ಏಪ್ರಿಲ್ ಒಂದರ ವಿಶೇಷತೆ ಯಾರಿಗೆ ಗೊತ್ತಿಲ್ಲ, ಮೂರ್ಖರ ದಿನ ಎಂದೇ ಆಚರಿಸಲಾಗುತ್ತದೆ ಅದರೆ ಹಿಂದಿನ ಉದ್ದೇಶ ಬೇರೆಯೇ ಇದೆ ಆದರೆ ಇದೇ ಮುಂಬರುವ ಏಪ್ರಿಲ್ ಒಂದು ಉಡುಪಿ ಜಿಲ್ಲೆಯಲ್ಲಿ ಮೂರ್ಖರ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲು ಇಲ್ಲಿನ ನಾಗರೀಕರು ಮುಂದಾಗಿದ್ದಾರೆ.
ಹೌದು, ಅದಕ್ಕೆ ಕಾರಣ ಕೂಡ ಇದೆ, ರಾಷ್ಟ್ರೀಯ ಹೆದ್ದಾರಿ 169ಎ, ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಸೇತುವೆ ಕಾಮಗಾರಿ ದಿನದಿಂದ ದಿನಕ್ಕೆ ಮಂದಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಹಲವು ವರ್ಷಗಳಿಂದ ರಸ್ತೆ ಹಾಳಾಗಿ ಜನ ಕಷ್ಟವನ್ನು ಅನುಭವಿಸುತ್ತಿದ್ದರೂ ಅಧಿಕಾರಿಗಳು ಜನಪ್ರತಿನಿಧಿಗಳು ಕ್ಯಾರೇ ಎನ್ನುತ್ತಿಲ್ಲ.

ಇಂದ್ರಾಳಿ ರೈಲ್ವೆ ಮೇಲ್ಸ್ತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಜನವರಿ 10ರಿಂದ ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಎಂಜಿನಿಯರ್ಗಳಿಗೆ ಹಾಗೂ ಗುತ್ತಿಗೆದಾರರಿಗೆ ಜಿಲ್ಲಾಡಳಿತ ಈ ಹಿಂದೆಯೇ ಸೂಚನೆ ನೀಡಿತ್ತು ಆದರೆ ಇಲ್ಲಿಯವರೆಗೆ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ, ಸಂಸದರು ಸ್ಥಳಕ್ಕೆ ಭೇಟಿ ನೀಡಿ ಮನಬಂದಂತೆ ಕಾಮಗಾರಿಯ ಕೊನೆ ದಿನ ನಿಗದಿ ಪಡಿಸಿ ಹೋಗುತ್ತಾರೆ ಇದು ಸಹ ಅವರಿಗೆ ರೂಡಿ ಆಗಿ ಹೋಗುದೆ ಇಲ್ಲಿನ ಸಾರ್ವಜನಿಕರು ಮಾತ್ರ ಮುರ್ಖರಾಗುತ್ತಿದ್ದಾರೆ ಎಂದು ಪ್ರತಿಭಟನಾಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿ ಸೇತುವೆ ಲೋಕಾರ್ಪಣೆಗೊಳಿಸುವಂತೆ ಸರಕಾರವನ್ನು ಆಗ್ರಹಿಸಿ ಎಪ್ರಿಲ್ 1 ರಂದು ಇಂದ್ರಾಳಿಯ ನಿರ್ಮಾಣ ಹಂತದಲ್ಲಿರುವ ಸೇತುವೆ ಬಳಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಸಂಘಟಕರು ಹೇಳಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಅಮೃತ್ ಶೆಣೈ ಇಂದ್ರಾಳಿ ರೈಲ್ವೆ ಮೇಲ್ಸ್ತುವೆ ಪೂರ್ಣಗೊಳ್ಳದೇ ಇಲ್ಲಿ ನಿತ್ಯವೂ ಅಪಘಾತಗಳು, ಗಂಭೀರ ಗಾಯ, ಜೀವಹಾನಿ ಆಗಿವೆ. ಕಳೆದ 9 ವರ್ಷದಿಂದ ಸರ್ಕಾರ, ಸಂಸದರು, ಗುತ್ತಿಗೆದಾರರು, ಅಧಿಕಾರಿಗಳು ಈ ಸೇತುವೆಯ ಕಾಮಗಾರಿಯನ್ನು ಪೂರ್ಣಗೊಳಿಸದೇ ಪದೇ ಪದೇ ಗಡುವು ನೀಡಿ, ಸುಳ್ಳು ಹೇಳಿ ಉಡುಪಿಯ ಜನತೆಯನ್ನು ಮೂರ್ಖರನ್ನಾಗಿ ಮಾಡಿದ್ದಾರೆ. ಆದ್ದರಿಂದ ಏ.1ರಂದು ಮೂರ್ಖರ ದಿನದಂತೆ ಈ ವಿಶಿಷ್ಟಮಯ ಪ್ರತಿಭಟನೆಯನ್ನು ನಡೆಸಲಾಗುತ್ತದೆ. ಕಾಮಗಾರಿ ಪೂರ್ಣಗೊಂಡು ಜನವಾಹನ ಸಂಚಾರ ಸುಗಮವಾಗುವ ವರೆಗೂ ಈ ಹೋರಾಟ ನಡೆಯಲಿದೆ ಎಂದು ಹೇಳಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ಹೋರಾಟ ಸಮಿತಿಯ ಅಧ್ಯಕ್ಷ ಕೀರ್ತಿ ಶೆಟ್ಟಿ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ನಗರದ ಕಲ್ಸಂಕ ವೃತ್ತದಿಂದ ಇಂದ್ರಾಳಿ ರೈಲ್ವೆ ಸೇತುವೆ ವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗುತ್ತದೆ. ಅದರಲ್ಲಿ ಸುಮಾರು 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು ಮೆರವಣಿಗೆಯಲ್ಲಿ ಉದ್ದೇ್ಶಿತ ರೈಲ್ವೆ ಮೇಲ್ಲೇತುವೆಯ ಬೃಹತ್ ಪ್ರತಿಕೃತಿಯ ಸ್ತಬ್ಧಚಿತ್ರ ವಿಶೇಷವಾಗಿರುತ್ತದೆ. ಜೊತೆಗೆ ಈ ಯೋಜನೆಯನ್ನು ಪೂರ್ಣಗೊಳಿಸಲು ಹಣದ ಕೊರತೆಯನ್ನು ನೀಗಿಸಲು ಪ್ರತಿಭಟನಾಕಾರರು ಸಾರ್ವಜನಿಕರಿಂದ ಭಿಕ್ಷೆ ಬೇಡಿ, ಶೂ ಪಾಲಿಶ್ ಮಾಡಿ ಸಂಗ್ರಹವಾದ ಹಣವನ್ನು ಜಿಲ್ಲಾಡಳಿತಕ್ಕೆ ನೀಡಲಾಗುತ್ತದೆ ಎಂದರು.
ಒಟ್ಟಿನಲ್ಲಿ ನಿರಂತರ ಪ್ರತಿಭಟನೆ, ಮನವಿ ನೀಡಿದರೂ, ರೈಲ್ವೆ ಸೇತುವೆ ಮಾತ್ರ ನಿಧಾನಗತಿಯಲ್ಲೇ ಸಾಗುತ್ತಿದೆ, ಈ ಪ್ರತಿಭಟನೆಯಿಂದಾದರೂ ಜನಪ್ರತಿನಿಧಿಗಳು ಎಚ್ಚೆತ್ತು ಕಾಮಗಾರಿ ಪೂರ್ತೀಕರಿಸಿ ಸಾರ್ವಜನಿಕರಿಗೆ ನೆರವಾಗುತ್ತಾರಾ ಎಂದು ಕಾದುನೋಡಬೇಕಿದೆ.

