ಪಂಚಾಚಾರ್ಯರು ಲಿಂಗಾಯತ ಧರ್ಮದ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಗಳನ್ನು ತಕ್ಷಣ ಹಿಂಪಡೆಯಬೇಕು, ಇಲ್ಲವಾದರೆ ಲಿಂಗಾಯತ ಸಮುದಾಯ ತೀವ್ರ ಹೋರಾಟಕ್ಕೆ ಮುಂದಾಗಲಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಭಾಪುರಿ ಮತ್ತು ಕೇದಾರ ಪೀಠದ ಸ್ವಾಮೀಜಿಗಳು ಲಿಂಗಾಯತ ಧರ್ಮ ಸ್ವತಂತ್ರವಲ್ಲ ಎಂದು ಹೇಳಿದ್ದರೂ, ಶ್ರೀಶೈಲ, ಕಾಶಿ ಹಾಗೂ ಉಜ್ಜಯನಿ ಪೀಠಾಧಿಪತಿಗಳು ವೀರಶೈವ ಧರ್ಮವೇ ಶ್ರೇಷ್ಠ ಎಂದು ವಾದಿಸುತ್ತಿದ್ದಾರೆ. ಪಂಚಾಚಾರ್ಯರು ಒಗ್ಗಟ್ಟಿನ ಹೆಸರಿನಲ್ಲಿ ಲಿಂಗಾಯತರನ್ನು ವೀರಶೈವ ಧರ್ಮಕ್ಕೆ ಒಳಪಡಿಸಲು ಯತ್ನಿಸುತ್ತಿದ್ದಾರೆ. ಇದನ್ನು ಸಮುದಾಯ ಒಪ್ಪಿಕೊಳ್ಳುವುದಿಲ್ಲಎಂದರು.
ಶಿವಲಿಂಗದ ಮೇಲೆ ಪಾದ ಇಡುವ ಪಂಚಾಚಾರ್ಯರ ಆಚರಣೆ ಲಿಂಗಾಯತರ ಭಾವನೆಗಳಿಗೆ ತೀವ್ರ ಧಕ್ಕೆ. ಬಸವಣ್ಣ ಮತ್ತು ಶರಣ ಸಂಪ್ರದಾಯದ 23,000 ವಚನಗಳ ಪ್ರಭಾವದಿಂದ ಲಕ್ಷಾಂತರ ಲಿಂಗಾಯತರು ಈಗಾಗಲೇ ಪಂಚಾಚಾರ್ಯರನ್ನು ತೊರೆದಿದ್ದಾರೆ. ಹೀಗಾಗಿ, ಲಿಂಗಾಯತ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಹತಾಶೆ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಪಂಚಾಚಾರ್ಯರ ಉಗಮದ ಬಗ್ಗೆ ನಿಖರ ಸಾಕ್ಷಾಧಾರಗಳಿಲ್ಲ. ಐದು ಕಲ್ಲುಗಳಿಂದ ಅವರು ಹುಟ್ಟಿದರು ಎಂಬಂತಹ ಪುರಾಣ ಕಥೆಗಳನ್ನು ಲಿಂಗಾಯತರು ನಂಬುವುದಿಲ್ಲ. ಲಿಂಗಾಯತ ಧರ್ಮವು ತನ್ನದೇ ಆದ ತತ್ವಶಾಸ್ತ್ರ ಹೊಂದಿದ್ದು, ಇದನ್ನು ಸ್ವತಂತ್ರ ಧರ್ಮವಾಗಿ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿ ಅಶೋಕ ಮಳಗಲಿ, ಸಿ.ಎಂ. ಬೂದಿಹಾಳ, ಮುರಿಗೆಪ್ಪ ಬಾಳಿ ಹಾಗೂ ಪ್ರವೀಣ ಚಿಕ್ಕಲಿ ಉಪಸ್ಥಿತರಿದ್ದರು.