ಐಪಿಎಲ್ 2025 ಟೂರ್ನಿ ಇನ್ನು ಮೂರೇ ದಿನಗಳಲ್ಲಿ ಆರಂಭವಾಗಲಿದೆ. ಮಾರ್ಚ್ 22ರಿಂದ ಆರಂಭವಾಗುವ ಟೂರ್ನಿಗಾಗಿ ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈಗಾಗಲೇ, ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಂದ್ಯವು ಕೆಕೆಆರ್ ಮತ್ತು ಆರ್‌ಸಿಬಿ ನಡುವೆ ಕೋಲ್ಕತ್ತಾದಲ್ಲಿ ನಡೆಯಲಿದೆ.
ಆರ್‌ಸಿಬಿಯ 2ನೇ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಂದ್ಯವು ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ ತಂಡಗಳ ನಡುವೆ ನಡೆಯಲಿದೆ. ಪಂದ್ಯದ ವೀಕ್ಷಣೆಗೆ ಕ್ರೀಡಾಂಗಣದ ಟಿಕೆಟ್ ಮಾರಾಟಕ್ಕೆ ಇಂದು (ಮಾರ್ಚ್ 19) ಆನ್‌ಲೈನ್ ಟಿಕೆಟ್ ಬುಕಿಂಗ್‌ಅನ್ನು ತೆರೆಯಲಾಗಿದ್ದು, ಕೇವಲ ಎರಡೇ ನಿಮಿಷದಲ್ಲಿ ಮಾರಾಟಕ್ಕಿಟ್ಟಿದ್ದ ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು 40,000 ಸೀಟುಗಳಿವೆ. ಆ ಪೈಕಿ ಸುಮಾರು 80% ಸೀಟುಗಳ ಟಿಕೆಟ್ ಮಾರಾಟವಾಗಿದೆ ಎಂದು ಹೇಳಲಾಗಿದೆ. ಟಿಕೆಟ್‌ನ ಕನಿಷ್ಠ ದರವೇ 2,300 ರೂ. ಇದ್ದು, ಗರಿಷ್ಠ 42,000 ರೂ.ವರೆಗೆ ಟಿಕೆಟ್‌ಗಳ ಬೆಲೆ ಇತ್ತು. ಆಶ್ಚರ್ಯವೆಂಬಂತೆ ಎಲ್ಲ ಟಿಕೆಟ್‌ಗಳೂ ಎರಡೇ ನಿಮಿಷದಲ್ಲಿ ಮಾರಾಟವಾಗಿವೆ.
ಈ ವರದಿ ಓದಿದ್ದೀರಾ?: IPL 2025 | ಕೆ.ಎಲ್. ರಾಹುಲ್‌ರನ್ನು ಆರ್‌ಸಿಬಿ ಕೈಬಿಟ್ಟಿದ್ದೇಕೆ? ಸತ್ಯ ಬಹಿರಂಗ!
ಇನ್ನೂ, ಪಂದ್ಯದ ಹಿಂದಿನ ದಿನ ಕ್ರೀಡಾಂಗಣದ ಕೌಂಟರ್‌ನಲ್ಲಿಯೂ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಬಹುಶಃ ಆ ಟಿಕೆಟ್‌ಗಳ ಮೊತ್ತ 2,500 ರೂ. ಆಸುಪಾಸಿನಲ್ಲಿರುತ್ತದೆ ಎಂದು ತಿಳಿದುಬಂದಿದೆ.
ಸದ್ಯ, ಆನ್‌ಲೈನ್‌ನಲ್ಲಿ ಏಪ್ರಿಲ್ 15ರವರೆಗೆ ನಡೆಯಲಿರುವ ಪಂದ್ಯಗಳ ಟಿಕೆಟ್‌ಗಳು ಲಭ್ಯವಿದೆ. ಉಳಿದ ಪಂದ್ಯಗಳ ಟಿಕೆಟ್‌ಗಳ ಆನ್‌ಲೈನ್ ಮಾರಾಟವನ್ನು ಶೀಘ್ರದಲ್ಲಿ ತೆರೆಯುವ ಸಾಧ್ಯತೆ ಇದೆ.