ಕಳೆದ ಎರಡು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಅಧ್ಯಕ್ಷರಿಲ್ಲದೆ ನಿಂತ ನೀರಾಗಿದ್ದ ಕೃಷಿ ಬೆಲೆ ಆಯೋಗಕ್ಕೆ ನೂತನವಾಗಿ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಕೃಷಿ ಬೆಲೆ ಆಯೋಗದ ಪ್ರಥಮ ಸಭೆ ಬೆಂಗಳೂರು ವಿಭಾಗ ಮಟ್ಟದ ರೈತ ಪ್ರತಿನಿಧಿಗಳೊಂದಿಗೆ ಬೆಂಗಳೂರಿನ ಕಚೇರಿಯಲ್ಲಿ ನಡೆದಿದ್ದು ಚಿತ್ರದುರ್ಗ ರೈತ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ “ಸಭೆಯಲ್ಲಿ ನೂತನವಾಗಿ ಅಧ್ಯಕ್ಷರಾಗಿ ನೇಮಕರಾಗಿದ್ದ ಅಶೋಕ್ ದಳವಾಯಿ ನೇತೃತ್ವ ವಹಿಸಿದ್ದು, ಬೆಂಗಳೂರು ವಿಭಾಗದ ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿ ಬೆಳೆ ಆಯೋಗದ ಕಾರ್ಯಕ್ರಮಗಳ ಬಗ್ಗೆ ಮತ್ತು ಕೃಷಿ ಉತ್ಪನ್ನಗಳ ಬೆಲೆ ಬಗ್ಗೆ ಚರ್ಚೆ ನಡೆಸಲಾಯಿತು” ಎಂದು ತಿಳಿಸಿದರು.
“ರೈತರೊಂದಿಗಿನ ಸಭೆಯ ಅಧ್ಯಕ್ಷತೆಯನ್ನು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ್ ದಳವಾಯಿ ವಹಿಸಿದ್ದು, ಸಭೆಯಲ್ಲಿ ಮಾತನಾಡಿದ ಅವರು ‘ಇಂದಿನ ಸಂಕಷ್ಟದ ಸ್ಥಿತಿಯಲ್ಲಿ ರೈತರ ಆದಾಯವನ್ನು ಉತ್ತಮಗೊಳಿಸುವ ಬಗ್ಗೆ ಕೃಷಿ ಬೆಲೆ ಆಯೋಗದಲ್ಲಿ ಕೂಲಂಕುಷವಾಗಿ ಚರ್ಚಿಸಿ ವರದಿ ನೀಡಲಾಗುತ್ತದೆ. ಕೃಷಿ ಕಾರ್ಮಿಕರು, ಕೃಷಿಕರು, ಗೇಣಿದಾರರು ಮುಂತಾದ ವರ್ಗಗಳಿದ್ದು, ಈ ಎಲ್ಲಾ ವರ್ಗಗಳ ಮತ್ತು ಎಲ್ಲರ ನಿರೀಕ್ಷೆ ಕೂಡ ಹಂತ ಹಂತವಾಗಿ ಅವರ ಆದಾಯ ಹೆಚ್ಚಾಗಬೇಕಿದೆ. ಇದಕ್ಕೆ ಪೂರಕವಾಗಿ ಬೆಲೆಗಳಿಗೂ ಕೂಡ ಉತ್ತಮ ಬೆಲೆ ದೊರಕಬೇಕಿದೆ. ಉತ್ತಮ ಬೆಲೆ ದೊರಕುವ ಜೊತೆಗೆ ಇಳುವರಿ ಹೆಚ್ಚಾಗಬೇಕು. ಹಾಗೂ ರೈತರ ಒಳಸುರಿಗಳಾದ ಬೀಜ, ಗೊಬ್ಬರ, ಔಷಧಿ ಸೇರಿದಂತೆ ಖರ್ಚುಗಳು ಕಡಿಮೆಯಾಗಬೇಕು. ಆಗ ರೈತರ ಆರ್ಥಿಕ ಸಬಲತೆ ಸಾದ್ಯ. ಜೊತೆಯಲ್ಲಿ ಗ್ರಾಮೀಣ ಮಾರುಕಟ್ಟೆಗಳು ಸೃಷ್ಟಿಯಾಗಬೇಕು. ಅಲ್ಲಿ ದಾಸ್ತಾನು ವ್ಯವಸ್ಥೆ, ಬೆಳೆ ಮೌಲ್ಯವರ್ಧನೆ, ಶೀತಲ ಸಂಗ್ರಹಾಗಾರ, ನಿಖರ ತೂಕ, ಉತ್ತಮ ವ್ಯವಸ್ಥೆ ಕಲ್ಪಿಸಿಕೊಡಬೇಕು. ಆಗ ಮಾತ್ರ ರೈತರಿಗೆ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಸಾಧ್ಯ’ ಎಂದು ಅಭಿಪ್ರಾಯಪಟ್ಟರು” ಎಂದು ವಿವರಿಸಿದರು.
“1924 ರಲ್ಲಿ ಜನ ಹಸಿವಿನಿಂದ ಸಾಯುವಾಗ ಪರಿಹಾರ ಕಂಡುಕೊಳ್ಳಲು ಬ್ರಿಟಿಷ್ ಸರ್ಕಾರ ರಾಯಲ್ ಕಮಿಷನ್ ಫಾರ್ ಅಗ್ರಿಕಲ್ಚರ್ ಕಮಿಟಿ ನೇಮಿಸಿತ್ತು. 1928ರಲ್ಲಿಯೇ ಈ ಕಮಿಷನ್ ಭಾರತಕ್ಕೆ 80 ಸಾವಿರ ಮಾರುಕಟ್ಟೆಗಳ ಅವಶ್ಯಕತೆ ಇದೆ ವರದಿ ನೀಡಿತ್ತು. ಆದರೆ ನಮ್ಮಲ್ಲಿರುವುದು ಕೇವಲ 6500-7000 ಮಾರುಕಟ್ಟೆಗಳು ಮಾತ್ರ. ಆದರೆ ಉತ್ತಮ ರಸ್ತೆ, ವಾಹನ ಸೌಲಭ್ಯಗಳಿರುವ ಬದಲಾದ ಇಂದಿನ ಪರಿಸ್ಥಿತಿಯಲ್ಲಿ ಕನಿಷ್ಠ 30,000 ಮಾರುಕಟ್ಟೆಗಳು ಬೇಕಿದ್ದು , ಅದರಲ್ಲಿ ಕನಿಷ್ಠ 20 ಸಾವಿರ ಗ್ರಾಮೀಣ ಮಾರುಕಟ್ಟೆಗಳ ಅವಶ್ಯಕತೆ ಇದೆ. ಎಪಿಎಂಸಿ ವ್ಯವಸ್ಥೆಯಲ್ಲಿ ಕೂಡ ಸುಧಾರಣೆ ತರಬೇಕು. ಎಂದು ಮಾರುಕಟ್ಟೆ ಬಗ್ಗೆ ಅಭಿಪ್ರಾಯ ಹೊಂದಿದ್ದಾರೆ” ಎಂದು ಮಾಹಿತಿ ನೀಡಿದರು.
“ರೈತನಿಗೆ ಉತ್ತಮ ಬೆಲೆ ಮತ್ತು ಸಬಲೀಕರಣವೇ ಸರ್ಕಾರ, ಕೃಷಿ ಬೆಲೆ ಆಯೋಗ, ಕೃಷಿ ನೀತಿಗಳ, ರೈತ ಸಂಘ ಮತ್ತು ರೈತ ಮುಖಂಡರೆಲ್ಲರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕೃಷಿ ಬೆಲೆ ಆಯೋಗ ರೈತರು ಮತ್ತು ರೈತ ಪ್ರತಿನಿಧಿಗಳೊಂದಿಗೆ ಮುಕ್ತವಾಗಿ ಚರ್ಚಿಸುತ್ತದೆ. ಇಲ್ಲಿ ಪಾರದರ್ಶಕತೆ ಅತಿ ಮುಖ್ಯ. ಎಲ್ಲವನ್ನು ಪಾರದರ್ಶಕವಾಗಿ ಚರ್ಚಿಸೋಣ. ನಿಮ್ಮ ಎಲ್ಲಾ ಸಲಹೆ ಸೂಚನೆಗಳಿಗೆ ನಾವು ಮನ್ನಣೆ ನೀಡುತ್ತೇವೆ’ ಎಂದು ತಿಳಿಸಿದ್ದಾರೆ” ಎಂದು ವಿವರಿಸಿದರು.
ಸಭೆಯ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದವೀರಪ್ಪ, “ಸಭೆಯು ಸಕಾರಾತ್ಮಕವಾಗಿ ನಡೆದಿದೆ. ನಾವು ಈ ಹಿಂದೆಯೇ ಕೃಷಿ ಭೂಮಿ ಮತ್ತು ಅದರ ಮೇಲಿನ ವೆಚ್ಚವನ್ನು ಬಂಡವಾಳ ಇಂದು ಪರಿಗಣಿಸಬೇಕು ಹಾಗೂ ರೈತನ ಬೆಳೆಗಳ ಮೇಲುಸ್ತುವಾರಿಯನ್ನು ನಿರ್ವಹಣಾ ವೆಚ್ಚ ಎಂದು ಪರಿಗಣಿಸಬೇಕು ಎಂದು ಬೇಡಿಕೆ ಇಟ್ಟಿದ್ದೆವು.
ಇದರ ಬಗ್ಗೆ ಕೃಷಿ ಬೆಲೆ ಆಯೋಗ ಸಕಾರಾತ್ಮಕವಾಗಿ ಸ್ಪಂದಿಸಿ, ಈ ಎರಡನ್ನು ಕೇಂದ್ರ ಸಮಿತಿ ಒಪ್ಪಿದೆ ಎಂದು ತಿಳಿಸಿದ್ದಾರೆ. ಹಾಗೂ ಬೋರ್ವೆಲ್ ಇರುವ ಬಯಲು ಸೀಮೆಯ ರೈತರಿಗೆ ಸಂಬಂಧಿಸಿದಂತೆ ಬೋರ್ವೆಲ್ ಗಳನ್ನು ನಿರ್ವಹಣಾ ಮತ್ತು ಬಂಡವಾಳ ವೆಚ್ಚವಾಗಿ ಪರಿಗಣಿಸುವ ಕುರಿತು ಮತ್ತೊಂದು ಸಭೆಗೆ ಒತ್ತಾಯಿಸಿದ್ದೇವೆ. ಅದಕ್ಕೂ ಕೂಡ ಒಪ್ಪಿಗೆ ಸೂಚಿಸಿದ್ದಾರೆ” ಎಂದು ತಿಳಿಸಿದರು.
“ಇಂದಿನ ಆರೋಗ್ಯಯುತ ಬದುಕಿಗೆ ಉತ್ತಮ ಆಹಾರ ಪದ್ಧತಿ ಬೇಕಾಗಿದ್ದು, ಇದಕ್ಕೆ ಸಾವಯವ ಕೃಷಿ ಪರಿಹಾರವಾಗಬಲ್ಲುದು. ಸಾವಯವ ಬೆಳೆಗೆ ಬೇಕಾಗುವ ಸೌಲಭ್ಯವನ್ನು ರೈತನಿಗೆ ಕಲ್ಪಿಸಿ ಉತ್ತೇಜನ ನೀಡಬೇಕು. ಈಗ ರಾಸಾಯನಿಕ ಗೊಬ್ಬರ ಸಬ್ಸಿಡಿಯನ್ನು ನೇರವಾಗಿ ಕಾರ್ಖಾನೆಗಳಿಗೆ ನೀಡುತ್ತಿದ್ದು, ಸಾವಯವ ಕೃಷಿಕರಿಗೆ ಇದರಿಂದ ನಷ್ಟವಾಗುತ್ತಿದೆ. ಎಕರೆಗೆ ತಗಲುವ ರಾಸಾಯನಿಕ ಗೊಬ್ಬರದ ಸಬ್ಸಿಡಿಯನ್ನು ಸಾವಯವ ಕೃಷಿ ಮಾಡುವ ರೈತರಿಗೆ ನೇರವಾಗಿ ವರ್ಗಾಯಿಸಲು ಯೋಜನೆ ರೂಪಿಸಬೇಕೆಂದು ನಾವು ಕೃಷಿ ಆಯೋಗದ ಬೆಲೆ ಆಯೋಗದ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ . ಒಟ್ಟಿನಲ್ಲಿ ತುಮಕೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ಬೆಂಗಳೂರು ವಿಭಾಗದ ರೈತ ಪ್ರತಿನಿಧಿಗಳ ಸಭೆ ಸಕಾರಾತ್ಮಕ ಸ್ಪಂದನೆಯೊಂದಿಗೆ ಮುಗಿದಿದೆ. ಇನ್ನು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಹಾಗು ಕರಾವಳಿ ಮಲೆನಾಡು ಕರ್ನಾಟಕ ವಿಭಾಗಗಳ ಸಭೆಗಳು ನಡೆಯಲಿದೆ” ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ರೈತ ಮುಖಂಡರಾದ ಹಿರಿಯೂರು ತಾಲ್ಲೂಕಿನ ಹೊರಕೇರಪ್ಪ, ಹೊಸದುರ್ಗದ ಶಶಿಧರ್, ಚಿತ್ರದುರ್ಗ ತಾಲೂಕಿನ ಧನಂಜಯ ಸೇರಿದಂತೆ ಹಲವು ರೈತ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ತಿಳಿಸಿದರು.