ನೇಮಕಾತಿ | ಪುತ್ರ ವ್ಯಾಮೋಹಕ್ಕೆ ವಿಧಾನ ಪರಿಷತ್‌ ‘ಕಾರ್ಯದರ್ಶಿ-2’ ಹುದ್ದೆ ದುರ್ಬಳಕೆ ಆರೋಪ

Date:

Advertisements
ವಿಧಾನಪರಿಷತ್ ಸಚಿವಾಲಯದ 'ಕಾರ್ಯದರ್ಶಿ-2' ಎಸ್ ನಿರ್ಮಲಾ‌ ಅವರು ಪುತ್ರ ವ್ಯಾಮೋಹಕ್ಕೆ ಗಣಕಕೇಂದ್ರ ವಿಭಾಗದ ಹುದ್ದೆಗಳಿಗೆ ಈವರೆಗೂ ನೇಮಕಾತಿ ಮಾಡಿಕೊಳ್ಳದ ಹಾಗೆ ನೋಡಿಕೊಂಡಿದ್ದು, ಈಗ ಮಗನಿಗೆ ಮಾತ್ರ 'ಸಿಸ್ಟಂ ಮ್ಯಾನೇಜರ್' ಹುದ್ದೆ ಲಭ್ಯವಾಗುವಂತೆ ಮಾಡಲು ತೆರೆ ಮರೆಯಲ್ಲಿ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕಾನೂನು ಸಚಿವರಿಗೆ ಪತ್ರವೊಂದು ಬಂದಿದೆ.

ಕರ್ನಾಟಕ ವಿಧಾನಪರಿಷತ್ ಸಚಿವಾಲಯದ ವಿವಾದಿತ ಹುದ್ದೆಯಲ್ಲಿರುವ ‘ಕಾರ್ಯದರ್ಶಿ-2’ ಎಸ್ ನಿರ್ಮಲಾ‌ ಅವರು ತಮ್ಮ ಮಗನ ನೌಕರಿಗಾಗಿ ಇಡೀ ಸಚಿವಾಲಯದ ನೇಮಕಾತಿ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ವಿಧಾನಪರಿಷತ್‌ ಸಚಿವಾಲಯದಲ್ಲಿ 2015ರಲ್ಲಿ ಗಣಕಕೇಂದ್ರ ವಿಭಾಗವನ್ನು ಆರಂಭಿಸಲಾಗಿದ್ದು, ಸದರಿ ವಿಭಾಗದಲ್ಲಿ ಉನ್ನತ ಹುದ್ದೆಯಾದ ಸಿಸ್ಟಂ ಮ್ಯಾನೇಜರ್ (ಜಂಟಿ ಕಾರ್ಯದರ್ಶಿ ಸಮನಾಂತರ ಹುದ್ದೆ) ಹುದ್ದೆ ತನ್ನ ಮಗನಿಗೆ ಮಾತ್ರ ಲಭ್ಯವಾಗುವಂತೆ ನೋಡಿಕೊಳ್ಳಲು ಎಸ್‌ ನಿರ್ಮಲಾ ಅವರು ತೆರೆ ಮರೆಯಲ್ಲಿ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್‌ ಕೆ ಪಾಟೀಲ್‌ ಅವರಿಗೆ ಮೈಸೂರಿನ ಮಂಜುನಾಥ್‌ ಬಡಿಗೇರ್‌ ಎಂಬುವರು ದೂರು ಸಲ್ಲಿಸಿದ್ದಾರೆ.

ಮಂಜುನಾಥ್‌ ಬಡಿಗೇರ್ ಬರೆದ ದೂರನ್ನು ಕಾನೂನು ಸಚಿವರ ಕಚೇರಿ ಮಾ.17ರಂದು ಸ್ವೀಕರಿಸಿದ್ದು, ಆ ಸ್ವೀಕೃತಿ ಪತ್ರ ಈದಿನ.ಕಾಂಗೆ ಲಭ್ಯವಾಗಿದೆ. ವಿಧಾನಪರಿಷತ್ ಸಚಿವಾಲಯದ ಕಾರ್ಯದರ್ಶಿ-2 ಎಸ್ ನಿರ್ಮಲಾ‌ ಅವರು ತಮ್ಮ ಮಗನನ್ನು ಹೇಗಾದರೂ ಮಾಡಿ ಸಚಿವಾಲಯದಲ್ಲಿ ನೌಕರಿ ಕೊಡಿಸಲು ಪಣ ತೊಟ್ಟಿದ್ದು, ವಿಧಾನಪರಿಷತ್ ಸಚಿವಾಲಯದಲ್ಲಿ ಗಣಕಕೇಂದ್ರ ವಿಭಾಗದ ಹುದ್ದೆಗಳಿಗೆ ಈವರೆಗೂ ನೇಮಕಾತಿ ಮಾಡಿಕೊಳ್ಳದ ಹಾಗೆ ನೋಡಿಕೊಂಡಿರುತ್ತಾರೆ ಎಂದು ಪತ್ರದಲ್ಲಿ ದೂರಲಾಗಿದೆ.

Advertisements

ಹೇಗೆಲ್ಲಾ ನೇಮಕಾತಿ ತಡೆ ಹಿಡಿದಿದ್ದಾರೆ?

2017ರಲ್ಲಿ ಅಧಿಸೂಚನೆ ಸಂಖ್ಯೆ:ಕವಿಪ/ಆ-1/50/ಗಹುಭ/2017, ದಿನಾಂಕ:15/02/2017 ಹೊರಡಿಸಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು, ಅದರಂತೆ ಅರ್ಜಿಗಳನ್ನು ಸ್ವೀಕರಿಸಿ ತಲಾ 300/- ರೂಪಾಯಿಗಳ ಅರ್ಜಿ ಶುಲ್ಕವನ್ನು ಸಹ ಸ್ವೀಕರಿಸಲಾಗಿತ್ತು. ಈ ಅಧಿಸೂಚನೆಯಲ್ಲಿ ಅಭ್ಯರ್ಥಿಗಳಿಗೆ “ಅನುಭವ”ವನ್ನು 3 ವರ್ಷಕ್ಕೆ ನಿಗದಿಗೊಳಿಸಲಾಗಿತ್ತು. ಆದರೆ, ಈ ಅಧಿಸೂಚನೆಯನ್ನು ಕೇವಲ 8 ದಿನಗಳಲ್ಲಿ ತಿದ್ದುಪಡಿ ಮಾಡಿ ಅನುಭವವನ್ನು ಕೇವಲ 2 ವರ್ಷ 6 ತಿಂಗಳ ಅವಧಿಗೆ ನಿಗದಿಗೊಳಿಸಿ ದಿನಾಂಕ:23/02/2017ರಂದು ಅಧಿಸೂಚಿಸಲಾಯಿತು. ಆದರೂ ಸಹ ನೇಮಕಾತಿಯನ್ನು ಪೂರ್ಣಗೊಳಿಸದೆ, ದಿನಾಂಕ:11/07/2017ರಲ್ಲಿ ಕವಿಪ/ಆ-1/46//2017 ಸಂಖ್ಯೆಯ ಅಧಿಸೂಚನೆಯನ್ನು ಹೊರಡಿಸಿ, ನಿಯಮಗಳಲ್ಲಿ ತಿದ್ದುಪಡಿ ತರಬೇಕಾಗಿದೆ ಎಂಬ ಕಾರಣವನ್ನು ಉಲ್ಲೇಖಿಸಿ ನೇರನೇಮಕಾತಿಗಾಗಿ ದಿನಾಂಕ:15/02/2017ರಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ರದ್ದುಗೊಳಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಸಭಾಪತಿ ಕಚೇರಿಯಲ್ಲಿ ಗುತ್ತಿಗೆ ನೌಕರರಾಗಿದ್ದ ಹೊರಟ್ಟಿ ಆಪ್ತ ಸಹಾಯಕರಿಗೆ ಖಾಯಂ ಹುದ್ದೆ ಭಾಗ್ಯ!

2021ರಲ್ಲಿ ಕರ್ನಾಟಕ ಸರ್ಕಾರದ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ) ಸಚಿವಾಲಯದ ಸಹಕಾರದಿಂದ ಕರ್ನಾಟಕ ವಿಧಾನಪರಿಷತ್ತಿನ ನೇರನೇಮಕಾತಿ ಮತ್ತು ಸೇವಾ ಷರತ್ತುಗಳ ನಿಯಮವನ್ನು ತಿದ್ದುಪಡಿಗೊಳಿಸಿ ಕರಡು ನಿಯಮವನ್ನು ಅಧಿಸೂಚಿಸಲಾಯಿತು. ಆದರೆ, ಆ ಕರಡು ನಿಯಮವನ್ನು ಯಾವುದೇ ಕಾರಣವನ್ನು ತಿಳಿಸದೆ ಹಿಂಪಡೆದು, KLACS/ADM-1/156/C&R/2023, Bangalore Dated 16/09/2023 ಸಂಖ್ಯೆಯ ಅಧಿಸೂಚನೆಯನ್ನು ಹೊರಡಿಸುವುದರ ಮೂಲಕ ಹೊಸ ಕರಡು ನಿಯಮವನ್ನು ಅಧಿಸೂಚಿಸಿ ಪ್ರಕಟಿಸಲಾಯಿತು.

2021ರಲ್ಲಿ ಹೊರಡಿಸಲಾಗಿದ್ದ ಕರಡು ನಿಯಮದಲ್ಲಿ 50% ಮುಂಬಡ್ತಿ ಮತ್ತು 50% ನೇರನೇಮಕಾತಿ ಎಂಬುದಾಗಿ ಇದ್ದಂತಹ ಅವಕಾಶಗಳನ್ನು ಬದಲಾಯಿಸಿ 2023ರಲ್ಲಿ 100% ನೇರನೇಮಕಾತಿಗೆ ಅವಕಾಶ ಕಲ್ಪಿಸಲಾಗಿರುತ್ತದೆ ಹಾಗೂ ಅನುಭವವನ್ನು ಕಡಿತಗೊಳಿಸಲಾಗಿದೆ.

ಮಂಜುನಾಥ್‌ ಪತ್ರ
ಮೈಸೂರಿನ ಮಂಜುನಾಥ ಬಡಿಗೇರ್‌ ಅವರು ಕಾನೂನು ಸಚಿವರಿಗೆ ಬರೆದಿರುವ ಪತ್ರದ ಪ್ರತಿ…

2018ರಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಬಂದ ಎಂ. ಸುಹಾಸ್

“ಹೊರಗುತ್ತಿಗೆ ಆಧಾರದಲ್ಲಿ ಜ್ಯೂನಿಯರ್ ಪ್ರೊಗ್ರಾಮರ್ ಹುದ್ದೆಗೆ ಎಂ. ಸುಹಾಸ್‌ನನ್ನು (ಕಾರ್ಯದರ್ಶಿ-2 ಹುದ್ದೆಯಲ್ಲಿರುವ ಎಸ್‌ ನಿರ್ಮಲಾ ಅವರ ಮಗ) 2018 ರಲ್ಲಿ ಕಾನೂನು ಬಾಹಿರವಾಗಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಜೊತೆಗೆ ಅಂದಿನ ಸಭಾಪತಿಯವರ ಆಪ್ತ ಕಾರ್ಯದರ್ಶಿಯವರ ಸಂಬಂಧಿಕರನ್ನು ಕಿಯೋನಿಕ್ಸ್ ಮೂಲಕ ಹೊರಗುತ್ತಿಗೆ ಆಧಾರದ ಮೇರೆಗೆ ನೇಮಕಾತಿ ಮಾಡಿಕೊಳ್ಳಲಾಗಿದೆ” ಎಂದು ಮಂಜುನಾಥ್‌ ಬಡಿಗೇರ ಆರೋಪಿಸಿದ್ದಾರೆ.

ಹೊರಗುತ್ತಿಗೆ ನೇಮಕಾತಿ ಹಗರಣ ಬೆಳಕಿಗೆ ಬರುತ್ತಿದ್ದಂತೆ ಆರೋಗ್ಯ ಇಲಾಖೆಯ ಮಂಜುನಾಥಸ್ವಾಮಿ ಅವರಿಂದ ತನಿಖೆ ನಡೆಸಿ, ವಿಧಾನಪರಿಷತ್ ಸಚಿವಾಲಯದ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ-2 (ಅಂದಿನ ಅಪರಕಾರ್ಯದರ್ಶಿ)ರವರನ್ನು ತಪ್ಪಿತಸ್ಥರೆಂದು ವರದಿ ನೀಡಲಾದ ಹಿನ್ನೆಲೆಯಲ್ಲಿ ಹೊರಗುತ್ತಿಗೆಯಲ್ಲಿ ನೇಮಕಗೊಂಡಿದ್ದ ಎಲ್ಲ ನೌಕರರುಗಳನ್ನು ವಜಾಗೊಳಿಸಲಾಗಿದೆ. ಇವರಲ್ಲಿ ಎಂ. ಸುಹಾಸ್‌ ಕೂಡ ಒಬ್ಬರಾಗಿದ್ದಾರೆ ಎಂಬುದು ಗಮನಾರ್ಹ.

ಆದರೂ ಎಸ್‌ ನಿರ್ಮಲಾ ಅವರು ತಮ್ಮ ಹಠ ಬಿಡದೆ ಮತ್ತೆ ತಮ್ಮ ಮಗನನ್ನು ಪ್ರಸ್ತುತ ಇ-ಆಡಳಿತ ಇಲಾಖೆಯಲ್ಲಿ ಹೊರಗುತ್ತಿಗೆ ಮೂಲಕ ಗಣಕಕೇಂದ್ರಕ್ಕೆ ನೇಮಕಾತಿ ಮಾಡಿಕೊಂಡಿದ್ದಾರೆ. ಈಗ ವಿಧಾನಪರಿಷತ್ ಸಚಿವಾಲಯದಲ್ಲಿ ವಿವಿಧ ಹುದ್ದೆಗಳನ್ನು ಕೆ.ಇ.ಎ ಮುಖಾಂತರ ನೇರನೇಮಕಾತಿ ಮಾಡಿಕೊಳ್ಳಲು 12.03.2024ರಂದು ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆಯಲ್ಲಿ ಗಣಕಕೇಂದ್ರಕ್ಕೆ ನೇರನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿರುವ ಹುದ್ದೆಗಳ ವಿವರಗಳು:

  1. ಸೀನಿಯರ್ ಪ್ರೊಗ್ರಾಮರ್ 02 ಹುದ್ದೆಗಳು
  2. ಜ್ಯೂನಿಯರ್ ಪ್ರೊಗ್ರಾಮರ್ -02 ಹುದ್ದೆಗಳು
  3. ಜ್ಯೂನಿಯರ್ ಕನ್ಸಲ್ ಆಪರೇಟರ್ -04 ಹುದ್ದೆಗಳು
  4. ಕಂಪ್ಯೂಟರ್ ಆಪರೇಟರ್ – 04 ಹುದ್ದೆಗಳು

ಮೇಲಿನ ಅಧಿಸೂಚನೆಯಲ್ಲಿ ಕಾರ್ಯದರ್ಶಿ-2 ಎಸ್‌ ನಿರ್ಮಲಾ ಅವರ ಮಗನನ್ನು ನೇಮಕಾತಿ ಮಾಡಿಕೊಳ್ಳಲೆಂದೇ ಹುದ್ದೆಗಳ ವರ್ಗೀಕರಣವನ್ನು ನಿಯಮಬಾಹಿರವಾಗಿ ನಿಗದಿಗೊಳಿಸಲಾಗಿದೆ ಎಂಬುದು ಮಂಜುನಾಥ್‌ ಬಡಿಗೇರ್‌ ಅವರ ಆರೋಪ. ನೇರನೇಮಕಾತಿಯಲ್ಲಿ ನಿಯಮಾವಳಿಗಳ ಪ್ರಕಾರ ಒಂದಕ್ಕಿಂತ ಎರಡು ಹುದ್ದೆಗಳಿದ್ದಲ್ಲಿ ಮೊದಲನೇ ಹುದ್ದೆಯನ್ನು ಪರಿಶಿಷ್ಟ ಜಾತಿಗೆ ಮೀಸಲಿಡಬೇಕು. ಆದರೆ, ಸೀನಿಯರ್ ಪ್ರೊಗ್ರಾಮ‌ರ್ ಹುದ್ದೆಗಳ ಸಂಖ್ಯೆ 02 ಇದ್ದರೂ, ಅವುಗಳಲ್ಲಿ ಒಂದು ಹುದ್ದೆಯನ್ನು ಕಲ್ಯಾಣ ಕರ್ನಾಟಕಕ್ಕೆ ಮೀಸಲಿಡಲಾಗಿದೆ. ನಿಯಮಾವಳಿಗಳ ಪ್ರಕಾರ ಕಲ್ಯಾಣ ಕರ್ನಾಟಕಕ್ಕೆ ಒಟ್ಟು ಹುದ್ದೆಗಳ ಪೈಕಿ ಶೇ.8ರಷ್ಟು ಹುದ್ದೆಗಳನ್ನು ಮೀಸಲಿಡತಕ್ಕದ್ದು. ಇದನ್ನು ಉಲ್ಲಂಘಿಸಿ ಒಟ್ಟು ಹುದ್ದೆಗಳ ಪೈಕಿ ಶೇ.50ರಷ್ಟು ಹುದ್ದೆಯನ್ನು ಕಲ್ಯಾಣ ಕರ್ನಾಟಕಕ್ಕೆ ಮೀಸಲಿಡಲಾಗಿದೆ ಎಂದು ಬಡಿಗೇರ್ ‌ದೂರಿದ್ದಾರೆ.

ನೇರನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ ನಂತರದಲ್ಲಿ ಕಾನೂನು ಬಾಹಿರವಾಗಿ ಸಭಾಪತಿಗಳ ಆಪ್ತ ಸಿಬ್ಬಂದಿ ಶಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳನ್ನು ಕಿರಿಯ ಸಹಾಯಕ ಹಾಗೂ ದಲಾಯತ್ ಹುದ್ದೆಗಳಿಗೆ ಯಾವುದೇ ಅಧಿಕೃತ ನೇಮಕಾತಿ ಪ್ರಕ್ರಿಯೆಯನ್ನು ಪಾಲಿಸದೆ ನೇರವಾಗಿ ಖಾಯಂ ಆಗಿ ನೇಮಕಾತಿ ಮಾಡಿಕೊಳ್ಳಲಾದೆ. ಈಗ ಮತ್ತೆ ಸಭಾಪತಿಯವರಿಂದ ಕಾನೂನುಬಾಹಿರ ನೇಮಕಾತಿ ಮಾಡಲು ಸಭಾಪತಿ ಅವರನ್ನು ದಾರಿತಪ್ಪಿಸಿರುವ ಕಾರ್ಯದರ್ಶಿ-2 ಎಸ್‌ ನಿರ್ಮಲಾ ಅವರು ತಮ್ಮ ಮಗನನ್ನು ಅದೇ ವಾಮಮಾರ್ಗದಲ್ಲಿ ಸೀನಿಯರ್ ಪ್ರೊಗ್ರಾಮರ್ (ಅಧೀನ ಕಾರ್ಯದರ್ಶಿ ಸಮನಾಂತರ ಹುದ್ದೆ) ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಈ ಕುರಿತು ಸೀನಿಯರ್ ಪ್ರೊಗ್ರಾಮರ್ ಹುದ್ದೆಗೆ ವಿಲೀನಗೊಳಿಸಿಕೊಳ್ಳಲು ಕಾನೂನು ಸಚಿವರಿಗೆ ಕಡತ ಸಲ್ಲಿಸಲಾಗಿದೆ ಎಂದು ಬಡಿಗೇರ್ ಪತ್ರದಲ್ಲಿ‌ ಕಾನೂನು ಸಚಿವರ ಗಮನ ಸೆಳೆದಿದ್ದಾರೆ.

ಕಾರ್ಯದರ್ಶಿ-2 ಎಸ್‌ ನಿರ್ಮಲಾ ಅವರ ಮಗನ ಜನ್ಮ ದಿನಾಂಕ 01/05/1989 ಆಗಿದ್ದು, ಸರ್ಕಾರಿ ನೌಕರಿಗೆ ವಯೋಮಿತಿ ಮೀರುತ್ತಿರುವ ಸಮಯವಾಗಿದ್ದರಿಂದ ಎಂ.ಟೆಕ್ ಮುಗಿಸಿರುವ ಎಂ ಸುಹಾಸ್‌ನನ್ನು ಇದುವರೆಗೂ ಎಲ್ಲೂ ಹೊರಗಡೆ ಕೆಲಸಕ್ಕೆ ಕಳುಹಿಸಿಲ್ಲ. ಕಾರಣ ಅವನಿಗಾಗಿ ಸಚಿವಾಲಯದಲ್ಲಿ ಸಿಸ್ಟಮ್‌ ಮ್ಯಾನೇಜರ್‌ ಹುದ್ದೆ ಕೊಡಿಸಲು ಎಲ್ಲ ರೀತಿಯಲ್ಲಿ ಕುತಂತ್ರ ನಡೆಸುತ್ತಿದ್ದಾರೆ. ಹೊರಗುತ್ತಿಗೆ ಆಧಾರದ ಮೇಲೆ ನೇರ ನೇಮಾಕಾತಿ ಮಾಡಿಕೊಳ್ಳಲು ಹಿಂದೆ ಕನಿಷ್ಠ ಎಂಟು ವರ್ಷ ಕಾರ್ಯನಿರ್ವಹಿಸಿರುವ ಅನುಭವ ಬೇಕಿತ್ತು. ಆದರೆ ತಮ್ಮ ಮಗನ ನೇಮಕಾತಿಗಾಗಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಕಳೆದ ವರ್ಷ ಬದಲಾಯಿಸಿ ಎಂ ಸುಹಾಸ್‌ ಅನುಭವಕ್ಕೆ ತಕ್ಕಂತೆ ನಿಯಮಗಳನ್ನು ಮಾಡಿಕೊಂಡಿದ್ದಾರೆ ಎಂದು ಎಸ್‌ ನಿರ್ಮಲಾ ಅವರ ಮೇಲೆ ಬಡಿಗೇರ್‌ ಅವರು ಆರೋಪ ಮಾಡಿದ್ದಾರೆ.

ಕೇವಲ 2-3 ವರ್ಷಗಳ ಕಾಲ ವಿಧಾನ ಪರಿಷತ್ತು ಸಚಿವಾಲಯದಲ್ಲಿ ಹೊರಗುತ್ತಿಗೆ ಆಧಾರದ ಸೇವೆಯನ್ನು ಸಲ್ಲಿಸಿರುವ, ಯಾವುದೇ ತಾಂತ್ರಿಕ ಕೌಶಲ್ಯವನ್ನು ಹೊಂದಿರದ ಎಂ ಸುಹಾಸ್‌ನನ್ನು ವಿಲೀನ ಮಾಡಿಕೊಳ್ಳುವ ಮೂಲಕ ನೇರ ನೇಮಕಾತಿಯನ್ನು ಮಾಡಿಕೊಳ್ಳಲು ವಿಧಾನಪರಿಷತ್ತು ಮತ್ತು ವಿಶೇಷ ಮಂಡಳಿಯ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇದರಿಂದ, ಎಲ್ಲ ರೀತಿಯ ಅರ್ಹತೆಯನ್ನು ಹೊಂದಿದ್ದು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿರುವ ನಮ್ಮ ಮಕ್ಕಳು ಹಾಗೂ ನಮ್ಮಂತೆಯೇ ಉದ್ಯೋಗಾಕಾಂಕ್ಷಿಗಳಾದ ಅನೇಕರಿಗೆ ಇದರಿಂದ ಅನ್ಯಾಯವಾಗುತ್ತಿದೆ. ಆದುದರಿಂದ ತಮ್ಮ ಘನ ಪರಾಮರ್ಶೆಗೆ ಇಂತಹ ಅನೈತಿಕ ಪ್ರಸ್ತಾವನೆಗಳು ಅನುಮೋದನೆಗಾಗಿ ಸಲ್ಲಿಕೆಯಾದಲ್ಲಿ ತಾವು ದಯಮಾಡಿ ಅನುಮೋದನೆ ನೀಡದೆ, ಅಂತಹ ಪ್ರಸ್ತಾವನೆ ಸಲ್ಲಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಕಾನೂನು ಸಚಿವರಲ್ಲಿ ಮಂಜುನಾಥ್‌ ಬಡಿಗೇರ್‌ ಕೋರಿದ್ದಾರೆ.

ತಮ್ಮ ಮೇಲಿನ ಆರೋಪ ಕುರಿತು ಅಭಿಪ್ರಾಯ ಪಡೆಯಲು ವಿಧಾನಪರಿಷತ್‌ ಸಚಿವಾಲಯದ ‘ಕಾರ್ಯದರ್ಶಿ-2’ ಎಸ್ ನಿರ್ಮಲಾ‌ ಅವರಿಗೆ ‘ಈದಿನ.ಕಾಂ‘ ಕಾಲ್‌ ಮಾಡಿ ಪ್ರಯತ್ನಿಸಿದ್ದು, ಅವರು ಕರೆಯನ್ನು ಸ್ವೀಕರಿಸಲಿಲ್ಲ.

ಕಾರ್ಯದರ್ಶಿ-2 ಹುದ್ದೆ ವಿವಾದ!

ಕರ್ನಾಟಕ ವಿಧಾನ ಪರಿಷತ್ ಅಪರ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್. ನಿರ್ಮಲಾ ಅವರಿಗಾಗಿಯೇ ಹೊಸದಾಗಿ ‘ಕಾರ್ಯದರ್ಶಿ-2’ ಹುದ್ದೆಗೆ ಸೃಜಿಸಿ, ಬಡ್ತಿ ನೀಡಲಾಗಿದೆ ಎನ್ನುವ ಆರೋಪ ಸಹ ಇದೆ. ವಿಧಾನಪರಿಷತ್‌ ಸಚಿವಾಲಯದಲ್ಲಿ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಹಾಗೂ ಸೇವಾ ಷರತ್ತುಗಳು) ನಿಯಮದ ಅನ್ವಯ ಕಾರ್ಯದರ್ಶಿ-2 ಹುದ್ದೆಗೆ ಅವಕಾಶವಿಲ್ಲ ಎಂದು ಪರಿಷತ್ ಕಾರ್ಯದರ್ಶಿ ಕೆ.ಆ‌ರ್.ಮಹಾಲಕ್ಷ್ಮಿ ಅವರು 2024 ಜುಲೈ 24ರಂದು ಆರ್ಥಿಕ ಇಲಾಖೆಗೆ ತಿಳಿಸಿದ್ದರು. ತದನಂತದರ ಬೆಳವಣಿಗೆಯಲ್ಲಿ ವಿಧಾನ ಪರಿಷತ್‌ನಲ್ಲಿ ಹೊಸದಾಗಿ ಕಾರ್ಯದರ್ಶಿ-2 ಹುದ್ದೆ ಸೃಜಿಸಿ, ಎಸ್. ನಿರ್ಮಲಾ ಅವರಿಗೆ ಆ ಸ್ಥಾನಕ್ಕೆ ಬಡ್ತಿ ನೀಡಿ 2024 ಅಕ್ಟೋಬರ್ 16ರಂದು ರಾಜ್ಯ ಸರ್ಕಾರ ಆದೇಶಿಸಿದ್ದನ್ನು ಇಲ್ಲಿ ನೆನೆಯಬಹುದು.

ಎಸ್ ನಿರ್ಮಲಾ ಅವರು ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಹೊಂದಿ ಎರಡು ವರ್ಷಗಳಾಗಿದ್ದು, ದೀರ್ಘ ಕಾಲ ಆ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವುದಿಲ್ಲ. ಅಲ್ಲದೇ, ನೌಕರರ ಜೇಷ್ಠತೆ ಮತ್ತು ಸೇವಾ ಹಿರಿತನವನ್ನು ಕಾಪಾಡಬೇಕಾಗಿದೆ. ಈ ಎಲ್ಲಾ ಕಾರಣಗಳಿಂದ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯನ್ನು ಕಾರ್ಯದರ್ಶಿ-2 ಹುದ್ದೆಗೆ ಉನ್ನತೀಕರಿಸುವುದು ಸೂಕ್ತವಲ್ಲ ಎಂದು‌ ಪರಿಷತ್ ಕಾರ್ಯದರ್ಶಿ ಕೆ.ಆ‌ರ್.ಮಹಾಲಕ್ಷ್ಮಿ ಅವರು ಆರ್ಥಿಕ ಇಲಾಖೆಗೆ ಸುದೀರ್ಘ ಟಿಪ್ಪಣಿ ಬರೆದಿದ್ದರೂ ಅದನ್ನು ತಿರಸ್ಕರಿಸಿ ಕಾರ್ಯದರ್ಶಿ-2 ಸೃಜಿಸಿರುವ ಸುತ್ತಲು ಅನುಮಾನಗಳು ಕಾಡುತ್ತಿವೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X