‘ನಾನು ಹೈದರಾಬಾದ್‌ನವಳು. ಇಲ್ಲಿನ (ತೆಲುಗು) ಕುಟುಂಬದವಳು’ ಎಂದಿದ್ದ ನಟಿ ರಶ್ಮಿಕಾ ಮಂದಣ್ಣಗೆ ರಕ್ಷಣೆ ನೀಡುವಂತೆ ಕೊಡವ ರಾಷ್ಟ್ರೀಯ ಮಂಡಳಿ (ಸಿಎನ್‌ಸಿ) ಮನವಿ ಮಾಡಿದೆ. ರಶ್ಮಿಕಾ ಅವರ ರಕ್ಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಿಎನ್‌ಸಿ, ರಶ್ಮಿಕಾ ಅವರಿಗೆ ಬೆದರಿಕೆ ಹಾಕುತ್ತಿರುವವರ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗವನ್ನು (ಎನ್‌ಸಿಡಬ್ಲ್ಯೂ) ಒತ್ತಾಯಿಸಿದೆ.
ರಶ್ಮಿಕಾ ತಾವು ಹೈದರಾಬಾದ್ ಅವರು ಎಂದು ಹೇಳಿಕೊಂಡು ಕರ್ನಾಟಕಕ್ಕೆ ಅಗೌರವ ತೋರಿಸಿದ್ದಾರೆ. ಅವರು ಹುಟ್ಟಿದ್ದು ಕರ್ನಾಟಕದಲ್ಲಿ, ಬೆಳೆದ್ದದ್ದು, ಓದಿದ್ದು ಕರ್ನಾಟಕದಲ್ಲಿ, ಚಿತ್ರರಂಗಕ್ಕೆ ಕಾಲಿಟ್ಟಿದ್ದೂ ಕರ್ನಾಟಕದಲ್ಲಿ-ಕನ್ನಡದಲ್ಲಿ. ಆದರೆ, ತಮಗೆ ‘ಸ್ಟಾರ್’ ಪಟ್ಟ ಸಿಕ್ಕಿದ ಕಾರಣಕ್ಕೆ ಕನ್ನಡವನ್ನೂ, ಕರ್ನಾಟಕವನ್ನೂ ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ, ಕಾಂಗ್ರೆಸ್ ಶಾಸಕ ಗಣಿಗ ರವಿ ಕೂಡ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ.
ಹೀಗಾಗಿ, ನಟಿ ರಶ್ಮಿಕಾ ಅವರಿಗೆ ಭದ್ರತೆ ನೀಡಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಸಿಎನ್‌ಸಿ ಪತ್ರ ಬರೆದಿತ್ತು. ಇದೀಗ, ಮಹಿಳಾ ಆಯೋಗಕ್ಕೂ ಮನವಿ ಮಾಡಿದೆ.
ಸಿಎನ್‌ಸಿ ಅಧ್ಯಕ್ಷ ಎನ್‌ಯು ನಾಚಪ್ಪ ಅವರು ಎನ್‌ಸಿಡಬ್ಲ್ಯೂ ಅಧ್ಯಕ್ಷೆ ವಿಜಯ ಕೆ ರಹತ್ಕರ್ ಅವರಿಗೆ ಪತ್ರ ಬರೆದಿದ್ದು, “ರಶ್ಮಿಕಾ ಅವರಿಗೆ ಬೆದರಿಕೆ ಹಾಕಿರುವ ಶಾಸಕ ಗಣಿಗ ರವಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಬೇಕು. ಎಲ್ಲ ಮಹಿಳೆಯರಿಗೆ ಸುರಕ್ಷಿತ ಮತ್ತು ನ್ಯಾಯಯುತ ವಾತಾವರಣವನ್ನು ಸೃಷ್ಟಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಕೊಡವ ಸಮುದಾಯಕ್ಕೆ ಸೇರಿದ ರಶ್ಮಿಕಾ ಅವರು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಭಾರತೀಯ ಚಲನಚಿತ್ರೋದ್ಯಮದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ಅವರು ಅನಗತ್ಯವಾಗಿ ಟೀಕೆಗಳು, ಮಾನಸಿಕ ಕಿರುಕುಳವನ್ನು ಅನುಭವಿಸುವಂತಾಗಿದೆ. ಅವರಿಗೆ ರಕ್ಷಣೆ ನೀಡಬೇಕು” ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
“ಕಿರುಕುಳ ಮತ್ತು ಬೆದರಿಕೆಯ ವಿರುದ್ಧ ಮಹಿಳೆಯರಿಗೆ, ವಿಶೇಷವಾಗಿ ಹಿಂದುಳಿದ, ಅಂಚಿನಲ್ಲಿರುವ ಸಮುದಾಯಗಳಿಗೆ ರಕ್ಷಣೆ ಮತ್ತು ಬೆಂಬಲ ನೀಡುವ ತುರ್ತು ಅಗತ್ಯವಿದೆ” ಎಂದು ಪತ್ರದಲ್ಲಿ ಹೇಳಲಾಗಿದೆ.
ಇನ್ನು, ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ನಟಿ, ಮಾಜಿ ಸಂಸದೆ ರಮ್ಯಾ, “ಕಲಾವಿದರು, ವಿಶೇಷವಾಗಿ ನಟಿಯರನ್ನು ರಾಜಕಾರಣಿಗಳು ಸುಲಭವಾಗಿ ಗುರಿಯಾಗಿಸಿಕೊಳ್ಳುತ್ತಾರೆ. ‘ತನ್ನ ಮೂಲವನ್ನು ಮರೆತಿರುವ ರಶ್ಮಿಕಾ ಮಂದಣ್ಣಗೆ ಪಾಠ ಕಲಿಸಬೇಕು’ ಎಂದು ಶಾಸಕ ರವಿ ಗಣಿಗ ಹೇಳಿದ್ದಾರೆ. ಜನರನ್ನು ಬೆದರಿಸುವುದು ಎಂದಿಗೂ ಸರಿಯಲ್ಲ. ರಾಜಕಾರಣಿಗಳು ಹೀಗೆ ಮಾಡುವುದನ್ನು ನಿಲ್ಲಿಸಬೇಕು” ಎಂದು ಹೇಳಿದ್ದಾರೆ.
ಈ ಹಿಂದೆ, ನನಗೆ ಕನ್ನಡ ಬರುವುದಿಲ್ಲ ಎಂದು ಹೇಳಿಕೆ ನೀಡಿಯೂ ರಶ್ಮಿಕಾ ಮಂದಣ್ಣ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು.