ಬಾವಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಟಗುಪ್ಪ ತಾಲ್ಲೂಕಿನ ವಿಠಲಪುರ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.
ವಿಠಲಪುರ ಗ್ರಾಮದ ಪ್ರಶಾಂತ ಓಂಪ್ರಕಾಶ ಯಲಗುರ್ತಿ (22) ಹಾಗೂ ಬಸವಕಲ್ಯಾಣ ತಾಲ್ಲೂಕಿನ ದಾಸರವಾಡಿ ಗ್ರಾಮದ ಶಿವಾಜಿ ಪ್ರಭು (20) ಮೃತ ಯುವಕರು ಎಂದು ತಿಳಿದು ಬಂದಿದೆ.
ಶನಿವಾರ ಮಧ್ಯಾಹ್ನ ನಾಲ್ಕು ಜನ ಸ್ನೇಹಿತರು ಗ್ರಾಮ ಸಮೀಪದ ಬಾವಿಯೊಂದರಲ್ಲಿ ಈಜಲು ಹೋಗಿದ್ದರು. ಮೊದಲು ಇಬ್ಬರು ಯುವಕರು ಈಜಾಡಿ ಮೇಲೆ ಬಂದಿದ್ದಾರೆ. ಬಳಿಕ ಈ ಇಬ್ಬರು ಯುವಕರಲ್ಲಿ ಈಜಾಡಲು ನೀರಿಗೆ ಇಳಿದಿದ್ದಾರೆ.ಈಜು ಬಾರದ ಓರ್ವ ಯುವಕ ಮುಳುಗುತ್ತಿದ್ದ ವೇಳೆ ಆತನನ್ನು ರಕ್ಷಿಸಲು ಹೋಗಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದು ಬೇಮಳಖೇಡ ಠಾಣೆಯ ಪಿಎಸ್‌ಐ ನಿಂಗಪ್ಪ ಮಣ್ಣೂರ್ ನೇತ್ರತ್ವದಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮಸ್ಥರ ನೆರವಿನಿಂದ ಮೃತದೇಹ ಹೊರತೆಗೆದು ಶವಾಗಾರಕ್ಕೆ ರವಾನಿಸಿದರು. ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಈ ಕುರಿತು ಬೇಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.