ತೊಗರಿ ಬೆಳೆ ಹಾನಿ ಮತ್ತು ರೈತರ ಆತ್ಮಹತ್ಯೆ ತಡೆಯಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆ ಹಾನಿ ಹಾಗೂ ಆರ್ಥಿಕ ಸಂಕಷ್ಟದಿಂದಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ಆರು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಈ ಸ್ಥಿತಿ ರಾಜ್ಯದ ಕೃಷಿ ಸಮುದಾಯದ ಭವಿಷ್ಯಕ್ಕೆ ಅಪಾಯವನ್ನು ಉಂಟುಮಾಡುತ್ತಿದೆʼ ಎಂದು ಕಳವಳ ವ್ಯಕ್ತಪಡಿಸಿದರು.
ʼಕಲಬುರಗಿ ಜಿಲ್ಲೆ ತೊಗರಿಯ ನಾಡುʼ ಎಂದು ಕರೆಯಲಾಗುತ್ತಿದೆ. ಇಲ್ಲಿನ ರೈತರ ಜೀವನಾಧಾರ ಈ ಬೆಳೆಯೇ ಆಗಿದೆ. ಆದರೆ, ಈ ವರ್ಷ ಹಿಂಗಾರು ಹಂಗಾಮಿನಲ್ಲಿ ಶೇ50ರಷ್ಟು ಬೆಳೆ ಹಾನಿಯಾಗಿದ್ದು, ಮಾರುಕಟ್ಟೆಯಲ್ಲಿ ತೊಗರಿಗೆ ಸೂಕ್ತ ಬೆಲೆ ದೊರೆಯದ ಕಾರಣಕ್ಕೆ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ನಿರ್ಲಕ್ಷ್ಯದಿಂದ ರೈತರು ತಮ್ಮ ಜೀವನವನ್ನು ಕೊನೆಗಾಣಿಸುವಂತಾಗುತ್ತಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಈ ಬಗ್ಗೆ ರೈತ ಸಂಘಟನೆಗಳು ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸರ್ಕಾರದ ಸ್ಪಂದನೆ ಸಿಗುತ್ತಿಲ್ಲ. ಬೆಳೆ ಹಾನಿಗೆ ಸೂಕ್ತ ಪರಿಹಾರ, ಬೆಂಬಲ ಬೆಲೆ, ಸಾಲಮನ್ನಾ, ಬೆಳೆ ವಿಮೆ ಪರಿಹಾರ ಹಾಗೂ ತೊಗರಿ ಆಮದು ನಿಲ್ಲಿಸುವಂತೆ ಸರ್ಕಾರ ತಕ್ಷಣದ ಕ್ರಮ ಕೈಗೊಳ್ಳಬೇಕುʼ ಎಂದು ಒತ್ತಾಯಿಸಿದರು.
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಸಿ) ಖಚಿತಪಡಿಸಿ ತೊಗರಿ ಬೆಳೆಗಾರರಿಗೆ ಗರಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ತೊಗರಿ ಬೆಳೆ ಹಾನಿಯ ಹಿನ್ನೆಲೆಯಲ್ಲಿ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಬೆಳೆ ಹಾನಿಯಾದ ರೈತರ ವಿಮೆ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು. ರೈತರು ತಮ್ಮ ಉತ್ಪನ್ನವನ್ನು ನೇರವಾಗಿ ಮಾರಾಟ ಮಾಡಬಹುದಾದ ವ್ಯವಸ್ಥೆ ಕಲ್ಪಿಸಬೇಕು. ದೇಶೀಯ ಬೆಲೆ ಕುಸಿಯದಂತೆ ತೊಗರಿ ಆಮದು ತಕ್ಷಣ ನಿಲ್ಲಿಸಬೇಕು. ತೊಗರಿ ಬೆಳೆ ಹಾನಿಯನ್ನು ಹೀಗೆಯೇ ಬಿಟ್ಟುಬಿಡದೆ, ಸರ್ಕಾರದಿಂದ ತಕ್ಷಣ ಪರಿಹಾರ ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದರು.