ಐತಿಹಾಸಿಕ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ರೈತ-ಕಾರ್ಮಿಕ-ದಲಿತ-ಮಹಿಳಾ-ವಿದ್ಯಾರ್ಥಿ-ಯುವಜನ ಸಂಘಟನೆಗಳ ಐಕ್ಯ ವೇದಿಕೆಯಾಗಿ ರೂಪುಗೊಂಡ ಸಂಯುಕ್ತ ಹೋರಾಟ ಕರ್ನಾಟಕವು, ‘ಜನಚಳವಳಿಗಳ ಬಜೆಟ್ ಅಧಿವೇಶನ’ ಸಂಘಟಿಸುವ ಮೂಲಕ ನಾಡಿನ ಗಮನ ಸೆಳೆಯಿತು.
ಸಂಯುಕ್ತ ಹೋರಾಟ ಕರ್ನಾಟಕವು ಈ ಹಿಂದೆಯೂ 2021ರ ಡಿಸೆಂಬರ್‌ನಲ್ಲಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಪರ್ಯಾಯ ಅಧಿವೇಶನ ನಡೆಸಿತ್ತು. 2022ರ ಮಾರ್ಚ್‌ನಲ್ಲಿ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಮೂರು ದಿನಗಳ ಪರ್ಯಾಯ ಜನತಾ ಅಧಿವೇಶನವನ್ನು ನಡೆಸಿತ್ತು. ಹೀಗೆ ಕರ್ನಾಟಕದ ಜನಚಳುವಳಿಯಲ್ಲಿ ಮಹತ್ವದ ದಾಖಲೆ ಸೃಷ್ಟಿಸಿದ್ದ ಸಂಯುಕ್ತ ಹೋರಾಟ ಕರ್ನಾಟಕವು ಜನ ಚಳವಳಿ ಬಜೆಟ್ ಅಧಿವೇಶನ ನಡೆಸಿ ಬಜೆಟ್ ಮೇಲೆ ಅರ್ಥಪೂರ್ಣ ಚರ್ಚೆಗೆ ನಾಂದಿಯಾಡಿತು.
ಹಿನ್ನಲೆ: ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಏರಿದ ಸ್ವತಂತ್ರ ಭಾರತದ ಅತ್ಯಂತ ಕಾರ್ಪೊರೇಟ್ ಪರ ಆಳ್ವಿಕೆಗೆ ಕುಖ್ಯಾತಿಯಾಗಿರುವ ನರೇಂದ್ರ ಮೋದಿ ಸರ್ಕಾರದ 2025-26 ಸಾಲಿನ ಬಜೆಟ್ಅನ್ನು ಪೆಬ್ರವರಿ 1ರಂದು ನಿರ್ಮಲ ಸೀತಾರಾಮನ್ ಮಂಡಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರದ ಕಾರ್ಪೊರೇಟ್-ಕೋಮುವಾದಿ ಆಳ್ವಿಕೆಗೆ ಸಹಕಾರಿಯಾಗಿ ಡಬಲ್ ಇಂಜಿನ್ ನಂತೆ ಇದ್ದ ರಾಜ್ಯದ ಬಿಜೆಪಿ ಸರ್ಕಾರವನ್ನು ಸೋಲಿಸಿ, ಪರ್ಯಾಯ ಧೋರಣೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಮೂರನೇ ಬಜೆಟ್ಅನ್ನು ಮಾರ್ಚ್ 7, 2025ರಂದು ಮಂಡಿಸಿತ್ತು.
ಈ ಎರಡೂ ಬಜೆಟ್‌ಗಳ ಅರ್ಥಿಕ ಧೋರಣೆಗಳು ಒಂದೇ ರೀತಿಯಲ್ಲಿ ಇದ್ದವು. ಕೇಂದ್ರ ತನ್ನ ಬಜೆಟ್‌ನಲ್ಲಿ ಕಾರ್ಪೊರೇಟ್ ಪರ ಧೋರಣೆಗಳನ್ನು ನಗ್ನವಾಗಿ ಬಿಚ್ಚಿಟ್ಟಿದ್ದರೆ, ರಾಜ್ಯ ತನ್ನ ಬಜೆಟ್‌ನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಸೇರಿದಂತೆ ಹಲವಾರು ಪ್ರಗತಿಪರ ಕವಿ, ಸಾಹಿತಿ ಹಾಗೂ ದಾರ್ಶನಿಕರ ಹೇಳಿಕೆಗಳನ್ನು ಉದ್ದರಿಸುವ ಮೂಲಕ ಇದೇ ಕಾರ್ಪೊರೇಟ್ ಧೋರಣೆಗಳನ್ನು ಮರೆ ಮಾಚುವ ಯತ್ನ ನಡೆಸಿತ್ತು. ವಿಧಾನಸಭೆಯಲ್ಲಿ, ಸಂಸತ್ ಸಭೆಯಲ್ಲಿ ದುಡಿಯುವ ವರ್ಗದ ಪ್ರಾತಿನಿಧ್ಯ ಅತ್ಯಂತ ನಗಣ್ಯವಾಗಿರುವ ಇವತ್ತಿನ ಸಂದರ್ಭದಲ್ಲಿ ಹಾಗೂ ಸಭಾಧ್ಯಕ್ಷರುಗಳು ಹೆಚ್ಚು ಹೆಚ್ಚು ಆಳುವ ಪಕ್ಷಗಳ ಗುರಾಣಿಯಂತೆ ವರ್ತಿಸುತ್ತಾ ಪ್ರಜಾಸತ್ತಾತ್ಮಕ ಅವಕಾಶ ನಿರಾಕರುಸುತ್ತಿರುವ ಕಾರಣದಿಂದಲೂ ಅರ್ಥ ಪೂರ್ಣ ಚರ್ಚೆಯಾಗುವ ನಿರೀಕ್ಷೆ ಇಟ್ಟುಕೊಳ್ಳುವಂತಿರಲಿಲ್ಲ. ರಾಜ್ಯದಲ್ಲಿ ಪ್ರಧಾನ ವಿರೋಧ ಪಕ್ಷವಾಗಿರುವ ಬಿಜೆಪಿ, ಬಜೆಟ್ಅನ್ನು, ಮತಾಂಧ ಹಾಗೂ ಕೋಮುವಾದಿ ದೃಷ್ಟಿಯಿಂದ ಟೀಕಿಸುತ್ತಾ ಕಾಂಗ್ರೆಸ್‌ನ ಕಾರ್ಪೊರೇಟ್ ಪರ ನೀತಿಗಳು ಜನತೆ ಮುಂದೆ ಬಯಲುಗೊಳ್ಳದಂತೆ ತಡೆಯುತ್ತಿದೆ. ಅದ್ದರಿಂದ ಜನಚಳವಳಿಗಳ ಬಜೆಟ್ ಅಧಿವೇಶನವನ್ನು ಸಂಯುಕ್ತ ಹೋರಾಟ ಕರ್ನಾಟಕ ,ಬೆಂಗಳೂರಿನ ಗಾಂಧಿ ಭವನದಲ್ಲಿ ಸಂಘಟಿಸಿತ್ತು.

ಮಾರ್ಚ್ 12, 2025ರಂದು ಬಜೆಟ್ ಮೇಲಿನ ಚರ್ಚೆಗಳು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಅವರ ಪ್ರಾಸ್ತಾವಿಕ ಮಾತುಗಳಿಂದ ಆರಂಭಗೊಂಡವು. ಕೇಂದ್ರ ಬಜೆಟ್ ಕುರಿತು ಮಾತಾನಾಡಿದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕಾರ್ಯಕಾರಿ ಸದಸ್ಯ ಆಶಿಶ್ ಮಿಥ್ಥಲ್ ಅವರು ದೇಶದ ಕೃಷಿ, ಕೃಷಿ ಸಂಸ್ಕರಣೆ, ಕೃಷಿ ಮಾರುಕಟ್ಟೆ ಇವುಗಳನ್ನು ಇಡಿಯಾಗಿ ಕಾರ್ಪೊರೇಟ್ ವಲಯಕ್ಕೆ ಹಸ್ತಾಂತರಿಸುವ ನೀತಿಗಳು ಮತ್ತು ಕ್ರಮಗಳನ್ನು ಬಜೆಟ್‌ನಲ್ಲಿ ಒಳಗೊಳ್ಳಲಾಗಿದೆ. ಐತಿಹಾಸಿಕ ದೆಹಲಿ ರೈತ ಹೋರಾಟದಿಂದ ರದ್ದಾದ ಕರಾಳ ಕೃಷಿ ಕಾಯ್ದೆಗಳನ್ನು ‘ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ಧೋರಣಾ ಚೌಕಟ್ಟು’ ಮೂಲಕ ಮತ್ತೇ ಜಾರಿ ಮಾಡಲು ಯತ್ನಿಸುತ್ತಿದೆ ಎಂದು ವಿವರಿಸಿದರು.
ಈ ವರದಿ ಓದಿದ್ದೀರಾ?: ಕಳ್ಳರಾದರೇ ಸರ್ಕಾರಿ ವೈದ್ಯರು; ವೈದ್ಯರಿಗೆ 4 ಬಾರಿ ಬಯೋಮೆಟ್ರಿಕ್ ಅಸ್ತ್ರವೇಕೆ?
ರಾಜ್ಯ ಬಜೆಟ್ ಕುರಿತು ಪ್ರಸಿದ್ಧ ಅಭಿವೃದ್ಧಿ ಅರ್ಥಶಾಸ್ತ್ರಜ್ಞ ಪ್ರೊ. ಟಿ.ಆರ್ ಚಂದ್ರಶೇಖರ್ ಅವರು ಕಲ್ಯಾಣ ಕಾರ್ಯಕ್ರಮಗಳು ಹಾಗೂ ಗ್ಯಾರಂಟಿ ಯೋಜನೆಗಳು ಉಚಿತ ಕೊಡುಗೆಗಳಲ್ಲ; ಮಾನವ ಸಂಪನ್ಮೂಲದ ಮೇಲಿನ ಅರ್ಥಪೂರ್ಣ ಹೂಡಿಕೆಯಾಗಿದ್ದು ಸ್ವಾಗತಾರ್ಹವಾಗಿವೆ .ಆದರೆ ನಿರುದ್ಯೋಗ, ಬೆಲೆ ಏರಿಕೆ, ಬಡತನ, ವಲಸೆ ಮುಂತಾದ ಮೂಲಭೂತ ಸಮಸ್ಯೆಗಳು ಹಾಗೂ ಜನರ ಜೀವನ ಮಟದ ಹೆಚ್ಚಳಕ್ಕೆ ಆಧಾರವಾಗಿರುವ ಕೃಷಿ ಹಾಗೂ ಕೈಗಾರಿಕಾ ವಲಯಗಳ ಉತ್ಪಾದಕತೆಗೆ ಯಾವುದೇ ರೀತಿಯಲ್ಲಿ ನೆರವಾಗದ ಮಿತಿಯನ್ನು ಈ ಬಜೆಟ್ ಹೊಂದಿದೆ ಎಂದು ವಿಶ್ಲೇಷಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ‘ರೈತ ಹಾಗೂ ಕೃಷಿ ಕೂಲಿಕಾರರು ಮತ್ತು ಬಜೆಟ್ ಧೋರಣೆಗಳು’ ಕುರಿತ ಮೊದಲನೇ ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತಾನಾಡಿದರೆ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ. ಚಂದ್ರಪ್ಪ ಹೊಸ್ಕೇರಾ, ಎಐಕೆಕೆಎಂಎಸ್‌ನ ರಾಜ್ಯಾಧ್ಯಕ್ಷ ಭಗವಾನ್ ರೆಡ್ಡಿ ಪ್ರತಿಕ್ರಿಯಿಸಿದರು. ಒಟ್ಟಾರೆಯಾಗಿ ರಾಜ್ಯ ಹಾಗೂ ಕೇಂದ್ರ ಬಜೆಟ್‌ನ ಕೃಷಿ ಧೋರಣೆಗಳು, ಕೃಷಿ ಬಿಕ್ಕಟ್ಟು-ಗ್ರಾಮೀಣ ನಿರುದ್ಯೋಗಕ್ಕೆ ಪರಿಹಾರ ನೀಡಲು, ಬೆಂಬಲ ಬೆಲೆ ಖಾತರಿ ಒದಗಿಸಲು, ಸಾಲಭಾಧೆಯಿಂದ ಮುಕ್ತಿ ಒದಗಿಸಲು, ಕೃಷಿ ಲಾಗುವಾಡುಗಳ ಬೆಲೆ ಏರಿಕೆಗೆ ತಡೆ ಒಡ್ಡಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನೀರಾವರಿ, ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್, ವಿದ್ಯುತ್ ಮುಂತಾದ ವಲಯಗಳಿಗೆ ಪರಿಣಾಮಕಾರಿಯಾದ ಅನುದಾನ ಒದಗಿಸಿಲ್ಲ. ಕೃಷಿ ಕೂಲಿಕಾರರ ಕಲ್ಯಾಣ ಮಂಡಳಿ ಮತ್ತು ಶಾಸನಬದ್ದ ಕನಿಷ್ಠ ಕೂಲಿ ಜಾರಿ ಮಾಡಲು ಯಾವುದೇ ಕ್ರಮ ವಹಿಸಿಲ್ಲ; ಬದಲಾಗಿ ಬಿಜೆಪಿ ಸರ್ಕಾರದ ಜನ ವಿರೋಧಿ, ರೈತ ವಿರೋಧಿ, ಕೃಷಿ ವಿರೋಧಿ ಕರಾಳ ಕಾಯ್ದೆಗಳನ್ನು ಮುಂದುವರೆಸುತ್ತಿದೆ ಎಂದು ಚರ್ಚಿಸಿದರು.

ಪ್ರಸಿದ್ಧ ಬಂಡಾಯ ಸಾಹಿತಿ ಪ್ರೊ. ಅಲ್ಲಮ ಪ್ರಭು ಬೆಟ್ಟದೂರು ಅವರ ಅಧ್ಯಕ್ಷತೆಯಲ್ಲಿ ನಡೆದ ‘ಭೂಮಿ ಪ್ರಶ್ನೆ ಹಾಗೂ ಬಜೆಟ್ ಧೋರಣೆಗಳು’ ಕುರಿತ ಎರಡನೇ ಗೋಷ್ಠಿಯಲ್ಲಿ, ಕರಾಳ ಕೃಷಿ ಹಾಗೂ ಭೂ ಸ್ವಾಧೀನ ಕಾಯ್ದೆಗಳ ಕುರಿತು ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯಾಧ್ಯಕ್ಷ ಕಾಂ.ಯು ಬಸವರಾಜ, ಬಗರ್ ಹುಕುಂ ಸಾಗುವಳಿ ಹಾಗೂ ರೈತರ ಭೂಮಿ ಹಕ್ಕು ಕುರಿತು ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಮಾತಾನಾಡಿದರೆ, ಕರ್ನಾಟಕ ರೈತ ಸಂಘ (AIUKS) ರಾಜ್ಯಾಧ್ಯಕ್ಷ ಡಿಹೆಚ್ ಪೂಜಾರ್ , ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (AIAWU) ರಾಜ್ಯಾಧ್ಯಕ್ಷ ಎಂ ಪುಟ್ಟಮಾದು ಪ್ರತಿಕ್ರಿಯಿಸಿದರು. ಉಳುವವನೇ ಭೂಮಿಯ ಒಡೆಯ ಎಂಬ ನೀತಿಯನ್ನು ಬುಡಮೇಲು ಮಾಡಿ ಉದ್ಯಮಿಗಳಿಗೆ ಕೃಷಿ ಭೂಮಿಯ ಒಡೆತನವನ್ನು ಹಸ್ತಾಂತರಿಸಲು ಅನುಕೂಲವಾಗುವ ಕರಾಳ ಕೃಷಿ ಕಾಯ್ದೆಗಳನ್ನು ಜಾರಿ ಮಾಡಲಾಗುತ್ತಿದೆ. ರೈತರ ಪ್ರಜಾಸತ್ತಾತ್ಮಕ ವಿರೋಧವನ್ನು ನಿರ್ದಯವಾಗಿ ದಮನ ಮಾಡಿ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲಾಗುತ್ತಿದೆ. ಸುಮಾರು 1,100 ದಿನಗಳ ಕಾಲ ನಡೆಯುತ್ತಿರುವ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ರೈತರ ಬಲವಂತದ ಭೂ ಸ್ವಾಧೀನ ವಿರೋಧಿ ಹೋರಾಟ ಹಾಗೂ ಬಳ್ಳಾರಿ ಜಿಲ್ಲೆಯ ಕುಡಿತಿನಿ, ಹರಗಿನ ಡೋಣಿ ಮುಂತಾದ ಗ್ರಾಮಗಳ ಮೋಸ ಮತ್ತು ಅನ್ಯಾಯದ ಭೂ ಬೆಲೆ ನಿಗದಿ ಮಾಡಿ ಭೂಸ್ವಾಧೀನ ಪಡೆದು ಸುಮಾರು 13 ವರ್ಷ ಕಳೆದರೂ ಯಾವುದೇ ಕೈಗಾರಿಕೆ ಸ್ಥಾಪನೆ ಆಗದ ಭೂಮಿ ಮರಳಿಸುವಂತೆ ನಡೆಯುತ್ತಿರುವ ಹೋರಾಟವನ್ನು ದಮನಿಸುವ ರೀತಿಯನ್ನು ವಿವರಿಸಲಾಯಿತು. ರಾಜ್ಯಾದ್ಯಂತ ಸುಮಾರು 12 ಲಕ್ಷಕ್ಕೂ ಹೆಚ್ಚು ಬಗರ್ ಹುಕುಂ ರೈತರ ಭೂಮಿ ಹಕ್ಕು ಅರ್ಜಿಯನ್ನು ಸಕ್ರಮಾತಿ ಸಮಿತಿ ಮುಂದೆ ತರದೇ ಜಿಲ್ಲಾಧಿಕಾರಿಗಳು ಹಾಗೂ ತಹಶಿಲ್ದಾರ್ ರವರ ಹಂತದಲ್ಲೇ ತಿರಸ್ಕರಿಸುತ್ತಿರುವ ಕಾನೂನು ಬಾಹಿರ ಕ್ರಮಗಳ ಬಗ್ಗೆ ವಿವರವಾಗಿ ಚರ್ಚಿಸಿ, ವಿಶ್ಲೇಷಿಸಲಾಯಿತು.
ಈ ವರದಿ ಓದಿದ್ದೀರಾ?: ರಾಜ್ಯಗಳ ರಾಜಕೀಯ ಭವಿಷ್ಯಕ್ಕೆ ‘ಜನಸಂಖ್ಯೆ’ ಮಾನದಂಡ – ಅಪಾಯಕಾರಿಯಲ್ಲವೇ?
ಹಿರಿಯ ದಲಿತ ಸಂಘರ್ಷ ಸಮಿತಿ ನಾಯಕ ಗುರುಪ್ರಸಾದ್ ಕೆರಗೋಡು ಅವರ ಅಧ್ಯಕ್ಷತೆಯಲ್ಲಿ ನಡೆದ ‘ಸಾಮಾಜಿಕ ನ್ಯಾಯ ಮತ್ತು ಬಜೆಟ್ ಧೋರಣೆಗಳು’ ಕುರಿತ ಮೂರನೇ ಗೋಷ್ಠಿಯಲ್ಲಿ ದಲಿತ ಸಮುದಾಯಗಳ ಆಗ್ರಹಗಳು ಕುರಿತು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಮಹಿಳಾ ಚಳವಳಿಗಳ ಆಗ್ರಹಗಳು ಕುರಿತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಕಲ್ಯಾಣ ಕುರಿತು ಹಿರಿಯ ಪತ್ರಕರ್ತ ಬಿ.ಎಂ ಹನೀಪ್ ಮಾತಾನಾಡಿದರೆ, ದಲಿತ ಹಕ್ಕುಗಳ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ, ಮಹಿಳಾ ಮುನ್ನಡೆಯ ರಾಜ್ಯ ಸಮನ್ವಯಕಾರರಾದ ಗೌರಿ, ರಾಜ್ಯ ರೈತ ಸಂಘದ ಮಹಿಳಾ ಘಟಕದ ಜಯಲಕ್ಷ್ಮಮ್ಮ ಪ್ರತಿಕ್ರಿಯಿಸಿದರು.
ಸಾಮಾಜಿಕ ಅಸಮಾನತೆ, ಸಾಮಾಜಿಕ ದಮನ, ಸಾಮಾಜಿಕ ಹಿಂದುಳಿದಿರುವಿಕೆ ತೀವ್ರ ಸ್ವರೂಪದಲ್ಲಿ ಇರುವ ನಿರ್ಲಕ್ಷಿತ ಸಾಮಾಜಿಕ ಸಮುದಾಯಗಳ ಉನ್ನತಿಗಾಗಿ ಇರುವ ವಿಶೇಷ ಪ್ರಯತ್ನಗಳನ್ನು ಈ ಬಜೆಟ್ ದುರ್ಬಲಗೊಳಿಸುತ್ತಿದೆ. ಬಜೆಟ್ ನಲ್ಲಿ ಘೋಷಣೆಯಾದ ಹಣ ಬಿಡುಗಡೆಯಾಗುವುದಿಲ್ಲ, ಬಿಡುಗಡೆಯಾದ ಹಣ ಹಂಚಿಕೆ ಆಗುವುದಿಲ್ಲ, ಹಂಚಿಕೆ ಆದ ಹಣ ಖರ್ಚಾಗುವುದಿಲ್ಲ, ಖರ್ಚಾದ ಹಣ ಬಹುತೇಕ ದುರುಪಯೋಗ ವಾಗುತ್ತಿದೆ. ಉದ್ದೇಶಿತ ಉದ್ದೇಶಕ್ಕೆ ಹೊರತಾದ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ ಮಾತ್ರವಲ್ಲ ನಿರ್ಲಜ್ಜವಾಗಿ ಸಮರ್ಥಿಸಲಾಗುತ್ತಿದೆ. ಶೋಷಿತ ವರ್ಗಗಳ ಕಲ್ಯಾಣದ ಕುರಿತು ಶಾಸನಸಭೆಯ ಅವಧಿಯಲ್ಲಿ ಕನಿಷ್ಠ ಎರಡು ಬಾರಿಯಾದರೂ ವಿಶೇಷ ಚರ್ಚೆ ನಡೆಸಿ ದುರುಪಯೋಗದ ಮೇಲೆ ಕಣ್ಗಾವಲು ಬಿಗಿಗೊಳಿಸಬೇಕು ಎಂದು ಆಗ್ರಹಿಸಲಾಯಿತು.

ಮಾರ್ಚ್ 13, 2025ರಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆವಿ ಭಟ್ ಅವರ ಅಧ್ಯಕ್ಷತೆಯಲ್ಲಿ ‘ಕಾರ್ಮಿಕರು ಹಾಗೂ ಬಜೆಟ್ ಧೋರಣೆಗಳು’ ಕುರಿತು ನಾಲ್ಕನೇ ಗೋಷ್ಠಿಯಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರಿಯಿ ಕೃಷ್ಣನ್, ಎಐಕೆಎಸ್ ರಾಜ್ಯ ಕಾರ್ಯದರ್ಶಿ ಮೌಲಾ ಮುಲ್ಲಾ ರವರಗಳು ಮಾತಾನಾಡಿದರೆ, ಎನ್‌ಸಿಎಲ್‌ನ ಲೀಲಾವತಿ ಪ್ರತಿಕ್ರಿಯಿಸಿದರು. ಜನರನ್ನು ಪ್ರಜೆಗಳನ್ನಾಗಿ ನೋಡದೇ, ಫಲಾನುಭವಿಗಳಾಗಿ ನೋಡಲಾಗುತ್ತಿದೆ. ಪ್ರತಿಯೊಬ್ಬ ದುಡಿಮೆಗಾರರನ್ನು ದೈನಸಿ ಸ್ಥಿತಿಗೆ ನೂಕಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಬಜೆಟ್‌ಗಳ ಹೂರಣ ಮತ್ತು ಧೋರಣೆಗಳು ಯಾವುದೇ ರೀತಿಯಲ್ಲಿ ಬೇರೆ ಇಲ್ಲ. ಖಾಸಗೀಕರಣ ಮತ್ತು ಜನ ವಿರೋಧಿ ಪಿಪಿಪಿ ಮಾದರಿಗಳೇ ಬಜೆಟ್ ತುಂಬಾ ತುಂಬಿವೆ. ಸಾರ್ವಜನಿಕ ಸಂಪತ್ತನ್ನು ಖಾಸಗಿ ಲಾಭಕ್ಕಾಗಿ ಮೀಸಲಿಡುವ ಸಾರ್ವಜನಿಕ-ಖಾಸಗಿ ಸಹಭಾಗಿತ್ವವು, ಸಾರ್ವಜನಿಕ ಸಂಪತ್ತನ್ನು ಖಾಸಗಿ ಕಂಪನಿಗಳು ದೋಚಲು ಅವಕಾಶ ಅಲ್ಲದೇ ಬೇರೇನೂ ಅಲ್ಲ. ಬಂಡವಾಳಶಾಹಿಗಳಿಗೆ ಬಂಡವಾಳ ಹೂಡಿಕೆ ಸಬ್ಸಿಡಿ, ಉತ್ಪಾದನಾ ಆಧಾರಿತ ಸಬ್ಸಿಡಿ, ಕಾರ್ಮಿಕರಿಗೆ ಪಾವತಿಸುವ ವೇತನಕ್ಕೆ ಪ್ರತಿಯಾಗಿ ಮಾಲೀಕರಿಗೆ ಸಬ್ಸಿಡಿ ಮುಂತಾದ ನೇರ ನಗದು ಪಾವತಿ ಸಬ್ಸಿಡಿಗಳಲ್ಲದೇ, ನೆಲ-ಜಲ, ವಿದ್ಯುತ್, ಬ್ಯಾಂಕ್ ಸಾಲ ಮುಂತಾದ ಹೇರಳವಾದ ನೆರವನ್ನು ಕೇಂದ್ರ ಮತ್ತು ರಾಜ್ಯ ಬಜೆಟ್‌ಗಳು ನೀಡಿವೆ. ಇದೇ ಸಂದರ್ಭದಲ್ಲಿ ಉದ್ಯೋಗ ಸೃಷ್ಟಿ ಪ್ರಮಾಣಕ್ಕೆ ಯಾವುದೇ ಷರತ್ತು ವಿಧಿಸದೇ ಕಾರ್ಮಿಕರ ಹಕ್ಕುಗಳ ಉಲ್ಲಂಘನೆಗೆ ಎಲ್ಲ ರೀತಿಯ ರಕ್ಷಣೆ ಒದಗಿಸಲಾಗುತ್ತಿದೆ.
ರಾಜ್ಯ ಬಜೆಟ್‌ನಲ್ಲಿ ಕಾರ್ಮಿಕ ಕಾನೂನುಗಳ ಉಲ್ಲಂಘನೆಯನ್ನು ಕ್ರಿಮಿನಲ್ ಅಪರಾಧದ ವ್ಯಾಪ್ತಿಯಿಂದ ಹೊರಗಿಡಲು ಕಾಯ್ದೆಯನ್ನು ತರಲಾಗುವುದು ಎಂದು ಘೋಷಿಸಿದೆ. ಅರ್ಥಿಕತೆಯ ಅಡಿಪಾಯವನ್ನು ಖಾಸಗೀಕರಿಸಿ,ಇಡೀ ದೇಶದ ಅಭಿವೃದ್ಧಿಯನ್ನೇ ದಿವಾಳಿ ಎಬ್ಬಿಸುವ ನೀತಿಯನ್ನು ಈ ಬಜೆಟ್ ಒಳಗೊಂಡಿವೆ ಎಂದು ವಿವರವಾಗಿ ಚರ್ಚಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಸಾಮಾಜಿಕ ಭದ್ರತೆ, ಮೂಲಭೂತ ಹಕ್ಕುಗಳು ಹಾಗೂ ಬಜೆಟ್ ಧೋರಣೆಗಳು’ ಕುರಿತ ಐದನೇ ಗೋಷ್ಠಿಯು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ ಮಹಾಂತೇಶ್ ಪ್ರಾಸ್ತಾವಿಕ ಮಾತುಗಳಿಂದ ಆರಂಭಗೊಂಡಿತು. ಸಮಾನ ಶಿಕ್ಷಣ ಕುರಿತು ಶಿಕ್ಷಣ ತಜ್ಞ ಶ್ರೀಪಾದ ಭಟ್, ಜನಾರೋಗ್ಯ ಕುರಿತು ಪ್ರಖ್ಯಾತ ವೈದ್ಯ ಡಾ. ಅನಿಲ್ ಕುಮಾರ್ ಅವುಲಪ್ಪ, ಉದ್ಯೋಗ ಕುರಿತು DYFI ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ವಸತಿ ಕುರಿತು ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಳ ಮಾತಾನಾಡಿದರೆ, SFI ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್, AISA ರಾಷ್ಟ್ರೀಯ ಕಾರ್ಯದರ್ಶಿ ಲೇಖಾ ಅಡವಿ, ಎಐಡಿಎಸ್‌ಓ ರಾಜ್ಯ ನಾಯಕ ಮಹಾಂತೇಶ್, KVS ರಾಜ್ಯಾಧ್ಯಕ್ಷ ಸರೋವರ ಬೆಂಕಿಕೆರೆ, ರಾಜ್ಯ ರೈತ ಸಂಘ ಯುವ ಘಟಕ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್ ಪ್ರತಿಕ್ರಿಯಿಸಿದರು.
ಈ ವರದಿ ಓದಿದ್ದೀರಾ?: ಮುಸ್ಲಿಂ ಸಮುದಾಯದ ವಿರುದ್ಧ ಮುಂದುವರೆದ ಬಿಜೆಪಿ ನಾಯಕರ ದ್ವೇಷ: ನಿರ್ಲಕ್ಷ್ಯವೊಂದೆ ಪರಿಹಾರ
ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳನ್ನು ಸಂಪೂರ್ಣವಾಗಿ ಪ್ರತಿಯೊಂದು ವಿಷಯದಲ್ಲೂ ಸಹ ಕೇಂದ್ರ ಮತ್ತು ರಾಜ್ಯ ಬಜೆಟ್‌ಗಳು ಉಲ್ಲಂಘಿಸುತ್ತಿವೆ. ದುಡಿಯುವ ಜನತೆಗೆ ಸಾಮಾಜಿಕ ಭದ್ರತೆಯನ್ನು ನಿರಾಕರಿಸಲಾಗುತ್ತಿದೆ. ಶಿಕ್ಷಣ, ಆರೋಗ್ಯ, ವಸತಿಯನ್ನು ಸಂಪೂರ್ಣವಾಗಿ ಖಾಸಗೀಕರಣ ಗೊಳಿಸುವತ್ತಾ ಬಹಳ ವೇಗವಾಗಿ ಸಾಗುತ್ತಿದೆ. ಜನರ ಜೀವನ ಮಟ್ಟ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಾಣಲು ಮೂಲಭೂತ ಅಗತ್ಯದ ಈ ಕ್ಷೇತ್ರಗಳ ಖಾಸಗೀಕರಣ ಪ್ರಮುಖ ಕಾರಣವಾಗಿದೆ. ಈ ಎಲ್ಲ ವಲಯಗಳಲ್ಲಿ ಸಾರ್ವಜನಿಕ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಖಾಸಗಿ ಕಂಪನಿಗಳನ್ನು ಕೊಬ್ಬಿಸಲಾಗುತ್ತಿದೆ. ಖಾಸಗೀಕರಣ ದಿಂದಾಗಿ ಖಾಯಂ ಸ್ವರೂಪದ ಕೆಲಸಗಳೇ ಇಲ್ಲದಂತಾಗಿ ಗುತ್ತಿಗೆ-,ಹೊರಗುತ್ತಿಗೆ ಹಾಗೂ ಗಿಗ್ ಮಾದರಿಯ ಉದ್ಯೋಗಗಳು ಸಾರ್ವತ್ರಿಕವಾಗುತ್ತಿವೆ. ಈ ತಕ್ಷಣ ಕರ್ನಾಟಕ ಲೇಬರ್ ಅಧಿವೇಶನ ನಡೆಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಲಾಯಿತು.

ಹಿರಿಯ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್ ಅವರ ಅಧ್ಯಕ್ಷತೆಯಲ್ಲಿ ನಡೆದ ‘ಜನಚಳುವಳಿಗಳ ಬಜೆಟ್ ಅಧಿವೇಶನದ ಸಮಾರೋಪ’ದ ಮಾತುಗಳನ್ನಾಡಿದ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮಿ, “ಬಿಜೆಪಿ ಸರ್ಕಾರದ ಎಲ್ಲ ಜನ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಕಾಂಗ್ರೆಸ್ ಸರ್ಕಾರ ಕೂಡ ಮುಂದುವರೆಸುತ್ತಿದೆ. ಈ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸಂಯುಕ್ತ ಹೋರಾಟ ಕರ್ನಾಟಕಕ್ಕೆ ಲಿಖಿತ ಭರವಸೆ ನೀಡಿದಂತೆ ಎಲ್ಲ ಜನ ವಿರೋಧಿ ಕಾಯ್ದೆಗಳನ್ನು ಕೂಡಲೇ ರದ್ದುಪಡಿಸಬೇಕು. ಕರಾಳ ಕೃಷಿ ಕಾಯ್ದೆಗಳನ್ನು ಹಿಂಬಾಗಿಲಿನಿಂದ ಜಾರಿಗೆ ತರುವ ಎಲ್ಲಾ ಕೃಷಿ ಕಾಯ್ದೆಗಳು ಹಾಗೂ ಭೂ ಸ್ವಾಧೀನ ಕಾಯ್ದೆಗಳನ್ನು ರದ್ದುಪಡಿಸಬೇಕು. ಮೋದಿ ಸರ್ಕಾರದ ‘ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ಧೋರಣಾ ಚೌಕಟ್ಟು’ ನೀತಿಯನ್ನು ಸ್ಪಷ್ಟವಾಗಿ ತಿರಸ್ಕರಿಸಬೇಕು. ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು, ಕನಿಷ್ಠ ದುಡಿಮೆ ಅವಧಿಯನ್ನು ಹೆಚ್ಚಳ ಮಾಡಿರುವ ಕ್ರಮಗಳನ್ನು ಕೂಡಲೇ ತಿರಸ್ಕರಿಸಬೇಕು” ಎಂದು ಆಗ್ರಹಿಸಿದರು.
ಈ ಜನಾಗ್ರಹಗಳನ್ನು ಸ್ವೀಕರಿಸಿ ಮಾತಾನಾಡಿದ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್ ಪಾಟೀಲ್ ಅವರು, “ಜನಾಗ್ರಹಗಳನ್ನು ಮುಖ್ಯಮಂತ್ರಿಗಳಿಗೆ ತಲುಪಿಸಲಾಗುವುದು ಮತ್ತು ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳ ಭೇಟಿ ನಿಗದಿ ಮಾಡಲಾಗುವುದು ಎಂದು ತಿಳಿಸಿ, ಬಜೆಟ್ ಕುರಿತ ಉತ್ಕೃಷ್ಟ ಚರ್ಚೆಗಳು ಜನ ಚಳವಳಿಗಳ ಬಜೆಟ್ ಅಧಿವೇಶನದಲ್ಲಿ ನಡೆದಿವೆ. ಆದರೆ ವೇತನ, ಭತ್ಯೆ,ಶಾಸನಬದ್ದ ಅಧಿಕಾರ ವನ್ನು ಪಡೆದಿರುವ ಶಾಸಕರು ಬಜೆಟ್ ಮೇಲೆ ಚರ್ಚಿಸದೇ ವಿಧಾನ ಸಭಾ ಕಲಾಪಗಳಲ್ಲಿ ಖಾಲಿ ಕುರ್ಚಿಗಳು ಕಾಣುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ನವ ಉದಾರವಾದಿ ಧೋರಣೆಗಳ ವಿರುದ್ಧ ಪ್ರಬಲ ಐಕ್ಯ ಹೋರಾಟ ರೂಪಿಸುವ ಘೋಷಣೆಯೊಂದಿಗೆ ಜನ ಚಳವಳಿಗಳ ಬಜೆಟ್ ಅಧಿವೇಶನ ಮುಕ್ತಾಯವಾಯಿತು.