ಕಲಬುರಗಿಯಿಂದ ಪ್ರತಿ ತಿಂಗಳಿಗೆ ಅಂದಾಜು ಎರಡು ಲಕ್ಷ ಮಂದಿ ಬೆಂಗಳೂರಿಗೆ ಪ್ರವಾಸ ಮಾಡುತ್ತಾರೆ. ಆದರೆ, ಮುಂಬೈ ವಲಯ ಕಚೇರಿ ಮತ್ತು ಸೊಲ್ಲಾಪೂರ ವಿಭಾಗೀಯ ಕಚೇರಿಗಳು ಕಲಬುರಗಿಯಿಂದ ಹೊಸದಾಗಿ ರೈಲು ಪ್ರಾರಂಭಿಸುವ ಬಗ್ಗೆ ಕಿಂಚಿತ್ತೂ ಗಮನ ಕೊಡದೆ ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಆರೋಪಿಸಿದೆ.
ಶೀಘ್ರದಲ್ಲೇ ಕಲಬುರಗಿಯಿಂದ ಬೆಂಗಳೂರಿಗೆ ಮತ್ತು ಬೀದರ ಮಾರ್ಗವಾಗಿ ಕಲಬುರಗಿ ಮೂಲಕ ಯಾದಗಿರಿ, ರಾಯಚೂರು ಮುಖಾಂತರ ಬೆಂಗಳೂರಿಗೆ ಹೊಸ ರೈಲುಗಳು ಕಾಲಮಿತಿಯಲ್ಲಿ ಮಾಡದಿದ್ದರೆ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಕಲಬುರಗಿ ರೈಲ್ವೆ ನಿಲ್ದಾಣದ ಎದುರು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮುಂಬೈ ವಲಯದ ನರಲ್ ಮ್ಯಾನೇಜರ್‌ಗೆ ಕಲಬುರಗಿಯ ಸ್ಟೇಷನ್ ಮಾಸ್ಟರ್ ಮುಖಾಂತರ ಹಕ್ಕೊತ್ತಾಯ ಪತ್ರವನ್ನು ಕ್ಯಲ್ಯಾಣ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಸಲ್ಲಿಸಲಾಗಿದೆ.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ನೇತೃತ್ವದಲ್ಲಿ ಸಮಿತಿಯ ನಿಯೋಗ, ಕಲಬುರಗಿ ರೈಲ್ವೆ ಸ್ಟೇಷನ್ ಮಾಸ್ಟರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಮುಂಬೈ ಸ್ಟೇಷನ್ ಮಾಸ್ಟರ್ ಜನರಲ್ ಮ್ಯಾನೇಜರ್ ಅವರಿಗೆ ಪತ್ರವನ್ನು ನೀಡಿ ಕಾಲಮಿತಿಯಲ್ಲಿ ಕಲಬುರಗಿ-ಬೆಂಗಳೂರು ಹೊಸ ರೈಲು ಆರಂಭಿಸಲು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಾರ್ವಜನಿಕ ಈಜುಕೊಳದಲ್ಲಿ ಅಕ್ರಮ; ಸೂಕ್ತ ಕ್ರಮಕ್ಕೆ ಆಗ್ರಹ
ಸಿಕಿಂದ್ರಾಬಾದ್ ವಲಯಕ್ಕೆ ಪತ್ರ ಬರೆದು, ಬೀದರ್ ಕಲಬುರಗಿ, ಯಾದಗೀರಿ, ರಾಯಚೂರು ಮಾರ್ಗವಾಗಿ ಹೊಸ ರೈಲು ಆರಂಭಿಸಲು ಒತ್ತಾಯಿಸಿದರು. ಒಟ್ಟಾರೆ, ಬೀದರ್‌ನಿಂದ ಮತ್ತು ಕಲಬುರಗಿಯಿಂದ ಎರಡು ಹೊಸ ರೈಲುಗಳು ಬೆಂಗಳೂರಿಗೆ ತುರ್ತಾಗಿ ಪ್ರಾರಂಭಿಸಿ, ಈ ಭಾಗದ ಜನರ ಬೇಡಿಕೆಗೆ ಗಂಭೀರವಾಗಿ ಸ್ಪಂಧಿಸಿ, ರೈಲ್ವೆ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಸಮಿತಿಯ ಮುಖಂಡರಾದ ಮಾಜಿದ್ ದಾಗಿ, ಕಲ್ಯಾಣರಾವ ಪಾಟೀಲ, ಅಸ್ಲಂ ಚೌಂಗೆ, ಶಿವಾನಂದ ಕಾಂದೆ, ಸಂಧ್ಯಾರಾಜ ಸ್ಯಾಮ್ಯೂವೆಲ್, ಸಾಜೀದ ಅಲಿ ರಂಜೋಲಿ, ಸಂತೋಷ ಜವಳಿ, ಮಹ್ಮದ ಗೌಸ್, ಶರಣಬಸಪ್ಪ ಕುರಿಕೋಟಾ, ರಾಜು ಜೈನ್, ಶಿವಾನಂದ ಬಿ, ಬಾಬಾ ಫಕ್ರುದ್ದೀನ್ ಹಾಗೂ ಇತರರು ಇದ್ದರು.