಲಭ್ಯಗಳು, ಸುಧಾರಿತ ಪರಿಣತಿಯೊಂದಿಗೆ ಸ್ಪರ್ಶ್‌ನ ವೈದ್ಯಕೀಯ ತಂಡವು ಕಿಡ್ನಿ ಕಸಿ ಮೂಲಕ ಜೀವ ಉಳಿಸಬಲ್ಲ ಚಿಕಿತ್ಸೆ ಮತ್ತು ಆರೈಕೆಗೆ ಸರ್ವ ಸನ್ನದ್ಧವಾಗಿದ್ದು ಕಿಡ್ನಿ ಕಸಿ ಅಗತ್ಯವಿರುವ ರೋಗಿಗಳ ಪಾಲಿಗೆ ಹೊಸ ಭರವಸೆ ಮೂಡಿಸಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ನೆಫ್ರೋಲಜಿ ವಿಭಾಗದ ಹಿರಿಯ ತಜ್ಞ ಡಾ.ಹರ್ಷ ಕುಮಾರ್, ಎಸ್‌ಎಸ್ ಸ್ಪರ್ಶ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಹಿರಿಯ ಸಮಾಲೋಚಕ ಮತ್ತು ಅಂಗಾಂಗ ಕಸಿ ವೈದ್ಯ ಡಾ.ಸುನಿಲ್ ಆರ್ ಮತ್ತಿತರರು ಉಪಸ್ಥಿತರಿದ್ದರು.