ಚಿತ್ರದುರ್ಗ ನಗರಠಾಣೆ ಪಿಎಸ್ಐ ಮೇಲೆ ಬಿಜೆಪಿ ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಹಲ್ಲೆ ಪ್ರಕರಣ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದ್ದು, ಬಿಜೆಪಿ ಮುಖಂಡನ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.
ತುರುವನೂರು ರಸ್ತೆಯ ಹೋಟೆಲ್ ಬಳಿ ನಿನ್ನೆ ತಡರಾತ್ರಿ ನಡೆದಿದ್ದ ಪರಸ್ಪರ ಹಲ್ಲೆಯ ಘಟನೆಯಲ್ಲಿ ನಗರಠಾಣೆ ಪಿಎಸ್ಐ ಗಾದಿಲಿಂಗಪ್ಪನವರ ಮೇಲೆ ಬಿಜೆಪಿ ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಹಲ್ಲೆ ನಡೆಸಿದ್ದಾರೆಂದು ನಗರಠಾಣೆಯಲ್ಲಿ ದೂರು ದಾಖಲಾಗಿದೆ.
“ಪೊಲೀಸರ ಮೇಲೆ ನಡೆಯುವ ಯಾವುದೇ ರೀತಿಯ ಹಲ್ಲೆಗಳು ಖಂಡನೀಯ. ಪೊಲೀಸರು ನಮ್ಮ ಸಮಾಜದ ರಕ್ಷಕರು. ಅವರು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಮೇಲೆ ಹಲ್ಲೆ ಮಾಡುವುದು ಕಾನೂನಿನ ಉಲ್ಲಂಘನೆಯಾಗಿದೆ. ಜತೆಗೆ ಪೊಲೀಸರೂ ಕೂಡ ನಾಗರಿಕರಿಗೆ ಹಲ್ಲೆ ನಡೆಸಿರುವುದೂ ಕೂಡ ಅಪರಾಧ. ಇದು ಆಗಾಗ್ಗೆ ನೆಡೆಯತ್ತಲೇ ಇರುತ್ತದೆ. ಎಲ್ಲರೂ ಸಂಯಮ ಕಾಪಾಡಿಕೊಳ್ಳಬೇಕು” ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಕಾಂಗ್ರೆಸ್ ಪದವೀಧರ ವಿಭಾಗದ ಅಧ್ಯಕ್ಷ ಪ್ರಕಾಶ್ ನಾಯ್ಕ್ ಪ್ರತಿಕ್ರಿಯಿಸಿದ್ದು, “ಪೋಲೀಸ್ ಮತ್ತು ರಾಜಕಾರಣಿಗಳ ನಡುವೆ ಮಾತಿನ ಚಕಮಕಿ, ಜಗಳ ನಡೆಯುವುದು ಸರ್ವೇ ಸಾಮಾನ್ಯ. ಹಲವು ಸಂದರ್ಭಗಳಲ್ಲಿ ಈ ಘಟನೆ ನಡೆಯುತ್ತಲೇ ಇರುತ್ತದೆ. ಆದರೆ ಇದು ಅತಿರೇಕಕ್ಕೆ ಹೋಗಿ ಬಡಿದಾಡಿಕೊಂಡು ಪೋಲೀಸರ ಮೇಲೆಯೇ ಹಲ್ಲೆ ಮಾಡುವುದು ಅಕ್ಷಮ್ಯ. ಅದರಲ್ಲೂ ಒಬ್ಬ ಜವಾಬ್ದಾರಿಯುತ ಬಿಜೆಪಿ ಜಿಲ್ಲಾಧ್ಯಕ್ಷನ ಸ್ಥಾನದಲ್ಲಿದ್ದು ಈ ಕೃತ್ಯ ಎಸಗಿರುವುದು ಖಂಡನೀಯ” ಎಂದು ಆಕ್ಷೇಪ ವ್ಯಕ್ತಪಡಿಸಿದರು.

“ಪೊಲೀಸ್ ಠಾಣೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇ ಗೌಡ ಮೇಲೆ ಪ್ರಕರಣ ದಾಖಲಾದ ಬೆನ್ನಲ್ಲೇ ವೀಡಿಯೋ ವೈರಲ್ ಆಗಿದ್ದು, ಇಬ್ಬರೂ ರೋಷಾವೇಷದಿಂದ ಸಾರ್ವಜನಿಕವಾಗಿ ಪರಸ್ಪರ ಹಲ್ಲೆ ನಡೆಸಿರುವುದು ಕಂಡುಬಂದಿದ್ದು, ಅದರಲ್ಲಿ ಪಿಎಸ್ಐ ಗಾದಿಲಿಂಗನಗೌಡರ್ ಅವರು ಹನುಮಂತೇಗೌಡ ಅವರ ಮೇಲೆ ಮೊದಲು ಹಲ್ಲೆ ನಡೆಸಿದ್ದಾರೆ. ನಂತರ ಹನುಮಂತೇಗೌಡ ಕೂಡಾ ಹಲ್ಲೆ ನಡೆಸಿದ್ದಾರೆ” ಎನ್ನಲಾಗಿದೆ.
“ಈ ವಿಡಿಯೋ ಇಟ್ಟುಕೊಂಡು ಬಿಜೆಪಿ ಮುಖಂಡರು, ಕಾರ್ಯಕರ್ತರು ಪೊಲೀಸ್ ಇಲಾಖೆಯ ಮೇಲೆ ಮುಗಿಬಿದ್ದಿದ್ದು, ಎಸ್‌ಪಿ ಕಚೇರಿಗೆ ಧಾವಿಸಿ ಪಿಎಸ್ಐ ಮೇಲೆ ದೂರು ದಾಖಲಿಸಲು ಪಟ್ಟು ಹಿಡಿದಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ‘ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ’; ಕ್ರಾಂತಿಕಾರಿ ಪಾದಯಾತ್ರೆ
“ತುರುವನೂರು ರಸ್ತೆಯ ಖಾಸಗಿ ಹೋಟೆಲ್ ಬಳಿ ತಡರಾತ್ರಿ ಈ ಘಟನೆ ನಡೆದಿದ್ದು, ರಾತ್ರಿ ಇಷ್ಟೊತ್ತಿನಲ್ಲಿ ಏನು ಮಾಡುತ್ತಿದ್ದೀರಿ ಮನೆಗೆ ಹೋಗಿ ಎಂದು ಪಿಎಸ್ಐ ಹೇಳಿದ್ದಾರೆ. ಈ ವೇಳೆ ಹನುಮಂತೇಗೌಡ ಊಟಕ್ಕೆ ಬಂದಿದ್ದೆವು, ಹೊರಡುತ್ತೇವೆ ಎಂದಾಗ ಮತ್ತೆ ಮಾತು ಮುಂದುವರೆದಿದೆ. ಈ ವೇಳೆ ಹನುಮಂತೇಗೌಡ ನಾನು ಬಿಜೆಪಿ ಜಿಲ್ಲಾಧ್ಯಕ್ಷನಿದ್ದೀನಿ, ಯಾರಿಗೂ ತೊಂದರೆ ಮಾಡಿಲ್ಲ, ಅವಾಚ್ಯ ಶಬ್ದ ಬಳಸಬೇಡಿ. ನಾನು ಉಪನ್ಯಾಸಕನಾಗಿ ಕೆಲಸ ಮಾಡಿದ್ದೇನೆ. ಜವಾಬ್ದಾರಿ ಇದೆಯೆಂದು ಹೆಳಿದರೂ ಪಿಎಸ್ಐ ಕೆಟ್ಟ ಶಬ್ದ ಬಳಸಿ ಹಲ್ಲೆ ನಡೆಸಿದ್ದಾರೆ” ಎಂದು ಸಂಸದ ಗೋವಿಂದ ಕಾರಜೋಳ, ಎಂಎಲ್‌ಸಿ ಕೆ ಎಸ್ ನವೀನ್, ಮಾಜಿ ಶಾಸಕ ಜಿ ಎಚ್ ತಿಪ್ಪಾರೆಡ್ಡಿ ಆರೋಪಿಸಿ ಎಂದು ತಿಳಿದುಬಂದಿದೆ. ಈ ಸಂಬಂಧ ಹನುಮಂತೇಗೌಡ ಅವರು ಪ್ರತಿ ದೂರು ಸಲ್ಲಿಸಿದಾಗ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎನ್ನಲಾಗಿದೆ.
“ಪಿಎಸ್ಐ ಗಾದಿಲಿಂಗಪ್ಪ ಅವರ ಮೇಲೆ ಎಫ್‌ಐಆರ್ ಹಾಕಿ ಇಲಾಖೆ ವಿಚಾರಣೆ ನಡೆಸಬೇಕು” ಎಂದು ಒತ್ತಾಯಿಸಿ ಸಂಸದ ಗೋವಿಂದ ಕಾರಜೋಳ, ಎಂಎಲ್‌ಸಿ ಕೆ ಎಸ್ ನವೀನ್, ಚಿದಾನಂದ ಗೌಡ, ಮಾಜಿ ಶಾಸಕ ತಿಪ್ಪಾರೆಡ್ಡಿ, ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಜಯ್ಯಣ್ಣ ಎಸ್‌ಪಿ ಕಚೇರಿ ಬಳಿ ಜಮಾಯಿಸಿದ್ದರು.