ನಾಗ್ಪುರ ಹಿಂಸಾಚಾರದ ಬಳಿಕ ನಗರದ ಹಲವೆಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದಲ್ಲಿರುವ ಮೊಘಲ್ ದೊರೆ ಔರಂಗಜೇಬ್ ಗುಮ್ಮಟವನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಸಂಘ ಪರಿವಾರದ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದೆ.
ಈ ಪ್ರತಿಭಟನೆ ವೇಳೆ ಅನ್ಯಧರ್ಮದ ಪವಿತ್ರ ಗ್ರಂಥವನ್ನು ಸುಟ್ಟು ಹಾಕಲಾಗಿದೆ ಎಂಬ ವದಂತಿಯಿಂದಾಗಿ ಹಿಂಸಾಚಾರ ಸಂಭವಿಸಿದೆ. ಹಲವು ಮನೆಗಳನ್ನು, ವಾಹನಗಳನ್ನು ಈ ಹಿಂಸಾಚಾರದ ವೇಳೆ ಧ್ವಂಸಗೊಳಿಸಲಾಗಿದೆ.
ಇದನ್ನು ಓದಿದ್ದೀರಾ? ಔರಂಗಜೇಬ್ ಸಮಾಧಿ ವಿವಾದ: ನಾಗ್ಪುರದಲ್ಲಿ ಹಿಂಸಾಚಾರ; ಹಲವರ ಬಂಧನ
ಈ ವಿಚಾರದಲ್ಲಿ ಸದ್ಯ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇವೆಲ್ಲವುದರ ನಡುವೆ ಇದೀಗ ನಗರದಲ್ಲಿ ಪರಿಸ್ಥಿತಿ ಹತೋಟಿಗೆ ಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈವರೆಗೆ 50 ಮಂದಿಯನ್ನು ಬಂಧಿಸಲಾಗಿದೆ, ಹಾಗೆಯೇ ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಐದು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ರವಿಂದರ್ ಸಿಂಘಲ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಹಿಂಸಾಚಾರದಲ್ಲಿ ಸುಮಾರು 34 ಪೊಲೀಸ್ ಅಧಿಕಾರಿಗಳು ಮತ್ತು ಇತರ ಐವರಿಗೆ ಗಾಯವಾಗಿದೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ್ ಭಾವನ್‌ಕುಲೆ ಮಂಗಳವಾರ ಹೇಳಿದ್ದಾರೆ. ಇನ್ನು ಇಬ್ಬರು ಪೊಲೀಸರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಈ ಹಿಂಸಾಚಾರದ ವಿಚಾರದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಮತ್ತು ಶಿವಸೇನೆ (ಯುಬಿಟಿ) ಮುಖಂಡರು ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ನಾಗ್ಪುರ ಬಳಿಯ ಆಯುಧ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ: 8 ಕಾರ್ಮಿಕರು ಸಾವು
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, “ಮಹಾರಾಷ್ಟ್ರದಲ್ಲಿ ಯಾರದೇ ಗುಮ್ಮಟ ಅಥವಾ ಗೋರಿಯನ್ನು ಹೊಡೆದುಹಾಕುವುದು ಸರಿಯಲ್ಲ. ಇದು ಸಹೋದರತ್ವ, ಶಾಂತಿ, ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತದೆ” ಎಂದು ಹೇಳಿದ್ದಾರೆ.
महाराष्ट्र में किसी की भी कब्र व मज़ार आदि को क्षति पहुँचाना व तोड़ना ठीक नहीं, क्योंकि इससे वहां आपसी भाईचारा, शान्ति व सौहार्द आदि बिगड़ रहा है। सरकार ऐसे मामलों में खासकर नागपुर के अराजक तत्वों के विरुद्ध सख्त कार्रवाई करे वरना हालात काफी बिगड़ सकते हैं, जो ठीक नहीं।
— Mayawati (@Mayawati) March 18, 2025
“ಸರ್ಕಾರ ಈ ನಿಟ್ಟಿನಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ಇಲ್ಲವಾದರೆ ಪರಿಸ್ಥಿತಿ ಇನ್ನಷ್ಟೂ ಬಿಗಡಾಯಿಸುತ್ತದೆ. ಅದು ಸರಿಯಲ್ಲ” ಎಂದು ಹೇಳಿದ್ದಾರೆ.
ಇನ್ನು ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕ ಚತುರ್ವೇದಿ ಅವರು, “ಹಿಂಸಾಚಾರಕ್ಕೆ ಉತ್ತೇಜನ ನೀಡಿ ರಾಜ್ಯದಲ್ಲಿ ಅಸ್ಥಿರತೆ ಸೃಷ್ಟಿಸಿ, ಜನರೆಲ್ಲಾ ಆ ಸುದ್ದಿಯಲ್ಲೇ ಮಗ್ನರಾಗುವಂತೆ ಮಾಡಿ, ಇತರೆ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಹರಿಯುವಂತೆ ಮಾಡಲಾಗುತ್ತದೆ. ರಾಜ್ಯದ ಹಣಕಾಸಿ ಬಿಕ್ಕಟ್ಟು, ಸಾಲದ ಹೊರೆ, ನಿರುದ್ಯೋಗ ಹೆಚ್ಚಳ ಮತ್ತು ರೈತರ ಆತ್ಮಹತ್ಯೆಯ ಬಗ್ಗೆ ಜನರು ಮಾತನಾಡದಂತೆ ಮಾಡಲಾಗುತ್ತಿದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ | ಪ್ರತ್ಯೇಕ ರಾಜ್ಯಕ್ಕೆ ಪಟ್ಟು ಹಿಡಿದ ಕುಕಿ ಸಮುದಾಯ
“ಶಿಂದೆ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಎಲ್ಲಾ ಹೂಡಿಕೆಯನ್ನು ಗುಜರಾತ್ ಕಡೆಗೆ ಕೊಂಡೊಯ್ಯಲಾಗಿದೆ. ಈಗಿನ ಮುಖ್ಯಮಂತ್ರಿ ರಾಜ್ಯಕ್ಕೆ ಯಾವುದೇ ಹೂಡಿಕೆ ಲಭ್ಯವಾಗದಂತಹ ಸ್ಥಿತಿಗೆ ರಾಜ್ಯವನ್ನು ಕೊಂಡೊಯ್ಯುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಚಾರ” ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ವಿಪಕ್ಷ ನಾಯಕ ಅಂಬಾದಾಸ್ ದಾನ್ವೆ ಈ ಹಿಂಸಾಚಾರಕ್ಕೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ಕಾರಣ ಎಂದು ಆರೋಪಿಸಿದ್ದಾರೆ. “ಈ ನಾಗ್ಪುರ ಹಿಂಸಾಚಾರದ ಹಿಂದೆ ಮುಖ್ಯಮಂತ್ರಿಯವರೇ ಇದ್ದಾರೆ ಎಂದು ನಾನು ನೇರವಾಗಿ ಹೇಳುತ್ತೇನೆ” ಎಂದು ದಾನ್ವೆ ತಿಳಿಸಿದ್ದಾರೆ.
“ರಾಜ್ಯದಲ್ಲಿ ಹಿಂದೂ- ಮುಸ್ಲಿಮ್ ಗಲಭೆ ಸೃಷ್ಟಿಸಲು ಈ ಸರ್ಕಾರ ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಬಂದಿದೆ. ಇಂತಹ ಗಲಭೆಗಳು ಹಿಂದೂ, ಮುಸ್ಲಿಮರ ದೈನಂದಿನ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಇದರಿಂದಾಗಿ ರಾಜಕೀಯ ಲಾಭ ಪಡೆಯಲು ಸರ್ಕಾರ ಬಯಸಿದೆ. ಬಿಜೆಪಿ ಮತ್ತು ಅದರ ಸಂಘಪರಿವಾರಗಳು ರಾಜ್ಯದ ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ದೂರಿದ್ದಾರೆ.
