ಚಿನ್ನಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ವಿರುದ್ಧ ಅತ್ಯಂತ ಅಶ್ಲೀಲ ಮತ್ತು ಅಸಹ್ಯಕರವಾಗಿ ನಾಲಿಗೆ ಹರಿಬಿಟ್ಟಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಅಕುಲ ಅನುರಾಧ ಎಂಬವರು ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಯತ್ನಾಳ್ ವಿರುದ್ಧ ಬಿಎಸ್‌ಎನ್ ಸೆಕ್ಷನ್ 79ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸುಮಾರು 15 ಕೋಟಿ ರೂ. ಮೌಲ್ಯದ ಚಿನ್ನವನ್ನು ದುಬೈನಿಂದ ಬೆಂಗಳೂರಿಗೆ ನಟಿ ರನ್ಯಾ ರಾವ್ ಕಳ್ಳಸಾಗಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರನ್ನು ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಅವರು ವಿರುದ್ಧ ತನಿಖೆ ನಡೆಯುತ್ತಿದೆ.
ಈ ನಡುವೆ, ರನ್ಯಾ ರಾವ್ ಬಂಧನದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ಯತ್ನಾಳ್, “ಆಕೆ ದೇಹದಾದ್ಯಂತ ಚಿನ್ನವನ್ನು ತಂದಿದ್ದಳು. ರಂಧ್ರಗಳನ್ನು ಹೊಂದಿರುವಲ್ಲೆಲ್ಲಾ ಚಿನ್ನವನ್ನು ಬಚ್ಚಿಟ್ಟಿದ್ದಳು” ಎಂದು ಅಶ್ಲೀಲವಾಗಿ ಹೇಳಿಕೆ ನೀಡಿದ್ದರು.
ಯತ್ನಾಳ್ ಹೇಳಿಕೆ ಮತ್ತು ಅಶ್ಲೀಲ ಪದ ಬಳಕೆಯು ರನ್ಯಾ ರಾವ್ ಅವರ ತೇಜೋವಧೆ ಮಾಡುವಂತಿದೆ ಎಂದು ತಮ್ಮ ದೂರಿನಲ್ಲಿ ಅಕುಲ ಆರೋಪಿಸಿದ್ದಾರೆ.