ಈ ಹಿಂದೆ ಪಾಪ್‌ಕಾರ್ನ್ ಮೇಲೆ ವಿವಿಧ ರೀತಿಯ ಜಿಎಸ್‌ಟಿ ವಿಧಿಸಿದ ಕೇಂದ್ರ ಸರ್ಕಾರ ಇದೀಗ ಡೋನಟ್‌ಗೆ ಬೇರೆ ಬೇರೆ ರೀತಿಯ ಜಿಎಸ್‌ಟಿ ವಿಧಿಸಲು ಮುಂದಾಗಿದೆ. ಈ ವಿಭಿನ್ನ ಜಿಎಸ್‌ಟಿ ದರಗಳನ್ನು ಜಾರಿಗೆ ತಂದ ಕೇಂದ್ರ ಸರ್ಕಾರವನ್ನು ಶನಿವಾರ ಕಾಂಗ್ರೆಸ್ ಟೀಕಿಸಿದೆ. “ಪಾಪ್‌ಕಾರ್ನ್ ಬಳಿಕ ಈಗ ಡೋನಟ್‌ಗೆ ‘ಜಿಎಸ್‌ಟಿಗರ’ ಕಾಟ ಶುರುವಾಗಿದೆ” ಎಂದು ಹೇಳಿದೆ.
ಈ ಬಗ್ಗೆ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜಿಎಸ್‌ಟಿ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಈಗ ಡೋನಟ್ ಜಿಎಸ್‌ಟಿಗರಿಂದಾಗಿ ಬಳಲುತ್ತಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಪಾಪ್‌ಕಾರ್ನ್ ಮೇಲೆ ಮೂರು ರೀತಿಯ ಜಿಎಸ್‌ಟಿ; ಟ್ರೋಲ್ ಆದ ನಿರ್ಮಲಾ ಸೀತಾರಾಮನ್
“ಮ್ಯಾಡ್ ಓವರ್ ಡೋನಟ್ಸ್ (ಬೇಕರಿ) ತನ್ನ ಬೇಕರಿ ವಸ್ತುಗಳ ಮೇಲೆ 18% ತೆರಿಗೆ ಇದೆ. ಆದರೆ ಡೋನಟ್‌ಗಳ ಮೇಲೆ ಶೇಕಡ 5ರಷ್ಟು ತೆರಿಗೆ ಪಾವತಿಸಿದ್ದಾರೆ. ಅದಕ್ಕಾಗಿ ಈಗ 100 ಕೋಟಿ ರೂ. ತೆರಿಗೆ ನೋಟಿಸ್ ಎದುರಿಸುವಂತಾಗಿದೆ. ಸದ್ಯ ಈ ವಿಚಾರವು ಬಾಂಬೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.
ಹಾಗೆಯೇ, “ವ್ಯಾಪಾರ ನಡೆಸುವುದು ಈ ಜಿಎಸ್‌ಟಿಯಿಂದಾಗಿ ಸುಲಭ” ಎಂದು ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ. “ಇದಕ್ಕಾಗಿಯೇ ಜಿಎಸ್‌ಟಿ 2.0 ಅತೀ ತುರ್ತಾದ ನಿರ್ಧಾರ ಎಂದು ಹೇಳುವುದು” ಎಂದಿದ್ದಾರೆ.
After popcorns, it is now the turn of donuts to get afflicted by GSTitis. Mad Over Donuts is facing a Rs 100 crore tax notice for allegedly misclassifying its business and paying tax of 5% on its donuts (claiming it is a restaurant service) as opposed to 18% on bakery items. The…
— Jairam Ramesh (@Jairam_Ramesh) March 15, 2025
ಪಾಪ್‌ಕಾರ್ನ್‌ಗೆ ಹೋಲಿಸಿದರೆ ದೇಶದಲ್ಲಿ ಡೋನಟ್‌ಗಳನ್ನು ಸೇವಿಸುವವರ ಸಂಖ್ಯೆ ಕಡಿಮೆ ಎನ್ನಬಹುದು. ಇಂದಿಗೂ ಡೋನಟ್‌ಗಳು ಶ್ರೀಮಂತರು ಮತ್ತು ಮಧ್ಯಮ ವರ್ಗದ ಕೆಲ ಜನರ ನಡುವೆ ಮಾತ್ರ ಪರಿಚಿತವಾಗಿದೆ.
ಸದ್ಯ ಡೋನಟ್ ಅನ್ನು ರೆಸ್ಟೋರೆಂಟ್‌ನಲ್ಲಿ ಮಾರಾಟ ಮಾಡುವ ಸಿಹಿ ತಿನಿಸು ಎಂದು ಪರಿಗಣಿಸಿ ಶೇಕಡ 5ರಷ್ಟು ಜಿಎಸ್‌ಟಿ ವಿಧಿಸುವುದೇ ಅಥವಾ ಬೇಕರಿ ತಿಂಡಿ ಎಂದು ಪರಿಗಣಿಸಿ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸುವುದೇ ಎಂಬ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯ ಇದಕ್ಕೆ ಸಂಬಂಧಿಸಿದ ಅರ್ಜಿಯನ್ನು ಬಾಂಬ್ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಪಾಪ್‌ಕಾರ್ನ್‌ಗೂ ಮೂರು ರೀತಿಯ ಜಿಎಸ್‌ಟಿ ವಿಧಿಸಿರುವ ವಿಚಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ರೋಲ್‌ಗೆ ಒಳಗಾಗಿದ್ದರು. ಜಿಎಸ್‌ಟಿ ಕೌನ್ಸಿಲ್ ಈ ಬಗ್ಗೆ ಸ್ಪಷ್ಟನೆ ನೀಡಿರುವುದನ್ನು ಕೂಡಾ ನೆಟ್ಟಿಗರು ಟ್ರೋಲ್ ಮಾಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕೂಡಾ ಕೇಂದ್ರ ಸರ್ಕಾರದ ಜಿಎಸ್‌ಟಿ ನೀತಿಯನ್ನು ವಿರೋಧಿಸಿತ್ತು.
‘ಸಕ್ಕರೆ ಮಿಠಾಯಿ’ ಎಂದು ವರ್ಗೀಕರಿಸಲಾದ ಕಾರಣ ಕ್ಯಾರಮೆಲೈಸ್ಡ್ ಪಾಪ್‌ಕಾರ್ನ್ ಮೇಲೆ ಸಾಲ್ಟೆಡ್ (ಉಪ್ಪು ಮಿಶ್ರಿತ) ಮತ್ತು ಸಾದಾ ಪಾಪ್‌ಕಾರ್ನ್‌ಗಿಂತ ವಿಭಿನ್ನವಾಗಿ ತೆರಿಗೆ ವಿಧಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದರು. ಇದರಿಂದಾಗಿ ಭಾರೀ ಟ್ರೋಲ್ ಆಗಿದ್ದರು. ಇದೀಗ ಡೋನಟ್ ಮೇಲಿನ ಜಿಎಸ್‌ಟಿ ವಿಚಾರವನ್ನು ಮುನ್ನಲೆಗೆ ತರುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ.
