ಮಾರ್ಚ್ 22ರಿಂದ ಆರಂಭವಾಗುವ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನನ್ನಾಗಿ ಟೀಂ ಇಂಡಿಯಾದ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ನೇಮಕ ಮಾಡಲಾಗಿದೆ.
ಈ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನ ಆಯ್ಕೆಯಲ್ಲಿ ಕೆ ಎಲ್ ರಾಹುಲ್ ಅವರು ಕೂಡ ಪೈಪೋಟಿಯಲ್ಲಿದ್ದರು. ಆದರೆ ತಂಡದ ಮಾಲೀಕರು ಅಂತಿಮವಾಗಿ ಅಕ್ಷರ್ ಪಟೇಲ್ ಅವರಿಗೆ ಮನ್ನಣೆ ನೀಡಿದ್ದಾರೆ.
ಗುಜರಾತ್‌ನ 31 ವರ್ಷದ ಅಕ್ಷರ್ ಪಟೇಲ್ ಪಟೇಲ್ 2019 ರಿಂದ ಐಪಿಎಲ್‌ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಈ ವರ್ಷದ ಹರಾಜು ಪ್ರಕ್ರಿಯೆಯಲ್ಲಿ 16.50 ಕೋಟಿ ನೀಡಿ ರೀಟೇನ್ ಮಾಡಿಕೊಳ್ಳಲಾಗಿತ್ತು. ಅದಲ್ಲದೆ ಜನವರಿಯಲ್ಲಿ ಇವರನ್ನು ಟೀಂ ಇಂಡಿಯಾ ಟಿ20 ತಂಡದ ಉಪನಾಯಕನನ್ನಾಗಿ ಕೂಡ ಆಯ್ಕೆ ಮಾಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ‘ದೇವರು ನನ್ನನ್ನು ಈ ಪರಿಸ್ಥಿತಿಯಲ್ಲಿ ಇಟ್ಟಿದ್ದಾನೆ’; ಕೆ.ಎಲ್ ರಾಹುಲ್ ಹೀಗೆ ಹೇಳಿದ್ದೇಕೆ?
ಕಳೆದ ಆರು ಋತುಗಳಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡಕ್ಕಾಗಿ 82 ಪಂದ್ಯಗಳನ್ನು ಆಡಿರುವ ಅಕ್ಷರ್ ಪಟೇಲ್ ಸುಮಾರು 30 ಸರಾಸರಿಯಲ್ಲಿ 235 ರನ್ ಗಳಿಸಿದ್ದು, 7.65 ರ ಎಕಾನಮಿ ದರದಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಅವರನ್ನು ಐಪಿಎಲ್ ಪ್ರಮುಖ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.
ಐಪಿಎಲ್‌ನ ಮೂಲ ಎಂಟು ಫ್ರಾಂಚೈಸಿಗಳಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗೆ ಒಮ್ಮೆಯೂ ಪ್ರಶಸ್ತಿ ಗೆಲ್ಲದ ಮೂರು ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಕಳೆದ ಋತುವಿನಲ್ಲಿ ಡಿಸಿ ತಲಾ ಏಳು ಪಂದ್ಯಗಳನ್ನು ಗೆದ್ದು ಆರನೇ ಸ್ಥಾನ ಪಡೆಯಿತು.
ಡಿಸಿ ತಂಡ ಮಾರ್ಚ್ 24 ರಂದು ವಿಶಾಖಪಟ್ಟಣದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಜೊತೆ ಆಡುವ ಮೂಲಕ ತಮ್ಮ ಐಪಿಎಲ್ 2025ರ ಅಭಿಯಾನವನ್ನು ಪ್ರಾರಂಭಿಸಲಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಐದು ತಂಡಗಳು ತಮ್ಮ ನಾಯಕರನ್ನು ಆಯ್ಕೆ ಮಾಡಿವೆ. ಆರ್‌ಸಿಬಿಯನ್ನು ರಜತ್ ಪಾಟಿದಾರ್, ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಅಜಿಂಕ್ಯ ರಹಾನೆ, ಲಖನೌ ಸೂಪರ್ ಜೈಂಟ್ಸ್ ಅನ್ನು ರಿಷಭ್ ಪಂತ್ ಮತ್ತು ಪಂಜಾಬ್ ಕಿಂಗ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ.
