ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಇರುವ ಹಲವಾರು ಅಕ್ರಮ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಭೂ ಒತ್ತುವರಿ ಪ್ರಕರಣವೂ ಒಂದು. ರಾಮನಗರ ಜಿಲ್ಲೆಯ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ಮತ್ತು ಸಂಬಂಧಿಗಳ ಒಟ್ಟು 110.3 ಎಕರೆ ಭೂಮಿ ಹೊಂದಿದ್ದು, ಆ ಪೈಕಿ ಬರೋಬ್ಬರಿ 70 ಎಕರೆ ಭೂಮಿ ಸರ್ಕಾರದ್ದಾಗಿದ್ದು, ಆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ಕುಮಾರಸ್ವಾಮಿ ಮತ್ತು ಸಂಬಂಧಿಗಳ ವಿರುದ್ಧ ಭೂ ಒತ್ತುವರಿ ಪ್ರಕರಣದ ತನಿಖೆ ಮತ್ತು ಸರ್ವೇ ನಡೆಸಿರುವ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಹೈಕೋರ್ಟ್ ಆದೇಶ ಮತ್ತು ತನಿಖಾ ವರದಿಯೊಂದಿಗೆ ಕುಮಾರಸ್ವಾಮಿ ಅವರ ತೋಟದ ಮನೆ ಇರುವ ಜಾಗಕ್ಕೆ ಅಧಿಕಾರಿಗಳು ಮಂಗಳವಾರ ತೆರಳಿದ್ದಾರೆ. ತೆರವು ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿದ್ದಾರೆ.
“ಕೋರ್ಟ್ ಆದೇಶದಂತೆ ತೆರವು ಕಾರ್ಯಾಚರಣೆ ನಡೆಸಲು ಮುಂದಾಗಿದ್ದೇವೆ. ಹಲವರಿಗೆ ಸೇರಿರುವ 12 ಸರ್ವೆ ನಂಬರ್‌ಗಳ 14 ಎಕರೆಯಷ್ಟು ಜಾಗ ಒತ್ತುವರಿಯಾಗಿದೆ. ಅದನ್ನು ತೆರವುಗೊಳಿಸಲಾಗುತ್ತದೆ” ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹೇಳಿದ್ದಾರೆ.
ಏನಿದು ಪ್ರಕರಣ?
ಬಿಡದಿಯ ಕೇತಗಾನಹಳ್ಳಿಯಲ್ಲಿ ಸರ್ವೇ ನಂಬರ್ 7, 8, 9, 10, 16, 17 ಮತ್ತು 79ರಲ್ಲಿ ಸುಮಾರು 70 ಎಕರೆ ಸರ್ಕಾರಿ ಭೂಮಿಯನ್ನು ಕುಮಾರಸ್ವಾಮಿ ಮತ್ತು ಸಂಬಂಧಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸರ್ಕಾರಿ ಗೋಮಾಳವನ್ನು 1983-84ರಲ್ಲೇ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಸುಮಾರು ವರ್ಷಗಳ ಹಿಂದೆಯೇ ಮಂಡ್ಯದ ಮಾಜಿ ಸಂಸದ ಜಿ. ಮಾದೇಗೌಡರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲು 2014ರ ಆಗಸ್ಟ್ 4ರಂದೇ ಲೋಕಾಯುಕ್ತರು ಆದೇಶಿಸಿದ್ದರು.
ತನಿಖೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ವಿಸ್ತೃತ ತನಿಖಾ ವರದಿಯನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿದ್ದಾರೆ. ಆದರೆ, ಸರ್ಕಾರ ಮಾತ್ರ ಅನುಪಾಲನಾ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿಲ್ಲ. ವರದಿ ಸಲ್ಲಿಸದ ಅಧಿಕಾರಿಗಳನ್ನು ಇತ್ತೀಚೆಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಜೈಲಿಗೆ ಕಳಿಸುವುದಾಗಿ ಎಚ್ಚರಿಕೆ ನೀಡಿತ್ತು.
ಹೈಕೋರ್ಟ್ ಚಾಟಿಯ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮತ್ತು ಸರ್ಕಾರ ಒತ್ತುವರಿಯಾದ ಜಮೀನಿನ ಸರ್ವೆ ನಡೆಸಲು ಮತ್ತು ತನಿಖೆ ಮಾಡಲು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಲಾಗಿದೆ. ಎಸ್‌ಐಟಿ ತಂಡವು ಕೇತಗಾನಹಳ್ಳಿಯಲ್ಲಿರುವ ಕುಮಾರಸ್ವಾಮಿ ಅವರ ತೋಟಕ್ಕೆ ತೆರಳಿ ಪರೀಶಿಲನೆಯನ್ನೂ ನಡೆಸಿದೆ.
ಈ ನಡುವೆ, ಅದು ನನ್ನ ಸ್ವಂತ ಜಮೀನು. 1983-84ರಲ್ಲಿ ನಾನು ಸಿನಿಮಾ ಹಂಚಿಕೆದಾರನಾಗಿದ್ದಾಗ ಕೇತಗಾನಹಳ್ಳಿಯಲ್ಲಿ 45 ಎಕರೆ ಜಮೀನು ಖರೀದಿಸಿದ್ದೆ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. 1983ರಲ್ಲಿ ಅವರಿಗೆ 25 ವರ್ಷ ವಯಸ್ಸು. ಅಂದರೆ ಡಿಗ್ರಿ ಮುಗಿಸಿದ ನಂತರ, ಇವರು ಸಿನೆಮಾ ಹಂಚಿಕೆದಾರರಾಗಿದ್ದರು. ಚಿತ್ರ ಹಂಚಿಕೆಯಿಂದ ದುಡಿದ ದುಡ್ಡಿನಿಂದ ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ 45 ಎಕರೆ ಭೂಮಿ ಖರೀದಿಸಿದ್ದೇನೆ ಎಂಬುದು ಅವರ ವಾದ.
ಅಂದಹಾಗೆ, 1983ರಲ್ಲಿ, ಜನತಾ ಪಕ್ಷ ಅಧಿಕಾರದಲ್ಲಿತ್ತು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದರು. ಎಚ್.ಡಿ ದೇವೇಗೌಡರು ಸಚಿವರಾಗಿದ್ದರು. ಗಮನಾರ್ಹ ಸಂಗತಿ ಎಂದರೆ, ದೇವೇಗೌಡರು ಮಂತ್ರಿಯಾದಾಗ ಅವರ ಬಳಿ ಸ್ವಂತ ಮನೆ-ಕಾರು ಕೂಡ ಇರಲಿಲ್ಲ ಎಂದು ಅವರ ಆಪ್ತರು ಹೇಳುತ್ತಾರೆ. ಆದರೆ, ಅದೇ ಸಮಯದಲ್ಲಿ ಕುಮಾರಸ್ವಾಮಿ ಮಾತ್ರ 45 ಎಕರೆ ಭೂಮಿ ಖರೀದಿದ್ದಾಗಿ ಹೇಳಿಕೊಳ್ಳುತ್ತಾರೆ.
ಅಸಲಿಯತ್ತೇನೆಂದರೆ, ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿ ಮತ್ತು ಅವರ ಸಂಬಂಧಿಕರ ಅನುಭವದಲ್ಲಿರುವ ಜಮೀನು 45 ಎಕರೆಯಲ್ಲ, ಬರೋಬ್ಬರಿ 110.32 ಎಕರೆ ಜಮೀನು. ಈ ಜಮೀನಿನಲ್ಲಿ ಸುಮಾರು 54 ಎಕರೆಯಷ್ಟು ಸರ್ಕಾರಿ ಭೂಮಿಯಾಗಿದ್ದು, ಕುಮಾರಸ್ವಾಮಿ ಮತ್ತು ಸಂಬಂಧಿಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮಂಡ್ಯದ ಮಾಜಿ ಸಂಸದ ಜಿ ಮಾದೇಗೌಡ ಲೋಕಾಯುಕ್ತಕ್ಕೆ ನೀಡಿದ್ದ ದೂರಿನಲ್ಲಿ ವಿವರಿಸಿದ್ದರು.
ಕೇತಗಾನಹಳ್ಳಿಯ ಸರ್ವೆ ನಂ.7, 8, 9, 10, 16, 17 ಮತ್ತು 79ರಲ್ಲಿ ಮಂಜೂರಾಗಿರುವ ಗೋಮಾಳದ ಕುರಿತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಸ್ತೃತ ತನಿಖೆ ನಡೆಸಬೇಕು. ಒಂದೊಮ್ಮೆ ಆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೆ ಅದನ್ನು ವಾಪಸ್ ಪಡೆಯಲು ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಬೇಕು ಎಂದು ಲೋಕಾಯುಕ್ತರು 2014ರ ಆಗಸ್ಟ್ 4ರಂದು ಆದೇಶಿಸಿದ್ದರು.
ಲೋಕಾಯುಕ್ತರ ಆದೇಶವನ್ನು ಪ್ರಶ್ನಿಸಿ ಎಚ್.ಡಿ ಕುಮಾರಸ್ವಾಮಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ನ ವಿಭಾಗೀಯ ಪೀಠವು ಲೋಕಾಯುಕ್ತ ಆದೇಶವನ್ನು ಎತ್ತಿ ಹಿಡಿದಿತ್ತು.
ತನಿಖೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ವಿಸ್ತೃತ ತನಿಖಾ ವರದಿಯನ್ನು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿದ್ದಾರೆ. ಸರ್ಕಾರದಿಂದ ಅನುಪಾಲನಾ ವರದಿ (ಕ್ರಮ ಜರುಗಿಸುವ ವರದಿ) ಹೈಕೋರ್ಟ್‌ಗೆ ಸಲ್ಲಿಸಲಾಗಿಲ್ಲ. ಆದರೆ, 2023ರ ಫೆಬ್ರವರಿ 6ರಂದು ಅಫಿಡವಿಟ್‌ಅನ್ನು ಸಲ್ಲಿಸಿತ್ತು. ಅದರಲ್ಲಿ, ಕೇತಗಾನಹಳ್ಳಿ ಗ್ರಾಮದಲ್ಲಿ 7, 8, 9, 10, 16, 17 ಮತ್ತು 79ರ ಸರ್ವೆ ನಂಬರ್‌ಗಳಲ್ಲಿನ ಜಮೀನು ಪರಿಶೀಲಿಸಿ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರು ಕೆಲವು ವಿಚಾರಗಳು ಮತ್ತು ವಾಸ್ತವಿಕ ಅಂಶಗಳನ್ನು ದಾಖಲಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಅಫಿಡವಿಟ್‌ನಲ್ಲಿ ಸರ್ವೆ ನಂಬರ್ 79 ಹೊರತುಪಡಿಸಿ ಕೇವಲ ಆರು ಸರ್ವೆ ನಂಬರ್‌ಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. 7, 8, 9, 10, 16 ಮತ್ತು 17ರ ಸರ್ವೆ ನಂಬರ್‌ಗಳಲ್ಲಿ ಒಟ್ಟು 14 ಎಕರೆ 4 ಗುಂಟೆ ಒತ್ತುವರಿಯಾಗಿದೆ ಎಂದು ಹೇಳಿತ್ತು.
ಒತ್ತುವರಿಯಾಗಿರುವುದು 14 ಎಕರೆ ಅಲ್ಲ. 71.30 ಎಕರೆ. ಹೈಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಸರ್ಕಾರದ ನಡೆಯನ್ನು ಪ್ರಶ್ನಿಸಿ ಎಸ್.ಆರ್ ಹಿರೇಮಠ ಅವರು, ನ್ಯಾಯಾಂಗ ನಿಂದನೆ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.
ಈ ವರದಿ ಓದಿದ್ದೀರಾ?: 25ರಲ್ಲೇ 45 ಎಕರೆ ಜಮೀನು ಖರೀದಿಸಿದ್ದರಂತೆ ಕುಮಾರಸ್ವಾಮಿ, ನಿಜವೇ ಗೌಡ್ರೇ?
ಆ ಅರ್ಜಿಯಲ್ಲಿ, ʼʼಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣದಲ್ಲಿ ಕೇವಲ 14 ಎಕರೆ 4 ಗುಂಟೆ ಜಮೀನು ಒತ್ತುವರಿ ಅಂತ ತೋರಿಸಲಾಗಿದೆ. ಆದರೆ, ನಮ್ಮ ದಾಖಲೆಗಳ ಪ್ರಕಾರ 71 ಎಕರೆ 30 ಗುಂಟೆ ಒತ್ತುವರಿಯಾಗಿದೆ. ಇದರಲ್ಲಿ ಎಚ್.ಡಿ ಕುಮಾರಸ್ವಾಮಿ ಅವರದ್ದು ಸಿಂಹಪಾಲು. ಅವರ ಚಿಕ್ಕಮ್ಮ ಸಾವಿತ್ರಮ್ಮ, ಮದ್ದೂರಿನ ಮಾಜಿ ಶಾಸಕ ಡಿ.ಸಿ ತಮ್ಮಣ್ಣ, ಅವರ ಹೆಂಡತಿ ಹಾಗೂ ಮಕ್ಕಳು ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಈಗಿನ ಸಂಸದ ಡಾ. ಸಿ.ಎನ್ ಮಂಜುನಾಥ್ ಅವರು ಕೂಡ ಕೆಲವು ಗುಂಟೆ ಒತ್ತುವರಿ ಮಾಡಿಕೊಂಡಿದ್ದಾರೆ. ಇವರೆಲ್ಲರೂ ಪ್ರಭಾವಿಗಳೇ ಆಗಿದ್ದರಿಂದ ಕ್ರಮಕೈಗೊಳ್ಳಬೇಕಾದ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲದಾಗಿದೆʼʼ ಎಂದು ಆರೋಪಿಸಿದ್ದಾರೆ.
ಈ ಅರ್ಜಿಯ ವಿಚಾರಣೆ ಈಗಲೂ ನಡೆಯುತ್ತಿದೆ. ಅರ್ಜಿಯ ವಿಚಾರಣೆ ವೇಳೆ, ಅಧಿಕಾರಿಗಳನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಒತ್ತುವರಿಯಾಗಿರುವ ಭೂಮಿಯನ್ನು ಎರಡು ವಾರದಲ್ಲಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
ಹೈಕೋರ್ಟ್ ಚಾಟಿಯ ಫಲವಾಗಿ, ತನಿಖೆಗಾಗಿ ಸರ್ಕಾರವು ಎಸ್‌ಐಟಿ ರಚಿಸಿತ್ತು. ಈ ನಡುವೆ, ಎಸ್‌ಐಟಿ ತನಿಖೆ ಬಗ್ಗೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ ಅವರು ʼನೀವು ನನ್ಗೆ ನೋಟಿಸೇ ಕೊಡದೆ… ನನ್ನ ಪ್ರಾಪರ್ಟಿ, ನೀವೆಂಗ್ ಒಳಗಡೆ ಬರ್ತಿರಪ್ಪʼ ಎಂದು ಧಿಮಾಕಿನಿಂದ ಪ್ರಶ್ನಿಸಿದ್ದರು. ಮುಂದುವರೆದು, ʼಇದು ಸಿದ್ದರಾಮಯ್ಯನೋರ ಆಡಳಿತʼ ಎಂದು ವ್ಯಂಗ್ಯವಾಡಿದ್ದರು. ಅಷ್ಟೇ ಅಲ್ಲ, ʼನನ್ನ ಟಚ್ ಮಾಡಕ್ಕಾಗುತ್ತ?ʼ ಎಂದು ಧಮ್ಕಿ ಹಾಕಿದ್ದರು. ಅವರ ಧೈರ್ಯದ ಹಿಂದೆ, ಕೇಂದ್ರ ಮಂತ್ರಿಗಿರಿ, ಮೋದಿ ಸರ್ಕಾರವಿದೆ. ದೇವೇಗೌಡರ ಕೃಪಾಕಟಾಕ್ಷವಿದೆ.
ಆದಾಗ್ಯೂ, ಕುಮಾರಸ್ವಾಮಿ ಅವರ ಧಮ್ಕಿಗೆ ಹೆದರದ ಎಸ್‌ಐಟಿ ಅಧಿಕಾರಿಗಳ ತಂಡವು ಕಂದಾಯ ಇಲಾಖೆ ಮತ್ತು ಸರ್ವೇ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿಯಾಗಿ ತನಿಖೆ ಮತ್ತು ಸರ್ವೇ ನಡೆಸಿದ್ದಾರೆ. ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಇದೀಗ, ತೆರವಿಗೆ ಮುಂದಾಗಿದೆ.