ಏಷ್ಯನ್ ಫೆನ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಭವಾನಿ ದೇವಿ ಕಂಚಿನ ಪದಕಕ್ಕೆ ಕೊರಳೊಡ್ಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಸೋಮವಾರ ಚೆನ್ನೈನಲ್ಲಿ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಮಿಸಾಕಿ ಎಮುರಾ ಅವರನ್ನು ಭವಾನಿ ದೇವಿ 15-10 ಅಂಕಗಳ ಅಂತರದಲ್ಲಿ ಮಣಿಸಿ, ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದರು. ಆ ಮೂಲಕ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಭಾರತಕ್ಕೆ ಮೊದಲ ಪದಕವನ್ನು ಖಚಿತಪಡಿಸಿದ್ದರು.
ಸೆಮಿಫೈನಲ್ನಲ್ಲಿ ಸೋಲು
ಹಾಲಿ ವಿಶ್ವ ಚಾಂಪಿಯನ್ ಮಿಸಾಕಿ ಎಮುರಾ ಅವರನ್ನು ಮಣಿಸಿದರೂ ಸಹ, ಸೆಮಿಫೈನಲ್ ಉಜ್ಬೇಕಿಸ್ತಾನ್ನ ಜೈನಾಬ್ ದೈಬೆಕೋವಾ ವಿರುದ್ಧ 15-14 ಅಂತರದಲ್ಲಿ ಭವಾನಿ ರೋಚಕ ಸೋಲು ಕಂಡಿದ್ದಾರೆ. ಹೀಗಾಗಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಇದರೊಂದಿಗೆ ಏಷ್ಯನ್ ಫೆನ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ 29 ವರ್ಷ ವಯಸ್ಸಿನ ಭವಾನಿ ದೇವಿ ಪಾತ್ರರಾಗಿದ್ಧಾರೆ.
ವಿಶ್ವದ ನಂಬರ್ ಒನ್ ಆಟಗಾರ್ತಿ ಮಿಸಾಕಿ ವಿರುದ್ಧ ಭವಾನಿ ದೇವಿ ದಾಖಲಿಸಿದ ಮೊದಲ ಗೆಲುವು ಇದಾಗಿದೆ. ಮಿಸಾಕಿ ವಿರುದ್ಧದ ಈ ಹಿಂದಿನ ಮೂರೂ ಪಂದ್ಯಗಳಲ್ಲೂ ಭಾರತದ ಆಟಗಾರ್ತಿ ಸೋಲು ಕಂಡಿದ್ದರು.
ಫೆನ್ಸಿಂಗ್ನಲ್ಲಿ ಭಾರತದ ಹೆಮ್ಮೆ ಭವಾನಿ
ಫೆನ್ಸಿಂಗ್ ಕ್ರೀಡೆಯ ಇತಿಹಾಸದಲ್ಲೇ ಭಾರತಕ್ಕೆ ಮೊತ್ತ ಮೊದಲ ಪದಕ ಗೆದ್ದುಕೊಟ್ಟ ಕೀರ್ತಿ ಭವಾನಿ ದೇವಿ ಅವರದ್ದಾಗಿದೆ. 2017ರಲ್ಲಿ ಐಲ್ಯಾಂಡ್ನ ರೇಕ್ಜಾವಿಕ್ನಲ್ಲಿ ನಡೆದ ಟರ್ನೋಯ್ ಸ್ಯಾಟಲೈಟ್ ಫೆನ್ಸಿಂಗ್ ಚಾಂಪಿಯನ್ಶಿಪ್ನ ಫೈನಲ್ ಹಣಾಹಣಿಯಲ್ಲಿ ದೇವಿ ಅವರು, ಬ್ರಿಟನ್ನ ಸಾರಾ ಜೇನ್ ಹ್ಯಾಂಪ್ಸನ್ ಅವರನ್ನು 15-13 ಅಂಕಗಳಿಂದ ಸೋಲಿಸಿ ಚಿನ್ನದ ಪದಕವನ್ನು ಗೆದ್ದಿದ್ದರು.
ಇದಾದ ಬಳಿಕ ಕಾಮನ್ವೆಲ್ತ್ ಕೂಟದಲ್ಲಿ ಸತತ 2ನೇ ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಭವಾನಿ ದೇವಿ, ಆ ಮೂಲಕ ಒಲಿಂಪಿಕ್ಸ್ನಲ್ಲಿ ಆಡಿದ ಭಾರತದ ಮೊದಲ ಫೆನ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.