ಶಾಲೆಯ ಬಾಕಿ ಶುಲ್ಕವನ್ನು ಪಾವತಿಸಿಲ್ಲವೆಂಬ ಕಾರಣಕ್ಕೆ ಶಿಕ್ಷಕರು ಮೂರನೇ ತರಗತಿ ಮಗುವಿನ ಮುಂದಲೆ ಕೂದಲು ಕತ್ತರಿಸಿ, ಮಗುವಿನ ಮೇಲೆ ಹಲ್ಲೆ ಮಾಡಿ, ಜಾತಿನಿಂದನೆ ಮಾಡಿ ಅವಮಾನಿಸಿರುವ ಘಟನೆ ಶಿವಮೊಗ್ಗದ ಜೈನ್ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ.
ಜೈನ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಪ್ರಿಯಾ, ಪಿಇ ಶಿಕ್ಷಕ ಸಂತೋಷ್, ಸಿಬ್ಬಂದಿ ಶರತ್ ಸೇರಿದಂತೆ ವಿದ್ಯಾರ್ಥಿ ಯನ್ನು ತಮ್ಮ ಕಚೇರಿಗೆ ಕರೆದು, ನಿಮ್ಮಪ್ಪ, ಅಮ್ಮ ಇನ್ನೂ ಬಾಕಿ ಫೀಸ್ ಕಟ್ಟಿಲ್ಲ, ಫೋನ್ ಮಾಡಿದರೆ ಪೋನ್ ತೆಗೆಯುವುದಿಲ್ಲವೆಂದು ಸುಳ್ಳು ಹೇಳಿ ನನ್ನ ಮಗನಿಗೆ ದೈಹಿಕ ಹಲ್ಲೆಮಾಡಿ, ಮಗುವಿನ ಕೂದಲು ಕತ್ತರಿಸಿ ಅವಮಾನ ಮಾಡಿದ್ದಾರೆಂದು ಸಂತ್ರಸ್ತ ತಾಯಿ ಅವಲತ್ತುಕೊಂಡಿದ್ದಾರೆ.
ಮಗುವಿನ ತಾಯಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಜೈನ್ ಪಬ್ಲಿಕ್ ಶಾಲೆಯಲ್ಲಿ ನನ್ನ ಮಗ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಅವನ ಶಾಲೆ ಶುಲ್ಕ ₹40,000ವನ್ನು ಪಾವತಿಸಿದ್ದೇವೆ. ಆದರೂ ಇನ್ನು ₹5,000 ಬಾಕಿ ಹಣವನ್ನು ಕಟ್ಟಿರೆಂದು ಕರೆ ಮಾಡಿದ್ದರು. ₹40,000 ಪೂರ್ತಿ ಪಾವತಿಸಿದ್ದೇವೆ. ಮತ್ತೆ ಹಣ ಕಟ್ಟಲು ಹೇಳಿತ್ತಿದ್ದೀರಲ್ಲ. ನಮಗೆ ಒಂದುವಾರ ಕಾಲಾವಕಾಶ ಕೊಡಿ ಕಟ್ಟುತ್ತೇವೆಂದು ತಿಳಿಸಿದ್ದೆ. ಆದರೆ ಮಗು ಶಾಲೆಗೆ ಹೋದಾಗ ಕ್ಲಾಸ್ ರೂಂಗೆ ಹೋಗಲು ಬಿಡದೆ ದೈಹಿಕ ಶಿಕ್ಷಕ ಸಂತೋಷ್ ಮಗುವಿನ ಕಿವಿ, ಕೂದಲು ಹಿಡಿದು ದರದರ ಎಳೆದಾಡಿ ಎಳೆದುಕೊಂಡು ಪ್ರಿನ್ಸಿಪಲ್ ರೂಂಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲೇ ಇದ್ದ ಸಿಬ್ಬಂದಿ ಶರತ್ ಬಾಯಿಗೆ ಬಂದಂತೆ ಆವಾಚ್ಯ ಶಬ್ದಗಳಿಂದ ಬೈದು ಫೀಸ್ ಕಟ್ಟುವುದಕ್ಕೆ ಆಗದೇ ಇದ್ದ ಮೇಲೆ ಸ್ಕೂಲ್‌ಗೆ ಏತಕ್ಕೆ ಬರುತ್ತೀಯೋ ಎಂದು ಬೆನ್ನಿಗೆ ಗುದ್ದಿ ಕೆನ್ನೆಗೆ ಹೊಡೆದು, ಅವನ ಭುಜ ಹಿಡಿದು ಹಿಚುಕಿ ಹಿಂಸಿಸಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಸರ್ಕಾರಿ ರಜೆ ಇಲ್ಲದಿದ್ದರೂ ಸ್ವಯಂ ರಜೆ ಘೋಷಿಸಿಕೊಂಡ ಜಿಲ್ಲಾಡಳಿತ; ಸಾರ್ವಜನಿಕರ ಆಕ್ರೋಶ
“ಮಗು ಅಳುತ್ತಿರುವಾಗ ಪ್ರಿನ್ಸಿಪಲ್ ಪ್ರಿಯಾ, ʼನೀವು ಎಸ್‌ಸಿ/ಎಸ್‌ಟಿಯವರೇ ಇಷ್ಟು. ಎಷ್ಟುಸಾರಿ ಹೇಳಿದರೂ ಬುದ್ದಿಕಲಿಯುವುದಿಲ್ಲ. ನಿಮ್ಮಂತಹ ಜಾತಿಯವರನ್ನು ನಮ್ಮ ಶಾಲೆಗೆ ಸೇರಿಸಿಕೊಳ್ಳುವುದೇ ತಪ್ಪುʼ ಅಂತ ಎಲ್ಲ ಮಕ್ಕಳ ಎದುರು ಜಾತಿನಿಂದನೆ ಮಾಡಿ ಅವಮಾನಿಸಿ, ಎಲ್ಲರೆದುರು ಮಗುವಿನ ತಲೆ ಕೂದಲು ಕತ್ತರಿಸಿದ್ದಾರೆ” ಎಂದು ತಾಯಿ ನೋವು ತೋಡಿಕೊಂಡರು.
“ಮಗು ಸಂಜೆ 4-45ಕ್ಕೆ ಮನೆಗೆ ಅಳುತ್ತ ಬಂದಾಗ ವಿಚಾರಿದೆ. ಆಗ ಅವನು ಅವರ ಪೈಶಾಚಿಕ ಕೃತ್ಯವನ್ನು ಹೇಳಿದ್ದಾನೆ. ಮಕ್ಕಳಿಗೆ ಜಾತಿನಿಂದನೆ ಮಾಡುವ ಇಂಥ ಶಾಲೆಯ ಪರವಾನಗಿಯನ್ನು ರದ್ದುಮಾಡಬೇಕು. ನಮಗೆ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಜೈನ್ ಶಾಲೆಯ ವಿರುದ್ಧ ತೀವ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.