ಬಟ್ಟೆ ತೊಳೆಯಲು ಹೋಗಿದ್ದ ಅಕ್ಕ-ತಂಗಿ ಸೇರಿ ಮೂವರು ಮಹಿಳೆಯರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಸೋಮವಾರ ದಾವಣಗೆರೆ ಜಿಲ್ಲೆ ಚನ್ನಗಿರಿ ಬಳಿ ಸಂಭವಿಸಿದೆ.
ದೀಪಾರಾಣಿ(30), ದಿವ್ಯಾ(26) ಮತ್ತು ಚಂದನಾ(19) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಚನ್ನಗಿರಿ ಪಟ್ಟಣಕ್ಕೆ ಹೊಂದಿಕೊಂಡಿರುವ ಲಕ್ಷ್ಮಿಸಾಗರ-ದಿಗ್ಗೇನಹಳ್ಳಿ ಗ್ರಾಮದ ಮಧ್ಯೆ ಇರುವ ಹೊಸಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿ ಆಕಸ್ಮಿಕವಾಗಿ ಸಾವು ಕಂಡಿದ್ದಾರೆ. ಮೃತಪಟ್ಟಿರುವ ದಿವ್ಯಾ ಮತ್ತು ಚಂದನಾ ಸಹೋದರಿಯರಾಗಿದ್ದು, ದೀಪಾರಾಣಿ ಪಕ್ಕದ ಮನೆಯವರು.
ಮಧ್ಯಾಹ್ನದ ವೇಳೆಯಲ್ಲಿ ದೀಪಾರಾಣಿ, ದಿವ್ಯಾ ಮತ್ತು ಚಂದನಾ ಬಟ್ಟೆ ತೊಳೆಯಲೆಂದು ಕೆರೆಗೆ ತೆರಳಿದ್ದಾರೆ. ಆಕಸ್ಮಿಕವಾಗಿ ಕೆರೆಗೆ ಇಳಿದಿರುವ ಚಂದನಾ ಕೆಸರಿನಲ್ಲಿ ಸಿಲುಕಿದ್ದಾಳೆ ಎನ್ನಲಾಗಿದ್ದು, ಚಂದನಾಳನ್ನು ಕಾಪಾಡಲು ನೀರಿಗೆ ಇಳಿದ ಅಕ್ಕ ದಿವ್ಯಾ ಪ್ರಯತ್ನಿಸಿ, ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಇವರಿಬ್ಬರನ್ನು ರಕ್ಷಿಸಲು ಮುಂದಾದ ದೀಪಾರಾಣಿ ಸಹ ಕೆರೆಯಲ್ಲಿ ಬಿದ್ದು ಸಾವಿಗೀಡಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಂವಿಧಾನದ ಅಡಿಯಲ್ಲಿ ಸಮುದಾಯಗಳ ಸಂಘಟನೆಗಾಗಿ ಅಹಿಂದ ಚಳವಳಿ ಸಂಘಟನೆ
ದೀಪಾರಾಣಿ ಮತ್ತು ದಿವ್ಯಾ ಅವರಿಗೆ ವಿವಾಹವಾಗಿದ್ದು, ದೀಪಾರಾಣಿಗೆ ಮೂವರು ಮಕ್ಕಳಿದ್ದಾರೆ. ದಿವ್ಯಾಗೆ ಒಂದು ವರ್ಷದ ಮಗುವಿದೆ. ಮೃತರ ಕುಟುಂಬದವರ ಮತ್ತು ತಾಯಿಯರನ್ನು ಕಳೆದುಕೊಂಡ ಮಕ್ಕಳ ರೋಧನ ಮನಕಲಕುವಂತಿದೆ.
ಚನ್ನಗಿರಿ ಅಗ್ನಿಶಾಮಕ ದಳದ ಕುಮಾರ್ ಮತ್ತು ಸಿಬಂದಿ ಸ್ಥಳಕ್ಕೆ ಧಾವಿಸಿ ಮೂವರ ಶವಗಳನ್ನು ಮೇಲೆಕ್ಕೆತ್ತಿ, ಶವಗಳನ್ನು ಚನ್ನಗಿರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಕಳುಹಿಸಿಕೊಡಲಾಗಿದೆ. ತಹಶೀಲ್ದಾರ್ ಎನ್.ಜೆ. ನಾಗರಾಜ್, ವೃತ್ತ ನಿರೀಕ್ಷಕ ಕೆ. ರವೀಶ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.