ಕನ್ನಡ ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣವು ಸದ್ಯ ಹಲವು ತಿರುವುಗಳನ್ನು ಕಾಣುತ್ತಿದೆ. ಒಂದೆಡೆ ಈ ಕಳ್ಳಸಾಗಣೆ ಜಾಲದ ಹಿಂದೆ ರಾಜ್ಯದ ಇಬ್ಬರು ಸಚಿವರುಗಳ ಕೈವಾಡವಿದೆ ಎಂಬ ಆರೋಪವಿದೆ. ಇನ್ನೊಂದೆಡೆ ಸ್ವಾಮೀಜಿ ಒಬ್ಬರೂ ಸ್ಮಗ್ಲಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಸುದ್ದಿಗಳಿವೆ. ಇವೆಲ್ಲವುದರ ನಡುವೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ‘ಗೋಲ್ಡ್’ ರಾಜಕೀಯ ನಡೆಯುತ್ತಲೇ ಇದೆ. ಪರಸ್ಪರ ಕೆಸರೆರಚಾಟ ಮುಂದುವರೆದಿದೆ.
ಜನರು ಯೂಟ್ಯೂಬ್ ನೋಡಿ ಅಡುಗೆ ಮಾಡುವಂತೆ, ರನ್ಯಾ ರಾವ್ ಯೂಟ್ಯೂಬ್ ನೋಡಿ ಚಿನ್ನ ಕಳ್ಳಸಾಗಣೆ ಹೇಗೆ ಮಾಡುವುದು ಎಂದು ಅರಿತುಕೊಂಡಿದ್ದಾಗಿ ಎಂದು ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಯೂಟ್ಯೂಬ್ ನೋಡಿ ಅಪರಾಧ, ಕೊಲೆ, ಆತ್ಮಹತ್ಯೆ, ಕಳ್ಳತನ ನಡೆದಿರುವುದು ಇದೇ ಮೊದಲೇನಲ್ಲ. ಯೂಟ್ಯೂಬ್‌ನಲ್ಲಿ ನೋಡಿ ಬಾಂಬ್ ಕೂಡಾ ತಯಾರಿಸಿರುವ ಘಟನೆಗಳು ವರದಿಯಾಗಿದೆ. ಆ ಪಟ್ಟಿಯಲ್ಲಿ ರನ್ಯಾ ರಾವ್ ಪ್ರಕರಣವೂ ಕೂಡಾ ಸೇರಿದೆ.
ಇದನ್ನು ಓದಿದ್ದೀರಾ? ರನ್ಯಾ ರಾವ್ ಕೇಸ್ | ಇ.ಡಿ ಅಧಿಕಾರಿಗಳಿಂದ ಹಲವೆಡೆ ದಾಳಿ
ಮಾರ್ಚ್ 3ರಂದು ರನ್ಯಾ ರಾವ್ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳಿಗೆ ಸಿಕ್ಕಿಬಿದ್ದುದ್ದರಿಂದ ಹಿಡಿದು, ಸಚಿವರ ಕೈವಾಡ, ಸ್ವಾಮೀಜಿ ನಂಟು ಎಲ್ಲಾ ದೃಷ್ಟಿಕೋನಗಳಿಂದಲೂ ತನಿಖೆ ನಡೆಯುತ್ತಿದೆ. ಆರಂಭದಲ್ಲಿ ರನ್ಯಾ ರಾವ್ ಕಿಂಗ್‌ಪಿನ್ ಎಂಬ ಮಾತುಗಳಿದ್ದವು, ಬಳಿಕ ರನ್ಯಾ ತಂದೆ ಡಿಜಿಪಿ ರಾಮಚಂದ್ರರಾವ್ ಅವರೆಡೆ ಅನುಮಾನ ತಿರುಗಿದೆ. ಹೀಗೆ ಒಂದೊಂದೇ ಆಯಾಮಗಳು ಸೃಷ್ಟಿಯಾಗುತ್ತಿದೆ.
ರನ್ಯಾ ರಾವ್ ಸಿಕ್ಕಿಬಿದ್ದದ್ದು ಹೇಗೆ?
ರನ್ಯಾ ರಾವ್ ಹಲವು ಬಾರಿ ಚಿನ್ನ ಕಳ್ಳಸಾಗಣೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಅದಕ್ಕಾಗಿಯೇ ಆಗಾಗ ದುಬೈ, ಇತರೆ ದೇಶಗಳಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಆದರೆ ರನ್ಯಾ ಮಾತ್ರ ತಾನು ಮೊದಲ ಬಾರಿಗೆ ಇಂತಹ ಅಪರಾಧ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. 2025ರ ಮಾರ್ಚ್ 3ರಂದು ಬರೋಬ್ಬರಿ 14.2 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡುವಾಗ ರನ್ಯಾ ಸಿಕ್ಕಿಬಿದಿದ್ದಾರೆ. ಡಿಆರ್‌ಐ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾದ 33 ವರ್ಷದ ರನ್ಯಾ ಸದ್ಯ ಮಾರ್ಚ್ 18ರವರೆಗೆ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಆದೇಶದಂತೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ತನ್ನ ವ್ಯಾಪಾರ ಗುರುತಿನ ಚೀಟಿ (ಬಿಝಿನೆಸ್ ಐಡೆಂಟಿಟಿ ಕಾರ್ಡ್) ಮೂಲಕ ವಿದೇಶಗಳಿಗೆ ಆಗಾಗ ಪ್ರಯಾಣಿಸುತ್ತಿದ್ದ ರನ್ಯಾ ಅವರನ್ನು ಮಾರ್ಚ್ 3ರಂದು ದುಬೈನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಬಂಧಿಸಲಾಗಿದೆ.
ರನ್ಯಾ ತಪಾಸಣೆ ನಡೆಸಿದಾಗ ಅವರ ಬಳಿ ಸುಮಾರು 12.56 ಕೋಟಿ ರೂಪಾಯಿ ಮೌಲ್ಯದ 14.2 ಕೆಜಿ ಚಿನ್ನ ಪತ್ತೆಯಾಗಿದೆ. ರನ್ಯಾ ತೊಡೆಗಳಲ್ಲಿ ಟೇಪ್ ಮೂಲಕ ಚಿನ್ನದ ಬಾರ್‌ಗಳನ್ನು ಸುತ್ತಲಾಗಿದ್ದು, ಚಿನ್ನದ ಮೇಲೆ ಬ್ಯಾಡೆಂಜ್ ಹಾಕಲಾಗಿತ್ತು. ರನ್ಯಾ ಬಳಿ ಯುಎಇಯ ವಸತಿ ಗುರುತು ಪತ್ರವೂ ಪತ್ತೆಯಾಗಿತ್ತು ಎಂದು ವರದಿಗಳು ಹೇಳುತ್ತದೆ. ಹಾಗೆಯೇ ಸಂಸ್ಥೆಗಳ ರಿಜಿಸ್ಟಾರ್ ದಾಖಲೆಗಳ ಪ್ರಕಾರ 2022ರ ಏಪ್ರಿಲ್ 22ರಂದು ರಚಿಸಲಾದ ಕ್ಸಿರೋಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ರನ್ಯಾ ಪ್ರಮುಖ ಷೇರುದಾರರಾಗಿದ್ದರು. ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಹರ್ಷವರ್ದಿನಿ ರನ್ಯಾ ಮತ್ತು ಅವರ ಸಹೋದರ ಕಬ್ಬಿನಹಳ್ಳಿ ರುಷಾಬ್ ಅವರನ್ನು ನಿರ್ದೇಶಕರು ಎಂದು ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ರನ್ಯಾ ರಾವ್ ಕೇಸ್ | ಸಿಐಡಿ ತನಿಖೆ ಹಿಂಪಡೆದ ಬಗ್ಗೆ ಸಚಿವ ಪರಮೇಶ್ವರ್ ಹೇಳಿದ್ದೇನು?
ರನ್ಯಾ ಬಂಧನವಾದ ಮರುದಿನವೇ ಅಂದರೆ ಮಾರ್ಚ್ 4ರಂದು ಡಿಆರ್‌ಐ ದಾಳಿಯ ಸಮಯದಲ್ಲಿ ರನ್ಯಾ ನಿವಾಸದಿಂದ 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅದಾದ ಬಳಿಕ ಇಡಿ ಅಧಿಕಾರಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ಒಟ್ಟು 15 ಕಡೆ ಶೋಧ ನಡೆಸಿದ್ದಾರೆ. ಈಗಾಗಲೇ ಈ ಪ್ರಕರಣದಲ್ಲಿ ರನ್ಯಾ ಸ್ನೇಹಿತ ತರುಣ್ ರಾಜು ಬಂಧನವಾಗಿದ್ದು, ಆತನ ಮನೆ, ಕಚೇರಿಗಳಲ್ಲಿಯೂ ಶೋಧ ನಡೆಸಲಾಗಿದೆ. ರನ್ಯಾ ಪತಿ ಜತಿನ್ ಹುಕ್ಕೇರಿ ನಿವಾಸದಲ್ಲಿಯೂ ಶೋಧ ನಡೆದಿದ್ದು ಒಟ್ಟು 39.98 ಕೆ.ಜಿ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ.
ಆರಂಭದಲ್ಲಿ ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ಆದೇಶಿಸಿತ್ತು. ಬಳಿಕ ಆದೇಶ ಹಿಂಪಡೆಯಿತು. ಅದಾಗಲೇ ಚಿನ್ನ ಕಳ್ಳಸಾಗಣೆ ಹಿಂದೆ ಇಬ್ಬರು ರಾಜ್ಯ ಸಚಿವರುಗಳೂ ಭಾಗಿಯಾಗಿದ್ದಾರೆ ಎಂಬ ಆರೋಪಗಳಿದ್ದ ಕಾರಣ ಸಿಐಡಿ ತನಿಖೆ ವಾಪಸ್ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರ ತೀವ್ರ ಚರ್ಚೆಗೆ ಗ್ರಾಸವಾಯಿತು. ಈ ಬಗ್ಗೆ ಸ್ಪಷ್ಟಣೆ ನೀಡಿದ ಗೃಹ ಸಚಿವ ಜಿ ಪರಮೇಶ್ವರ ಅವರು, “ಪೊಲೀಸ್ ಪ್ರೊಟೊಕಾಲ್ ಉಲ್ಲಂಘನೆ ಬಗ್ಗೆ ತಿಳಿದುಕೊಳ್ಳಲು ಸಿಐಡಿ ತನಿಖೆಗೆ ಆದೇಶಿಸಿದ್ದೆ. ಆದರೆ ಅಷ್ಟರೊಳಗೆ ಸಿಎಂ ಕಚೇರಿಯು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿತು. ಒಂದೇ ವಿಚಾರದಲ್ಲಿ ಎರಡು ಕಡೆ ತನಿಖೆ ಬೇಡ ಎಂಬ ಕಾರಣಕ್ಕೆ ಸಿಐಡಿ ತನಿಖೆಯನ್ನು ಹಿಂಪಡೆದೆ” ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಸಿಬಿಐ ಮತ್ತು ಇಡಿ ತನಿಖೆ ನಡೆಯುತ್ತಿದೆ.
ಯಾರ್ಯಾರ ಪಾತ್ರದ ಅನುಮಾನ?
ರನ್ಯಾ ಪ್ರಕರಣದಲ್ಲಿ ಹಲವು ಮಂದಿಯ ಪಾತ್ರವಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ. ಆರಂಭದಲ್ಲಿ ಇಬ್ಬರು ರಾಜ್ಯ ಸಚಿವರುಗಳ ಪಾತ್ರವಿದೆ ಎಂಬ ಆರೋಪ ಮಾಡಲಾಗಿತ್ತು. ಈ ನಡುವೆ ಡಿಜಿಪಿ ಶ್ರೇಣಿಯ ಅಧಿಕಾರಿಯಾಗಿರುವ ರನ್ಯಾ ತಂದೆ ಕೆ ರಾಮಚಂದ್ರ ರಾವ್ ವಿರುದ್ಧವೂ ಶಂಕೆ ವ್ಯಕ್ತವಾಗಿದೆ. ಈಗಾಗಲೇ ರಾಮಚಂದ್ರ ಪಾತ್ರದ ಬಗ್ಗೆ ತನಿಖೆ ನಡೆಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಗೌರವ್ ಗುಪ್ತರನ್ನು ನೇಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶಿಸಿದ್ದಾರೆ. ಆದರೆ ರನ್ಯಾ ತಂದೆ ಮಾತ್ರ ಈ ಪ್ರಕರಣದಲ್ಲಿ ತಾನು ಭಾಗಿಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಡಿಜಿಪಿ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಲು ಗೃಹ ಇಲಾಖೆ ಆದೇಶ ಹೊರಡಿಸಲು ಸಿದ್ಧವಾಗಿತ್ತು. ಅದಕ್ಕೂ ಮುನ್ನವೇ ರನ್ಯಾ ತಂದೆ ರಜೆ ಮೇಲೆ ತೆರಳಿದ್ದಾರೆ.
ಇದನ್ನು ಓದಿದ್ದೀರಾ? ಚಿನ್ನ ಕಳ್ಳಸಾಗಣೆ | 30 ಬಾರಿ ದುಬೈಗೆ ಹೋದ ಕನ್ನಡ ನಟಿ ರನ್ಯಾ, ಪ್ರತಿ ಟ್ರಿಪ್‌ಗೆ 12 ಲಕ್ಷ ರೂ. ಸಂಪಾದನೆ ಆರೋಪ
ರನ್ಯಾ ಪ್ರಕರಣದಲ್ಲಿ ಓರ್ವ ಪ್ರಭಾವಿ ಸ್ವಾಮೀಜಿಯೂ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ರನ್ಯಾ, ತರುಣ್ ಮತ್ತು ಸ್ವಾಮೀಜಿ ಸೇರಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ದೂರಲಾಗಿದೆ. ಹಾಗೆಯೇ ಈ ಸ್ವಾಮೀಜಿಗೆ ರಾಜಕೀಯ ನಾಯಕರ ಜೊತೆ ನಿಕಟವಾದ ಸಂಪರ್ಕವಿದೆ ಎಂದೂ ವರದಿಗಳಾಗಿವೆ. ಈ ಸಂಬಂಧ ತನ್ನ ಹೆಸರಿನಲ್ಲಿ ಸ್ವಾಮೀಜಿ ಎಂದು ಸೇರಿಸಿಕೊಂಡಿರುವ ‘ಹೆಲಿಕಾಪ್ಟರ್ ಜ್ಯೋತಿಷಿ’ಯೊಬ್ಬರ ನಿವಾಸದಲ್ಲಿ ಡಿಆರ್‌ಐ ಮತ್ತು ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಜೊತೆಗೆ ಈ ಕಳ್ಳಸಾಗಣೆ ನಡೆಯಲು ಪೊಲೀಸರ ಕರ್ತವ್ಯ ಲೋಪವೂ ಕಾರಣ ಎಂಬ ಆರೋಪವಿದೆ. ಪೊಲೀಸರು ರನ್ಯಾಗೆ ನೆರವು ನೀಡುತ್ತಿದ್ದರು, ಪೊಲೀಸ್ ಇಲಾಖೆ ವಾಹನವನ್ನು ಬಳಸುತ್ತಿದ್ದರು ಎಂಬುದು ಡಿಆರ್‌ಐ ತನಿಖೆ ವೇಳೆ ಪತ್ತೆಯಾಗಿದೆ.
ಇವೆಲ್ಲವುದರ ನಡುವೆ ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗಿಯಾಗಿರುವ ಸಾಧ್ಯತೆಯಿದೆ, ಈ ಬಗ್ಗೆ ತನಿಖೆ ನಡೆಸಲು ಸಹಕಾರ ನೀಡಿ ಎಂದು ಡಿಆರ್‌ಐ ಸಿಬಿಐಗೆ ಪತ್ರ ಬರೆದಿದೆ. ಜೊತೆಗೆ ಮುಂಬೈ ಮತ್ತು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಕಸ್ಟಮ್ಸ್ ಅಧಿಕಾರಿಗಳಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಲಾಗಿದೆ. ಹೀಗೆ ಈ ಪ್ರಕರಣದಲ್ಲಿ ಹಲವು ವ್ಯಕ್ತಿಗಳ ಮೇಲೆ ಅನುಮಾನ ವ್ಯಕ್ತವಾಗಿದೆ. ತನಿಖೆಯ ಜಾಡು ಉದ್ದಗೊಳ್ಳುತ್ತಲೇ ಇದೆ.
ಯೂಟ್ಯೂಬ್ ನೋಡಿ ಚಿನ್ನ ಕಳ್ಳಸಾಗಾಣೆ
“ಇದೇ ಮೊದಲ ಬಾರಿಗೆ ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಿದೆ. ಈ ಹಿಂದೆ ಈ ರೀತಿಯ ಕೃತ್ಯದಲ್ಲಿ ನಾನು ಭಾಗಿಯಾಗಿಲ್ಲ. ಚಿನ್ನವನ್ನು ಹೇಗೆ ಕಳ್ಳಸಾಗಣೆ ಮಾಡುವುದು ಎಂಬುದನ್ನು ಯೂಟ್ಯೂಬ್ ನೋಡಿ ಕಲಿತೆ. ಅಪರಿಚಿತ ವ್ಯಕ್ತಿ ಪದೇ ಪದೇ ಕರೆ ಮಾಡಿ ಚಿನ್ನ ಕಳ್ಳಸಾಗಣೆ ಮಾಡುವಂತೆ ಸೂಚಿಸಿದ್ದ. ಅದರಂತೆ ನಾನು ಮಾಡಿದೆ. ಇದೇ ಮೊದಲ ಬಾರಿಗೆ ಈ ರೀತಿ ಮಾಡಿರುವುದು” ಎಂದು ವಿಚಾರಣೆ ವೇಳೆ ನಟಿ ರನ್ಯಾ ರಾವ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರನ್ಯಾ ರಾವ್ ಪ್ರಕರಣ | ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಪಾತ್ರ ಬಗ್ಗೆ ತನಿಖೆಗೆ ಸರ್ಕಾರ ಸಮಿತಿ ರಚನೆ
ಕಳೆದ ಒಂದು ವರ್ಷದ ಅವಧಿಯಲ್ಲಿ ದುಬೈ ಮತ್ತು ಇತರ ಕೆಲವು ದೇಶಗಳಿಗೆ ರನ್ಯಾ ಒಟ್ಟು 25 ಬಾರಿ ಪ್ರಯಾಣಿಸಿದ್ದಾರೆ. ಬಂಧನವಾಗುವುದಕ್ಕೂ ಹದಿನೈದು ದಿನಗಳ ಒಳಗಾಗಿ ನಾಲ್ಕು ಬಾರಿ ರನ್ಯಾ ವಿದೇಶ ಪ್ರವಾಸ ಮಾಡಿದ್ದಾರೆ. ಈ ಕಾರಣದಿಂದಾಗಿ ಕಸ್ಟಮ್ಸ್ ಅಧಿಕಾರಿಗಳ ಗಮನ ಅವರ ಮೇಲಿತ್ತು. ರನ್ಯಾ ಬಂಧನವಾಗುತ್ತಿದ್ದಂತೆ ರನ್ಯಾ ಪ್ರವಾಸ ‘ಹಿಸ್ಟರಿ’ ಎಲ್ಲಾ ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಪ್ರತಿ ಬಾರಿ ಕೋಟ್ಯಾಂತರ ರೂಪಾಯಿ ಸಂಪಾದಿಸಿದ್ದಾರೆ ಎಂಬ ವರದಿಗಳಾದವು. ಆದರೆ ರನ್ಯಾ ಮಾತ್ರ ಈ ಆರೋಪಗಳನ್ನು ಅಲ್ಲಗಳೆದು, ತಾನು ಇದೇ ಮೊದಲ ಬಾರಿಗೆ ಚಿನ್ನ ಕಳ್ಳಸಾಗಣೆ ಮಾಡಿದೆ ಎಂದು ಹೇಳಿಕೊಂಡಿದ್ದಾರೆ. “ನಾನು ರಿಯಲ್ ಎಸ್ಟೇಟ್ ಮತ್ತು ಛಾಯಾಗ್ರಹಣದ ಕಾರ್ಯಕ್ಕಾಗಿ ಹಲವು ಬಾರಿ ವಿದೇಶ ಪ್ರಯಾಣ ಮಾಡಿದ್ದೇನೆ. ಯುರೋಪ್, ಅಮೆರಿಕ, ಆಫ್ರಿಕಾ, ಮಧ್ಯಪ್ರಾಚ್ಯಕ್ಕೆ ಹಲವು ಬಾರಿ ಪ್ರಯಾಣಿಸಿದ್ದೇನೆ” ಎಂದು ರನ್ಯಾ ತಿಳಿಸಿದ್ದಾರೆ.
ಆಫ್ರಿಕಾ, ದಕ್ಷಿಣ ಅಮೆರಿಕದಿಂದಲೂ ಚಿನ್ನ ಕಳ್ಳಸಾಗಾಟ
ನಟಿ ರನ್ಯಾ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದಿಂದಲೂ ಭಾರತಕ್ಕೆ ಚಿನ್ನ ಕಳ್ಳಸಾಗಣೆ ಮಾಡಿದ್ದಾರೆ ಎಂದು ವರದಿಯಾಗಿದೆ. ದೇಶಕ್ಕೆ ಸುಮಾರು ಶೇಕಡ 25-30ರಷ್ಟು ಚಿನ್ನವು ಕಳ್ಳಸಾಗಣೆ ಮೂಲಕವೇ ಬರುತ್ತದೆ. ಚಿನ್ನ ಕೆರೇಬಿಯನ್ ಮತ್ತು ಆಫ್ರಿಕಾದ ಮೂಲಕ ದುಬೈ ತಲುಪುತ್ತದೆ. ಅಲ್ಲಿಂದ ವಿಮಾನದಲ್ಲಿ ಭಾರತಕ್ಕೆ ತರಲಾಗುತ್ತದೆ ಎಂದು ಡಿಆರ್‌ಐ ತನಿಖೆಯಿಂದ ತಿಳಿದುಬಂದಿದೆ. ಆಫ್ರಿಕಾದ ಕೆನ್ಯಾ, ದಕ್ಷಿಣ ಅಮೆರಿಕದ ಬ್ರೆಜಿಲ್, ಕೊಲಂಬಿಯಾ, ಕೆರೇಬಿಯನ್ ದ್ವೀಪ ರಾಷ್ಟ್ರಗಳ ಗಣಿಗಳಿಂದ ತೆಗೆಯಲಾದ ಚಿನ್ನವನ್ನು ನೈರೋಬಿ ವಿಮಾನ ನಿಲ್ದಾಣದಿಂದ ದುಬೈ ಮತ್ತು ಅಬುಧಾಬಿ ಮೂಲಕ ಬೇರೆ ದೇಶಗಳಿಗೆ ಹೋಗುವ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರ ಮೂಲಕ ಸಾಗಿಸಲಾಗುತ್ತದೆ. ಅದು ಕೂಡಾ ಮುಖ್ಯವಾಗಿ ಹೆಚ್ಚಾಗಿ ಕಸ್ಟಮ್ಸ್ ತಪಾಸಣೆಗೆ ಒಳಗಾಗದ ರಾಜತಾಂತ್ರಿಕರು, ಗಣ್ಯರ ಮೂಲಕ ಈ ಕಳ್ಳಸಾಗಣೆ ಮಾಡಿಸಲಾಗುತ್ತಿದೆ ಎಂದು ಡಿಆರ್‌ಐ ತನಿಖೆಯಿಂದ ತಿಳಿದುಬಂದಿದೆ.
ಪರಸ್ಪರ ರಾಜಕೀಯ ಕೆಸರೆರೆಚಾಟ
ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ವಿಚಾರಣೆಯಲ್ಲಿ ಆರಂಭದಿಂದಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪರಸ್ಪರ ರಾಜಕೀಯ ಕೆಸರೆರೆಚಾಟ ನಡೆಯುತ್ತಲೇ ಇದೆ. ರಾಜ್ಯ ಸಚಿವರುಗಳು ಭಾಗಿಯಾಗಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿದ್ದಂತೆ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದೆ. ರನ್ಯಾ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಆರಂಭಿಸಿತು. ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, “ರನ್ಯಾ ರಾವ್ ಪ್ರಕರಣದಲ್ಲಿ ಯಾವ ಸಚಿವರ ಕೈವಾಡವೂ ಇಲ್ಲ. ಬೇಕಾದರೆ ಕೇಂದ್ರದ ಅಧಿಕಾರಿಗಳೇ ತನಿಖೆ ಮಾಡಲಿ” ಎಂದು ಹೇಳಿಕೆ ನೀಡಿದರು.
ಇದನ್ನು ಓದಿದ್ದೀರಾ? ರನ್ಯಾ ರಾವ್ ಕೇಸ್ | ಬೆಂಕಿ ಇಲ್ಲದೆ ಹೊಗೆ ಆಡಲ್ಲ, ಸತ್ಯಾಂಶ ಹೊರ ಬರಲಿ: ಬಿ ವೈ ವಿಜಯೇಂದ್ರ
ಈ ಬೆನ್ನಲ್ಲೇ ಬಿಜೆಪಿಯೆಡೆಗೆ ಕಾಂಗ್ರೆಸ್ ನಾಯಕರುಗಳು ಬೆರಳು ಮಾಡಿದ್ದಾರೆ. “ರನ್ಯಾ ರಾವ್‌ಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಮೀನು ಮಂಜೂರು ಮಾಡಲಾಗಿತ್ತು. ಆದರೆ, ಹಣ ನೀಡಿಲ್ಲ ಎಂಬ ಕಾರಣಕ್ಕೆ ಇಲಾಖೆಯಿಂದ ಜಮೀನು ನೀಡಿಲ್ಲ” ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಬಾಂಬ್ ಸಿಡಿಸಿದ್ದಾರೆ. “ಟಿಎಂಟಿ ಸರಳು ತಯಾರಿಸುವ ಯೋಜನೆಗಾಗಿ ರನ್ಯಾಗೆ ಬಿಜೆಪಿ ಸರ್ಕಾರ ಜಮೀನು ಮಂಜೂರು ಮಾಡಿತ್ತು. ಆದರೆ ರನ್ಯಾ ಹಣ ಪಾವತಿಸದ ಕಾರಣ ಜಮೀನು ಹಂಚಿಕೆ ಮಾಡಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. ಈ ನಡುವೆ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಕೇಸ್ನಲ್ಲಿ ಸರ್ಕಾರ ಯಾರನ್ನೋ ರಕ್ಷಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ನಕಾರಾತ್ಮಕ ರಾಜಕೀಯ ಮಧ್ಯಪ್ರವೇಶ
ದೇಶದಲ್ಲಿ, ರಾಜ್ಯದಲ್ಲಿ ಯಾವುದೇ ಪ್ರಕರಣವಾಗಲಿ ಅದರಲ್ಲಿ ರಾಜಕೀಯ ಮಧ್ಯಪ್ರವೇಶ ಸಾಮಾನ್ಯ. ಆದರೆ ಇತ್ತೀಚೆಗೆ ರಾಜಕೀಯ ಮಧ್ಯಪ್ರವೇಶ ಸಕಾರಾತ್ಮಕವಾಗಿ ಆಗದೆ, ನಕಾರಾತ್ಮಕವಾಗಿಯೇ ನಡೆಯುತ್ತಿದೆ. ಒಂದೆಡೆ ಬಿಜೆಪಿ, ಯಾವ ಪ್ರಕರಣದಲ್ಲಿ ಕೋಮು ರಾಜಕಾರಣ ನಡೆಸಬಹುದು ಅಥವಾ ವಿಪಕ್ಷಗಳನ್ನು ಸಿಲುಕಿಸಬಹುದು ಎಂಬ ಲೆಕ್ಕಾಚಾರ ಹಾಕಿದರೆ, ಇನ್ನೊಂದೆಡೆ ಕಾಂಗ್ರೆಸ್ ಬಿಜೆಪಿ ನಾಯಕರ ಕೈವಾಡವನ್ನು ಹುಡುಕುವುದರಲ್ಲೇ ತೊಡಗಿರುತ್ತದೆ. ಸದ್ಯ ಚಿನ್ನ ಕಳ್ಳಸಾಗಣೆ ಪ್ರಕರಣ ‘ಗೋಲ್ಡ್’ ರಾಜಕೀಯವಾಗಿ ಮಾರ್ಪಟ್ಟಿದೆ.
ಈ ಬೃಹತ್ ಚಿನ್ನ ಕಳ್ಳಸಾಗಾಣಿಕೆ ಜಾಲದ ಸಮಗ್ರ ತನಿಖೆ ಅತ್ಯಗತ್ಯ. ಹಾಗೆಯೇ ರಾಜಕೀಯ, ಅಧಿಕಾರ ಬಲ ಈ ತನಿಖೆಗೆ ಅಡ್ಡಿ ಬಾರದಿರದು ಎನ್ನಲಾಗದು. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಯಾವುದೇ ಪ್ರಭಾವಕ್ಕೆ ಒಳಗಾಗದೆ ತನಿಖೆ ನಡೆಸಿ ಕನ್ನಡ ಚಿತ್ರರಂಗದಲ್ಲಿ, ರಾಜಕೀಯದಲ್ಲಿ ಪ್ರಭಾವ ಹೊಂದಿರುವ ನಟ ದರ್ಶನ್ ಅವರನ್ನು ಹೇಗೆ ಬಂಧಿಸಲಾಯಿತೋ ಅದೇ ರೀತಿ, ಈ ಚಿನ್ನ ಕಳ್ಳಸಾಗಾಣೆ ಹಿಂದಿರುವ ‘ಬಿಗ್ ಹ್ಯಾಂಡ್’ ಗಳನ್ನು ಕೂಡಾ ಬಂಧಿಸಬೇಕು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.