ಕಾನೂನು ಬಾಹಿರವಾಗಿ ಹೆಚ್ಚುವರಿ ಜಮೀನು ಇದ್ದರೆ ವಶಪಡಿಸಿಕೊಳ್ಳಿ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಭೂ ದಾಖಲೆಗಳ ಇಲಾಖೆಗೆ ಪತ್ರ ಬರೆದಿದ್ದಾರೆ.
ತಮ್ಮ ಕುಟುಂಬದ ವಿರುದ್ಧ ಕೇಳಿ ಬಂದಿರುವ ಭೂ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಪತ್ರ ಬರೆದು, “ಬಿಡದಿಯ ಕೇತಗಾನಹಳ್ಳಿ ಸರ್ವೆ ನಂಬರ್ 7ರಲ್ಲಿ 5 ಎಕರೆ 20 ಗುಂಟೆ ಜಮೀನು ಖರೀದಿಸಿದ್ದೇನೆ. ಈ ಪೈಕಿ 1.25 ಎಕರೆ ಜಮೀನಿನಲ್ಲಿ ಮಾತ್ರ ಅನುಭವದಲ್ಲಿರುತ್ತೇನೆ. ಉಳಿದ ಜಮೀನನ್ನು ಗುರುತಿಸಿ ಹುಡುಕಿಕೊಡುವಂತೆ” ಎಂದು ಉಲ್ಲೇಖಿಸಿದ್ದಾರೆ.
ಪತ್ರದಲ್ಲಿ ಏನಿದೆ?
“ರಾಮನಗರ ತಾಲೂಕು ಬಿಡದಿ ಹೋಬಳಿಯ ಕೀತಿಗಾನಹಳ್ಳಿ ಗ್ರಾಮದ ಸರ್ವೇ ನಂ. 7,8,9,10,16,17 ಮತ್ತು 79ರಲ್ಲಿ ಭೂ ಒತ್ತುವರಿ ಆಗಿದ್ದರೆ ಸರ್ವೇ ನಡೆಸಿ ವರದಿ ನೀಡುವಂತೆ ಹೈಕೋರ್ಟ್ ನಿರ್ದೇಶನ ನೀಡಿರುವುದು ಸರಿಯಷ್ಟೇ. ನ್ಯಾಯಾಲಯದ ಸೂಚನೆಯಂತೆ ತಮ್ಮ ಸಮೀಕ್ಷಾ ತಂಡ ದಿನಾಂಕ 18-02-2025ರ ಮಂಗಳವಾರ ಮೇಲ್ಕಂಡ ಎಲ್ಲಾ ಸರ್ವೇ ನಂ.ಗಳು ಸೇರಿದಂತೆ ನಾನು ಅನುಭವದಲ್ಲಿರುವ ಸರ್ವೇ ನಂ. 7-8ರಲ್ಲಿಯೂ ಸರ್ವೇ ನಡೆಸಲಾಗಿದೆ. ಸರ್ವೇ ನಂ.7-8ರಲ್ಲಿ ಮಾತ್ರ ನಾನು ಪಹಣಿ ದಾಖಲೆ ಹೊಂದಿದ್ದು, ಸರ್ವೇ ನಂ.7ರಲ್ಲಿ 5.20 ಎ/ಗುಂಟೆ ಜಮೀನನ್ನು ಕೇತಿಗಾನಹಳ್ಳಿ ಗ್ರಾಮದ ಕಂವೀರಯ್ಯ, ದೇವರಾಜು, ದೊಡ್ಡಯ್ಯ, ಸಾವಿತ್ರಮ್ಮ ಕೋಮ್ ಹನುಮೇಗೌಡ, ದೇವರಾಜು ಅವರಿಂದ ಖರೀದಿ ಮಾಡಿದ್ದು, ಆ ಪೈಕಿ ಕೇವಲ 1.15 ಎ/ಗುಂಟೆ ಜಮೀನಿನಲ್ಲಿ ಮಾತ್ರ ಅನುಭವದಲ್ಲಿರುತ್ತೇನೆ. ಉಳಿದ ಜಮೀನನ್ನು ತಾವುಗಳು ಹುಡುಕಿಕೊಡಬೇಕು” ಎಂದು ವಿನಂತಿ ಮಾಡಿದ್ದಾರೆ.
ಭೂಮಿ ತೆರವು ಕಾರ್ಯಾಚರಣೆಗೆ ಸಿದ್ಧತೆ
ರಾಮನಗರ ಜಿಲ್ಲೆಯ ಬಿಡದಿ ಪಟ್ಟಣದ ಕೇತಗಾನಹಳ್ಳಿ ಗ್ರಾಮದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಸಂಬಂಧಿಕರು ಸೇರಿದಂತೆ ಇತರರು ಒತ್ತುವರಿ ಮಾಡಿರುವ 15 ಎಕರೆ ಸರ್ಕಾರಿ ಭೂಮಿ ತೆರವು ಕಾರ್ಯಾಚರಣೆಗೆ ಕಂದಾಯ ಇಲಾಖೆ ಮುಂದಾಗಿದೆ.
ಒತ್ತುವರಿ ತೆರವು ಮಾಡುವಂತೆ ಹೈಕೋರ್ಟ್ ಸೂಚನೆ ಅನ್ವಯ ಮಂಗಳವಾರ ಒತ್ತುವರಿ ತೆರವು ಕಾರ್ಯಾಚರಣೆಗೆ ಕಂದಾಯ ಇಲಾಖೆ ಇಳಿದಿದೆ. ಹೆಚ್.ಡಿ.ಕುಮಾರಸ್ವಾಮಿ ತೋಟದ ಮನೆಯ ಸುತ್ತಮುತ್ತಲಿನ ಒತ್ತುವರಿ ಜಾಗ ತೆರವಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೆಚ್‌ಡಿಕೆ ತೋಟದ ಮನೆ ಮುಂದೆ ಐದು ಜೆಸಿಬಿ ವಾಹನಗಳು, ಎರಡು ಟ್ರ್ಯಾಕ್ಟರ್‌ಗಳು ಸ್ಥಳದಲ್ಲಿ ಬೀಡು ಬಿಟ್ಟಿವೆ. ಶೀಘ್ರದಲ್ಲೇ ತೆರವು ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇದೆ.
ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಕೋರ್ಟ್ ಆದೇಶ ಹಾಗೂ ಒತ್ತುವರಿ ಸರ್ವೆ ವರದಿಯೊಂದಿಗೆ ಕುಮಾರಸ್ವಾಮಿ ಅವರ ತೋಟದ ಮನೆ ಜಾಗಕ್ಕೆ ಬೆಳಿಗ್ಗೆ 11.45ರ ಸುಮಾರಿಗೆ ಬಂದಿದ್ದಾರೆ. ಉಪ ವಿಭಾಗಾಧಿಕಾರಿ ಬಿನೋಯ್ ಪಿ.ಕೆ, ತಹಶೀಲ್ದಾರ್ ತೇಜಸ್ವಿನಿ, ಸರ್ವೆ ಅಧಿಕಾರಿ ಹನುಮೇಗೌಡ, ಪೊಲೀಸರು ಸೇರಿದಂತೆ ಇತರ ಅಧಿಕಾರಿಗಳು ಜೊತೆಗಿದ್ದಾರೆ.
ಪ್ರಭಾವಿ ರಾಜಕಾರಣಿಯೊಬ್ಬರ, ಅದರಲ್ಲೂ ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕೆಲವು ಕಾರ್ಯಾಚರಣೆಗೆ ರಾಜ್ಯ ಸರ್ಕಾರ ಮುಂದಾಗಿರುವ ಅಪರೂಪದ ಪ್ರಕರಣವಾಗಿದೆ.