ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ಜಮೀನು ಹಕ್ಕಿಗಾಗಿ ನಡೆದ ಜಗಳದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
4 ಎಕರೆ 19 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳಿಂದ ತಂಟೆ-ತಕರಾರು ನಡೆಯುತ್ತಿದ್ದು, 2025ರ ಫೆಬ್ರುವರಿ 20ರಂದು ಮತ್ತೆ ಗಲಾಟೆ ಉಲ್ಬಣಗೊಂಡಿದೆ. ಈ ವೇಳೆ, ಮಹಿಳೆ ಪೊಲೀಸರಿಗೆ ಕರೆ ಮಾಡಿದರೂ, ಅವರ ಮುಂದೆಯೇ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
“15ಕ್ಕೂ ಹೆಚ್ಚು ಜನ ರೈತ ಸಂಘದವರ ಮುಂದಾಳತ್ವದಲ್ಲಿ ಬಂದು ಹಲ್ಲೆ ನಡೆಸಿದರು. ನಾನು ತಕ್ಷಣವೇ ಪೊಲೀಸರಿಗೆ ಕರೆ ಮಾಡಿದೆ. ಆದರೆ, ಅವರು ಸ್ಥಳಕ್ಕೆ ತಲುಪಿದ ಬಳಿಕವೂ ನನ್ನ ಬಟ್ಟೆ ಹರಿದು ಹಲ್ಲೆ ನಡೆಸಿದರು,” ಎಂದು ಸಂತ್ರಸ್ತೆ ಹೇಳಿದ್ದಾರೆ.
“ಅರೆಬೆತ್ತಲೆಯಾಗಿಯೇ ನಾನು ಸವದತ್ತಿ ಪೊಲೀಸ್ ಠಾಣೆಗೆ ಹೋದೆ. ಆದರೆ, ಪೊಲೀಸರು ದೂರು ದಾಖಲಿಸದೆ, ‘ಬೆತ್ತಲೆ ಮಾಡಿ ಹೊಡೆದಿದ್ದಕ್ಕೆ ಸಾಕ್ಷಿ ಕೊಡಿ’ ಎಂದು ಕೇಳಿದರು. ತೀವ್ರ ಪೆಟ್ಟಿನಿಂದ, ನಾನು ಪ್ರಾಥಮಿಕ ಚಿಕಿತ್ಸೆಗೆ ಸವದತ್ತಿ ತಾಲ್ಲೂಕು ಆಸ್ಪತ್ರೆಗೆ ತೆರಳಿ, ನಂತರ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೆ,” ಎಂದು ಅವರು ದೂರಿದ್ದಾರೆ.
ಈ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ 2024ರ ಜೂನ್ 18 ಮತ್ತು 2025ರ ಜನವರಿ 1ರಂದು ಮಹಿಳೆ ಹಲ್ಲೆ ಕುರಿತು ದೂರು ನೀಡಿದ್ದರು. ಜೂನ್ 15ರಂದು ಬಿತ್ತನೆ ವೇಳೆ ಹಾಗೂ ಡಿಸೆಂಬರ್ 19ರಂದು ಕಳೆ ತೆಗೆಯುವ ಸಂದರ್ಭ ಸಹ ಹಲ್ಲೆ ನಡೆದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, “4 ಎಕರೆ 19 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ತಕರಾರು ನಡೆಯುತ್ತಿದೆ. ಮಹಿಳೆಯ ಮೇಲೆ ಹಲ್ಲೆ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಲಾಗುವುದು,” ಎಂದು ತಿಳಿಸಿದ್ದಾರೆ.