ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಎಸ್.ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಳೇನಹಳ್ಳಿ ಅನಿತಾ ಶ್ರೀನಿವಾಸ್ ಅವಿರೋಧ ಆಯ್ಕೆಯಾದರು.
ಪಂಚಾಯಿತಿ ಕಚೇರಿಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಶಿವಪ್ರಕಾಶ್ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಈ ಹಿಂದೆ ಉಪಾಧ್ಯಕ್ಷರಾಗಿದ್ದ ರಂಗರಾಜು ನೀಡಿದ ರಾಜೀನಾಮೆ ಹಿನ್ನಲೆ ತೆರವಾದ ಸಾಮಾನ್ಯ ಮೀಸಲು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಏಕೈಕ ಅಭ್ಯರ್ಥಿಯಾಗಿ ಕಾಳೇನಹಳ್ಳಿ ಸದಸ್ಯೆ ಅನಿತಾ ಶ್ರೀನಿವಾಸ್ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ನೂತನ ಉಪಾಧ್ಯಕ್ಷೆ ಅನಿತಾ ಶ್ರೀನಿವಾಸ್ ಮಾತನಾಡಿ ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಅಧ್ಯಕ್ಷರ ಜೊತೆ ಸೇರಿ ಎಲ್ಲಾ ಸದಸ್ಯರ ವಿಶ್ವಾಸ ಗಳಿಸಿ ಕೆಲಸ ಮಾಡುತ್ತೇನೆ. ಅಭಿವೃದ್ದಿ ವಿಚಾರದಲ್ಲಿ ಮಾದರಿ ಗ್ರಾಮ ಪಂಚಾಯಿತಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರಿಗೇನಹಳ್ಳಿ ತುಳಸಿ ದಾಸ್ ಸದಸ್ಯರಾದ ಗಂಗನರಸಮ್ಮ, ಜಯಮ್ಮ, ಶಾಂತಲ, ವೆಂಕಟಲಕ್ಷ್ಮಮ್ಮ, ಅಂಬುಜಮ್ಮ, ನೀಲಮ್ಮ, ಧನಲಕ್ಷ್ಮಿ, ಶಿವಣ್ಣ, ಶ್ವೇತಾ, ಮಂಜಮ್ಮ, ರಾಮೇಗೌಡ, ನಾಗರಾಜು, ಪ್ರೇಮಾ, ಸೈಯದ್ ಖಲಂದರ್, ಭಾರತಿ, ಮುಖಂಡರಾದ ಸು.ಮುನಿಯಪ್ಪ, ಕೆ.ಸಿ.ಗಿರೀಶ್ ಪಾಂಡುರಂಗಯ್ಯ, ದಿವಾಕರ್, ಪಿಡಿಓ ಶಶಿಧರ್ ಇತರರು ಇದ್ದರು.