ರಾಯಚೂರು ಜಿಲ್ಲೆಯಲ್ಲಿರುವ ಅಂತ್ಯೋದಯ(ಎಎವೈ) ಮತ್ತು ಪಿಎಚ್‌ಎಚ್(ಬಿಪಿಎಲ್) ಪಡಿತರ ಚೀಟಿಗಳ ಅರ್ಹ ಫಲಾನುಭವಿಗಳಿಗೆ ಫೆಬ್ರವರಿ 2025ರ ಮಾಹೆಯಿಂದ ಜಾರಿಗೆ ಬರುವಂತೆ ಹಣದ ಬದಲಿಗೆ ಹೆಚ್ಚುವರಿಯಾಗಿ 05 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ತಿಳಿಸಿದ್ದಾರೆ.
“ಆಹಾರ ಭದ್ರತೆ ಕಾಯ್ದೆಯಡಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿ ಅಂತ್ಯೋದಯ ಪಡಿತರ ಚೀಟಿಗೆ 35 ಕೆಜಿ ಸಾರವರ್ಧಿತ ಅಕ್ಕಿ ಹಾಗೂ ಪಿಎಚ್‌ಎಚ್(ಬಿಪಿಎಲ್) ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 05 ಕೆಜಿ ಸಾರವರ್ಧಿತ ಅಕ್ಕಿಯ ಜತೆಗೆ ಹೆಚ್ಚುವರಿಯಾಗಿ 05 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು. ಸರ್ಕಾರದ ಮಾರ್ಗಸೂಚಿಯಂತೆ ಏಕಸದಸ್ಯ, ದ್ವಿಸದಸ್ಯ ಮತ್ತು ತ್ರಿಸದಸ್ಯ ಎಎವೈ ಪಡಿತರ ಚೀಟಿಗಳನ್ನು ಹೊರತುಪಡಿಸಿ ನಾಲ್ಕು ಮತ್ತು ನಾಲ್ಕಕಿಂತ ಹೆಚ್ಚಿನ ಸದಸ್ಯರುಳ್ಳ ಅಂತ್ಯೋದಯ(ಎಎವೈ) ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಮತ್ತು ಪಿಎಚ್‌ಹೆಚ್(ಬಿಪಿಎಲ್) ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 05 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದು. ಫೆಬ್ರವರಿ 2025ರ ಪಡಿತರ ವಿತರಣಾ ಪ್ರಕ್ರಿಯೆ ಮುಕ್ತಾಯವಾಗಿರುವುದರಿಂದ ಮಾರ್ಚ್ 2025ತಿಂಗಳ ತಲಾ 05 ಕೆಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ಪ್ರತಿ ಸದಸ್ಯರಿಗೆ ವಿತರಿಸಲಾಗುತ್ತದೆ” ಎಂದು ತಿಳಿಸಿದರು.
“ಮಾರ್ಚ್ ಮಾಹೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 01ರಿಂದ 03ಸದಸ್ಯರಿರುವ ಅಂತ್ಯೋದಯ (ಎಎವೈ) ಪಡಿತರದಾರರಿಗೆ 35ಕೆಜಿ ಅಕ್ಕಿ, 4 ಸದಸ್ಯರ ಕಾರ್ಡಿಗೆ 45ಕೆಜಿ, 05 ಸದಸ್ಯರಿರುವ ಕಾರ್ಡಿಗೆ 65 ಕೆಜಿ ಅಕ್ಕಿ, 06 ಸದಸ್ಯರಿರುವ ಕಾರ್ಡಿಗೆ 85 ಕೆಜಿ ಅಕ್ಕಿ, 07 ಸದಸ್ಯರಿರುವ ಕಾರ್ಡಿಗೆ 105 ಕೆಜಿ ಅಕ್ಕಿ, 08 ಸದಸ್ಯರಿರುವ ಕಾರ್ಡಿಗೆ 125 ಕೆಜಿ ಅಕ್ಕಿ, 09 ಸದಸ್ಯರಿರುವ ಕಾರ್ಡಿಗೆ 145 ಕೆಜಿ ಅಕ್ಕಿ, 10 ಸದಸ್ಯರಿರುವ ಕಾರ್ಡಿಗೆ 165 ಕೆಜಿ ಅಕ್ಕಿ, 11 ಸದಸ್ಯರಿರುವ ಕಾರ್ಡಿಗೆ 185 ಕೆಜಿ ಅಕ್ಕಿ, 12 ಸದಸ್ಯರಿರುವ ಕಾರ್ಡಿಗೆ 205 ಕೆಜಿ ಅಕ್ಕಿ, 13 ಸದಸ್ಯರಿರುವ ಕಾರ್ಡಿಗೆ 225 ಕೆಜಿ ಅಕ್ಕಿ, 14 ಸದಸ್ಯರಿರುವ ಕಾರ್ಡಿಗೆ 245 ಕೆಜಿ ಅಕ್ಕಿ ಮತ್ತು 15 ಸದಸ್ಯರಿರುವ ಕಾರ್ಡಿಗೆ 265 ಕೆಜಿ ಅಕ್ಕಿಯನ್ನು ವಿತರಿಸಲಾಗುವುದು” ಎಂದರು.
“ಅದೇ ರೀತಿಯಾಗಿ ಬಿಪಿಎಲ್ ಪಡಿತರ ಚೀಟಿಯಲ್ಲಿನ ಪ್ರತಿಯೊಬ್ಬ ಸದಸ್ಯರಿಗೆ 15 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡಲಾಗುತ್ತಿದ್ದು, ಅರ್ಹ ಪಡಿತರ ಚೀಟಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಒಂದು ರಾಷ್ಟ್ರ, ಒಂದು ಪಡಿತರ ಚೀಟಿ(ಅಂತರ್ ರಾಜ್ಯ/ಅಂತರ್ ಜಿಲ್ಲೆ) ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ರಾಜ್ಯದ ಪಡಿತರ ಚೀಟಿದಾರರು ಯಾವುದೇ ವರ್ಗದ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ನ್ಯಾಯಬೆಲೆ ಅಂಗಡಿಕಾರರು ಕಡಿಮೆ ಪ್ರಮಾಣದ ಪಡಿತರವನ್ನು ವಿತರಣೆ ಮಾಡಿದ್ದಲ್ಲಿ, ಹಣ ಕೇಳಿದಲ್ಲಿ ಮತ್ತು ಇತರೆ ದೂರುಗಳಿಗೆ ಶುಲ್ಕ ರಹಿತ ದೂರವಾಣಿ ಸಂಖ್ಯೆ 1967ಕ್ಕೆ ಹಾಗೂ ತಾಲೂಕಿನಲ್ಲಿರುವ ತಹಶೀಲ್ದಾರರ ಕಚೇರಿಗೆ ಅಥವಾ ಜಿಲ್ಲೆಯ ಉಪನಿದೇರ್ಶಕರ ಕಚೇರಿಗೆ ದೂರು ಸಲ್ಲಿಸಬಹುದಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ತೊಗರಿ ಬೆಳೆ ಹಾನಿ, ಆರ್ಥಿಕ ಹೊರೆ; ಒಂದೇ ತಿಂಗಳಲ್ಲಿ ಆರು ಮಂದಿ ರೈತರ ಆತ್ಮಹತ್ಯೆ
“ಈ ಯೋಜನೆಯಡಿ ವಿತರಿಸಲಾದ ಆಹಾರ ಧಾನ್ಯಗಳನ್ನು ಹಣಕ್ಕಾಗಿ ಪಡಿತರ ಚೀಟಿದಾರರು ಮಾರಾಟ ಮಾಡುವುದಾಗಲಿ ಅಥವಾ ಸಂಗ್ರಹಣೆ ಮಾಡುವುದು ಕಂಡುಬಂದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ವಿತರಿಸಲಾದ ಆಹಾರ ಧಾನ್ಯಗಳಿಗೆ ಮುಕ್ತ ಮಾರುಕಟ್ಟೆ ದರಕ್ಕೆ ದಂಡ ವಿಧಿಸಲಾಗುವುದು ಮತ್ತು ಈ ಪಡಿತರ ಚೀಟಿಯನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಲಾವುದು” ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
