ಅತಿಥಿ ಶಿಕ್ಷಕರ ಬೇಡಿಕೆ ಈಡೇರಿಸದ ಸರ್ಕಾರ, ಅನ್ಯಾಯ ಧೋರಣೆ ತೋರುತ್ತಿದ್ದು, ರಾಜ್ಯದಲ್ಲಿರುವ ಸುಮಾರು 43 ಸಾವಿರಕ್ಕೂ ಅಧಿಕ ಮಂದಿ ಅತಿಥಿ ಶಿಕ್ಷಕರಿಗೆ ದ್ರೋಹ ಬಗೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಬಿ ಎಸ್ ಮಹೇಶ್ ಕುಮಾರ್ ಆರೋಪಿಸಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದಿಂದ ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
“ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 10-12 ವರ್ಷಗಳಿಂದ ಸೇವಾಭಧ್ರತೆಯಿಲ್ಲದೆ, ಕನಿಷ್ಠ ವೇತನವೂ ಇಲ್ಲದೆ ಖಾಯಂ ಶಿಕ್ಷಕರಿಗೆ ಸರಿಸಮನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಆದರೂ ಸರ್ಕಾರ ಅತಿಥಿ ಶಿಕ್ಷಕರ ಬೇಡಿಕೆ ಈಡೇರಿಸದೆ ಅನ್ಯಾಯ ಧೋರಣೆ ತೋರುತ್ತಿದೆ ಎಂದು
“ಸರ್ಕಾರಕ್ಕೆ ಹಲವಾರು ವರ್ಷಗಳಿಂದ ಮನವಿ ನೀಡುತಿದ್ದರೂ ಕೂಡ ನಮ್ಮ ಬೇಡೀಕೆಗಳನ್ನಾಗಲಿ ಹಕ್ಕೊತ್ತಾಯಗಳನ್ನಾಗಲಿ ಈಡೇರಿಸಿರುವುದಿಲ್ಲ. ಸಂವಿಧಾನದ ಆರ್ಟಿಕಲ್ 311ರಲ್ಲಿ ಖಾಯಂ ನೌಕರರಿಗೆ ನೀಡುವ ವೇತನ, ಸೇವಾ ಭದ್ರತೆ, ಆರೋಗ್ಯ ವಿಮೆ, ರಜೆ ಸೌಲಭ್ಯ, ವಿಶೇಷ ಭತ್ಯೆಗಳು, ಇಡುಗಂಟು ಇವುಗಳನ್ನು ತಾತ್ಕಾಲಿಕ ನೌಕರರಿಗೂ ಕೊಡಬೇಕು ಎನ್ನುವ ಸರ್ಕಾರವೇ ಇಂದು ಅನ್ಯಾಯ ಧೋರಣೆ ತೋರುತ್ತಿದೆ” ಎಂದರು.
“ರಾಜ್ಯದ ಬಿಬಿಎಂಪಿ ಶಾಲೆಗಳಿಗೆ ಗೌರವಧನ ಹೆಚ್ಚಾಗಿದೆ. ವಸತಿ ಶಾಲೆಗಳಲ್ಲೂ ಕೂಡಾ ಗೌರವಧನ ಹೆಚ್ಚಿದೆ. ಸೌಲಭ್ಯಗಳನ್ನೂ ಕೂಡಾ ನೀಡಿದೆ. ಆದರೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ತುಂಬಾ ಅನ್ಯಾಯವಾಗುತ್ತಿದೆ” ಎಂದು ದೂರಿದರು.
“ಶಿಕ್ಷಣ ಸಚಿವರು ಪ್ರಾಥಮಿಕ ಶಾಲೆ ಶಿಕ್ಷಕರಿಗೆ ₹15000, ಪ್ರೌಢ ಶಾಲೆ ಶಿಕ್ಷಕರಿಗೆ ₹16000 ಗೌರವಧನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಕೇವಲ ₹2000 ಮಾತ್ರ ಹೆಚ್ಚಿಗೆ ಮಾಡಿ ರಾಜ್ಯದ ಅತಿಥಿ ಶಿಕ್ಷಕರಿಗೆ ಅನ್ಯಾಯ ಮಾಡಿದ್ದು, ಕೊಟ್ಟ ಮಾತಿನಂತೆ ನೆಡೆದಿಲ್ಲ. ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಅತಿಥಿ ಶಿಕ್ಷಕರನ್ನು ಖಾಯಂ ಮಾಡುವುದಿಗಿ ಭರವಸೆ ನೀಡಿದೆ. ಆದರೆ ಈಗ ನುಡಿದಂತೆ ನೆಡೆಯುತ್ತಿಲ್ಲ” ಎಂದು ತರಾಟೆಗೆ ತೆಗೆದುಕೊಂಡರು.
“ಮಂಡ್ಯ ಜಿಲ್ಲೆಯಲ್ಲಿ ಸುಮಾರು 1300 ರಿಂದ 1400 ಮಂದಿ ಅತಿಥಿ ಶಿಕ್ಷಕರು ಕೆಲಸ ಮಾಡುತ್ತಿದ್ದೇವೆ. ನಮಗೆ ನಿರಂತರವಾಗಿ ಅನ್ಯಾಯವಾಗುತಿದ್ದರೂ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಗಳೂ ಕೂಡಾ ನಮ್ಮ ಬಗ್ಗೆ ಧ್ವನಿ ಎತ್ತಿಲ್ಲ. ಇದೇ ರೀತಿ ಮುಂದುವರೆದರೆ ಮುಂಬರುವ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ನೋಟಾಗೆ ಮತ ನೀಡಬೇಕಾಗುತ್ತದೆ” ಎಂದು ಕಿಡಿ ಕಾರಿದರು.
“ಜನಪ್ರತಿನಿಧಿಗಳಿಗೆ ಅಧಿಕೊಟ್ಟವರು ನಾವು, ಸರ್ಕಾರ ಜಾರಿಗೆ ಬಂದಿರುವುದು ನಮ್ಮಿಂದ. ಈಗ ಅಧಿಕಾರದ ಗದ್ದುಗೆ ಏರಿ ನಮಗೇ ಅನ್ಯಾಯ ಮಾಡುತ್ತಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಸರ್ಕಾರ ನಮ್ಮ ಬೇಡಿಕೆಗಳು ಹಾಗೂ ಹಕ್ಕೊತ್ತಾಯಗಳ ವಿಚಾರದಲ್ಲಿ ನಮಗೆ ನ್ಯಾಯ ಕೊಡಿಸದಿದ್ದಲ್ಲಿ ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಾಕಿ ಶುಲ್ಕ ಪಾವತಿಸಿಲ್ಲವೆಂದು ಮಗುವಿನ ಮೇಲೆ ಹಲ್ಲೆ, ಜಾತಿನಿಂದನೆ; ಜೈನ್ ಪಬ್ಲಿಕ್ ಶಾಲೆ ವಿರುದ್ಧ ಕ್ರಮಕ್ಕೆ ಆಗ್ರಹ
ಅತಿಥಿ ಶಿಕ್ಷಕರಿಗೆ ಸೇವಾಭದ್ರತೆ ನೀಡಬೇಕು. ಹತ್ತು ವರ್ಷಕ್ಕೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದ ಅತಿಥಿ ಶಿಕ್ಷಕರನ್ನು ಖಾಯಂ ಮಾಡಬೇಕು. ಪ್ರತಿ ತಿಂಗಳಿಗೆ ₹31,000ದಂತೆ ಕನಿಷ್ಠ ವೇತನ ನೀಡಬೇಕು. ಸೇವಾಹಿರಿತನಕ್ಕೆ ಆಧ್ಯತೆ ನೀಡಬೇಕು. ಸೇವಾದೃಢೀಕರಣ ಪತ್ರ ನೀಡಬೇಕು. ವರ್ಷಕ್ಕೆ ಶೇ.5ರಷ್ಟು ಕೃಪಾಂಕ ನೀಡಬೇಕು. ಅಂಗವಿಕಲ ಶಿಕ್ಷಕರಿಗೆ ಮೀಸಲಾತಿ ನೀಡಬೇಕು. ಪ್ರತಿ ತಿಂಗಳು ಸರಿಯಾಗಿ ಸಂಬಳ ನೀಡಬೇಕು” ಎಂದು ಒತ್ತಾಯಿಸಿದರು.
ತಾಲೂಕು ಪದಾಧಿಕಾರಿಗಳಾದ ಗೌರವಾಧ್ಯಕ್ಷ ಎನ್ ಎಲ್ ಭರತ್ ರಾಜ್, ಉಪಾಧ್ಯಕ್ಷ ಜೆ ಶಿವಕುಮಾರ್, ಚುಂಚಣ್ಣ, ಪ್ರಧಾನ ಕಾರ್ಯದರ್ಶಿ ಕೆಂಪರಾಜು, ಸಹಕಾರ್ಯದರ್ಶಿ ನಂಜುಂಡಸ್ವಾಮಿ, ಆನಂದ್, ಖಜಾಂಚಿ ಪುಟ್ಟರಾಜು, ಮಹದೇವು, ಹನುಮಯ್ಯ, ಬಿಲ್ಲಯ್ಯಸ್ವಾಮಿ, ರಮ್ಯ, ರಾಧಾ, ರೇಖಾ, ನಯನ, ಮಹದೇವಸ್ವಾಮಿ ಸೇರಿದಂತೆ ಇತರರು ಇದ್ದರು.