ಅಧುನಿಕ ತಂತ್ರಜ್ಞಾನದಿಂದ ಎಷ್ಟು ಉಪಯೋಗವಿದೆಯೋ, ಅಷ್ಟೇ ಕೆಟ್ಟದ್ದು ಇದೆ. ಇದಕ್ಕೆ ಇಂದಿನ ಯುವಕರು ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗಿರುವುದೇ ಸಾಕ್ಷಿ.ಮೊಬೈಲ್ ಬಳಕೆಯಿಂದ ಸೃಜನಶೀಲತೆ ಮರುಟಿ ಹೋಗುತ್ತಿದೆಯೇ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಆತಂಕ ವ್ಯಕ್ತಪಡಿಸಿದರು.
ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟ, ತುಮಕೂರು ವಿಶ್ವವಿದ್ಯಾಲಯ, ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ಹಾಗೂ ಸಮತಾ ಪ್ರಕಾಶನದ ವತಿಯಿಂದ ತುಮಕೂರುವ ವಿವಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಶಿವಣ್ಣ ತಿಮ್ಲಾಪುರ ಬರೆದಿರುವ ‘ತೊಗಲ ಯೋಗಿ’ ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕರ ಅಭಿರುಚಿಯೆಂದರೆ ಎಲ್ಲೇ ಕುಳಿತುಕೊಳ್ಳಲಿ ಮೊಬೈಲ್ ಹಿಡಿದಿರುತ್ತಾರೆ. ಪಕ್ಕದಲ್ಲಿ ಯಾರು ಕುಳಿತಿರುತ್ತಾರೆ ಎಂಬ ಬಗ್ಗೆ ವಿಚಾರಿಸುವುದಿಲ್ಲ. ಬಸ್ ಇಲ್ಲವೇ ಟ್ರೈನ್ ನಲ್ಲಿ ಕುಳಿತುಕೊಳ್ಳಲಿ ಅವರು ಮೊಬೈಲ್ ಹಿಡಿದುಕೊಳ್ಳುತ್ತಾರೆ.ಹೀಗಾಗಿ ಒಬ್ಬರಿಗೊಬ್ಬರಿಗೆ ಪರಿಚಯ ಮಾಡಿಕೊಳ್ಳಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಹೊಸ ತಂತ್ರಜ್ಞಾನದಿಂದ ದುಷ್ಪರಿಣಾಮವೇ ಹೆಚ್ಚು ಆಗುತ್ತಿವೆ. ತಂತ್ರಜ್ಞಾನದಿಂದ ಯಾವ ರೀತಿ ದುರುಪಯೋಗ ಮಾಡಿಕೊಳ್ಳಬಹುದು. ಹೀಗೆ ದುರುಪಯೋಗ ಮಾಡುವುದರಿಂದ ಸ್ವಂತಕ್ಕೆ ಆಗುವ ಲಾಭವೇನು? ಈ ರೀತಿಯ ಬುದ್ದಿವಂತರೂ ಕೂಡ ಇದ್ದಾರೆ.ಕ್ರಿಪ್ಕೋ ಕರೆನ್ಸಿ ವಿಚಾರದಲ್ಲಿ ತನಿಖೆ ಎದುರಿಸುತ್ತಿರುವ ಶ್ರೀಕಿ ಅನ್ನುವ ವ್ಯಕ್ತಿ ಬಹಳ ಬುದ್ದಿವಂತ. ಅವನನ್ನು ನೋಡಲು ಪೆಕರನಂತೆ ಕಾಣುತ್ತಾನೆ.ಅಸಾಧಾರಣ ಬುದ್ದಿವಂತ ಅವನು.ಆದರೆ ಆ ಬುದ್ದಿವಂತಿಕೆಯನ್ನು ತಂತ್ರಜ್ಞಾನ ದುರುಪಯೋಗಪಡಿಸಿಕೊಳ್ಳಲು ಬಳಸಿಕೊಂಡು ಅಪರಾಧ ಎಸಗಿದ್ದಾನೆ.ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ತಿದ್ದುವ ಕೆಲಸ ಮಾಡಬೇಕು. ಒಳ್ಳೆಯ ದಾರಿಯಲ್ಲಿ ಹೋಗುವಂತೆ ನೋಡಿಕೊಳ್ಳಬೇಕು ಎಂದರು.
ಭವಿಷ್ಯದಲ್ಲಿ ಮಕ್ಕಳು ಸಮಾಜದ ಆಸ್ತಿಯಾಗಬೇಕು. ಹಾಗೆ ಮಕ್ಕಳನ್ನು ಬೆಳೆಸಬೇಕು ಎಂದು ಕೆ.ಎನ್.ರಾಜಣ್ಣ ಕಿವಿ ಮಾತು ಹೇಳಿದರು.
ಹಳ್ಳಿಗಾಡಿನಿಂದ ಬಂದಂತಹ ಮಕ್ಕಳು, ಹಳ್ಳಿಗಾಡಿನ ಕುಗ್ರಾಮಗಳಲ್ಲಿ ಸರ್ಕಾರ ಶಾಲೆಗಳಲ್ಲಿ ಅದು ಕೆಟ್ಟ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದಂತಹ ಮಕ್ಕಳು ಯಾರೂ ಕೂಡ ಮೇಲು ಮತ್ತು ಕೀಳು ಅನ್ನುವಂತಹದ್ದು ಆಗುವುದಿಲ್ಲ. ಎಲ್ಲ ಮಕ್ಕಳಿಗೂ ಕೂಡ ಭಗವಂತ ಬುದ್ದಿಶಕ್ತಿಯನ್ನು ಸಮಾನವಾಗಿ ಕೊಟ್ಟಿರುತ್ತಾನೆ. ಆದರೆ ಹಳ್ಳಿಗಾಡಿನ ಮಕ್ಕಳಿಗೆ ತಮ್ಮ ಪ್ರತಿಭೆ ಹೊರ ಹಾಕಲು ಅವಕಾಶ ಸಿಗುವುದಿಲ್ಲ ಎಂದರು.
ಹಳ್ಳಿಗಾಡಿನ ಮಕ್ಕಳು ತಮ್ಮ ಪ್ರತಿಭೆಯನ್ನು, ಬುದ್ದಿಶಕ್ತಿಯನ್ನು ಹೊರಹಾಕಲು ಅವಕಾಶಗಳು ದೊರೆಯಬೇಕು. ಅವಕಾಶ ದೊರೆತಾಗ ದಡ್ಡರು ಅನ್ನಿಸಿಕೊಳ್ಳಲು ಸಾಧ್ಯವಿಲ್ಲ. ಯಾರಿಂದ ಯಾರಿಗೂ ಕಡಿಮೆ ಇಲ್ಲ ಅನ್ನಿಸಿಕೊಳ್ಳುವುದು ಇಲ್ಲ. ಅವಕಾಶ ವಂಚಿತರಿಗೆ ಮಾತ್ರ ಸಮಾಜದಲ್ಲಿ ಕೆಲವೊಮ್ಮ ತನ್ನ ಪ್ರತಿಭೆಯನ್ನು ಹೊರಹೊಮ್ಮಿಸಲು ಪ್ರದರ್ಶನ ಮಾಡಲಿಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಅವಕಾಶ ವಂಚಿತರು ಎಷ್ಟೇ ಬುದ್ದಿವಂತರು ಇದ್ದರೂ ಕೂಡ ಅವಕಾಶದಿಂದ ವಂಚಿತರಾಗಿ ತನ್ನ ತನವನ್ನು ಅವರು ಪರಿಣಾಮಕಾರಿಯಾಗಿ ಜನರ ಮುಂದೆ ಇಡಲಿಕ್ಕೆ ಸಾಧ್ಯವಾಗುವುದಿಲ್ಲ.ಡಾ.ಶಿವಣ್ಣ ತಿಮ್ಲಾಪುರ ಹಳ್ಳಿನಲ್ಲಿ ಹುಟ್ಟಿ,ಹಳ್ಳಿಯಲ್ಲಿಯೇ ವಿದ್ಯಾಭ್ಯಾಸ ಮಾಡಿ ತನ್ನ ಛಾಪನ್ನು ಮೂಡಿಸುವಂತಹ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ಇಂದಿನ ಯುವಕರಿಗೆ ಶಿವಣ್ಣ ಮಾದರಿಯಾಗಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ತೊಗಲ ಯೋಗಿ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ, ಚಿಂತಕ ಡಾ.ಅಗ್ರಹಾರ ಕೃಷ್ಣಮೂರ್ತಿ,ದಲಿತ ಮತ್ತು ಬಂಡಾಯ ಸಾಹಿತ್ಯದ 50 ವರ್ಷಗಳ ಕಾಲಘಟ್ಟದಲ್ಲಿ ಆರಂಭದಲ್ಲಿ ಇದ್ದ ಸಿಟ್ಟು,ಸೆಡುವ,ನೋವು, ಆಕ್ರೋಶ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ.ಆದರೆ ಯಾವುದಕ್ಕೂ ರಾಜೀಯಾಗದೆ ತಮಗೆ ಅನಿಸಿದ್ದನ್ನು ಹೇಳುವ ರೀತಿ ಬದಲಾಗಿದೆ.ಕಾವ್ಯದ ಓದುವಿನಲ್ಲಿ ಏರುಪೇರುಗಳಾಗುತ್ತಿರುವ ಇಂದಿನ ದಿನಗಳಲ್ಲಿ ಕಾವ್ಯದ ಮೂಲಕವೇ ಹೊಸದೊಂದನ್ನು ಹೇಳಲು ಹೊರಟಿರುವ ಡಾ.ಶಿವಣ್ಣ ತಿಮ್ಮಲಾಪುರ ಅವರ ಕವಿತೆಗಳು ಕಾವ್ಯದ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡುವ,ಶರಣರ ಕಾಲಘಟ್ಟ ಮತ್ತು ಅಧುನಿಕ ಕಾಲಘಟ್ಟವನ್ನು ಒಂದು ವಾಕ್ಯದಲ್ಲಿ ಕಟ್ಟಿಕೊಡುವ ಇವರ ಜಾಣ್ಮೆ ಮೆಚ್ಚಲೇಬೇಕು.ನೇಗಿಲ ಯೋಗಿ, ತೊಗಲ ಯೋಗಿ ಪದಗಳನ್ನು ಗಮನಿಸಿದರೆ, ಕುವೆಂಪು ಅವರಿಂದ ಪ್ರೇರೆಪಿರಾದಂತೆ ಕಂಡು ಬರುತ್ತದೆ.ಇವರಿಂದ ಮತ್ತಷ್ಟು ಕೃತಿಗಳು ಹೊರಬರಲಿ, ಕನ್ನಡ ಸಾಹಿತ್ಯ ಲೋಕದಲ್ಲಿ ಬಹುಕಾಲ ಉಳಿಯುವಂತಾಗಲಿ ಎಂದು ಶುಭ ಹಾರೈಸಿದರು.
ಸಂಸ್ಕೃತಿ ಚಿಂತಕ ಡಾ.ನಟರಾಜ ಬೂದಾಳ್ ಅಧ್ಯಕ್ಷತೆ ವಹಿಸಿದ್ದರು. ಕವನ ಸಂಕಲನ ಕುರಿತು ಡಾ.ಜಿ.ವಿ.ಆನಂದಮೂರ್ತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಸಾಹಿತಿ ತುಂಬಾಡಿ ರಾಮಯ್ಯ, ಕುಲಸಚಿವೆ ನಾಹಿದಾ ಜಮ್ ಜಮ್, ಚರಕ ಆಸ್ಪತ್ರೆಯ ಡಾ.ಬಸವರಾಜು, ಸಾಮಾಜಿಕ ಹೋರಾಟಗಾರ ಡ್ಯಾಗೇರಹಳ್ಳಿ ವಿರೂಪಾಕ್ಷ, ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಡಾ.ಬಿ.ಆರ್.ರೇಣುಕಪ್ರಸಾದ್, ತೊಗಲ ಯೋಗಿ ಕೃತಿಕಾರ ಡಾ.ಶಿವಣ್ಣ ತಿಮ್ಲಾಪುರ ಮತ್ತಿತರರಿದ್ದರು.