ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಪೊಲೀಸ್ ವ್ಯವಸ್ಥೆ ಕೈ ಜೋಡಿಸಿರುವುದು ಈಗಾಗಲೇ ಕಂಡು ಬಂದಿರುತ್ತದೆ. ಇದು ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯು ಹದಗೆಟ್ಟಿರುವುದನ್ನು ತೋರಿಸುತ್ತದೆ ಮತ್ತು ಈ ಅವ್ಯವಸ್ಥೆಯನ್ನು, ಪೊಲೀಸ್ ಅಕ್ರಮಗಳನ್ನು ನಿಯಂತ್ರಿಸುವಲ್ಲಿ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಪೊಲೀಸ್ ಇಲಾಖೆಯ ಮೇಲೆ ನಿಯಂತ್ರಣವಿಲ್ಲದಿರುವುದರಿಂದಲೇ, ಇಲಾಖೆಯಲ್ಲಿನ ಹಲವು ಅಧಿಕಾರಿಗಳು ಯಾವುದೇ ಭಯವಿಲ್ಲದೆ ಕಳ್ಳ ಸಾಗಣೆಯಂತಹ ಅಕ್ರಮಗಳಿಗೆ ಬೆನ್ನೆಲುಬಾಗಿ ನಿಂತಿರುವುದು ಮತ್ತು ಹಲವಾರು ಪ್ರಕರಣಗಳಲ್ಲಿ ಅವರು ನೇರವಾಗಿ ಭಾಗಿಯಾಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ, ಇತ್ತೀಚಿನ ದಿನಗಳಲ್ಲಿ ಲೋಕಾಯುಕ್ತ ಪೊಲೀಸ್ ದಾಳಿಗಳಲ್ಲಿ ಅನೇಕ ಪೊಲೀಸ್ ಅಧಿಕಾರಿಗಳು ಸಿಕ್ಕಿ ಬೀಳುತ್ತಿರುವುದು. ಆಡಳಿತದಲ್ಲಿ ದಕ್ಷತೆಯನ್ನು ತರುವಲ್ಲಿ ಗೃಹ ಸಚಿವರಿಂದ ಯಾವುದೇ ಪ್ರಯತ್ನ ಆಗಿರುವುದಿಲ್ಲ. ಡಾ. ಜಿ. ಪರಮೇಶ್ ಅವರು ರಾಜ್ಯ ಕಂಡ ದುರ್ಬಲ ಗೃಹ ಸಚಿವರಲ್ಲಿ ಒಬ್ಬರಾಗಿದ್ದಾರೆ. ಇವರ ಈ ಸ್ಥಾನದಲ್ಲಿ ಮುಂದುವರೆಯುವುದರಿಂದ ರಾಜ್ಯದ ಪೊಲೀಸ್ ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ . ಹಾಗಾಗಿ ಈ ಕೂಡಲೇ ರಾಜೀನಾಮೆ ನೀಡಬೇಕೆಂದು ಕೆ ಆರ್ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನ ಸಿಂಧೂ ಸ್ವಾಮಿ ಆಗ್ರಹಿಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ವ್ಯವಹಾರಿಕ ಸಂಬಂಧ ಹೊಂದಿದ್ದಾರೆ ಎಂಬದು ತಿಳಿದಿರುವ ವಿಚಾರ, ಹಾಗೆಯೆ ಅನೇಕ ಕ್ರಿಮಿನಲ್ ಗಳ ಜೊತೆ ಅಧಿಕಾರಿಗಳಿಗೆ ನಿಖಟ ಸಂಪರ್ಕ ಇರುವುದು ಇದೆ. ಇವೆಲ್ಲವನ್ನು ತಡೆಯುವಲ್ಲಿ ಗೃಹ ಸಚಿವರಾಗಿ ಡಾ. ಜಿ. ಪರಮೇಶ್ವರ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆದ್ದರಿಂದ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ರನ್ಯಾ ರಾವ್ ಪ್ರಕರಣದಲ್ಲಿ, ಅವರ ಕೆಳಗಿನ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಈ ಪ್ರಕರಣದಲ್ಲಿ ಅವರ ಲೋಪಗಳಿದ್ದಂತಹ ಸಂದರ್ಭದಲ್ಲಿ, ಅವರು ಗೃಹ ಸಚಿವಾರಾಗಿ ಮುಂದುವರೆದರೆ, ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ, ಈ ತನಿಖೆಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ ತಕ್ಷಣವೇ ಅವರು ತಮ್ಮ ಸ್ಥಾನವನ್ನು ತ್ಯಜಿಸಬೇಕು, ಇಲ್ಲಾ ಮುಖ್ಯಮಂತ್ರಿಗಳು ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಈ ಪ್ರಕರಣದಲ್ಲಿ, ಇನ್ನೂ ಇಬ್ಬರು ಸಚಿವರ ಪಾತ್ರವಿದೆ ಎಂದು ತನಿಖಾ ಸಮಯದಲ್ಲಿ ತಿಳಿದುಬಂದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆ ಸಚಿವರುಗಳು ಯಾರು ಎಂಬ ಮಾಹಿತಿ ಮುಖ್ಯಮಂತ್ರಿಯವರಿಗೆ ಇದ್ದೇ ಇರುತ್ತದೆ. ತಕ್ಷಣವೇ ಆ ಇಬ್ಬರು ಮಂತ್ರಿಗಳಿಂದ ರಾಜೀನಾಮೆ ಪಡೆಯಬೇಕು ಅಥವಾ ಅವರುಗಳನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಕೂಡ ಕೆ ಆರ್ ಎಸ್ ಪಕ್ಷ ಆಗ್ರಹಿಸುತ್ತದೆ. ತಕ್ಷಣದಲ್ಲಿ ಆ ಸಚಿವರುಗಳ ಹೆಸರುಗಳು ಬಯಲಾಗದಿರಬಹುದು, ಆದರೆ, ತನಿಖೆ ಪೂರ್ಣಗೊಂಡ ಬಳಿಕ ಹಲವು ಮೂಲಗಳಿಂದ ಅದು ಬೆಳಕಿಗೆ ಬಂದೇ ಬರುತ್ತದೆ, ಆಗ ಮತ್ತಷ್ಟು ಮುಜುಗರ ಎದುರಿಸಬೇಕಾಗುತ್ತದೆ. ಅಲ್ಲಿಯ ತನಕ ಕಾಯದೆ, ತಕ್ಷಣವೇ ಅವರನ್ನು ಕೈಬಿಡುವುದು ಉತ್ತಮ ನಡೆಯಾಗಿರುತ್ತದೆ.
ರಾಜ್ಯದಲ್ಲಿ ಒಂದು ರೀತಿಯ ಪೊಲೀಸ್ ರಾಜ್ಯಭಾರವಿದ್ದು, ಪೊಲೀಸರ ಅಕ್ರಮ ಅನಾಚಾರ ಎಲ್ಲಾ ಎಲ್ಲೆಯನ್ನು ಮೀರಿದೆ. ಸಾಮಾನ್ಯ ಜನರನ್ನು ಮತ್ತು ಬಡವರನ್ನು ಹಿಂಸಿಸುತ್ತಿದ್ದು, ಪೊಲೀಸರಿಂದ ನ್ಯಾಯ ಸಿಗುವ ಯಾವುದೇ ಭರವಸೆ ಜನರಿಗೆ ಇಂದು ಇಲ್ಲ. ಇಂತಹ ಪೊಲೀಸ್ ವ್ಯವಸ್ಥೆಯನ್ನು ಸಲಹುತ್ತಿರುವ ರಾಜ್ಯ ಸರ್ಕಾರ, ಅದನ್ನು ಸರಿದಾರಿಗೆ ತರುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಇದು ಹೀಗೆಯೆ ಮುಂದುವರೆದರೆ, ಮುಂದಿನ ದಿನಗಳಲ್ಲಿ ರಾಜ್ಯದ ಜನರು ಮತ್ತಷ್ಟು ಕರಾಳತೆಯನ್ನು ಅನುಭವಿಸಬೇಕಾಗುತ್ತದೆ. ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು ಎಂದು ಮಾನ್ಯ ಸರ್ವೋಚ್ಚ ನ್ಯಾಯಾಲಯವು 15 ವರ್ಷಗಳ ಹಿಂದೆಯೇ ಆದೇಶ ನೀಡಿದೆ, ಆದರೆ ಪೊಲೀಸ್ ವ್ಯವಸ್ಥೆಯಲ್ಲಿ ಇದುವರೆವಿಗೂ ಯಾವುದೇ ಮಹತ್ವದ ಬದಲಾವಣೆಗಳು ಕಂಡುಬಂದಿರುವುದಿಲ್ಲ. ತೋರಿಕೆಗೆ ಅಲ್ಪ ಮಹತ್ವದ ಕೆಲವು ಬದಲಾವಣೆ ಮಾಡಿ, ವ್ಯವಸ್ಥೆಯನ್ನು ರಾಜಕಾರಣಿಗಳ ಕಪಿಮುಷ್ಠಿಯಲ್ಲಿ ಇರಿಸಿಕೊಳ್ಳಲಾಗಿದೆ. ಪೊಲೀಸ್ ದೂರು ಪ್ರಾಧಿಕಾರವನ್ನು ವ್ಯವಸ್ಥಿತ ರೀತಿಯಲ್ಲಿ ಕಾರ್ಯನಿರ್ವಹಿಸದಂತೆ ಮಾಡಲಾಗಿದೆ.
ಸರ್ಕಾರಿ ವಾಹನಗಳನ್ನು ಕೇವಲ ಸರ್ಕಾರಿ ಕೆಲಸಗಳಿಗೆ ಬಳಸಬೇಕೆಂದು ಸ್ಪಷ್ಟ ನಿಯಮಗಳಿದ್ದರೂ ಕೂಡ ಎಲ್ಲಾ ಅಧಿಕಾರಿಗಳು ಈ ನಿಯಮಗಳನ್ನು ಗಾಳಿಗೆ ತೂರಿ, ವಾಹನಗಳನ್ನು ವ್ಯಯಕ್ತಿಕ ಕೆಲಸಗಳಿಗೆ ಬಳಕೆ ಮಾಡುತ್ತಿದ್ದಾರೆ ಮತ್ತು ಅನೇಕ ಅಕ್ರಮ ವ್ಯವಹಾರಗಳಿಗೆ ಕೂಡ ಬಳಕೆಯಾಗುತ್ತಿದೆ. ಈ ಬಗ್ಗೆಯೂ ಕೂಡ ಸರ್ಕಾರವು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.