- ‘ಅಗತ್ಯದಷ್ಟು ಅಕ್ಕಿ ಯಾವುದೇ ಒಂದು ರಾಜ್ಯದಿಂದ ಸಿಗುತ್ತಿಲ್ಲ‘
- ‘ನಮ್ಮ ರೈತರಲ್ಲಿ ಅಕ್ಕಿ ಇದ್ದರೆ ಖರೀದಿ ಮಾಡಲಾಗುವುದು’
ಅನ್ನ ಭಾಗ್ಯ ಯೋಜನೆ ಅನುಷ್ಠಾನಕ್ಕೆ ಬೇಕಾದ ಅಕ್ಕಿ ಖರೀದಿ ಬಗ್ಗೆ ಬೇರೆ ರಾಜ್ಯಗಳೊಂದಿಗೆ ಮಾತುಕತೆ ನಡೆಸಿದ್ದ ಸರ್ಕಾರದ ಮನವಿಗೆ ಛತ್ತೀಸಗಢ್ ಸರ್ಕಾರ ಸ್ಪಂದಿಸಿದ್ದು, ಕರ್ನಾಟಕಕ್ಕೆ ಅಕ್ಕಿ ಕೊಡಲು ಮುಂದೆ ಬಂದಿದೆ.
ಈ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಸೋಮವಾರ ತುಮಕೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ಅನ್ನ ಭಾಗ್ಯ ಯೋಜನೆಗೆ ಬೇಕಾದ 1.50 ಲಕ್ಷ ಟನ್ ಅಕ್ಕಿ ಕೊಡಲು ಛತ್ತೀಸಗಢ್ ಸರ್ಕಾರ ಒಪ್ಪಿಗೆ ಸೂಚಿಸಿದೆ” ಎಂದು ತಿಳಿಸಿದ್ದಾರೆ.
“ಅನ್ನ ಭಾಗ್ಯ ಯೋಜನೆಗೆ ಅಗತ್ಯದಷ್ಟು ಅಕ್ಕಿ ಯಾವುದೇ ಒಂದು ರಾಜ್ಯದಿಂದ ಸಿಗುತ್ತಿಲ್ಲ. ಹಲವು ರಾಜ್ಯಗಳನ್ನು ಸಂಪರ್ಕಿಸಲಾಗಿದ್ದು, ಎಲ್ಲಿ ಅಕ್ಕಿ ಸಿಕ್ಕರೂ ಖರೀದಿಸಲಾಗುವುದು. ನಮ್ಮ ರೈತರ ಬಳಿ ಇದ್ದರೂ ಖರೀದಿ ಮಾಡಲಾಗುವುದು. ಈಗ ಛತ್ತೀಸಗಢ್ ಸರ್ಕಾರ ಅಕ್ಕಿ ಕೊಡಲು ಒಪ್ಪಿಗೆ ಸೂಚಿಸಿದೆ. ಅಲ್ಲಿಂದ ಸಾಗಣೆ ಮಾಡಲು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದರು.
“ಅನ್ನ ಭಾಗ್ಯ ಯೋಜನೆಯಲ್ಲಿ ಅಕ್ಕಿ ಜತೆಗೆ ಜೋಳ, ರಾಗಿ ಸಹ ಕೊಡಲಾಗುವುದು. ಬಡವರ ಯೋಜನೆ ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ಅನ್ನ ಭಾಗ್ಯ ಯೋಜನೆ ನಿಲ್ಲಿಸುವುದಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಅನ್ನ ಭಾಗ್ಯ | ರಾಜ್ಯದ ಜೋಳ, ರಾಗಿ, ಕುಚಲಕ್ಕಿ ಹಾಗೂ ಸಿರಿಧಾನ್ಯ ಖರೀದಿಸಿ ಹಂಚಿ: ರೈತ ಸಂಘಗಳ ಮನವಿ
ಇದೇ ವೇಳೆ ಅಕ್ಕಿ ಕೊಡಲು ನಿರಾಕರಿಸಿರುವ ಕೇಂದ್ರ ಸರ್ಕಾರದ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, “ಭಾರತ ಆಹಾರ ನಿಗಮದವರು(ಎಫ್‌ಸಿಐ) ಮೊದಲು ಅಕ್ಕಿ ಕೊಡಲು ಒಪ್ಪಿಕೊಂಡು ನಂತರ ನಿರಾಕರಿಸಿದರು. ಎಫ್‌ಸಿಐಗೆ ಈ ರೀತಿ ಸೂಚನೆ ಕೊಟ್ಟವರು ಯಾರು?” ಎಂಬುದು ರಾಜ್ಯದ ಜನತೆಗೂ ತಿಳಿಯಲಿ ಎಂದರು.
“ವಿದ್ಯುತ್ ದರ ಹೆಚ್ಚಳ ಬಗ್ಗೆ ಪ್ರತಿಕ್ರಿಯಿಸಿ, ಹಿಂದಿನ ಬಿಜೆಪಿ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿದೆ. ಇದರಿಂದ ಕೈಗಾರಿಕೆಗಳ ಮೇಲೂ ಹೆಚ್ಚು ಹೊರೆ ಬಿದ್ದಿದೆ. ಈ ಬಗ್ಗೆ ಸರ್ಕಾರ ಯೋಚಿಸುತ್ತಿದ್ದು, ಉದ್ಯಮಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ” ಎಂದು ತಿಳಿಸಿದರು.