ಉತ್ತರ ಪ್ರದೇಶದ ಜಲಾಲ್‌ಪುರದಲ್ಲಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ ಮಹಿಳೆಯೊಬ್ಬರನ್ನು ಬಲವಂತವಾಗಿ ಪತಿ ಮನೆಯಿಂದ ಹೊರಹಾಕುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳೆಯನ್ನು ರಂಜನಾ ಯಾದವ್ ಎಂದು ಗುರುತಿಸಲಾಗಿದೆ. ರಂಜನಾಗೆ ಕಳೆದ ಮಾರ್ಚ್‌ನಲ್ಲಿ ಅಂಬೇಡ್ಕರ್ ನಗರದ ನಿವಾಸಿ ರಮೇಶ್ ಕುಮಾರ್ ಯಾದವ್ ಜೊತೆ ವಿವಾಹವಾಗಿತ್ತು. ವರದಿಗಳ ಪ್ರಕಾರ, ವಿವಾಹದ ನಂತರ ಪತಿಯ ಮನೆಗೆ ತೆರಳುವಾಗ ರಂಜನಾ ವರದಕ್ಷಿಣೆಯಾಗಿ ಚಿನ್ನಾಭರಣ, ಫ್ರಿಜ್, ಕೂಲರ್, ಬೆಡ್ ಕೊಂಡೊಯ್ದಿದ್ದರು. ಆದರೆ, ಆಕೆಯ ಪತಿ ಮತ್ತು ಕುಟುಂಬಸ್ಥರು ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸಿದರು. ಆಕೆಯ ಬಳಿಯಿದ್ದ ಚಿನ್ನಾಭರಣವನ್ನು ಕಸಿದುಕೊಂಡರು.
ಕೊನೆಗೆ 5 ಲಕ್ಷ ರೂ.ತರುವಂತೆ ಕಿರುಕುಳ ನೀಡಿ ಮನೆಯಿಂದ ಹೊರಹಾಕಿದರು. ಈ ಕುರಿತ ವೀಡಿಯೊ ಕೂಡ ಚಿತ್ರೀಕರಿಸಿ ವೈರಲ್ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ; ಬಿಜೆಪಿ ವಿರೋಧವೇ ಅಸಾಂವಿಧಾನಿಕ
ವೈರಲ್ ವೀಡಿಯೊದಲ್ಲಿ ಪತಿ ಮನೆಯ ಬಾಗಿಲ ಬಳಿ ನಿಂತುಕೊಂಡಿದ್ದ ರಂಜನಾ ಅವರನ್ನು ಬಲವಂತವಾಗಿ ಹೊರ ಹಾಕುವುದು ಸೆರೆಯಾಗಿದೆ. ಪತಿ ರಮೇಶ್ ಕುಮಾರ್ ಮತ್ತು ಕುಟುಂಬಸ್ಥರಾದ ಶ್ರೀನಾಥ್ ಮತ್ತು ರಕ್ಷಾರಾಮ್ ವರದಕ್ಷಿಣೆ ತರುವಂತೆ ನಿರಂತರವಾಗಿ ಕಿರುಕುಳ ನೀಡಿದರು ಎಂದು ರಂಜನಾ ಆರೋಪಿಸಿದ್ದಾರೆ.
ಈ ಕುರಿತು ಜಲಾಲ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಳ್ಳುವುದಾಗಿ ಎಸ್ಎಚ್ಒ ಜೈ ಪ್ರಕಾಶ್ ಮಾಧ್ಯಮಗಳಿಗೆ ತಿಳಿಸಿದರು.
