ವಿವಾಹಿತ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಓರ್ವ ದಲಿತ ವ್ಯಕ್ತಿಯನ್ನು ಥಳಿಸಿ, ಬೆತ್ತಲೆಗೊಳಿಸಿ ಗ್ರಾಮದಾದ್ಯಂತ ಮೆರವಣಿಗೆ ಮಾಡಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ.ಸವರ್ಣೀಯರ ಗುಂಪೊಂದು ದಲಿತನನ್ನು ಬೆತ್ತಲೆ ಮೆರವಣಿಗೆ ಮಾಡಿ ವಿಕೃತಿ ಮರೆದಿದೆ.
ಗುಜರಾತ್‌ನ ಸಬರ್ ಕಾಂತ ಜಿಲ್ಲೆಯಲ್ಲಿ ವಡೋಲ್ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಮಾರ್ಚ್ 11ರಂದು ಘಟನೆ ನಡೆದಿದ್ದು, ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ, ಘಟನೆ ಬೆಳಕಿಗೆ ಬಂದಿದೆ. ವಿಡಿಯೋ ಆಧಾರಿಸಿ ಇದಾರ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.
ಪ್ರಕರಣದ ಬಗ್ಗೆ ವಿವರಿಸಿರುವ ಇದಾರ್ ಪೊಲೀಸ್ ಇನ್ಸ್‌ಪೆಕ್ಟರ್ ಚೇತನ್ ರಾಥೋಡ್, “ಘಟನೆ ಸಂಬಂಧ 15 ಮಂದಿ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 9 ಮಂದಿಯನ್ನು ಬಂಧಿಸಿದ್ದೇವೆ. ತೀವ್ರವಾಗಿ ಹಲ್ಲೆಗೊಳಗಾಗಿದ್ದ ದಲಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.
ಸಂತ್ರಸ್ತ ದಲಿತ ವ್ಯಕ್ತಿ ನಿರ್ಮಾಣ ಕಾರ್ಮಿಕನಾಗಿದ್ದು, ಸವರ್ಣೀಯರ ವಿಚಾರದಲ್ಲಿ ಭಯಭೀತನಾಗಿದ್ದಾರೆ. ಆರಂಭದಲ್ಲಿ ತಾನು ಮೆಟ್ಟಿಲುಗಳಿಂದ ಜಾರಿ ಬಿದ್ದುದ್ದಾಗಿ ಸುಳ್ಳು ಹೇಳಿದ್ದರು. ಆದರೆ, ವಿಡಿಯೋ ವೈರಲ್ ಆದ ಬಳಿಕ, ಘಟನೆಯ ಹಿನ್ನೆಲೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನನ್ನು ಅವರ ಕೆಲಸದ ಸ್ಥಳಗಳಿಗೆ ಕರೆದುಕೊಂಡು ಹೋದಾಗ ಜಾರಿ ಬಿದ್ದೆನೆಂದು ಬರೆಸಿದ್ದಾನೆ. ಅಂತಹ ಒಂದು ಸ್ಥಳದಲ್ಲಿ ಅವನು ಆ ಮಹಿಳೆಯನ್ನು ಭೇಟಿಯಾದನು ಎಂದು ಪೊಲೀಸರು ತಿಳಿಸಿದ್ದಾರೆ. ದೂರುದಾರರೂ ಸಹ ವಿವಾಹಿತರಾಗಿದ್ದು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಮುಸ್ಲಿಂ ಸಮುದಾಯದ ವಿರುದ್ಧ ಮುಂದುವರೆದ ಬಿಜೆಪಿ ನಾಯಕರ ದ್ವೇಷ: ನಿರ್ಲಕ್ಷ್ಯವೊಂದೆ ಪರಿಹಾರ
ದೌರ್ಜನ್ಯದ ವಿಡಿಯೋವನ್ನು ಗಮನಿಸಿದ ಪೊಲೀಸರು ಸಂತ್ರಸ್ತನನ್ನು ಸಂಪರ್ಕಿಸಿದ್ದು, ದೂರು ದಾಖಲಿಸುವಂತೆ ಮನವೊಲಿಸಿದ್ದಾರೆ. ಬಳಿಕ, ಸಂತ್ರಸ್ತ ದಲಿತ ದೂರು ನೀಡಿದ್ದಾರೆ. ದೂರಿನಲ್ಲಿ, ಸಂಜಯ್ ಈಶ್ವರ್ ಠಾಕೂರ್ ಪ್ರಮುಖ ಆರೋಪಿಯೆಂದು ಉಲ್ಲೇಖಿಸಿದ್ದಾರೆ. ಕಿಶನ್ ಸೆಂಧಾಜಿ ಠಾಕೂರ್, ಮನೋಜ್ ಅಲಿಯಾಸ್ ಮನಾಜಿ ಸೋಮಾಜಿ ಠಾಕೂರ್, ನರೇಶ್ ಈಶ್ವರ್ ಠಾಕೂರ್, ನುನೋ ಅಲಿಯಾಸ್ ಹರೇಶ್ ಠಾಕೂರ್, ಮಂಗಾಜಿ ಸೋಮಾಜಿ ಠಾಕೂರ್, ಅತುಲ್ಜಿ ವಿನಾಜಿ ಠಾಕೂರ್, ಅರುಣ್ ಬಾಲ್ಕೃಷ್ಣ ಬರೋಟ್, ಉಮೇಶ್ ಜಿತೇಂದ್ರ ಬರೋಟ್, ಜ್ಯೋತ್ಸ್ನಾ ಸಂಜಯ್ ಠಾಕೂರ್, ವಿಶಾಲ್ ಪೆಲಾಡ್ ಸುತಾರ್, ಚೇತನ್ ಈಶ್ವರ್ ನಯೀ ಎಂಬವರ ಹೆಸರನ್ನು ಉಲ್ಲೇಖಿಸಿದ್ದಾರೆ.
ಈ ಎಲ್ಲ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 137(2) (ಅಪಹರಣ), 189(2) (ಕಾನೂನುಬಾಹಿರ ಸಭೆ), 191(2) (ಗಲಭೆ), 190 (ಕಾನೂನುಬಾಹಿರ ಸಭೆಗೆ ಸಾಮೂಹಿಕ ಹೊಣೆಗಾರಿಕೆ), 310(2) (ದರೋಡೆ), 352 (ಶಾಂತಿಯನ್ನು ಉಲ್ಲಂಘಿಸುವ ಉದ್ದೇಶದಿಂದ ಅವಮಾನ) ಮತ್ತು 351(3) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.