ಗಂಡು ಮಗು ಹುಟ್ಟಿಲ್ಲವೆಂಬ ಕಾರಣಕ್ಕೆ ಹತಾಶೆಗೆ ಒಳಗಾಗಿ 17 ದಿನದ ಹೆಣ್ಣು ಶಿಶುವನ್ನು ತಾಯಿ ನೀರಿನ ಟ್ಯಾಂಕ್ಗೆ ಎಸೆದು ಕೊಂದ ಘಟನೆ ರಾಜಸ್ಥಾನದ ಜುಂಜುನುವಿನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾನೇ ಮಗುವನ್ನು ನೀರಿನ ಟ್ಯಾಂಕ್ಗೆ ಎಸೆದು ಕೊಂದಿರುವುದಾಗಿ ತಾಯಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ತಾಯಿಯನ್ನು ಆಚ್ಕಿ ದೇವಿ (22) ಎಂದು ಗುರುತಿಸಲಾಗಿದೆ.
ಇದನ್ನು ಓದಿದ್ದೀರಾ? ಹೆಣ್ಣು ಮಗು ಹುಟ್ಟಿದ್ದಕ್ಕೆ ಪತ್ನಿಯನ್ನೇ ಜೀವಂತ ಸುಟ್ಟ ವಿಕೃತ ಪತಿ
“ನನಗೆ ಗಂಡು ಮಗು ಜನಿಸಬೇಕು ಎಂಬ ಆಸೆ ಇತ್ತು. ಆದರೆ ನನಗೆ ಹೆಣ್ಣು ಮಗು ಜನಿಸಿತು. ಇದರಿಂದ ನನಗೆ ನಿರಾಶೆಯಾಯಿತು. ಅದಕ್ಕಾಗಿ ನೀರಿನ ಟ್ಯಾಂಕ್ಗೆ ಮಗುವನ್ನು ಎಸೆದು, ಅದರ ಮುಚ್ಚಿಬಿಟ್ಟೆ” ಎಂದು ತಾಯಿ ಪೊಲೀಸರಿಗೆ ತಿಳಿಸಿರುವುದಾಗಿ ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೊತ್ವಾಲಿ ಪೊಲೀಸ್ ಠಾಣೆಯ ಎಸ್ಎಚ್ಒ ನಾರಾಯಣ ಸಿಂಗ್, “ಶ್ರೀ ರಾಮ ಕಾಲೋನಿಯ ಆಚ್ಕಿ ದೇವಿ ಎಂಬ ಮಹಿಳೆ ತನ್ನ 17 ದಿನದ ಹೆಣ್ಣು ಮಗುವನ್ನು ಭಾನುವಾರ ನೀರಿನ ಟ್ಯಾಂಕ್ಗೆ ಎಸೆದಿದ್ದಾಳೆ. ತನಗೆ ಗಂಡು ಮಗು ಆಗಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾಳೆ” ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ | ಚೀಲದಲ್ಲಿ 6 ದಿನದ ಹೆಣ್ಣು ಮಗುವಿನ ಮೃತದೇಹ ಪತ್ತೆ; ತಾಯಿಯ ಬಂಧನ
ಮಹಿಳೆಯು ತನ್ನ ಪರಿಚಯಸ್ಥರೊಬ್ಬರಿಗೆ ಈ ಬಗ್ಗೆ ತಿಳಿಸಿದ್ದಳು. ಆ ವ್ಯಕ್ತಿ ಮಹಿಳೆಯ ಪತಿಗೆ ತಿಳಿಸಿದ್ದು, ಪತಿ ಪೊಲೀಸರಿಗೆ ದೂರು ನೀಡಿದ್ದಾನೆ. ದೂರಿನ ಆಧಾರದಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ. ಕೋರ್ಟ್ಗೆ ಹಾಜರುಪಡಿಸಲಾಗಿದ್ದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಭಾರತದಲ್ಲಿ ಹಲವಾರು ಶತಕಗಳಿಂದ ಹೆಣ್ಣು ಮಗುವನ್ನು ತಿರಸ್ಕರಿಸುತ್ತಾ ಬರಲಾಗಿದೆ. ಇಂದಿಗೂ ಜನರಲ್ಲಿರುವ ಮನೋಭಾವ ಬದಲಾಗಿಲ್ಲ. ಅಕ್ರಮವಾಗಿ ಭ್ರೂಣದ ಲಿಂಗ ಪತ್ತೆ ಹಚ್ಚಿ, ಹೆಣ್ಣೆಂದು ತಿಳಿದಾಗ ಗರ್ಭಪಾತ ಮಾಡಿಸುವ ಅದೆಷ್ಟೋ ಪ್ರಕರಣಗಳು ಇಂದಿಗೂ ದಾಖಲಾಗುತ್ತಿವೆ. ಅದರಲ್ಲೂ ಮುಖ್ಯವಾಗಿ ಅತ್ತೆ, ಪತಿ, ಕುಟುಂಬಸ್ಥರ ತುಚ್ಛ ಮಾತುಗಳ ಒತ್ತಡದಿಂದಾಗಿ ತಾಯಿಯೇ ತನ್ನ ಹೆಣ್ಣು ಮಗುವನ್ನು ಕೊಂದಿರುವ ಘಟನೆಯೂ ವರದಿಯಾಗಿದೆ.
