ಕನಿಷ್ಠ ವೇತನ ಹೆಚ್ಚಳ ಹಾಗೂ 2011ರಿಂದ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಬೇಕು. ಹಾಗೇಯೇ, ಆರನೇ ಗ್ಯಾರೆಂಟಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರನ್ನ ಸರ್ಕಾರ ಕಡೆಗಣನೆ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ಜಂಟಿ ಹೋರಾಟವನ್ನ ನಡೆಸಿದೆ.
ಈ ವೇಳೆ, ಈ ದಿನ.ಕಾಮ್ ಜತೆಗೆ ಮಾತನಾಡಿದ ಎಐಯುಟಿಯುಸಿ ಎಂ. ಉಮಾದೇವಿ, “ಈ ಬಾರಿಯ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೇವಲ ₹1 ಸಾವಿರ ಹಾಗೂ ಸಹಾಯಕಿಯರಿಗೆ ₹750 ಗೌರವಧನ ಹೆಚ್ಚಳ ಮಾಡಿರುವ ಸರ್ಕಾರದ ನಡೆ ಖಂಡನೀಯ. ಅಂಗನವಾಡಿ ಕಾರ್ಯಕರ್ತೆಯರನ್ನ ಸರ್ಕಾರ ಕಡೆಗಣನೆ ಮಾಡುತ್ತಿದೆ. ಆರನೇ ಗ್ಯಾರಂಟಿ ಜಾರಿ ಮಾಡಲೇಬೇಕು. ಕನಿಷ್ಠ ವೇತನ 15 ಸಾವಿರ ಮಾಡಬೇಕು. ಇವತ್ತು ರಾಜ್ಯದ ಮೂಲೆ ಮೂಲೆಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ” ಎಂದು ತಿಳಿಸಿದರು.
“ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಒಂದು ತಿಂಗಳಿಗೆ ₹ 15 ಸಾವಿರ, ಸಹಾಯಕಿಯರಿಗೆ ₹ 10 ಸಾವಿರ ಗೌರವಧನ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದರೂ ಈ ಭರವಸೆಯನ್ನ ಈಡೇರಿಸಿಲ್ಲ” ಎಂದು ಆರೋಪಿಸಿದರು.
“ಇಷ್ಟು ಉರಿ ಬಿಸಿಲು ಇದ್ದರೂ ಕೂಡ ಇವತ್ತಿನ ಪ್ರತಿಭಟನೆಗೆ ರಾಜ್ಯದ ನಾನಾ ಭಾಗಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಬಂದಿದ್ದಾರೆ. ಉರಿ ಬಿಸಿಲಿನಲ್ಲೇ ಕುಳಿತಿದ್ದಾರೆ. ಕಾಂಗ್ರೆಸ್ ಸರ್ಕಾರ ಗೌರವ ಧನ ಹೆಚ್ಚಳ ಮಾಡುತ್ತೇವೆ ಎಂದು ಭರವಸೆ ನೀಡಿ, ಈಗ 1,000 ರೂಪಾಯಿ ಜಾಸ್ತಿ ಮಾಡಿದ್ದಾರೆ. ಇಷ್ಟು ಹಣದಲ್ಲಿ ಬದುಕೋಕೆ ಆಗುತ್ತಾ? ಅವರ ಸಂಬಳಗಳನ್ನ ಪಾರ್ಲಿಮೆಂಟ್ ಅಸೆಂಬ್ಲಿಯಲ್ಲಿ ಕುಳಿತುಕೊಂಡು ಹೆಚ್ಚಳ ಮಾಡಿಕೊಳ್ಳುತ್ತಾರೆ. ಆದರೆ, ನಮ್ಮ ಸಂಬಳ ಪಡೆಯಬೇಕೆಂದರೆ, ನಾವು ಈ ಉರಿ ಬಿಸಿಲಿನಲ್ಲಿ ಕುಳಿತು ಪ್ರತಿಭಟನೆ ಮಾಡಬೇಕು” ಎಂದರು.
“ಎಲ್ಲ ಅಂಗನವಾಡಿ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಇತ್ತೀಚೆಗೆ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ತಮಗೆ ಬೇಕಾದ ಸಂಘಟನೆಗಳೊಂದಿಗೆ ಚರ್ಚಿಸುತ್ತಿರುವುದು ಖಂಡನೀಯ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಐಪಿಎಲ್ | ಬೆಂಗಳೂರಿನಲ್ಲಿ ‘ಆರ್‌ಸಿಬಿ’ ಪಂದ್ಯ: 2 ನಿಮಿಷದಲ್ಲೇ ಎಲ್ಲ ಟಿಕೆಟ್ ಸೋಲ್ಡ್‌ಔಟ್
ಅಂಗನವಾಡಿ ಕಾರ್ಯಕರ್ತೆ ನಾಗರತ್ನಮ್ಮ ಮಾತನಾಡಿ, “ಅಗತ್ಯ ವಸ್ತುಗಳ ಬೆಲೆ ಏರಿಕೆ, ಮನೆ ಬಾಡಿಗೆ ಸೇರಿದಂತೆ ಇತರೆ ಖರ್ಚು ವೆಚ್ಚಗಳ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಆದರೆ, ಸರ್ಕಾರ ನಮಗೆ ಕನಿಷ್ಠ ವೇತನದ ವ್ಯಾಪ್ತಿಗೆ ಒಳಪಡಿಸಿ ಸಂಭಾವನೆ ನೀಡದೆ ಅನ್ಯಾಯ ಮಾಡುತ್ತಿದೆ. ನಿವೃತ್ತರಾದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯ ನೀಡಬೇಕು” ಎಂದು ಆಗ್ರಹಿಸಿದರು.
ಅಂಗನವಾಡಿ ಕಾರ್ಯಕರ್ತೆ ರುದ್ರಮ್ಮ ಮಾತನಾಡಿ, “ನಮಗೆ ಗೌರವ ಧನ ಹೆಚ್ಚಳ ಮಾಡಬೇಕು. ದಿನನಿತ್ಯ ದಿನಸಿ ಬೆಲೆಗಳು ಹೆಚ್ಚಳವಾಗುತ್ತಿರುವುದರಿಂದ ಇಷ್ಟು ಹಣದಲ್ಲಿ ಬಡತನ ರೇಖೆಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಬದುಕುವುದಕ್ಕೆ ಕಷ್ಟವಾಗುತ್ತಿದೆ. ಲಕ್ಷ್ಮೀ ಹೇಬ್ಬಾಳ್ಕರ್ ಅವರು ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಂಡು, ಗೌರವಧನವನ್ನ ಹೆಚ್ಚಳ ಮಾಡಿ” ಎಂದು ಕೇಳಿದರು.