ಅಪ್ರಾಪ್ತರಿಗೆ ವಾಹನ ಚಾಲನೆಗೆ ಕೊಡದಂತೆ, ಸಾರ್ವಜನಿಕವಾಗಿ ಆಗುವ ಪ್ರಾಣಹಾನಿ, ನಷ್ಟ ತಪ್ಪಿಸಲು ಸಾರಿಗೆ ಇಲಾಖೆ ಅನೇಕ ನಿಯಮಗಳನ್ನು ರೂಪಿಸಿದ್ದು, ಜಾರಿಗೆ ತಂದಿದೆ. ಅಲ್ಲಲ್ಲಿ ಇದರ ಉಲ್ಲಂಘನೆಯಾಗುತ್ತಿದ್ದು, ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಇಲಾಖೆ, ನ್ಯಾಯಾಲಯಗಳು ತಿಳಿಸಿದರೂ ಪ್ರಕರಣಗಳು ದಾಖಲಾಗುತ್ತಿವೆ. ಈರೀತಿಯ ಪ್ರಕರಣವೊಂದು ದಾವಣಗೆರೆಯಲ್ಲಿ ದಾಖಲಾಗಿದ್ದು, ನ್ಯಾಯಾಲಯ ವಾಹನ ಮಾಲೀಕರು, ಪಾಲಕರನ್ನು ಹೊಣೆಗಾರರನ್ನಾಗಿಸಿ ಮತ್ತೊಮ್ಮೆ ದಂಡ, ಜೈಲು, ವಾಹನ ನೋಂದಣಿ ರದ್ದು ಶಿಕ್ಷೆ ನೀಡಿ ಚಾಟಿ ಬೀಸಿದೆ.
ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ವಾಹನ ಚಾಲನೆ ಮಾಡಲು ಕೊಡುವ ಪಾಲಕರಿಗೆ, ವಾಹನ ಮಾಲೀಕರಿಗೆ ದಾವಣಗೆರೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿ ಅರಿವು ಮೂಡಿಸಿದ್ದಾರೆ, ಇದೇ ರೀತಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಲಾಗುವುದು ಹಾಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮತ್ತೊಮ್ಮೆ ಸಾರ್ವಜನಿಕರಿಗೆ ಎಚ್ಚರಿಸಿದ್ದಾರೆ.

ದಾವಣಗೆರೆ ನಗರದ ಹೊಂಡದ ರಸ್ತೆ ಅರುಣ ಎಲ್.ಸಿ ಗೇಟ್ ಬಳಿ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ರವರ ಸೂಚನೆಯಂತೆ ನಗರದ ಡಿವೈಎಸ್ಪಿ ಶರಣಬಸವೇಶ್ವರ ಬೀಮರಾವ್ ರವರ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆ ಪಿಐ ನಂಜುಂಡಸ್ವಾಮಿ ಎಂ, ಸಿಬ್ಬಂದಿಗಳೊಂದಿಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಐಎಂವಿ ಪ್ರಕರಣಗಳನ್ನು ದಾಖಲು ಮಾಡುತ್ತಿರುವ ಸಮಯದಲ್ಲಿ ಹೊಂಡಾ ಆಕ್ಟಿವಾ ಸ್ಕೂಟರೊಂದನ್ನು ಅಪ್ರಾಪ್ತ ಬಾಲಕನೊಬ್ಬ ಚಲಾಯಿಸಿಕೊಂಡು ಬಂದಿದ್ದು ತಡೆದು ನಿಲ್ಲಿಸಿದ್ದಾರೆ. ಅಪ್ರಾಪ್ತ ವಯಸ್ಕ ಸಾರ್ವಜನಿಕ ರಸ್ತೆ ಮೇಲೆ ವಾಹನ ಚಲಾಯಿಸಿದ ಹಿನ್ನಲೆಯಲ್ಲಿ ಆಕ್ಟಿವ್ ಹೊಂಡ ಬೈಕ್ ಅನ್ನು ಜಪ್ತಿ ಮಾಡಿ ಬಸವನಗರ ಪೊಲೀಸ್ ಠಾಣೆಯಲ್ಲಿ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ. 1ನೇ ಜೆಎಂಎಫ್ಸಿ ದಾವಣಗೆರೆ ನ್ಯಾಯಾಲಯಕ್ಕೆ ಆಕ್ಟಿವ್ ಹೊಂಡ ಬೈಕ್ ಮಾಲೀಕರ ಮೇಲೆ ದೋಷಾರೋಪಣೆ ಪತ್ರ ಸಲ್ಲಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ‘ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ’; ಕ್ರಾಂತಿಕಾರಿ ಪಾದಯಾತ್ರೆ
ವಿಚಾರಣೆ ನಡೆಸಿದ ನ್ಯಾಯಾಲಯವು ಅಪ್ರಾಪ್ತ ವಯಸ್ಕನಿಗೆ ಚಾಲನೆ ಮಾಡಲು ಕೊಟ್ಟಿದ್ದಕ್ಕೆ ವಾಹನದ ಮಾಲೀಕರಿಗೆ ಒಂದು ದಿನ ಸಾದಾ ಸಜೆ ಮತ್ತು 25000/-ರೂ ದಂಡ ಹಾಗು ವಾಹನದ ನೊಂದಣಿಯನ್ನು1 ವರ್ಷದವರೆಗೆ ರದ್ದು ಪಡಿಸಲು ತೀರ್ಪು ನೀಡಿದೆ. ಅಲ್ಲದೇ ವಾಹನ ಚಾಲನೆ ಮಾಡಿಕೊಂಡು ಬಂದ ಅಪ್ರಾಪ್ತ ಬಾಲಕನಿಗೆ 25ವರ್ಷ ತುಂಬುವರೆಗೂ ಚಾಲನಾ ಪರವಾನಿಗೆಯನ್ನು ನೀಡದಂತೆ ಶಿಕ್ಷೆ ವಿಧಿಸಲಾಗಿದೆ.