ಇತ್ತೀಚೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದಿರುವ ಆಸ್ಟ್ರೇಲಿಯಾ ತಂಡ ಸದ್ಯ ಇಂಗ್ಲೆಂಡ್ ವಿರುದ್ಧ ಆ್ಯಷಸ್ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ಈ ಪ್ರತಿಷ್ಠಿತ ಸರಣಿ ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಆಸಿಸ್ ಪಡೆ ಜಯ ಗಳಿಸಿದೆ. ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ನೇಥನ್ ಲಿಯಾನ್ ಅವರ ಅದ್ಭುತ ಜೊತೆಯಾಟ ತಂಡಕ್ಕೆ ನೆರವಾಗಿದೆ. ಪ್ಯಾಟ್ ಕಮಿನ್ಸ್ ಅವರ ಅಬ್ಬರದ ಆಟಕ್ಕೆ ವೀರೇಂದ್ರ ಸೆಹ್ವಾಗ್, ಎಬಿ ಡಿವಿಲಿಯರ್ಸ್ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಳೆಯ ಕಾರಣಕ್ಕೆ ಮೊದಲ ಪಂದ್ಯದ ಅಂತಿಮ ದಿನದಾಟ ತಡವಾಗಿ ಪ್ರಾರಂಭವಾಗಿತ್ತು. ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ 61 ರನ್‌ಗಳನ್ನು ಗಳಿಸುವ ಮೂಲಕ ಗೆಲುವಿನ ನಿರೀಕ್ಷೆಯನ್ನು ಜೀವಂತವಾಗಿರಿಸಿದ್ದರು. ಅದಾದ ಬಳಿಕ ಬಿಗಿ ಬೌಲಿಂಗ್ ದಾಳಿಯಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಆಂಗ್ಲ ಬೌಲರ್‌ಗಳು ಎರಡು ಅವಧಿಯಲ್ಲಿ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಮೂರನೇ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಲು ಮೂರು ವಿಕೆಟ್‌ಗಳಿಂದ 74 ರನ್ ಗಳಿಸಬೇಕಿತ್ತು. 9ನೇ ವಿಕೆಟ್‌ಗೆ ಕಣಕ್ಕಿಳಿದ ಪ್ಯಾಟ್ ಕಮಿನ್ಸ್ 44 ರನ್ ಗಳಿಸಿದರೆ, ಸ್ಪಿನ್ನರ್ ನೇಥನ್ ಲಿಯಾನ್ 77 ಎಸೆತಗಳಲ್ಲಿ 16 ರನ್ ಗಳಿಸಿದರು. ಈ ಜೋಡಿಯ 55 ರನ್‌ಗಳ ಜೊತೆಯಾಟ ಆಸ್ಟ್ರೇಲಿಯಾ ತಂಡಕ್ಕೆ ಗೆಲುವು ತಂದುಕೊಟ್ಟಿತು.
ಕಾಂಗರೂ ಪಡೆ ರೋಚಕ ಗೆಲುವು ಸಾಧಿಸುತ್ತಲೇ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿರುವ ವೀರೇಂದ್ರ ಸೆಹ್ವಾಗ್, “ಇತ್ತೀಚಿನ ದಿನಗಳಲ್ಲಿ ನಾನು ನೋಡಿದ ಅತ್ಯುತ್ತಮ ಟೆಸ್ಟ್ ಪಂದ್ಯವಿದು. ಹವಾಮಾನ ವೈಪರೀತ್ಯವನ್ನು ಪರಿಗಣಿಸಿ ಇಂಗ್ಲೆಂಡ್ ತಂಡ ಧೈರ್ಯದಿಂದಲೇ ಮೊದಲ ದಿನ ಮುಂಚೆ ಪಂದ್ಯ ಮುಕ್ತಾಯ ಎಂದು ಘೋಷಿಸಿತು. ಆದರೆ, ಎರಡೂ ಅವಧಿಯಲ್ಲೂ ಉಸ್ಮಾನ್ ಖ್ವಾಜಾ ಅಬ್ಬರದ ಆಟವಾಡಿ ಇಡೀ ಪಂದ್ಯಕ್ಕೆ ತಿರುವು ನೀಡಿದರು. ಪ್ಯಾಟ್ ಕಮಿನ್ಸ್ ಆಟವಾಡಿದ ರೀತಿ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸದಾಗಿ ʼಮಿಸ್ಟರ್ ಕೂಲ್ʼ ಹುಟ್ಟಿಕೊಂಡಿದ್ದಾರೆ ಎನ್ನಿಸಿತು. ಸಂದಿಗ್ಧ ಪರಿಸ್ಥಿತಿಯಲ್ಲಿ ಕಮಿನ್ಸ್ ಮತ್ತು ಲಿಯಾನ್ ಆಡಿದ ಜೊತೆಯಾಟ ಬಹುದಿನಗಳ ಕಾಲ ನೆನಪಿಟ್ಟುಕೊಳ್ಳುವಂಥದ್ದು” ಎಂದಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ವಾಸಿಮ್ ಜಾಫರ್, ಭಾರತೀಯ ತಂಡದ ಖ್ಯಾತ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಸೇರಿದಂತೆ ಹಲವು ಕ್ರಿಕೆಟ್ ಆಟಗಾರರು ಕಾಂಗರೂ ಪಡೆಯ ಆಟವನ್ನು ಮೆಚ್ಚಿ ಕೊಂಡಾಡಿದ್ದಾರೆ.