ಉದ್ಯೋಗ ಖಾತ್ರಿ ಕೆಲಸಕ್ಕೆ ತೆರಳಿದ ವೇಳೆ ಕಾರ್ಮಿಕ ಮೃತಪಟ್ಟಿದ್ದು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಅಲ್ಲಿನ ಸಂಬಂಧಪಟ್ಟವರು ಇದನ್ನು ಮುಚ್ಚಿಡುವ ಪ್ರಯತ್ನ ನಡೆಸಲಾಗಿದೆಯೇ ಎನ್ನುವ ಅನುಮಾನ ಬಂದಿದೆ. ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು, ನಗರಂಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ.
ನಗರಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ತೆರಳಿದ ವೇಳೆ ದಾಸನಾಯಕನಹಟ್ಟಿಯ ಸಜ್ಜೆ ಓಬ್ಬಣ್ಣ (60) ಎನ್ನುವ ಮನರೇಗಾ ಕಾರ್ಮಿಕ ಮಂಗಳವಾರ ಮಧ್ಯಾಹ್ನ ನಾಲ್ಕು ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸ್ಥಳಿಯರು ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ಯಾರಿಗೂ ತಿಳಿಸದೆ ಶವವನ್ನು ಎತ್ತಿಕೊಂಡು ಹೋಗಿ ಬುಧವಾರ ಮುಂಜಾನೆ ಅಂತ್ಯ ಸಂಸ್ಕಾರಕ್ಕೆ ಅಣಿ ಗೊಳಿಸಲಾಗಿದೆ ಎನ್ನುವ ಮಾಹಿತಿ ಬಂದಿದೆ. ನಂತರ ಇದು ಸಾರ್ವಜನಿಕರಿಗೆ ಗೊತ್ತಾಗುವ ಆತಂಕದಿಂದ ಅಧಿಕಾರಿಗಳು ಬರುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಮೃತರ ಮಗಳಾದ ಗುರಮ್ಮ ಈ ದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿ ಕೆಲಸ ಮಾಡಿ, ಕೆಲಸದ ಜಿಪಿಎಸ್ ಫೋಟೋ ತೆಗೆಸಲು ಸಂಜೆ ಮೂರು ಗಂಟೆ ಸುಮಾರಿನಲ್ಲಿ ನೀರು ಕುಡಿದು ಅಲ್ಲೇ ಕುಸಿದು ಬಿದ್ದಿದ್ದು ಮೃತ ಹೊಂದಿದ್ದಾರೆ ಎಂದು ತಿಳಿಸಿದರು. ಕೆಲಸ ಮಾಡಿಸುವ ವ್ಯಕ್ತಿ ಮತ್ತು ಅಲ್ಲಿದ್ದವರು ಬೇಗನೆ ತೆಗೆದುಕೊಂಡು ಹೋಗಿ ಎಂದು ಹೇಳಿದ್ದರಿಂದ ನನ್ನ ಸಹೋದರ ಮತ್ತು ಸಂಬಂಧಿಕರು ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಅಧಿಕಾರಿಗಳಿಗೆ ವಿಷಯ ತಿಳಿಸಿದರು ಇನ್ನೂ ಆಗಮಿಸಿಲ್ಲ. ಈ ಬಗ್ಗೆ ಏನಾಗಿದೆ ಎನ್ನುವ ವಿಚಾರವನ್ನು ಪಡೆದುಕೊಂಡಿಲ್ಲ ಎಂದು ಅಳಲನ್ನು ತೋಡಿಕೊಂಡರು.
ಅಧಿಕಾರಿಗಳ ನಿರ್ಲಕ್ಷ್ಯ, ಅಮಾನವೀಯತೆ ಎಂದರೆ ಸ್ಥಳದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿರುವ ಸಜ್ಜೆ ಓಬ್ಬಣ್ಣನ ಶವವನ್ನು ಸಾಗಿಸಲು ಯಾವುದೇ ವಾಹನ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ತೋರಿದ್ದು, ಆತನ ಮಗ ಮತ್ತು ಸಂಬಂಧಿಯೋರ್ವರು ಬೈಕಿನ ಮಧ್ಯದಲ್ಲಿ ಕೂರಿಸಿಕೊಂಡು ಮನೆಯ ಬಳಿಗೆ ತಂದಿದ್ದಾರೆ ಎನ್ನುವ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ‘ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ’; ಕ್ರಾಂತಿಕಾರಿ ಪಾದಯಾತ್ರೆ
ಈ ಬಗ್ಗೆ ಮಾತನಾಡಿದ ಅಲ್ಲಿನ ಸ್ಥಳಿಯರು “ಕೆಲಸದ ಸ್ಥಳಕ್ಕೆ ತೆರಳಿದ ಮನರೇಗಾ ಕಾರ್ಮಿಕರ ಹಾಜರಾತಿ, ಅವರ ಆರೋಗ್ಯ ಮತ್ತಿತರ ವಿಷಯಗಳನ್ನು ಆಯಾ ಗ್ರಾಮ ಪಂಚಾಯತ್ ಅಧಿಕಾರಿಗಳು ಮಾಹಿತಿ ಪಡೆದು ನಿರ್ವಹಿಸಬೇಕು. ಮಂಗಳವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮನರೇಗಾ ಕಾರ್ಮಿಕ ಸಜ್ಜೆ ಓಬ್ಬಣ್ಣ ತೀರಿಕೊಂಡಿದ್ದರೂ, ಬುಧವಾರ ಬೆಳಗ್ಗೆ 11:30 ಸಮಯವಾದರೂ ಈವರೆಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ. ಇಂತಹವರ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮನರೇಗಾ ಕಾರ್ಮಿಕರೊಬ್ಬರು ತೀರಿಕೊಂಡರೂ, ಈ ಬಗ್ಗೆ ವಿಷಯದ ಗಮನಹರಿಸದೆ ಒತ್ತಡ ಹೇರಿ ಅಂತ್ಯಸಂಸ್ಕಾರ ನಡೆಸಿ ವಿಷಯ ಮುಚ್ಚಿಡುವ ಹುನ್ನಾರ ನಡೆದಿದೆಯೇ? ಎನ್ನುವ ಶಂಕೆ ಅಲ್ಲಿನ ಸಾರ್ವಜನಿಕರಲ್ಲಿ, ಹೋರಾಟಗಾರರಲ್ಲಿ ವ್ಯಕ್ತವಾಗಿದೆ.