ಗೀತಾಪ್ರೆಸ್ ಮತ್ತು ಕಲ್ಯಾಣದ ಸಂಸ್ಥಾಪಕ ಸಂಪಾದಕರು ಹನುಮಾನ್ ಪ್ರಸಾದ್ ಪೋದ್ದಾರ್. ದಲಿತರನ್ನು ದೇವಾಲಯಗಳಿಂದ ಹೊರಗಿಡುವ ಮತ್ತು ಅವರೊಡನೆ ಸಹಭೋಜನ ಮಾಡುವ ಎರಡೂ ಆಲೋಚನೆಗಳ ಪಕ್ಕಾ ವಿರೋಧಿಯಾಗಿದ್ದವರು. ಗಾಂಧೀ ಜೊತೆ ಇದ್ದವರು ಈ ವಿಚಾರಕ್ಕಾಗಿಯೇ ಅವರಿಂದ ದೂರವಾದವರು
ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯ ತೀರ್ಪುಗಾರರ ಸಮಿತಿಯು 2021ರ ಗಾಂಧೀ ಶಾಂತಿ ಪ್ರಶಸ್ತಿಯನ್ನು ಗೋರಖಪುರದ ಗೀತಾ ಪ್ರೆಸ್ ಗೆ ನೀಡಿದೆ. ಗಾಂಧೀಜಿ ಪ್ರತಿಪಾದಿಸಿದ ಶಾಂತಿ, ಸಹಿಷ್ಣುತೆ, ಸಹಬಾಳುವೆ, ಸಮಭಾವದ ಮಾನವೀಯ ಮೌಲ್ಯಗಳ ನಿರ್ಲಜ್ಜ ಅಪಮೌಲ್ಯವಿದು. ಗಾಂಧೀಜಿಗೆ ಮಾಡಿದ ಅಪಮಾನ. ದ್ವೇಷ, ಅಸಹನೆ ಅಸಮಾನತೆಯ ಅಮಾನವೀಯ ಸಿದ್ಧಾಂತವನ್ನು ಎತ್ತಿ ಹಿಡಿಯಲು ಮಾಡಿಕೊಂಡಿರುವ ಗಾಂಧೀಜಿಯ ದುರುಪಯೋಗ.
‘ಅಹಿಂಸಾತ್ಮಕ ಮತ್ತು ಇತರೆ ಗಾಂಧೀ ವಿಧಾನಗಳಿಂದ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ಪರಿವರ್ತನೆಗೆ ಅದ್ವಿತೀಯ ಕೊಡುಗೆ ನೀಡಿದ್ದಕ್ಕಾಗಿ’ ಗಾಂಧೀ ಶಾಂತಿ ಪ್ರಶಸ್ತಿಯನ್ನು ಗೀತಾ ಪ್ರೆಸ್‌ಗೆ ನೀಡಲಾಗಿದೆ ಎಂದು ತೀರ್ಪುಗಾರರ ಸಮಿತಿಯು ತಿಳಿಸಿದೆ.
ಸನಾತನ ಧಾರ್ಮಿಕ ಪಠ್ಯಗಳ ಅತಿ ದೊಡ್ಡ ಪ್ರಕಾಶನ ಸಂಸ್ಥೆ ಗೀತಾ ಪ್ರೆಸ್. ಸನಾತನ ಧರ್ಮ ಮತ್ತು ತತ್ವ ಸಿದ್ಧಾಂತಗಳ ಪ್ರಸಾರಕ್ಕಾಗಿ 1923ರಲ್ಲಿ ಹುಟ್ಟಿತು. ಭಗವದ್ಗೀತೆ ಮುಂತಾದ ಹಿಂದೂ ಧಾರ್ಮಿಕ ಗ್ರಂಥಗಳ 93 ಕೋಟಿ ಪ್ರತಿಗಳನ್ನು ಈವರೆಗೆ ಅಚ್ಚು ಮಾಡಿದೆ. ಭಗವದ್ಗೀತೆಯ ಹನ್ನೆರಡು ಕೋಟಿ ಮತ್ತು ರಾಮಚರಿತ ಮಾನಸದ ಒಂಬತ್ತೂಕಾಲು ಕೋಟಿ ಪ್ರತಿಗಳನ್ನು ದೇಶದ ಮನೆ ಮನೆಗಳಿಗೆ ತಲುಪಿಸಿದೆಯಂತೆ.
ಆರೆಸ್ಸೆಸ್ಸಿಗಿಂತ ಮೊದಲು ಹುಟ್ಟಿದ ಈ ಸಂಸ್ಥೆ ಹಿಂದುತ್ವ ಆಂದೋಲನದ ಕಾಲುದಾರಿಯನ್ನು ಹೆದ್ದಾರಿಯಾಗಿ ರೂಪಿಸಲು ಆರೆಸ್ಸೆಸ್ಸಿಗೆ ಹೆಗಲೆಣೆಯಾಗಿ ಶ್ರಮಿಸಿದ ಕತೆಯನ್ನು ವಿದ್ವತ್ಪೂರ್ಣ ಸಂಶೋಧನೆಯ ಮೂಲಕ ಹೆಜ್ಜೆ ಹೆಜ್ಜೆಗೆ ಆಧಾರ ಪುರಾವೆಗಳೊಂದಿಗೆ ತೆರೆದಿಟ್ಟಿದ್ದಾರೆ ಅಕ್ಷಯ ಮುಕುಲ್. GITA PRESS AND THE MAKING OF THE HINDU INDIA ಎಂಬುದು ಈ ಕೃತಿಯ ಶೀರ್ಷಿಕೆ. ಬಹು ಕಾಲದ ಹೊರಬಿದ್ದಿರುವ ಆಳ ಸಂಶೋಧನೆಯ ಕೃತಿ ಎಂಬ ಮೆಚ್ಚುಗೆಗೆ ಪಾತ್ರವಾಗಿದೆ. ಎಲೆಮರೆಯ ಕಾಯಿಯ ಪಾತ್ರ ವಹಿಸಿದ್ದ ಗೀತಾ ಪ್ರೆಸ್ಸು ಅರಗಿಸಿಕೊಳ್ಳಲು ಮುಜುಗರಪಡುವ ಅನೇಕ ಸಂಗತಿಗಳನ್ನು ಅಕ್ಷಯ ಹೊರಗೆಳೆದಿದ್ದಾರೆ.
ಆರಂಭದಲ್ಲಿ ಆಧ್ಯಾತ್ಮಕ್ಕೆ ಸೀಮಿತವಾಗಿದ್ದ ಗೀತಾ ಪ್ರೆಸ್ ಮತ್ತು ಕಲ್ಯಾಣ ನಿಯತಕಾಲಿಕ, ಹಿಂದೂ ರಾಷ್ಟ್ರವಾದಿ ಗುಂಪುಗಳ ಆಂದೋಲನ ಮತ್ತು ರಾಜಕಾರಣದ ಜೊತೆ ಸಕ್ರಿಯವಾಗಿ ಗುರುತಿಸಿಕೊಂಡವು. ಆನಂತರ ಈ ಸಹಭಾಗಿತ್ವ ಜನಸಂಘಕ್ಕೂ ಚಾಚಿಕೊಂಡಿತು. ಸಂವಿಧಾನ ಎತ್ತಿ ಹಿಡಿದಿದ್ದ ಸಮಾನತೆಯ ತತ್ವಗಳನ್ನು ಸಮಾಜಸುಧಾರಣೆಗಳ ಮೂಲಕ ಜಾರಿಗೆ ತರುವ ನೆಹರೂ ಸರ್ಕಾರದ ಪ್ರಯತ್ನಗಳನ್ನು ಕಟುವಾಗಿ ವಿರೋಧಿಸಿತು ಈ ಮೈತ್ರಿಕೂಟ. ಈ ಪೈಕಿ ದೊಡ್ಡ ಉದಾಹರಣೆ ಹಿಂದೂ ಕೋಡ್ ಬಿಲ್ ಎಂದು ಕರೆಯಲಾದ ಹಿಂದೂ ಸಂಹಿತೆಯ ವಿಧೇಯಕದ್ದು.
ಗೀತಾ ಪ್ರೆಸ್ಸಿನ ಸ್ಥಾಪಕ ಜಯದಯಾಳ ಗೋಯೆಂಡ್ಕಾ ಪ್ರಕಾರ ಶಾಸ್ತ್ರಗಳೇ ಪರಮ. ಹಿಂದೂ ಜೀವನ ಪದ್ಧತಿಯ ಎಲ್ಲ ಆಯಾಮಗಳನ್ನೂ ಶಾಸ್ತ್ರಗಳು ಅದಾಗಲೇ ನಿರ್ಧರಿಸಿದ್ದವು. ವಿವಾಹ ವಿಚ್ಛೇದನ, ಅಂತರ್ಜಾತಿ ವಿವಾಹ ಹಾಗೂ ಸಗೋತ್ರದ ವಿವಾಹಗಳನ್ನು ಕಾನೂನುಬದ್ಧಗೊಳಿಸುವ ನಡೆಯನ್ನು ಅವರು ವಿರೋಧಿಸಿದ್ದರು. ಮಹಿಳೆಯನ್ನು ಸಶಕ್ತಳನ್ನಾಗಿ ಮಾಡುವ ಬದಲು ನೈತಿಕ ಭ್ರಷ್ಟತೆಗೆ ನೂಕುವ ಈ ಕಾನೂನುಗಳನ್ನು ಹಿಂದುಗಳು ಬಲವಾಗಿ ವಿರೋಧಿಸಬೇಕೆಂದಿದ್ದರು.
ಗೀತಾಪ್ರೆಸ್ ಮತ್ತು ಕಲ್ಯಾಣದ ಸಂಸ್ಥಾಪಕ ಸಂಪಾದಕರು ಹನುಮಾನ್ ಪ್ರಸಾದ್ ಪೋದ್ದಾರ್. ದಲಿತರನ್ನು ದೇವಾಲಯಗಳಿಂದ ಹೊರಗಿಡುವ ಮತ್ತು ಅವರೊಡನೆ ಸಹಭೋಜನ ಮಾಡುವ ಎರಡೂ ಆಲೋಚನೆಗಳ ಪಕ್ಕಾ ವಿರೋಧಿಯಾಗಿದ್ದವರು. ಗಾಂಧೀ ಜೊತೆ ಇದ್ದವರು ಈ ವಿಚಾರಕ್ಕಾಗಿಯೇ ಅವರಿಂದ ದೂರವಾದವರು. ಹಿಂದುಗಳ ಮನಸಿನಲ್ಲಿ ಮುಸಲ್ಮಾನರ ವಿರುದ್ಧದ ಭಾವನೆಗಳನ್ನು ನಿತ್ಯ ಬದುಕಿನಲ್ಲಿ ಬಿತ್ತಿದ್ದು ಇದೇ ಕಲ್ಯಾಣದ ಮೂಲಕ. ಇಂಗ್ಲಿಷ್ ಶಿಕ್ಷಣ, ಜನನ ನಿಯಂತ್ರಣ, ಸಿನೆಮಾ ವಿರುದ್ಧ ಆಂದೋಲನ ಸಾರಿದ ಪತ್ರಿಕೆ. ಬಾಲ್ಯವಿವಾಹವನ್ನು ಎತ್ತಿ ಹಿಡಿದಿತ್ತು.
ಗೀತಾ ಪ್ರೆಸ್ ನ ಮುಖವಾಣಿಯಾದ ‘ಕಲ್ಯಾಣ’ ಎಂಬ ಮಾಸಿಕಕ್ಕೆ ಗಾಂಧೀಜಿ ಅವರ ಲೇಖನಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ ಗಾಂಧೀ ಮೌಲ್ಯಗಳು ಮತ್ತು ಗೀತಾ ಪ್ರೆಸ್ ನಡುವೆ ದೂರ ದೂರದ ಸಂಬಂಧ ಕೂಡ ಇರಲಿಲ್ಲ. ಗಾಂಧೀ ಜೊತೆ ಈ ಪ್ರಕಾಶನ ಸಂಸ್ಥೆ ಸೌಹಾರ್ದ ಸಂಬಂಧವನ್ನು ಕೂಡ ಹೊಂದಿರಲಿಲ್ಲ. ಗಾಂಧೀ ಹತ್ಯೆಯ ಕುರಿತು ವಿಚಿತ್ರ ವಿಕರಾಳ ಮೌನ ತಳೆದಿದ್ದ ಸಂಸ್ಥೆಯಿದು. ಎರಡು ತಿಂಗಳ ತನಕ ಖಂಡಿಸುವುದಿರಲಿ, ಪ್ರಸ್ತಾಪ ಕೂಡ ಮಾಡಿರಲಿಲ್ಲ. ಗಾಂಧೀಜಿ ಹತ್ಯೆಯ ನಂತರ ಆರೆಸ್ಸೆಸ್ ಮೇಲೆ ನಿಷೇಧ ಹೇರಿದ್ದನ್ನು ವಾಜಪೇಯಿ ಜೊತೆಗೂಡಿ ಖಂಡಿಸಿದ್ದವರು ‘ಕಲ್ಯಾಣ’ದ ಸಂಸ್ಥಾಪಕ ಸಂಪಾದಕ ಹನುಮಾನ್ ಪ್ರಸಾದ್ ಪೋದ್ದಾರ್. ಅದೇ ದಿನಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಆರೆಸ್ಸೆಸ್ ಮುಖ್ಯಸ್ಥ ಎಂ.ಎಸ್.ಗೋಲ್ವಲ್ಕರ್ ಅವರ ಸ್ವಾಗತಕ್ಕೆ ಬನಾರಸಿನಲ್ಲಿ ಏರ್ಪಡಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದವರು ಪೋದ್ದಾರ್.
ಗಾಂಧೀವಾದಿ ಘನಶ್ಯಾಮದಾಸ್ ಬಿರ್ಲಾ ಪ್ರಕಾರ ಪೋದ್ದಾರ್ ಮತ್ತು ಅವರ ಗುರು ಜಯದಯಾಳ ಗೊಯೆಂಡ್ಕಾ ಎತ್ತಿ ಹಿಡಿದದ್ದು ‘ಶೈತಾನ ಧರ್ಮವೇ ವಿನಾ ಸನಾತನ ಧರ್ಮ ಅಲ್ಲ’. ಗಾಂಧೀ ಹತ್ಯೆಯ ನಂತರ ಬಂಧಿಸಲಾಗಿದ್ದ ಸಾವಿರಾರು ಮಂದಿಯಲ್ಲಿ ಈ ಇಬ್ಬರೂ ಸೇರಿದ್ದರು.
ಗಾಂಧೀಜಿ ಸಹನೆ, ಶಾಂತಿ, ಸರ್ವಧರ್ಮ ಸಮಭಾವದ ಹಿಂದೂ ತತ್ವವನ್ನು ಬೋಧಿಸಿದರೆ, ಬಿಜೆಪಿ ಮತ್ತು ಆರೆಸ್ಸೆಸ್ಸು ಅಸಹನೆ ದ್ವೇಷದ ತಳಹದಿಯ ಮೇಲೆ ಕಟ್ಟರ್ ವಾದಿ ಮಿಲಿಟರಿ ಹಿಂದುತ್ವವನ್ನು ನಿರ್ಮಿಸತೊಡಗಿದೆ. ಈ ನಿರ್ಮಾಣದಲ್ಲಿ ಕೈ ಜೋಡಿಸುತ್ತ ಬಂದಿರುವ ಸಂಸ್ಥೆ ಗೀತಾ ಪ್ರೆಸ್.
