ಒಂದೇ ಬಣ್ಣದ ಶರ್ಟ್ ಖರೀದಿಸುವ ವಿಚಾರದಲ್ಲಿ ಯುವಕರ ನಡುವೆ ಮಾರಾಮಾರಿ ನಡೆದ ಘಟನೆಯು ಕೇರಳದ ಕೋಝಿಕ್ಕೋಡ್‌ನ ನಾದಾಪುರಂ ಕಲ್ಲಚ್ಚಿಯ ಜವಳಿ ಮಳಿಗೆಯ ಬಳಿ ನಡೆದಿದೆ.
ಬಟ್ಟೆ ಅಂಗಡಿಗೆ ಬಂದ ಯುವಕರು ಒಂದೇ ಬಣ್ಣದ ಶರ್ಟ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲೇ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ನಂತರ ಈ ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಹುಳಿಯಾರು | ಇಬ್ಬರು ಶಾಲಾ ವಿದ್ಯಾರ್ಥಿಗಳ ಕ್ಷುಲ್ಲಕ ಕಿತ್ತಾಟ; ಕೋಮು ಬಣ್ಣ ಬಳಿದ ಹಿಂದುತ್ವವಾದಿಗಳು
ಈ ಸುದ್ದಿ ತಿಳಿಯುತ್ತಿದ್ದಂತೆ ಈ ಯುವಕರ ಸ್ನೇಹಿತರು ಸ್ಥಳಕ್ಕೆ ಧಾವಿಸಿದ್ದಾರೆ. ಬರೀ ಒಂದು ಶರ್ಟ್ ವಿಚಾರಕ್ಕೆ ಎರಡೂ ಕಡೆಯವರು ಹೊಡೆದಾಡಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ಮಧ್ಯಪ್ರವೇಶಿಸಿ ಗಲಾಟೆ ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಬಳಿಕ ಪೊಲೀಸರು ಕೂಡಾ ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸಿದ್ದಾರೆ. ನಾದಾಪುರಂ ಪೊಲೀಸರು ಸ್ಥಳಕ್ಕೆ ಬಂದಾಗ ಎಲ್ಲರೂ ಓಡಿಹೋಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇನ್ನು ಈ ಗುಂಪಿನ ನಡುವೆ ಈ ಹಿಂದೆಯೂ ಘರ್ಷಣೆ ನಡೆದಿತ್ತು. ಇದೀಗ ಒಂದೇ ಬಣ್ಣದ ಶರ್ಟ್ ಖರೀದಿ ಮತ್ತೆ ಜಗಳಕ್ಕೆ ಒಂದು ನೆಪ ಮಾತ್ರವಾಗಿದೆ ಎಂದು ಹೇಳಲಾಗಿದೆ. ಸದ್ಯ ಈ ಎರಡೂ ಗುಂಪಿನ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ.
ಕ್ಷುಲ್ಲಕ ಕಾರಣದಿಂದಾಗಿ ಯುವಕರು ಗಲಾಟೆ ಮಾಡುವ, ಹೊಡೆದಾಡಿಕೊಳ್ಳುವ, ಅದರಲ್ಲೂ ಕೊಲೆ ಮಾಡುವಂತಹ ಘಟನೆಗಳು ದೇಶದಲ್ಲಿ ಹೆಚ್ಚಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ನಡೆದ ಹೊಡೆದಾಟದಲ್ಲಿ 10ನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಘಟನೆ ಇದೇ ತಿಂಗಳಲ್ಲಿ ಕೇರಳದ ಕಲ್ಲಿಕೋಟೆಯಲ್ಲಿ ನಡೆದಿದೆ. ರಸ್ತೆಯಲ್ಲಿ ನಡೆಯುವಾಗ ಕೈ ತಗುಲಿತು ಎಂಬ ಕಾರಣಕ್ಕೆ, ದಿಟ್ಟಿಸಿ ನೋಡಿದ ಎಂಬ ಕಾರಣಕ್ಕೆ, ಹೀಗೆ ನಾನಾ ಕ್ಲುಲ್ಲಕ ಕಾರಣಗಳೇ ಕೊಲೆಗೆ ಕಾರಣವಾಗುತ್ತಿರುವುದು ವಿಷಾದನೀಯ.
