ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸದಿದ್ದರೆ ಇಡೀ ದೇಶ ಮಣಿಪುರದಂತೆ ಹೊತ್ತಿ ಉರಿಯುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಆತಂತ ವ್ಯಕ್ತಪಡಿಸಿದ್ದಾರೆ.
ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಕೇಸರಿ ಪಕ್ಷವು ಸಾಮಾಜಿಕ ಸಾಮರಸ್ಯ, ನ್ಯಾಯಕ್ಕಾಗಿ ಕಾಳಜಿ ವಹಿಸುವುದಿಲ್ಲ, ಅವರ ಉದ್ದೇಶ ಏನಿದ್ದರೂ ಅಧಿಕಾರಕ್ಕಾಗಿ ಮಾತ್ರ” ಎಂದು ಹೇಳಿದರು
ಡಿಸೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ “ಬಿಜೆಪಿ ವಿರೋಧಿ ಶಕ್ತಿಗಳನ್ನು ಸಜ್ಜುಗೊಳಿಸುವ ಮಿಷನ್”ನಲ್ಲಿದ್ದ ಸತ್ಯಪಾಲ್ ಮಲಿಕ್, ಮಣಿಪುರ ಹಿಂಸಾಚಾರದ ಬಗ್ಗೆ ಮೌನವಾಗಿರುವ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕದ ಗೆಲುವಿನ ಪ್ರೇರಣೆ; ಸ್ವಂತ ಪಕ್ಷವನ್ನೇ ಕಾಂಗ್ರೆಸ್‌ನೊಂದಿಗೆ ವಿಲೀನಕ್ಕೆ ಹೊರಟ ವೈ ಎಸ್ ಶರ್ಮಿಳಾ
“ಮಣಿಪುರದ ಬಗ್ಗೆ ಮೋದಿ ಇಲ್ಲಿಯವರೆಗೂ ಒಂದೇ ಒಂದು ಮಾತನ್ನೂ ಆಡಿಲ್ಲ. 45 ದಿನಗಳಿಂದ ಇಡೀ ರಾಜ್ಯ ಹೊತ್ತಿ ಉರಿಯುತ್ತಿದೆ. ಕೇಂದ್ರ ಹಾಗೂ ಮಣಿಪುರದ ಬಿಜೆಪಿ ಸರ್ಕಾರಗಳಿಗೆ ಈ ಬಗ್ಗೆ ಕಾಳಜಿಯಿಲ್ಲ. ಲೋಕಸಭೆ ಚುನಾವಣೆ ಸೇರಿದಂತೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸದಿದ್ದರೆ ಇಡೀ ದೇಶವೇ ಮಣಿಪುರದಂತೆ ಹೊತ್ತಿ ಉರಿಯಲಿದೆ” ಎಂದು ಮಲಿಕ್ ಪುನರುಚ್ಚರಿಸಿದರು.
ಈ ಸಂದರ್ಭದಲ್ಲಿ ಭಾರತದ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆಯನ್ನು ಉಲ್ಲೇಖಿಸಿದ ಮಲಿಕ್, “ಸಿಂಗ್‌ನನ್ನು ಇಲ್ಲಿಯವರೆಗೆ ಏಕೆ ಬಂಧಿಸಿಲ್ಲ? ಬಿಜೆಪಿಯವರು ಅಧಿಕಾರದ ಅಮಲಿನಲ್ಲಿದ್ದರಿಂದ ತಾವು ಅಜೇಯರೆಂದು ಭಾವಿಸುತ್ತಾರೆ. ಬಿಜೆಪಿಗೆ ಅಧಿಕಾರದ ಭಾಷೆ ಮಾತ್ರ ಅರ್ಥವಾಗುತ್ತದೆ. ಹಾಗಾಗಿ, ಚುನಾವಣೆಗೆ ಹೋಗುವ ರಾಜ್ಯಗಳಲ್ಲಿ ಬಿಜೆಪಿ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ನಡೆಸಬೇಕು” ಎಂದು ಹೇಳಿದರು.
ಲೋಕಸಭೆಯ ಚುನಾವಣೆಗೂ ಮುನ್ನ ಸೆಮಿಫೈನಲ್ ಎಂದು ಪರಿಗಣಿಸಲಾಗಿರುವ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಒಟ್ಟು ಒಂಭತ್ತು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.