ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ವೇಳೆ ಶಾಸಕಿಯೊಬ್ಬರು ಜೂನಿಯರ್ ಇಂಜಿನಿಯರ್ ಕಪಾಳಕ್ಕೆ ಬಾರಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಸಕಿಯ ನಡೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದ ಮೀರಾ ಭಯಂದರ್ ಮುನ್ಸಿಪಲ್ ಕಾರ್ಪೊರೇಷನ್ (ಎಂಬಿಎಂಸಿ) ವ್ಯಾಪ್ತಿಯ ವಾರ್ಡ್ ಸಂಖ್ಯೆ 6ರಲ್ಲಿ ಮಂಗಳವಾರ, ಜೂನಿಯರ್ ಇಂಜಿನಿಯರ್ ಶುಭಂ ಪಾಟೀಲ್ ನೇತೃತ್ವದಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ಮೀರಾ-ಭಯಂದರ್ ಶಾಸಕಿ ಗೀತಾ ಜೈನ್ ಅವರು ಕಾರ್ಯಾಚಾರಣೆ ಕುರಿತು ಮಾಹಿತಿ ಪಡೆದಿದ್ದಾರೆ. ಆದರೆ ಇಂಜಿನಿಯರ್ ಬಳಿ ಮಾತನಾಡುತ್ತಿರುವಾಗಲೇ ಏಕಾಏಕಿ ಕೋಪಗೊಂಡ ಶಾಸಕಿ, ಶುಭಂ ಪಾಟೀಲ್ರನ್ನು ದೂಡಿದ ಬಳಿಕ ಕಪಾಳಕ್ಕೆ ಬಾರಿಸಿದ್ದಾರೆ.
ಅಕ್ರಮ ಕಟ್ಟಡ ನೆಲಸಮ ಕಾರ್ಯಾಚರಣೆ ವೇಳೆ ಆರು ತಿಂಗಳ ಪುಟ್ಟ ಮಗುವನ್ನು ಹೊಂದಿದ್ದ ಕುಟುಂಬವೊಂದು ವಾಸವಾಗಿದ್ದ ಜೋಪಡಿಯನ್ನು ತೆರವುಗೊಳಿಸಲಾಗಿತ್ತು. ಇದೇ ವೇಳೆ ಅನೇಕ ವಯಸ್ಸಾದವರು ಸೇರಿದಂತೆ ನಿವಾಸಿಗಳನ್ನು ಬಲವಂತವಾಗಿ ಹೊರಹಾಕಲಾಗಿತ್ತು ಎಂದು ಆರೋಪಿಸಲಾಗಿದೆ. ಈ ರೀತಿಯ ಅಮಾನವೀಯ ವರ್ತನೆಯಿಂದ ಕೋಪಗೊಂಡ ಗೀತಾ ಜೈನ್, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಮಳೆಗಾಲದಲ್ಲಿ ವಸತಿ ಕಟ್ಟಡಗಳನ್ನು ಕೆಡವುದರ ವಿರುದ್ಧ ಸರ್ಕಾರ ನಿರ್ಣಯ ಅಂಗೀಕರಿಸಿದ್ದರೂ ಸಹ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಶಾಸಕಿ ಆರೋಪಿಸಿದ್ದಾರೆ. ಶಾಸಕಿಯ ಕೋಪಕ್ಕೆ ತುತ್ತಾದ ಜೂನಿಯರ್ ಇಂಜಿನಿಯರ್ ಶುಭಂ ಪಾಟೀಲ್, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ..
ಪಶ್ಚಾತ್ತಾಪವಿಲ್ಲ ಎಂದ ಶಾಸಕಿ ಗೀತಾ ಜೈನ್
ಘಟನೆಯು ವಿವಾದವಾಗುತ್ತಲೇ ಸ್ಪಷ್ಟನೆ ನೀಡಿರುವ ಶಾಸಕಿ, ʻಮಾಹಿತಿ ಕೇಳಿದ ವೇಳೆ ಜೂನಿಯರ್ ಇಂಜಿನಿಯರ್ ನಗುತ್ತಿದ್ದರು. ಹೀಗಾಗಿ ಕಪಾಳಮೋಕ್ಷ ಮಾಡಿದ್ದೇನೆ. ಈ ಕುರಿತು ‘ನನಗೆ ಯಾವುದೇ ವಿಷಾದವಿಲ್ಲ’ ಎಂದು ಬಿಜೆಪಿಗೆ ಬೆಂಬಲ ನೀಡಿರುವ ಸ್ವತಂತ್ರ ಶಾಸಕಿ ಗೀತಾ ಜೈನ್ ಹೇಳಿದ್ದಾರೆ.