ಗಾದ್ರಿಪಾಲನಾಯಕ ಸ್ವಾಮಿ ಮ್ಯಾಸ ನಾಯಕರ ಆರಾಧ್ಯ ದೈವವಾಗಿದ್ದು, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ರಾಮಸಾಗರ ಗ್ರಾಮದ ಗಾದ್ರಿಪಾಲನಾಯಕ ದೇವಸ್ಥಾನದಲ್ಲಿ ಮಾರ್ಚ್ 23 ರಿಂದ 25 ರವರೆಗೆ ಹಮ್ಮಿಕೊಂಡಿರುವ ವೈದಿಕ, ಪುರೋಹಿತ ಶಾಹಿ ಕಾರ್ಯಕ್ರಮಗಳನ್ನು ರದ್ದು ಪಡಿಸಬೇಕು. ಮ್ಯಾಸನಾಯಕ ಬುಡಕಟ್ಟು ಜನಾಂಗದ ಧಾರ್ಮಿಕ ಆಚರಣೆಗಳನ್ನು ಉಳಿಸಿ, ಪಾಲಿಸಬೇಕು’ ಎಂದು ಮ್ಯಾಸ ನಾಯಕ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.
ಚಳ್ಳಕೆರೆ ತಾಲೂಕು ತಹಶೀಲ್ದಾರ್ ರೆಹಾನ್ ಪಾಷಾ ಅವರಿಗೆ ಮನವಿ ಸಲ್ಲಿಸಿ, ‘ನಾಯಕನಹಟ್ಟಿ ಹೋಬಳಿಯ ರಾಮಸಾಗರ ಗ್ರಾಮದ ಗಾದ್ರಿಪಾಲನಾಯಕ ಸ್ವಾಮಿಯ ದೇಗುಲದಲ್ಲಿ ಮಾರ್ಚ್ 23ರಿಂದ 25ರ ವರೆಗೆ ವೈದಿಕ ಮತ್ತು ಪುರೋಹಿತ ಶಾಹಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇವುಗಳಿಗೂ ಮ್ಯಾಸ ನಾಯಕ ಸಂಸ್ಕೃತಿಗೆ ಸಂಬಂಧವಿಲ್ಲ. ಕೂಡಲೇ ಈ ಆಚರಣೆಗಳನ್ನು ರದ್ದುಪಡಿಸಬೇಕು. ಮ್ಯಾಸ ನಾಯಕ ಬುಡಕಟ್ಟು ಜನಾಂಗ ಉಳಿಸಿಕೊಂಡು ಬಂದಿರುವ ಧಾರ್ಮಿಕ ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಮ್ಯಾಸ ನಾಯಕ ಬುಡಕಟ್ಟು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಮ್ಯಾಸಬೇಡ(ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯ ಮುಖಂಡರು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಸಮಿತಿಯ ಅಧ್ಯಕ್ಷ ಡಾ. ಗೆರೆಗಲ್ ಪಾಪಯ್ಯ “ಕರ್ನಾಟಕದ ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಮ್ಯಾಸ ಬೇಡ ಬುಡಕಟ್ಟು ಜನರು ಹೆಚ್ಚಾಗಿ ನೆಲೆಸಿದ್ದಾರೆ. ಶ್ರೀ ಗಾದ್ರಿಪಾಲನಾಯಕ ದೇವರು ಮ್ಯಾಸ ನಾಯಕರ ಆರಾಧ್ಯ ದೈವ. ಮ್ಯಾಸ ನಾಯಕರ ಸಂಸ್ಕೃತಿಯು ವಿಶೇಷವಾಗಿ ದೇವರ ಎತ್ತುಗಳೆಂದು ಹಸು ಮತ್ತು ಹೋರಿ ಕರುಗಳನ್ನು ಪೂಜಿಸುತ್ತ ಬಂದಿದೆ. ಇತ್ತೀಚಿನ ದಿನಗಳಲ್ಲಿ ಪುರೋಹಿತಶಾಹಿ ವರ್ಗ ನಮ್ಮ ಹಟ್ಟಿಗಳಿಗೆ ಪ್ರವೇಶಿಸಿ ಧಾರ್ಮಿಕ ಆಕ್ರಮಣ ಮಾಡಿ ವೈದಿಕ ಮತ್ತು ಪುರೋಹಿತಶಾಹಿ ಧರ್ಮದ ಆಚರಣೆಗಳನ್ನು ಹೇರುವ ಹುನ್ನಾರ ನಡೆಸಿದ್ದಾರೆ” ಎಂದು ಕಿಡಿಕಾರಿದರು.

“ಮ್ಯಾಸ ನಾಯಕ ಸಂಸ್ಕೃತಿಯು ತನ್ನದೇ ಆದ ವಿಶಿಷ್ಟವಾದ ನಂಬಿಕೆ ಆಚರಣೆ, ಧಾರ್ಮಿಕ ವಿಧಿ, ವಿಧಾನಗಳನ್ನು ಇಂದಿಗೂ ಜೀವಂತವಾಗಿ ಇಟ್ಟುಕೊಂಡಿದೆ. ಆದರೆ ವೈದಿಕರು ಯಜ್ಞ ಯಾಗಾದಿಗಳನ್ನು ನಮ್ಮ ಮೇಲೆ ಹೇರುವ ಮೂಲಕ ನಮ್ಮ ಸಂಸ್ಕೃತಿಗೆ ದಕ್ಕೆ ತರುತ್ತಿದ್ದಾರೆ. ಈಗ ಹಮ್ಮಿಕೊಂಡಿರುವ ಕಾರ್ಯಕ್ರಮದಿಂದಾಗಿ ದೇವರ ಪಾವಿತ್ರತೆಯನ್ನು ಕೆಡಿಸಿ, ಬುಡಕಟ್ಟು ಜನರ ನಂಬಿಕೆ, ಶ್ರದ್ಧೆ, ಆರಾಧನೆಗೆ ಚ್ಯುತಿ ತರುವಂತಿದೆ. ಇದು ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ಆರೋಪಿಸಿದರು.
“ಮ್ಯಾಸ ನಾಯಕ ಬುಡಕಟ್ಟು ಜನಾಂಗದಲ್ಲಿ ಹೊರಗಿನಿಂದ ಪುರೋಹಿತರನ್ನು ಕರೆಸಿ ದೇವರ ಪೂಜೆ ಮಾಡುವ ಪದ್ಧತಿ ಇರುವುದಿಲ್ಲ. ಆದ್ದರಿಂದ ಮೂರು ದಿನಗಳು ಆಯೋಜಿಸಿರುವ ವೈದಿಕ ಮತ್ತು ಪುರೋಹಿತಶಾಹಿ ಧಾರ್ಮಿಕ ಆಚರಣೆಯಲ್ಲಿ ಜರುಗುವ ಕಾರ್ಯಕ್ರಮಗಳನ್ನು ನಿಲ್ಲಿಸಿ, ನಮ್ಮ ಬುಡಕಟ್ಟು ಸಮುದಾಯದ ಧಾರ್ಮಿಕ ಸಂಪ್ರದಾಯಗಳನ್ನು ಆಚರಿಸುವ ಮೂಲಕ ಬುಡಕಟ್ಟು ಸಂಸ್ಕೃತಿ ಕಾಪಾಡಬೇಕು” ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ವಕೀಲ ಬೋರ ನಾಯಕ,”ಮಾರ್ಚ್ 23 ರಿಂದ 25 ರವರೆಗೆ ದೇಗುಲದಲ್ಲಿ ಕಳಶ ಸ್ಥಾಪನೆ ಕಾರ್ಯಕ್ರಮವಿದ್ದು ದೇವರ ಎತ್ತುಗಳ ಮೆರವಣಿಗೆ, ಮಣೇವು ಮುಂತಾದ ಬಡಕಟ್ಟು ಸಂಸ್ಕೃತಿಯ ಕಾರ್ಯಕ್ರಮಗಳಿವೆ. ಆದರೆ ಹಿಂದಿನಿಂದಲೂ ನಡೆದುಕೊಂಡ ಬಂದ ಪದ್ಧತಿಯಂತೆ ಮ್ಯಾಸನಾಯಕರಲ್ಲಿ ಕಿಲಾರರು ಸೇರಿದಂತೆ ಏಳೆಂಟು ಬೆಡಗುಗಳಿದ್ದು, ಇವರು ವರ್ಷಪೂರ್ತಿ ದೇವರ ಸೇವೆ, ಸಂಸ್ಕೃತಿಯ ಕಾಯಕದಲ್ಲಿ ತೊಡಗಿರುತ್ತಾರೆ. ಈಗ ದಿಢೀರನೆ ಕಳಶ ಸ್ಥಾಪನೆ ಕಾರ್ಯಕ್ರಮದಲ್ಲಿ ವೈದಿಕ ಪರಂಪರೆಯ ಹೊರಗಿನವರನ್ನು ಕರೆಸಿ ಯಾಗ ಯಜ್ಞಗಳನ್ನು ನಡೆಸಿ ಅವರ ಕೈಯಿಂದ ಕಳಶ ಸ್ಥಾಪನೆ ಮಾಡಿಸುವುದು, ಮ್ಯಾಸನಾಯಕ ಬುಡಕಟ್ಟು ಸಂಸ್ಕೃತಿಯ ಮೇಲೆ ಆಕ್ರಮಣ ಮಾಡಿ ಬೇರೆ ಸಂಸ್ಕೃತಿಯನ್ನು ಹೇರಿದಂತಾಗುತ್ತದೆ. ಇದನ್ನು ನಿಲ್ಲಿಸಿ, ಮ್ಯಾಸ ನಾಯಕ ಸಂಸ್ಕೃತಿಯವರೇ ಕಳಶ ಸ್ಥಾಪನೆ ಸೇರಿದಂತೆ ಎಲ್ಲವನ್ನು ನೆರವೇರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕೆಲಸದ ವೇಳೆ ನರೇಗಾ ಕಾರ್ಮಿಕ ಸಾವು, ದಿನ ಕಳೆದರೂ ಗಮನಹರಿಸದ ಅಧಿಕಾರಿಗಳು.
ತಹಶೀಲ್ದಾರರಿಗೆ ಮನವಿ ಸಲ್ಲಿಸುವ ವೇಳೆ ವಕೀಲ ಬಿ ಬೋರನಾಯಕ, ಓಬಣ್ಣ, ಪ್ರಹ್ಲಾದ್, ಮಂಜುನಾಥ ಸೇರಿದಂತೆ ಹಲವರು ಹಾಜರಿದ್ದರು.