ಯಡಾಮಿ ತಾಲ್ಲೂಕಿನ ಆಲೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕಾಸರಬೋಸಗಾ ಗ್ರಾಮದ ಕೂಲಿ ಕಾರ್ಮಿಕರಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಅಡಿಯಲ್ಲಿ ನಿರಂತರ ಕೆಲಸ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿ ಪದಾಧಿಕಾರಿಗಳು ಧರಣಿ ನಡೆಸಿದರು.
ಆಲೂರು ಗ್ರಾಮ ಪಂಚಾಯತ ಕಾರ್ಯಾಲಯ ಎದುರುಗಡೆ ಧರಣಿ ಸತ್ಯಾಗ್ರಹ ನಡೆಸಿದ ರೈತ ಸಂಘದ ಪದಾಧಿಕಾರಿಗಳು, ಕಾರ್ಮಿಕರು ಗ್ರಾ.ಪಂ. ಪಿಡಿಒ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ದಾವೂದ್ ಮುಜೇವಾರ ಮಾತನಾಡಿ, ʼಬೇಸಿಗೆಯಲ್ಲಿ ಕೆಲಸವಿಲ್ಲದೆ ಕಾರ್ಮಿಕರು ಪರದಾಡುವಂತಾಗಿ ಕೆಲಸಕ್ಕಾಗಿ ನಗರ, ಪಟ್ಟಣದತ್ತ ವಲಸೆ ಹೋಗುತ್ತಿದ್ದಾರೆ. ನರೇಗಾ ಯೋಜನೆಯಡಿ ಕಾರ್ಮಿಕರಿಗೆ ನಿರಂತರ ಕೆಲಸ ನೀಡಬೇಕು, ನೀರುದ್ಯೋಗಿ ಭತ್ಯೆ ನೀಡಿದರೆ ಕಾರ್ಮಿಕರ ಬದುಕಿಗೆ ಆಸರೆಯಾಗುತ್ತದೆʼ ಎಂದು ಹೇಳಿದರು.
ʼನರೇಗಾ ಕೆಲಸದ ವೇಳೆ ಮೂಲಭೂತ ಸೌಕರ್ಯ, ಉದ್ಯೋಗ ಚೀಟಿ ವಿತರಿಸಿ ಕೆಲಸ ನೀಡಬೇಕು. ಕಾಸರಬೋಸಗಾ ಗ್ರಾಮದಲ್ಲಿ ಸರಕಾರ ಯೋಜನೆ ಅಡಿಯಲ್ಲಿ ಬಡವರಿಗೆ ಮಂಜೂರಾದ ಮನೆಗಳ ಮಾಹಿತಿ, ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. 2023-24 ಹಾಗೂ 2024-25 ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳ ವಿವರ ನೀಡಬೇಕುʼ ಎಂದು ಆಗ್ರಹಿಸಿದರು.
ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಸರಸ್ಕೃತಿ ಕಾಸರಬೋಸಗಾ, ಈರಣ್ಣಾ ಚೌಡಾಪೂರ ಕಾಸರಬೋಸಗಾ, ಅವ್ವಣ್ಣ, ಚೌಡಾಪೂರ ಕಾಸರಬೋಸಗಾ, ಖಾದರ್ ಪಟೇಲ್ ಸೇರಿದಂತೆ ಮತ್ತಿತರರಿದ್ದರು.