ಎಲಾನ್ ಮಸ್ಕ್ ಅವರ ಸ್ವಾಧೀನದ ನಂತರ ಸಾಮಾಜಿಕ ಮಾಧ್ಯಮ ಟ್ವಿಟರ್ ಆದಾಯವನ್ನು ಗಳಿಸಲು ಹೆಣಗಾಡುತ್ತಿದೆ. ಈ ಕಾರಣದಿಂದಲೇ ಉದ್ಯೋಗಿಗಳ ಕಡಿತ, ಬ್ಲೂಟಿಕ್ ಶುಲ್ಕದಂತಹ ಹಲವು ಮಾರ್ಗಗಳನ್ನು ಕಂಡುಕೊಂಡಿತ್ತು. ಆದರೂ ನಷ್ಟ ಸರಿದೂಗಿರಲಿಲ್ಲ. ಈಗ ಹೊಸದಾಗಿ ನೇಮಕವಾಗಿರುವ ನೂತನ ಸಿಇಒ ಲಿಂಡಾ ಯಾಕರಿನೊ ಅವರು ಟ್ವಿಟರ್ ಆದಾಯವನ್ನು ದ್ವಿಗುಣಗಳಿಸುವ ಸಲುವಾಗಿ ಹಲವು ಯೋಜನೆಗಳನ್ನು ರೂಪಿಸುತ್ತಿದ್ದಾರೆ.
ಮಸ್ಕ್ ಮತ್ತು ಸಿಇಒ ಲಿಂಡಾ ಯಾಕರಿನೊ ಅವರು ಇತ್ತೀಚಿಗೆ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿದ ಭಾಷಣಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್ ಈಗ ಕಂಪನಿಯ ಆರ್ಥಿಕ ವ್ಯವಹಾರವನ್ನು ಹೆಚ್ಚಿಸಲು ಡಿಜಿಟಲ್ ಜಾಹೀರಾತಿನ ಜೊತೆಗೆ ಯೂಟ್ಯೂಬ್ ಹಾಗೂ ಇನ್ಸ್ಟಾ ರೀತಿಯಲ್ಲಿ ಮನರಂಜನಾ ಕಿರು ವಿಡಿಯೋಗಳು, ವಿಡಿಯೋ ರಚನೆಗೆ ಪಾವತಿ ವ್ಯವಸ್ಥೆ ರೂಪಿಸಲಿದೆ. ಅಲ್ಲದೆ ಸ್ಮಾರ್ಟ್ ಟಿವಿಗಳಲ್ಲಿ ಆ್ಯಪ್ ಮತ್ತು ವಾಣಿಜ್ಯ ಪಾಲುದಾರಿಕೆಗಳ ಮೇಲೆ ಕೇಂದ್ರೀಕರಿಸಲು ಸಂಸ್ಥೆ ಯೋಜಿಸುತ್ತಿದೆ.
ಸಮಾವೇಶದಲ್ಲಿ ಮಾತನಾಡಿರುವ ಟ್ವಿಟರ್ ಸಿಇಒ, ಚೀನಾದ ವಿಚಾಟ್ ರೀತಿಯ “ಸೂಪರ್ ಅಪ್ಲಿಕೇಶನ್”ಗಳ ವೇದಿಕೆಯನ್ನು ಸೃಷ್ಟಿಸುವುದು ಸಂಸ್ಥೆಯ ಪ್ರಮುಖ ಯೋಜನೆಯಾಗಿದೆ. ಇದರ ಜೊತೆಯಲ್ಲಿ ಹಣ ವರ್ಗಾವಣೆ ಆ್ಯಪ್‌ಗಳನ್ನು ರಚಿಸುವ ಸಲುವಾಗಿ ಟ್ವಿಟರ್ ಸಂಸ್ಥೆಯು ಅಮೆರಿಕದ ಎಲ್ಲ 50 ರಾಜ್ಯಗಳಲ್ಲಿ “ಹಣ ವರ್ಗಾಯಿಸುವ ಪರವಾನಗಿ”ಗಾಗಿ ಅರ್ಜಿ ಸಲ್ಲಿಸುತ್ತಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೊಬೈಲ್ ಕೊಡದೆ ಕಟ್ಟುನಿಟ್ಟು ಮಾಡಿದ್ದಕ್ಕೆ ತಾಯಿಯನ್ನೇ ಕೊಲ್ಲಲು ಹೊರಟ ಮಗಳು!
ಕಂಪನಿಯ ಹೇಳಿಕೆಯ ಪ್ರಕಾರ, ಟ್ವಿಟರ್‌ನ ವರ್ಟಿಕಲ್ ವಿಡಿಯೋ ಆಯ್ಕೆಯಲ್ಲಿ ಬಳಕೆದಾರರು ಶೇ.10 ಕ್ಕಿಂತ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಸ್ಕ್ ಅವರು ಈಗಾಗಲೇ ದೀರ್ಘ ಅವಧಿಯ ವಿಡಿಯೋ ರಚನೆಯ ಆಯ್ಕೆಗಳನ್ನು ಅಳವಡಿಸಲು ಮತ್ತು ಆಯ್ದ ವಿಡಿಯೋ ರಚನೆಕಾರರಿಗೆ ವ್ಯೂವ್ಸ್ ಆಯ್ಕೆಯ ಮೇಲೆ ಪಾವತಿಸುವ ವ್ಯವಸ್ಥೆಯನ್ನು ಶುರು ಮಾಡಲಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಟ್ವಿಟರ್‌ನಲ್ಲಿ ಮತ್ತೆ ಜಾಹೀರಾತು ಮಾರಾಟವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ವರ್ಷ ಆರೋಗ್ಯ, ಗ್ರಾಹಕ ಸರಕುಗಳು ಮತ್ತು ಹಣಕಾಸು ಸೇವೆಗಳು ಒಳಗೊಂಡ ಜಾಹೀರಾತುಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ವಾರ್ನರ್ ಬ್ರದರ್ಸ್, ಮೊಂಡೆಲೆಜ್, ಮೆಕ್‌ಡೊನಾಲ್ಡ್ ಮತ್ತು ವಾಲ್ಮಾರ್ಟ್‌ನಂತಹ ಬ್ರಾಂಡ್‌ಗಳು ಟ್ವಿಟರ್‌ನಲ್ಲಿ ಜಾಹೀರಾತನ್ನು ಪುನರಾರಂಭಿಸಿವೆ. ಜಾಹೀರಾತುದಾರರಿಗೆ ಮತ್ತಷ್ಟು ಅವಕಾಶ ನೀಡುವ ಸಲುವಾಗಿ ಕೆಲವು ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.